ಕಮಲಾ ಹ್ಯಾರಿಸ್ ಬೆಂಬಲಿಸಿ ಮ್ಯೂಸಿಕ್ ವಿಡಿಯೋ ಬಿಡುಗಡೆ ಮಾಡಲಿರುವ ರೆಹಮಾನ್
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಗಳು ನಡೆಯುತ್ತಿದ್ದು, ಹಲವು ಕಲಾವಿದರು, ಸೆಲೆಬ್ರಿಟಿಗಳು ಕಮಲಾ ಹ್ಯಾರಿಸ್ಗೆ ಬೆಂಬಲ ಸೂಚಿಸಿದ್ದಾರೆ. ಇದೀಗ ಅಮೆರಿಕದಲ್ಲಿಯೂ ಜನಪ್ರಿಯವಾಗಿರುವ ಭಾರತೀಯ ಕಲಾವಿದ ಎಆರ್ ರೆಹಮಾನ್ ಅವರು ಕಮಲಾ ಹ್ಯಾರಿಸ್ಗೆ ಬೆಂಬಲ ಸೂಚಿಸಿ ಮ್ಯೂಸಿಕ್ ವಿಡಿಯೋ ಒಂದನ್ನು ರೆಕಾರ್ಡ್ ಮಾಡಿದ್ದು ಶೀಘ್ರವೇ ವಿಡಿಯೋ ಬಿಡುಗಡೆ ಆಗಲಿದೆ.
ಭಾರತದಲ್ಲಿ ಚುನಾವಣೆ ಬಂದರೆ ವಿವಿಧ ಪಕ್ಷಗಳು ಹಾಡುಗಳನ್ನು ಬಿಡುಗಡೆ ಮಾಡುತ್ತವೆ. ಆಯಾ ಪಕ್ಷದ ಸಾಧನೆಯನ್ನು ಈ ಹಾಡುಗಳು ಒಳಗೊಂಡಿರುತ್ತವೆ. ಯಾವುದಾದರೂ ಹಳೆಯ ಹಿಟ್ ಹಾಡುಗಳನ್ನು ಆರಿಸಿಕೊಂಡು ಅದರ ಲಿರಿಕ್ಸ್ ಬದಲಾಯಿಸಿ ಹಾಕುವುದೂ ಇದೆ. ಬಹಳ ವರ್ಷಗಳಿಂದಲೂ ಇದು ಚಾಲ್ತಿಯಲ್ಲಿದೆ. ಚುನಾವಣಾ ಪ್ರಚಾರದಲ್ಲಿ ಈ ಹಾಡುಗಳು ಮಹತ್ವದ ಪಾತ್ರವಹಿಸುತ್ತದೆ. ಕೆಲವು ಹಾಡುಗಳಂತೂ ಬಹಳ ಫನ್ನಿ ಆಗಿಯೂ ಇರುತ್ತವೆ. ಕೆಲವು ಹಾಡುಗಳು ಎದುರಾಳಿಗಳನ್ನು ಟೀಕಿಸುವಂತೆಯೂ ಇರುತ್ತವೆ. ಇದೀಗ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯುತ್ತಿದೆ. ಡೊನಾಲ್ಡ್ ಟ್ರಂಫ್ ಹಾಗೂ ಭಾರತೀಯ ಮೂಲದ ಕಮಲಾ ಹ್ಯಾರಿಸ್ ಎದುರಾಳಿಗಳಾಗಿದ್ದಾರೆ. ಕಮಲಾ ಹ್ಯಾರಿಸ್ಗೆ ಹಾಲಿವುಡ್ನ ಹಲವರು ಬೆಂಬಲ ಸೂಚಿಸಿದ್ದಾರೆ. ಟ್ರಂಫ್ಗೆ ಎಲಾನ್ ಮಸ್ಕ್ ಸೇರಿದಂತೆ ಕೆಲವು ಉದ್ಯಮಿಗಳು ಬೆಂಬಲ ಸೂಚಿಸಿದ್ದಾರೆ. ಇದೀಗ ಅಮೆರಿಕದಲ್ಲಿಯೂ ಭಾರಿ ಜನಪ್ರಿಯವಾಗಿರುವ ಭಾರತೀಯ ಎಆರ್ ರೆಹಮಾನ್, ಕಮಲಾ ಹ್ಯಾರಿಸ್ ಅವರನ್ನು ಬೆಂಬಲಿಸಿ ಮ್ಯೂಸಿಕ್ ವಿಡಿಯೋ ಬಿಡುಗಡೆ ಮಾಡಲಿದ್ದಾರೆ.
