‘ರಾಮಾಯಣ ಪಾರ್ಟ್ 1’ ಸಿನಿಮಾ ಮುಗಿದ ಬಳಿಕ ಹನುಮಂತನ ಪಾತ್ರದ ಝಲಕ್
ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ ಮುಂತಾದವರು ನಟಿಸಿರುವ ‘ರಾಮಾಯಣ’ ಸಿನಿಮಾ ಬಿಡುಗಡೆಯಾಗಿ ಗಮನ ಸೆಳೆಯುತ್ತಿದೆ. ಈ ಚಿತ್ರದಲ್ಲಿ ಹನುಮಂತನ ಪಾತ್ರದ ದರ್ಶನ ಆಗಿಲ್ಲ. ಆದರೆ ಸಿನಿಮಾ ಮುಗಿದ ನಂತರ ಪೋಸ್ಟ್-ಕ್ರೆಡಿಟ್ ದೃಶ್ಯದಲ್ಲಿ ಒಂದು ಝಲಕ್ ತೋರಿಸಲಾಗಿದೆ. ಯೂಟ್ಯೂಬ್ ಮೂಲಕವೂ ಇದು ವೀಕ್ಷಣೆಗೆ ಲಭ್ಯವಾಗಿದೆ.

ಬಹುನಿರೀಕ್ಷಿತ ‘ರಾಮಾಯಣ ಪಾರ್ಟ್ 1: ರೈಸ್ ಆಫ್ ಎ ಲೆಜೆಂಡ್’ ಚಿತ್ರವು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ರಣಬೀರ್ ಕಪೂರ್ (ಶ್ರೀರಾಮ), ಸಾಯಿ ಪಲ್ಲವಿ (ಸೀತೆ) ಹಾಗೂ ಯಶ್ (ರಾವಣ) ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾದ ಕೊನೆಯಲ್ಲಿ ಪ್ರೇಕ್ಷಕರಿಗೆ ಪ್ರಮುಖ ಸರ್‌ಪ್ರೈಸ್ ಒಂದನ್ನು ಕಾಯ್ದಿರಿಸಲಾಗಿದೆ. ಚಿತ್ರದ ಪೋಸ್ಟ್-ಕ್ರೆಡಿಟ್ ದೃಶ್ಯದಲ್ಲಿ ನಟ ಸನ್ನಿ ಡಿಯೋಲ್ ಅವರು ಹನುಮಂತನಾಗಿ ಎಂಟ್ರಿ ನೀಡುವ ಮೂಲಕ ಎರಡನೇ ಭಾಗಕ್ಕೆ ಭರ್ಜರಿ ಮುನ್ನುಡಿ ಬರೆದಿದ್ದಾರೆ.
ಸಿನಿಮಾ ಪೂರ್ತಿ ಮುಗಿದು ಎಂಡ್ ಕ್ರೆಡಿಟ್ಸ್ ಬರುವವರೆಗೂ ಕಾಯುವ ಪ್ರೇಕ್ಷಕರಿಗೆ ಸನ್ನಿ ಡಿಯೋಲ್ ಅವರ ಹನುಮಂತನ ಅವತಾರ ರೋಮಾಂಚನ ಉಂಟುಮಾಡುತ್ತದೆ. ನಿರ್ಮಾಪಕರು ಈ ಪಾತ್ರವನ್ನು ಸಿನಿಮಾದ ಆರಂಭದಲ್ಲಿ ತೋರಿಸದೆ, ಎರಡನೇ ಭಾಗದ ಮೇಲಿನ ಕುತೂಹಲ ಹೆಚ್ಚಿಸಲು ಕೊನೆಯ ಭಾಗದಲ್ಲಿ ಬಳಸಿಕೊಂಡಿದ್ದಾರೆ. ಪೋಸ್ಟ್-ಕ್ರೆಡಿಟ್ ದೃಶ್ಯವು ಶಕ್ತಿಶಾಲಿ ಹಿನ್ನೆಲೆ ಸಂಗೀತದೊಂದಿಗೆ ಪ್ರಾರಂಭವಾಗುತ್ತದೆ.
