Kasaragod: ಖಾಲಿ ಮನೆಯೊಂದರಲ್ಲಿ ಭಾರೀ ಪ್ರಮಾಣದ ನಕಲಿ ನೋಟುಗಳನ್ನು ವಶಕ್ಕೆ ಪಡೆದ ಕೇರಳ ಪೊಲೀಸ್
ಖಾಲಿ ಮನೆಯೊಂದರಲ್ಲಿ ಭಾರೀ ಪ್ರಮಾಣದ ನಿಷೇಧಿತ 1000 ಮುಖಬೆಲೆಯ ನಕಲಿ ನೋಟುಗಳನ್ನು ಕೇರಳ ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ. ಕಾಸರಗೋಡು ಜಿಲ್ಲೆಯ ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೇರಳ: ಖಾಲಿ ಮನೆಯೊಂದರಲ್ಲಿ ಭಾರೀ ಪ್ರಮಾಣದ ನಿಷೇಧಿತ 1000 ಮುಖಬೆಲೆಯ ನಕಲಿ ನೋಟುಗಳನ್ನು (Fake Currency Notes) ಕೇರಳ ಪೊಲೀಸರು ಗುರುವಾರ ವಶಪಡಿಸಿಕೊಂಡಿದ್ದಾರೆ. ಕಾಸರಗೋಡು ಜಿಲ್ಲೆಯ ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ನಿಷೇಧಿತ 1000 ರೂ.ಗಳ ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಹಿಂದೆ ರಿಯಲ್ ಎಸ್ಟೇಟ್ ಡೀಲರ್ಗಳ ಪಾತ್ರವಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ರಾತ್ರಿ ವೇಳೆ ಖಾಲಿ ಮನೆಯಲ್ಲಿ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತಿರುವ ಬಗ್ಗೆ ಖಚಿತ ಮಾಹಿತಿ ಮೇರೆಗೆ ಎಸ್ಐ ಮ್ಯಾಥ್ಯೂ, ಎಎಸ್ಐ ಮಾಧವನ್, ಸಿಪಿಒ ದಿನೇಶ್ ನೇತೃತ್ವದ ಪೊಲೀಸರ ತಂಡ ದಾಳಿ ನಡೆಸಲಾಗಿದೆ ಎಂದು ಬದಿಯಡ್ಕ ಎಸ್ಐ ಕೆ.ಪಿ.ವಿನೋದ್ ಕುಮಾರ್ ತಿಳಿಸಿದ್ದಾರೆ. ದಾಳಿ ವೇಳೆ ಹಾಸಿಗೆಯ ರೂಪದಲ್ಲಿ ಸಂಗ್ರಹಿಸಿಟ್ಟಿದ್ದ ಕರೆನ್ಸಿಗಳನ್ನು ಪತ್ತೆ ಹಚ್ಚಿದ್ದಾರೆ. ಹೀಗೆ ಪತ್ತೆಯಾದ ನಕಲಿ ನೋಟುಗಳನ್ನು ಆರು ದೊಡ್ಡ ಚೀಲಗಳಲ್ಲಿ ತುಂಬಿಸಬಹುದಾಗಿದೆ ಎಂದು ಪೋಲಿಸರು ಮಾಹಿತಿ ನೀಡಿದ್ದಾರೆ.
ಕೆಲವು ಹಣದ ಬಂಡಲ್ಗಳಲ್ಲಿ, ನಕಲಿ ನೋಟುಗಳ ಒಳಗೆ ಬಿಳಿ ಕಾಗದಗಳನ್ನು ಇಡಲಾಗಿತ್ತು. ಪ್ರಾಥಮಿಕ ತನಿಖೆಯ ಪ್ರಕಾರ, ಕೆಲವು ರಿಯಲ್ ಎಸ್ಟೇಟ್ ವಿತರಕರು ಇದರ ಹಿಂದೆ ಇದ್ದಾರೆ ಎನ್ನಲಾಗುತ್ತಿದ್ದು, ಅವರ ಬಳಿ ಸಾಕಷ್ಟು ಹಣವಿರುವ ಕುರಿತು ಅನುಮಾನಗಳು ವ್ಯಕ್ತವಾಗಿವೆ ಎಂದು ಹೇಳಿದರು. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇನ್ನೂ ಯಾರನ್ನೂ ಬಂಧಿಸಿಲ್ಲ.
