‘ಹ್ಯಾರಿ ಪಾಟರ್’ ನಟ ಮೈಖಲ್ ಗ್ಯಾಂಬನ್ ನಿಧನ
Michael Gambon: ಜನಪ್ರಿಯ ಹಾಗೂ ಹಿರಿಯ ಹಾಲಿವುಡ್ ನಟ ಮೈಖೆಲ್ ಗ್ಯಾಂಬನ್ ನಿಧನ ಹೊಂದಿದ್ದಾರೆ. ಹ್ಯಾರಿ ಪಾಟರ್ ಸಿನಿಮಾ ಸರಣಿಯ ಫ್ರೊಫೆಸರ್ ಆಲ್ಬನ್ ಡಂಬಲ್ಡೋರ್ ಪಾತ್ರದಿಂದ ಅವರು ಜಗದ್ವಿಖ್ಯಾತಿ ಗಳಿಸಿದ್ದರು.
‘ಹ್ಯಾರಿ ಪಾಟರ್‘ (Harry Poter) ಸರಣಿ ಸಿನಿಮಾಗಳು ಸೇರಿದಂತೆ ಹಲವು ಇಂಗ್ಲೀಷ್ ಸಿನಿಮಾಗಳಲ್ಲಿ ನಟಿಸಿರುವ ನಟ ಮೈಖಲ್ ಗ್ಯಾಂಬನ್ ನಿಧನ ಹೊಂದಿದ್ದಾರೆ. ಅವರಿಗೆ 82 ವರ್ಷ ವಯಸ್ಸಾಗಿತ್ತು. ವಯೋಸಹಜ ಆರೋಗ್ಯ ಸಮಸ್ಯೆಗಳಿಂದ ಮೈಖಲ್ ಬಳಲುತ್ತಿದ್ದರು. ಕುಟುಂಬದವರು ನೀಡಿರುವ ಹೇಳಿಕೆಯಂತೆ ಮೈಖಲ್ ಬೌಟ್ ನಿಮೋನಿಯಾದಿಂದ ಅವರು ಇಂಗ್ಲೆಂಡ್ನ ಎಸ್ಸೆಕ್ಸ್ನಲ್ಲಿ ನಿಧನ ಹೊಂದಿದ್ದಾರೆ.
1940ರಲ್ಲಿ ಐರ್ಲೆಂಡ್ನಲ್ಲಿ ಮೈಖಲ್ ಜನಿಸಿದರು. ಅವರ ತಂದೆ ಎರಡನೇ ವಿಶ್ವಯುದ್ಧದಲ್ಲಿ ಪಾಲ್ಗೊಂಡಿದ್ದರು. ಬಳಿಕ ಲಂಡನ್ನ ಪುನರ್ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದ ಅವರು ಮೈಖಲ್ ಗ್ಯಾಂಬನ್ ಅವರನ್ನು ಲಂಡನ್ಗೆ ಕರೆತಂದು ಬ್ರಿಟೀಷರಂತೆಯೇ ಬೆಳೆಸಿದ್ದರು. 1962ರಲ್ಲಿ ನಾಟಕಗಳಲ್ಲಿ ನಟಿಸಲು ಆರಂಭಿಸಿದ ಗ್ಯಾಂಬನ್ ಹಲವಾರು ನಾಟಕಗಳಲ್ಲಿ ನಟಿಸಿದ್ದಾರೆ. ಸಿನಿಮಾ ನಟರಾದ ಬಳಿಕವೂ ಗ್ಯಾಂಬನ್ ಹಲವಾರು ನಾಟಕಗಳಲ್ಲಿ ನಟಿಸಿದರು.
1965ರಲ್ಲಿ ಗ್ಯಾಂಬನ್ ತಮ್ಮ ಮೊದಲ ಸಿನಿಮಾದಲ್ಲಿ ನಟಿಸಿದರು. ಅವರು ನಟಿಸಿದ ಮೊದಲ ನಾಟಕ ‘ಒತೆಲೊ’ ಅನ್ನೇ ಸಿನಿಮಾ ಮಾಡಿದಾಗ ಅದರಲ್ಲಿ ಅವರಿಗೆ ಪಾತ್ರ ನೀಡಲಾಗಿತ್ತು. ಮೊದಲ ಸಿನಿಮಾದ ಬಳಿಕವೇ ಸ್ಟಾರ್ಡಮ್ ದೊರಕಿ ಆ ಬಳಿಕ ಹಲವು ‘ಪಾಪ್ಯುಲರ್’ ಮಾದರಿಯ ಸಿನಿಮಾಗಳಲ್ಲಿಯೂ ಗ್ಯಾಂಬನ್ ನಟಿಸಿದರು. ಹಲವು ಹಾರರ್, ಆಕ್ಷನ್ ಸಿನಿಮಾಗಳ ಭಾಗವಾದವರು ಗ್ಯಾಂಬನ್.
ಇದನ್ನೂ ಓದಿ:ಯಶ್ ಭೇಟಿಯಾದ ಹಾಲಿವುಡ್ ಆಕ್ಷನ್ ನಿರ್ದೇಶಕ ಯಾರು?
2004ರಲ್ಲಿ ಮೊದಲ ಬಾರಿಗೆ ಗ್ಯಾಂಬನ್ ಹ್ಯಾರಿಪಾಟರ್ ಸಿನಿಮಾದಲ್ಲಿ ಕಾಣಿಸಿಕೊಂಡರು. ಅವರು ನಿರ್ವಹಿಸಿದ ಫ್ರೊಫೆಸರ್ ಆಲ್ಬನ್ ಡಂಬಲ್ಡೋರ್ ಪಾತ್ರ ಬಹಳ ಮೆಚ್ಚುಗೆಗೆ ಪಾತ್ರವಾಯಿತು. 2004ರ ಬಳಿಕ 2011ರ ವರೆಗೆ ಆರು ಹ್ಯಾರಿ ಪಾಟರ್ ಸರಣಿಯ ಸಿನಿಮಾಗಳಲ್ಲಿ ಗ್ಯಾಂಬನ್ ಫ್ರೊಫೆಸರ್ ಆಲ್ಬನ್ ಡಂಬಲ್ಡೋರ್ ಪಾತ್ರದಲ್ಲಿ ನಟಿಸಿದ್ದಾರೆ. ಹ್ಯಾರಿ ಪಾಟರ್ ಹೊರತಾಗಿ ಆಸ್ಕರ್ ವಿಜೇತ ‘ಕಿಂಗ್ಸ್ ಸ್ಪೀಚ್’, ಜನಪ್ರಿಯ ಆಕ್ಷನ್ ಸಿನಿಮಾಗಳಾದ ‘ಕಿಂಗ್ಸ್ಮೆನ್’, ಕಾಮಿಡಿ ಸಿನಿಮಾ ‘ಜಾನಿ ಇಂಗ್ಲೀಷ್’ ಇನ್ನೂ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಗ್ಯಾಂಬನ್ ಕಡೆಯದಾಗಿ 2019ರಲ್ಲಿ ‘ಜುಡಿ’, ‘ಕಾರ್ಡೆಲಿಯಾ’ ಸಿನಿಮಾಗಳಲ್ಲಿ ನಟಿಸಿದ್ದರು.
ಗ್ಯಾಂಬನ್ ನಿಧನಕ್ಕೆ ಹಲವು ಹಾಲಿವುಡ್ ಗಣ್ಯರು ಸಾಮಾಜಿಕ ಜಾಲತಾಣದ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