ಕಮಲಾ ಹ್ಯಾರಿಸ್ ಪರವಾಗಿ ಎಆರ್ ರೆಹಮಾನ್ ಈಗಾಗಲೇ ಮ್ಯೂಸಿಕ್ ವಿಡಿಯೋ ಒಂದನ್ನು ರೆಕಾರ್ಡ್ ಮಾಡಿದ್ದಾರೆ. ಈ ಮ್ಯೂಸಿಕ್ ವಿಡಿಯೋ ಬರೋಬ್ಬರಿ 30 ನಿಮಿಷ ಇದೆ ಎನ್ನಲಾಗುತ್ತಿದೆ. ಈ ಮ್ಯೂಸಿಕ್ ವಿಡಿಯೋನಲ್ಲಿ ಒಂದಲ್ಲ ಹಲವು ಹಾಡುಗಳು ಇರಲಿವೆ. ಅಮೆರಿಕದ ಸಮಯದ ಪ್ರಕಾರ ಅಕ್ಟೋಬರ್ 13 ರ ರಾತ್ರಿ (ಭಾರತೀಯ ಸಮಯದಂತೆ ಅಕ್ಟೋಬರ್ 14ರ ಬೆಳಿಗ್ಗೆ) ಈ ಮ್ಯೂಸಿಕ್ ವಿಡಿಯೋ ಬಿಡುಗಡೆ ಆಗಲಿದೆ. ಏಷಿಯನ್-ಅಮೆರಕನ್ ಪೆಸಿಫಿಕ್ ಐಸ್ಲ್ಯಾಂಡರ್ ವಿಕ್ಟರಿ ಫಂಡ್ (ಎಎಪಿಐ), ಕಮಲಾ ಹ್ಯಾರಿಸ್ ಪ್ರಚಾರದ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಸಂಸ್ಥೆಗಳಲ್ಲಿ ಒಂದಾಗಿದ್ದು, ಎಆರ್ ರೆಹಮಾನ್ ಮ್ಯೂಸಿಕ್ ವಿಡಿಯೋ ನಿರ್ಮಾಣದಲ್ಲಿ ಇವರ ಪಾತ್ರ ಮಹತ್ವದ್ದು. ಇವರದ್ದೇ ಯೂಟ್ಯೂಬ್ ಚಾನೆಲ್ನಲ್ಲಿ ಎಆರ್ ರೆಹಮಾನ್ ಅವರ ಮ್ಯೂಸಿಕ್ ವಿಡಿಯೋ ಬಿಡುಗಡೆ ಆಗಲಿದೆ.