ಇದನ್ನೂ ಓದಿ: Mangalore News: ಮಂಗಳೂರಿನಲ್ಲಿ ರಸ್ತೆ ದಾಟುತ್ತಿದ್ದಾಗ ಖಾಸಗಿ ಬಸ್ ಡಿಕ್ಕಿ ಹೊಡೆದು ಮಹಿಳೆ ಸಾವು
14ನೇ ಮಹಡಿಯಿಂದ ಬಿದ್ದು 21 ವರ್ಷದ ಯುವಕ ಸಾವು
ಮಂಗಳೂರು: 21 ವರ್ಷದ ಯುವಕನೊಬ್ಬ 14ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಗರದ ಕೆಪಿಟಿ ಬಳಿಯಲ್ಲಿ ನಡೆದಿದೆ. ಘಟನೆಯ ಬಗ್ಗೆ ಮಂಗಳೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಯುವಕನ ಸಾವಿಗೆ ಕಾರಣ ಏನು ಎಂದು ಇನ್ನು ಪತ್ತೆಯಾಗಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಅಪಾರ್ಟ್‌ಮೆಂಟ್ 14ನೇ ಮಹಡಿಯಲ್ಲಿ ವಾಸವಿದ್ದ ಅಬ್ದುಲ್ ಸಲೀಂ ಎಂಬುವವರ ಪುತ್ರ ಮೊಹಮ್ಮದ್ ಶಾಮಲ್ (21) ಘಟನೆಯಲ್ಲಿ ಮೃತಪಟ್ಟ ದುರ್ದೈವಿ. ಇಂದು (ಮಾರ್ಚ್ 30) ಮುಂಜಾನೆ 4.45 ರ ಸುಮಾರಿಗೆ ಶಾಮಲ್ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದರು. ಆತನ ದೇಹವನ್ನು ಎಜೆ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಸಂಬಂಧ ಮೃತರ ಚಿಕ್ಕಪ್ಪ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಎರಡು ಬೈಕ್ಗಳ ನಡುವೆ ಅಪಘಾತ, ಒಬ್ಬ ಸಾವು
ಎರಡು ಬೈಕ್ಗಳ ನಡುವೆ ಅಪಘಾತ ನಡೆದು ಒಬ್ಬ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಸವಣಾಲಿನಲ್ಲಿ ನಡೆದಿದೆ. ಇನ್ನೊಂದು ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಬೆಳ್ತಂಗಡಿ ತಾಲೂಕಿನ ಸವಣಾಲು ಮಸೀದಿ ಬಳಿ ಎರಡು ಬೈಕ್ ಗಳ ನಡುವೆ ಮುಖಾ ಮುಖಿ ಡಿಕ್ಕಿ ಹೊಡೆದಿದ್ದು, ಈ ವೇಳೆ ಅಳದಂಗಡಿಯ ಕುರ್ದಲಬೆಟ್ಟು ನಿವಾಸಿ ಹೆನ್ಡ್ರಿ ಡಿಸೋಜಾ(62) ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನೊಂದು ಬೈಕ್ ಸವಾರ ಬೆಳ್ತಂಗಡಿ ತಾಲೂಕಿನ ಕರಂಬಾರು ನಿವಾಸಿ ಕರುಣಾಕರ ಹೆಗ್ಡೆ (60) ಗಂಭೀರ ಗಾಯಗೊಂಡಿದ್ದು ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಇದನ್ನೂ ಓದಿ: Odisha: 15 ವರ್ಷದ ಬಾಲಕನನ್ನು ರೂ.50 ಲಕ್ಷಕ್ಕಾಗಿ ಅಪಹರಿಸಿ ಕೊಲೆ; ಸರ್ಕಾರವನ್ನು ಖಂಡಿಸಿದ ಧರ್ಮೇಂದ್ರ ಪ್ರಧಾನ್
ಸಾವನ್ನಪ್ಪಿದ ಹೆನ್ಡ್ರಿ ಡಿಸೋಜಾ ಅವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಂದು ಹೆಣ್ಣು ಮಗು ಇದೆ. ಸಾವನ್ನಪ್ಪಿದ ಹೆನ್ಡ್ರಿ ಡಿಸೋಜಾ ಶವವನ್ನು ಬೆಳ್ತಂಗಡಿ ಸರಕಾರಿ ಆಸ್ಪತ್ರೆ ಶವಗಾರಕ್ಕೆ ಸಾಗಿಸಲಾಗಿದ್ದು. ಬೆಳ್ತಂಗಡಿ ಸಂಚಾರಿ ಠಾಣೆಯ ಸಬ್ ಇನ್ಸ್ಪೆಕ್ಟರ್ ಸಂತೋಷ್ ಮತ್ತು ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಮತ್ತು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:39 pm, Thu, 30 March 23




