ಮಧುಬಾಲಾ ಪಾತ್ರಕ್ಕೆ ಧುರಂಧರ್ ನಟಿ ಸಾರಾ ಅರ್ಜುನ್ ತಯಾರಿ; ಯಾವಾಗಿಂದ ಶೂಟಿಂಗ್?
‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾಗಳು ಬ್ಲಾಕ್ ಬಸ್ಟರ್ ಹಿಟ್ ಆದ ಬಳಿಕ ನಟಿ ಸಾರಾ ಅರ್ಜುನ್ ಅವರಿಗೆ ದೊಡ್ಡ ಆಫರ್ಗಳು ಬರುತ್ತಿವೆ. ಈಗ ಅವರು ಮಧುಬಾಲಾ ಜೀವನಾಧಾರಿತ ಸಿನಿಮಾಗೆ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಸಂಜಯ್ ಲೀಲಾ ಬನ್ಸಾಲಿ ನಿರ್ಮಾಣ ಮಾಡುತ್ತಿರುವ ಈ ಸಿನಿಮಾದ ಶೂಟಿಂಗ್ ಬಗ್ಗೆ ಲೇಟೆಸ್ಟ್ ಮಾಹಿತಿ ಇಲ್ಲಿದೆ..

ಬಾಲಿವುಡ್‌ನ ದಂತಕಥೆ, ದಿವಂಗತ ನಟಿ ಮಧುಬಾಲಾ ಅವರ ಬಯೋಪಿಕ್ (Madhubala Biopic) ಬಗ್ಗೆ ಅಭಿಮಾನಿಗಳಿಗೆ ಬಹಳ ನಿರೀಕ್ಷೆ ಇದೆ. ಈ ಸಿನಿಮಾದ ಬಗ್ಗೆ ಅಪ್ಡೇಟ್ ತಿಳಿಯಲು ಫ್ಯಾನ್ಸ್ ಕಾದಿದ್ದಾರೆ. ಮುಂಬರುವ ಬಹುನಿರೀಕ್ಷಿತ ಚಿತ್ರಗಳಲ್ಲಿ ಇದು ಕೂಡ ಒಂದಾಗಿದೆ. ಈಗ ಈ ಚಿತ್ರದ ಚಿತ್ರೀಕರಣಕ್ಕೆ ದಿನಾಂಕ ನಿಗದಿಯಾಗಿದ್ದು, ಸೆಪ್ಟೆಂಬರ್ ತಿಂಗಳಿನಿಂದ ಶೂಟಿಂಗ್ ಆರಂಭವಾಗಲಿದೆ. ಸಂಜಯ್ ಲೀಲಾ ಬನ್ಸಾಲಿ (Sanjay Leela Bhansali) ಈ ಸಿನಿಮಾವನ್ನು ನಿರ್ಮಿಸುತ್ತಿದ್ದು, ನಟಿ ಸಾರಾ ಅರ್ಜುನ್ ಅವರು ಮಧುಬಾಲಾ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ‘ಧುರಂಧರ್’ ಯಶಸ್ಸಿನ ಬಳಿಕ ಸಾರಾ ಅರ್ಜುನ್ (Sara Arjun) ಅವರಿಗೆ ಇಂಥ ಬಿಗ್ ಆಫರ್ ಸಿಕ್ಕಿದೆ.
ಪ್ರಸ್ತುತ ಸಂಜಯ್ ಲೀಲಾ ಬನ್ಸಾಲಿ ಅವರು ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ವಿಕ್ಕಿ ಕೌಶಲ್ ನಟನೆಯ ‘ಲವ್ ಆ್ಯಂಡ್ ವಾರ್’ ಸಿನಿಮಾ ಕೆಲಸಗಳಲ್ಲಿ ನಿರತರಾಗಿದ್ದಾರೆ. ಗೋರೆಗಾಂವ್‌ನ ರಾಯಲ್ ಪಾಮ್ಸ್‌ನಲ್ಲಿ ಈ ಚಿತ್ರದ ಕೊನೆಯ ಹಾಡಿನ ಚಿತ್ರೀಕರಣ ಆಗಸ್ಟ್ ಅಂತ್ಯದ ವೇಳೆಗೆ ಮುಗಿಯಲಿದೆ. ಬಳಿಕ ಮಧುಬಾಲಾ ಬಯೋಪಿಕ್ ಶೂಟಿಂಗ್ ಆರಂಭ ಆಗಲಿದೆ.
