ವಿವಾದಕ್ಕೆ ಸಿಲುಕಿದ ‘ಮಿರ್ಜಾಪುರ’ ಸೀರಿಸ್; ಒಪ್ಪಿಗೆ ಇಲ್ಲದೆ ಸಾಂಗ್ ಬಳಕೆ?
‘ಮಿರ್ಜಾಪುರ: ದಿ ಮೂವಿ’ ಚಿತ್ರದಲ್ಲಿ ತಮ್ಮ ‘ಶೂರ್‌ವೀರ್’ ಹಾಡನ್ನು ಅನುಮತಿ ಇಲ್ಲದೆ ಬಳಸಲಾಗಿದೆ ಎಂದು ರಾಜಸ್ಥಾನಿ ರ‍್ಯಾಪರ್ ರ‍್ಯಾಪೇರಿಯಾ ಬಾಳಮ್ ಆರೋಪಿಸಿದ್ದಾರೆ. ಮಹಾರಾಣಾ ಪ್ರತಾಪ್ ಗೌರವಾರ್ಥ ರಚಿಸಿದ ಹಾಡನ್ನು ಗ್ಯಾಂಗ್‌ಸ್ಟರ್‌ಗಳಿಗೆ ಬಳಸಿರುವುದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಿನಿಮಾ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಿದ್ದಾರೆ.

ಮುಖ್ಯಾಂಶಗಳು
- ಅನುಮತಿ ಇಲ್ಲದೆ ಹಾಡು ಬಳಕೆ
- ‘ಮಿರ್ಜಾಪುರ: ದಿ ಮೂವಿ’ಗೆ ಬಿಗ್ ಶಾಕ್
- ಗ್ಯಾಂಗ್‌ಸ್ಟರ್‌ಗಳಿಗೆ ದೇಶಭಕ್ತಿ ಹಾಡು
‘ಮಿರ್ಜಾಪುರ: ದಿ ಮೂವಿ’ ಚಿತ್ರವು ತೆರೆಕಂಡ ಬೆನ್ನಲ್ಲೇ ದೊಡ್ಡ ವಿವಾದಕ್ಕೆ ಸಿಲುಕಿದೆ. ರಾಜಸ್ಥಾನಿ ಮೂಲದ ರ‍್ಯಾಪರ್ ರ‍್ಯಾಪೇರಿಯಾ ಬಾಳಮ್ ಸಿನಿಮಾ ತಂಡದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಅನುಮತಿ ಪಡೆಯದೇ ಮತ್ತು ಕ್ರೆಡಿಟ್ ನೀಡದೇ ‘ಶೂರ್‌ವೀರ್’ ಹಾಡನ್ನು ಬಳಸಿಕೊಳ್ಳಲಾಗಿದೆ ಎಂದು ಅವರು ಕಿಡಿಕಾರಿದ್ದಾರೆ. ಗ್ಯಾಂಗ್‌ಸ್ಟರ್‌ಗಳ ದೃಶ್ಯಕ್ಕೆ ದೇಶಭಕ್ತಿ ಹಾಡು ಬಳಸಿರುವುದಕ್ಕೆ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ರಾಜಸ್ಥಾನಿ ಗಾಯಕ ರ‍್ಯಾಪೇರಿಯಾ ಬಾಳಮ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ತಮ್ಮ ನೋವನ್ನು ಅಭಿಮಾನಿಗಳ ಮುಂದೆ ತೋಡಿಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಸಿನಿಮಾ ತಂಡದ ಈ ನಡವಳಿಕೆಯಿಂದ ತಮಗೆ ತೀವ್ರ ಬೇಸರವಾಗಿದೆ ಎಂದು ಗಾಯಕ ಹೇಳಿದ್ದಾರೆ.
ಈ ‘ಶೂರ್‌ವೀರ್’ ಹಾಡನ್ನು ಮಹಾರಾಣಾ ಪ್ರತಾಪ್ ಅವರಿಗೆ ಗೌರವ ಸಲ್ಲಿಸಲು ರಚಿಸಲಾಗಿತ್ತು. ಆದರೆ ಸಿನಿಮಾದಲ್ಲಿ ಖಳನಾಯಕರನ್ನು ವಿಜೃಂಭಿಸಲು ಇದನ್ನು ಬಳಸಲಾಗಿದೆ. ಇದು ರಾಜಸ್ಥಾನ ಮತ್ತು ಮಹಾರಾಣಾ ಪ್ರತಾಪ್ ಅವರಿಗೆ ಮಾಡಿದ ಅಪಮಾನ. ಇಂತಹ ನಿರ್ಧಾರವನ್ನು ಸಹಿಸಲು ಸಾಧ್ಯವಿಲ್ಲ ಎಂದು ಬಾಳಮ್ ಆಕ್ರೋಶ ಹೊರಹಾಕಿದ್ದಾರೆ.
View this post on Instagram
ಚಿತ್ರತಂಡ ತಮ್ಮನ್ನು ನೇರವಾಗಿ ಸಂಪರ್ಕಿಸಬೇಕಿತ್ತು ಎಂದು ಗಾಯಕ ಅಭಿಪ್ರಾಯಪಟ್ಟಿದ್ದಾರೆ. ಅನುಮತಿ ಕೇಳಿದ್ದರೆ ಇನ್ನು ಉತ್ತಮ ಕಲ್ಪನೆಗಳನ್ನು ನೀಡುತ್ತಿದ್ದೆವು. ಆದರೆ ಯಾವುದೇ ಹಕ್ಕು ಪಡೆಯದೇ ಹಾಡು ಬಳಸಿರುವುದು ಸಂಪೂರ್ಣ ತಪ್ಪು. ಈ ಕಾಪಿರೈಟ್ ಹಕ್ಕನ್ನು ಅವರಿಗೆ ನೀಡಿದವರು ಯಾರು ಎಂದು ಗಾಯಕ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: ಬಾಕ್ಸ್ ಆಫೀಸ್ನಲ್ಲಿ ಮೊದಲ ದಿನವೇ ದಾಖಲೆ ಬರೆದ ‘ಮಿರ್ಜಾಪುರ್’ ಸಿನಿಮಾ
ಹಾಡು ಪ್ರಸಾರವಾದ ಮೇಲೆ ಸಾವಿರಾರು ಅಭಿಮಾನಿಗಳು ತಮಗೆ ಸಂದೇಶ ಕಳುಹಿಸಿದ್ದಾರೆ. ಸಿನಿಮಾದಲ್ಲಿ ಹಾಡು ಕೇಳಿ ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ ಈ ಹಾದಿ ಸರಿಯಿಲ್ಲ ಎಂದು ಗಾಯಕ ಸ್ಪಷ್ಟಪಡಿಸಿದ್ದಾರೆ. ಈ ವಿಷಯದಲ್ಲಿ ತಾವು ಕಾನೂನು ಕ್ರಮ ಕೈಗೊಳ್ಳುವುದಾಗಿ ಬಾಳಮ್ ಎಚ್ಚರಿಕೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:04 am, Mon, 7 September 26




