Rashmika Mandanna: ನಾಲ್ವರಿಗೆ ಸಿಕ್ತು ರಶ್ಮಿಕಾ ಸಿಹಿ ಮುತ್ತು; ‘ಇದು ಶ್ರೀವಲ್ಲಿಯ ಫ್ರೀ ಕಿಸ್’ ಎಂದ ನೆಟ್ಟಿಗರು
Rashmika Mandanna Viral Video: ನೆಚ್ಚಿನ ನಟಿಯ ಜೊತೆ ಮಾತನಾಡಿ, ಮುತ್ತು ಪಡೆಯಬೇಕು ಎಂಬುದು ಅಭಿಮಾನಿಗಳ ಆಸೆ ಆಗಿತ್ತು. ಅದನ್ನು ರಶ್ಮಿಕಾ ಮಂದಣ್ಣ ಈಡೇರಿಸಿದ್ದಾರೆ.
ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರು ದೇಶಾದ್ಯಂತ ಅಭಿಮಾನಿಗಳನ್ನು ಹೊಂದಿದ್ದಾರೆ. ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟ ಮೇಲಂತೂ ಅವರ ಚಾರ್ಮ್ ಹೆಚ್ಚಿದೆ. ಅಮಿತಾಭ್ ಬಚ್ಚನ್ ಜೊತೆ ಅವರು ‘ಗುಡ್ಬೈ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಿದ್ಧತೆಗಳು ನಡೆಯುತ್ತಿವೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಇತ್ತೀಚೆಗಷ್ಟೇ ‘ಗುಡ್ಬೈ’ (Goodbye) ಸಿನಿಮಾದ ಟ್ರೇಲರ್ ಲಾಂಚ್ ನಡೆಯಿತು. ಈ ವೇಳೆ ನಾಲ್ಕು ಮಕ್ಕಳಿಗೆ ರಶ್ಮಿಕಾ ಮಂದಣ್ಣ ಅವರು ಸಿಹಿ ಮುತ್ತು ನೀಡಿದ್ದಾರೆ. ಅದರ ವಿಡಿಯೋ ಕೂಡ ಸಖತ್ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು, ‘ಇದು ಶ್ರೀವಲ್ಲಿಯ ಫ್ರೀ ಕಿಸ್’ (Kiss) ಎಂದು ಕಮೆಂಟ್ ಮಾಡುತ್ತಿದ್ದಾರೆ.
ದಕ್ಷಿಣ ಭಾರತಕ್ಕೆ ಮಾತ್ರ ಸೀಮಿತ ಆಗಿದ್ದ ರಶ್ಮಿಕಾ ಮಂದಣ್ಣ ಅವರನ್ನು ಇಡೀ ಭಾರತಕ್ಕೆ ಪರಿಚಯಿಸಿದ ಕೀರ್ತಿ ‘ಪುಷ್ಪ’ ಚಿತ್ರಕ್ಕೆ ಸಲ್ಲುತ್ತದೆ. ಆ ಸಿನಿಮಾದಲ್ಲಿ ಅವರು ಮಾಡಿದ ‘ಶ್ರೀವಲ್ಲಿ’ ಎಂಬ ಪಾತ್ರ ಸಖತ್ ಫೇಮಸ್ ಆಯಿತು. ಉತ್ತರ ಭಾರತದ ಒಂದಷ್ಟು ಮಂದಿ ರಶ್ಮಿಕಾ ಅವರನ್ನು ಶ್ರೀವಲ್ಲಿ ಅಂತಲೇ ಗುರುತಿಸುತ್ತಾರೆ. ಅಷ್ಟರಮಟ್ಟಿಗೆ ಅವರಿಗೆ ‘ಪುಷ್ಪ’ ಚಿತ್ರದಿಂದ ಜನಪ್ರಿಯತೆ ಸಿಕ್ಕಿದೆ. ಹಣ ಪಡೆದುಕೊಂಡು ಕಥಾನಾಯಕ ಪುಷ್ಪರಾಜ್ಗೆ ಶ್ರೀವಲ್ಲಿ ಕಿಸ್ ಮಾಡಲು ಒಪ್ಪಿಕೊಳ್ಳುವ ದೃಶ್ಯ ‘ಪುಷ್ಪ’ ಚಿತ್ರದಲ್ಲಿದೆ. ಆದರೆ ರಿಯಲ್ ಲೈಫ್ನಲ್ಲಿ ತಮ್ಮ ಪುಟಾಣಿ ಅಭಿಮಾನಿಗಳಿಗೆ ಶ್ರೀವಲ್ಲಿ ಕಡೆಯಿಂದ ಫ್ರೀ ಕಿಸ್ ಸಿಕ್ಕಿದೆ.
ಹೌದು, ಮುಂಬೈನಲ್ಲಿ ‘ಗುಡ್ಬೈ’ ಟ್ರೇಲರ್ ರಿಲೀಸ್ ನಡೆಯುವ ಸ್ಥಳಕ್ಕೆ ಕೆಲವು ಮಕ್ಕಳು ಬಂದಿದ್ದರು. ರಶ್ಮಿಕಾ ಜೊತೆ ಮಾತನಾಡಬೇಕು ಎಂಬುದು ಆ ಬಾಲಕಿಯರ ಆಸೆ ಆಗಿತ್ತು. ಅದನ್ನು ಗಮನಿಸಿದ ರಶ್ಮಿಕಾ ಅವರು ಹುಡುಗಿಯರ ಬಳಿ ಹೋಗಿ ಮಾತನಾಡಿಸಿದ್ದಾರೆ. ಬಾಲಕಿಯರ ಆಸೆಯಂತೆ ಎಲ್ಲರಿಗೂ ಸಿಹಿ ಮುತ್ತು ನೀಡಿದ್ದಾರೆ. ನೆಚ್ಚಿನ ನಟಿಯಿಂದ ಮುತ್ತು ಪಡೆದ ಬಾಲಕಿಯರು ಖುಷಿಪಟ್ಟಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ.
View this post on Instagram
ಅಕ್ಟೋಬರ್ 7ರಂದು ‘ಗುಡ್ಬೈ’ ಚಿತ್ರ ರಿಲೀಸ್ ಆಗಲಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಸಿಂಪಲ್ ಹುಡುಗಿಯ ಪಾತ್ರ ಸಿಕ್ಕಿದೆ. ಗ್ಲಾಮರ್ ಬದಿಗಿಟ್ಟು ನಟನೆಗೆ ಮಹತ್ವ ನೀಡುವ ಚಾನ್ಸ್ ಈ ಸಿನಿಮಾದಲ್ಲಿ ಅವರಿಗೆ ದೊರೆತಿದೆ. ಅವರ ಲುಕ್ ಗಮನ ಸೆಳೆಯುತ್ತಿದೆ. ರಶ್ಮಿಕಾ ಜೊತೆ ಅಮಿತಾಭ್ ಬಚ್ಚನ್, ನೀನಾ ಗುಪ್ತಾ ಅವರಂತಹ ಅನುಭವಿ ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಪಾತ್ರವರ್ಗದ ಕಾರಣದಿಂದ ಚಿತ್ರದ ಹೈಪ್ ಹೆಚ್ಚಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:44 pm, Thu, 8 September 22