‘ಲವ್ ಆ್ಯಂಡ್ ವಾರ್’ ಸೆಟ್‌ನಲ್ಲೇ ಬಯೋಪಿಕ್ ಚಿತ್ರೀಕರಣ
ಆಗಸ್ಟ್ ಕೊನೆಯಲ್ಲಿ ‘ಲವ್ ಆ್ಯಂಡ್ ವಾರ್’ ಶೂಟಿಂಗ್ ಪೂರ್ಣಗೊಳ್ಳುತ್ತಿದ್ದಂತೆಯೇ, ಅದೇ ಜಾಗದಲ್ಲಿ ಪ್ರೊಡಕ್ಷನ್ ಡಿಸೈನ್ ತಂಡವು ಮಧುಬಾಲಾ ಬಯೋಪಿಕ್‌ಗಾಗಿ ಸೆಟ್ ಮರುರಚನೆ ಕಾರ್ಯವನ್ನು ಪ್ರಾರಂಭಿಸಲಿದೆ. ಸೆಪ್ಟೆಂಬರ್‌ನಲ್ಲಿ ಚಿತ್ರೀಕರಣ ಅಧಿಕೃತವಾಗಿ ಶುರುವಾಗಲಿದೆ. ಈ ಬಗ್ಗೆ ಚಿತ್ರತಂಡ ಅಧಿಕೃತವಾಗಿ ಏನನ್ನೂ ಹೇಳಿಲ್ಲವಾದರೂ ಮಾಧ್ಯಮಗಳಲ್ಲಿ ವರದಿ ಪ್ರಕಟ ಆಗಿದೆ.
ಮಧುಬಾಲಾ ಪಾತ್ರಕ್ಕೆ ಸಾರಾ ಅರ್ಜುನ್ ಸಿದ್ಧತೆ
ಈ ಸಿನಿಮಾವನ್ನು ‘ಡಾರ್ಲಿಂಗ್ಸ್’ ಖ್ಯಾತಿಯ ಜಸ್ಮೀತ್ ಕೆ. ರೀನ್ ಅವರು ನಿರ್ದೇಶಿಸಲಿದ್ದಾರೆ. ಬಜೆಟ್ ಹಾಗೂ ಆರ್ಥಿಕ ಸಂಕಷ್ಟದ ಕಾರಣಕ್ಕೆ ಈ ಸಿನಿಮಾದ ಕೆಲಸಗಳು ವಿಳಂಬ ಆಗಿದ್ದವು. ಆದರೆ ಸಂಜಯ್ ಲೀಲಾ ಬನ್ಸಾಲಿ ಅವರು ನಿರ್ಮಾಪಕರಾಗಿ ಬಂದ ನಂತರ ಈ ಚಿತ್ರಕ್ಕೆ ಹೊಸ ವೇಗ ಸಿಕ್ಕಿದೆ. ಆದಷ್ಟು ಬೇಗ ಸಿನಿಮಾದ ಕೆಲಸಗಳು ಪೂರ್ಣಗೊಳ್ಳುವ ನಿರೀಕ್ಷೆ ಇದೆ.
ಇದನ್ನೂ ಓದಿ: ‘ಧುರಂಧರ್ 2’ ನಟಿ ಸಾರಾ ಅರ್ಜುನ್ಗೆ ಫ್ಯಾನ್ಸ್ ಮುತ್ತಿಗೆ: ಮಗಳಿಗೆ ಬಾಡಿಗಾರ್ಡ್ ಆದ ತಂದೆ
ಸಾರಾ ಪಾಲಿಗೆ ಸ್ಪೆಷಲ್ ಸಿನಿಮಾ
ಇತ್ತೀಚೆಗೆ ‘ಧುರಂಧರ್’ ಹಾಗೂ ‘ಧುರಂಧರ್ 2’ ಸಿನಿಮಾದಲ್ಲಿ ಯಾಲಿನಾ ಜಮಾಲಿ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದ ಸಾರಾ ಅರ್ಜುನ್, ಈಗ ಮಧುಬಾಲಾ ಪಾತ್ರಕ್ಕಾಗಿ ವಿಶೇಷ ತಯಾರಿ ನಡೆಸುತ್ತಿದ್ದಾರೆ. ಮಧುಬಾಲಾ ಅವರ ವ್ಯಕ್ತಿತ್ವ, ಹಾವಭಾವ ಮತ್ತು ಅವರ ಕಾಲಘಟ್ಟವನ್ನು ಪರದೆಯ ಮೇಲೆ ತರಲು ನಿರ್ದೇಶಕಿ ಜಸ್ಮೀತ್ ಯೋಜಿಸಿದ್ದಾರೆ. ಸಾರಾ ಅರ್ಜುನ್ ಪಾಲಿಗೆ ಇದು ವಿಶೇಷ ಸಿನಿಮಾ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