ಇದನ್ನೂ ಓದಿ:‘ಲಾಲ್ ಸಲಾಂ ಕಥೆ ಬೋರಿಂಗ್ ಆಗಿತ್ತು’; ತಮ್ಮದೇ ಸಿನಿಮಾ ಬಗ್ಗೆ ಎಆರ್ ರೆಹಮಾನ್ ಮಾತು
ಈ ಬಗ್ಗೆ ಮಾತನಾಡಿರುವ ಎಎಪಿಐ ನ ಅಧ್ಯಕ್ಷ ಶೇಖರ್ ನರಸಿಂಹ, ‘ಈ ಮ್ಯೂಸಿಕ್ ವಿಡಿಯೋ ಮೂಲಕ. ಅಮೆರಿಕದ ಪ್ರಗತಿ, ಶಾಂತಿ ಮತ್ತು ಪ್ರಾತಿನಿಧ್ಯದ ಪರವಾಗಿ ನಿಂತಿರುವ ನಾಯಕರುಗಳು, ಕಲಾವಿದರುಗಳ ಜೊತೆಗೆ ತಮ್ಮ ಧ್ವನಿಯನ್ನೂ ಸೇರಸಿದ್ದಾರೆ’ ಎಂದಿದ್ದಾರೆ. ‘ಇದು ಕೇವಲ ಸಂಗೀತ ಕಾರ್ಯಕ್ರಮವಲ್ಲ ಅದಕ್ಕಿಂತಲೂ ಹೆಚ್ಚಿನದ್ದಾಗಿದೆ. ಇದು ನಮ್ಮ ಸಮುದಾಯಗಳು ಮತದಾನದಲ್ಲಿ ತೊಡಗಿಸಿಕೊಳ್ಳಲು ಮತ್ತು ಭದ್ರ, ಸುಂದರ ಭವಿಷ್ಯಕ್ಕಾಗಿ ಮತ ಚಲಾಯಿಸಲು ಕ್ರಿಯೆಗೆ ಉತ್ತೇಜನ ನೀಡಲು ಮಾಡಿರುವ ವಿಡಿಯೋ ಆಗಿದೆ’ ಎಂದಿದ್ದಾರೆ. ಈ ಮ್ಯೂಸಿಕ್ ವಿಡಿಯೋನಲ್ಲಿ ರೆಹಮಾನ್ ಅವರ ಕೆಲವು ಭಾರಿ ಹಿಟ್ ಹಾಡುಗಳು ಇರಲಿವೆ ಜೊತೆಗೆ ಕಮಲಾ ಹ್ಯಾರಿಸ್ನ ಸಂದೇಶ, ಅವರ ಧ್ಯೇಯ, ಉದ್ದೇಶಗಳು ಸಹ ಇರಲಿವೆಯಂತೆ.
ವಿಶೇಷವೆಂದರೆ ಕಮಲಾ ಹ್ಯಾರಿಸ್ಗೆ ಈಗಾಗಲೇ ವಿಶ್ವ ಮಟ್ಟದ ಪಾಪ್ ತಾರೆ ಬಿಯಾನ್ಸೆ ಹಾಡೊಂದನ್ನು ಮಾಡಿ ಕೊಟ್ಟಿದ್ದಾರೆ. ಬಿಯಾನ್ಸೆಯ ‘ಫ್ರೀಡಂ’ ಹಾಡು ಕಮಲಾ ಹ್ಯಾರಿಸ್ ಪ್ರಚಾರದ ಥೀಮ್ ಸಾಂಗ್ ಆಗಿದೆ. ಈ ಹಾಡಿನಲ್ಲಿ ಖ್ಯಾತ ಹಾಡುಗಾರ ಕೆಂಡ್ರಿಕ್ ಲ್ಯಾಮರ್ ಸಹ ಹಾಡಿದ್ದಾರೆ. ಅದು ಮಾತ್ರವೇ ಅಲ್ಲದೆ ಖ್ಯಾತ ಗಾಯಕ ಜಾನ್ ಮೆಲ್ಲೆಂಕ್ಯಾಪ್ ‘ಸ್ಮಾಲ್ ಟೌನ್’ ಹೆಸರಿನ ಹಾಡನ್ನು ಕಮಲಾ ಹ್ಯಾರಿಸ್ಗೆ ಮಾಡಿ ಕೊಟ್ಟಿದ್ದಾರೆ. ಇದೀಗ ಎಆರ್ ರೆಹಮಾನ್ ಮ್ಯೂಸಿಕ್ ವಿಡಿಯೋ ಬಿಡುಗಡೆ ಮಾಡುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