ಗದೆಯನ್ನು ಹಿಡಿದು ಆಕಾಶದಲ್ಲಿ ಹಾರುತ್ತಾ, ಜೈ ಶ್ರೀರಾಮ್ ಎಂದು ಘೋಷಣೆ ಕೂಗುವ ಹನುಮಂತನ ದೃಶ್ಯ ಪ್ರೇಕ್ಷಕರನ್ನು ಖುಷಿಪಡುವಂತೆ ಮಾಡುತ್ತದೆ. ಈ ದೃಶ್ಯದಲ್ಲಿ ಸನ್ನಿ ಡಿಯೋಲ್ ಅವರ ಸಂಪೂರ್ಣ ಮುಖವನ್ನು ಸ್ಪಷ್ಟವಾಗಿ ತೋರಿಸದೆ, ಹನುಮಂತನ ಪಾತ್ರದ ಗಾಂಭೀರ್ಯವನ್ನು ಮಾತ್ರ ಅನಾವರಣಗೊಳಿಸಲಾಗಿದೆ. ಆ ಮೂಲಕ ಕೌತುಕವನ್ನು ಹೆಚ್ಚಿಸಲಾಗಿದೆ.
ಇದಕ್ಕೆ ಮೆರಗು ನೀಡುವಂತೆ ಹಿನ್ನೆಲೆಯಲ್ಲಿ ದಿಲ್ಜಿತ್ ದೋಸಾಂಜ್, ಸುಖ್ವಿಂದರ್ ಸಿಂಗ್, ಮೋಹಿತ್ ಚೌಹಾಣ್, ಕೈಲಾಶ್ ಖೇರ್ ಮತ್ತು ಅನಿರುದ್ಧ್ ರವಿಚಂದರ್ ಅವರು ಜಂಟಿಯಾಗಿ ಹಾಡಿರುವ ಅದ್ದೂರಿ ಹನುಮಾನ್ ಚಾಲೀಸಾ ಧ್ವನಿಸುತ್ತದೆ. ಇದಕ್ಕೂ ಮುನ್ನ ರಾವಣನ ಹಿರಿಯ ಮಗ ಹಾಗೂ ಲಂಕೆಯ ಯುವರಾಜ ಮೇಘನಾದ ಪಾತ್ರದಲ್ಲಿ ರಾಘವ್ ಜುಯಲ್ ಅವರ ಮೊದಲ ನೋಟವನ್ನೂ ತೋರಿಸಲಾಗಿದೆ.
ಇದನ್ನೂ ಓದಿ: Ramayana Review: ಯಶ್, ರಣಬೀರ್, ಸಾಯಿ ಪಲ್ಲವಿ ನಟನೆಯಿಂದ ಕಣ್ಮನ ಸೆಳೆದ ‘ರಾಮಾಯಣ’
ರಾಮಾಯಣದ ಕಥೆಯಲ್ಲಿ ರಾವಣನು ಸೀತೆಯನ್ನು ಅಪಹರಿಸಿದ ನಂತರ ಶ್ರೀರಾಮನಿಗೆ ಹನುಮಂತನ ಭೇಟಿಯಾಗುತ್ತದೆ. ಹೀಗಾಗಿ ಎರಡನೇ ಭಾಗದಲ್ಲಿ ಹನುಮಂತನ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರಲಿದೆ. ಚಿತ್ರದ ಕೊನೆಯಲ್ಲಿ ‘ರಾಮಾಯಣ ಪಾರ್ಟ್ 2’ ಬಿಡುಗಡೆಯ ವರ್ಷವನ್ನೂ ಅಧಿಕೃತವಾಗಿ ಘೋಷಿಸಲಾಗಿದೆ. ಈ ಹಿಂದೆ 2027ರಲ್ಲಿ ಬಿಡುಗಡೆ ಮಾಡಲು ಯೋಜಿಸಲಾಗಿದ್ದ ಸಿಕ್ವೇಲ್ ಅನ್ನು ಈಗ 2028ಕ್ಕೆ ಮುಂದೂಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




