‘ಕಲ್ಕಿ 2898 ಎಡಿ’ ಪಾರ್ಟ್ 2 ಕತೆಯ ಮಹತ್ವದ ಅಂಶ ಬಹಿರಂಗ
ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡಿದೆ. ಸಿನಿಮಾದ ಕತೆ ಪ್ರೇಕ್ಷಕರಿಗೆ ಇಷ್ಟವಾಗಿದೆ. ಇದೀಗ ಸಿನಿಮಾದಲ್ಲಿ ಕೆಲಸ ಮಾಡಿದ ಪ್ರಮುಖ ತಂತ್ರಜ್ಞರೊಬ್ಬರು ‘ಕಲ್ಕಿ 2898 ಎಡಿ’ ಸಿನಿಮಾದ ಎರಡನೇ ಭಾಗದ ಕತೆಯ ಬಗ್ಗೆ ಸುಳಿವುಗಳನ್ನು ಬಿಟ್ಟುಕೊಟ್ಟಿದ್ದಾರೆ.
ಪ್ರಭಾಸ್ ನಟನೆಯ ‘ಕಲ್ಕಿ 2898 ಎಡಿ’ ಸಿನಿಮಾ ಬಿಡುಗಡೆ ಆಗಿ ಒಂದು ತಿಂಗಳಾಗುತ್ತಾ ಬಂದಿದೆ. ಸಿನಿಮಾ ಇನ್ನೂ ಹಲವಾರು ಚಿತ್ರಮಂದಿರಗಳಲ್ಲಿ ಉತ್ತಮ ಪ್ರದರ್ಶನವನ್ನೇ ಕಾಣುತ್ತಿದೆ. ಸಿನಿಮಾದ ಒಟ್ಟು ಕಲೆಕ್ಷನ್ 1000 ಕೋಟಿಗೆ ಸನಿಹ ಬಂದಿದೆ. ‘ಕಲ್ಕಿ 2898 ಎಡಿ’ ಸಿನಿಮಾದ ಕತೆಗೆ ಎಲ್ಲರೂ ಮಾರು ಹೋಗಿದ್ದಾರೆ. ಕಲಿಯುಗದ ರಕ್ಷಕ ಕಲ್ಕಿಯನ್ನು ಕಾಪಾಡಲು ಅಶ್ವತ್ಥಾಮ ಹಾಗೂ ಕರ್ಣ ಒಂದಾಗುವ ಕತೆಯನ್ನು ಮೊದಲ ಭಾಗದಲ್ಲಿ ತೋರಿಸಲಾಗಿದೆ. ತಾಯಿಯ ಗರ್ಭದಲ್ಲಿರುವ ಕಲ್ಕಿ ಈಗ ಕರ್ಣ (ಪ್ರಭಾಸ್) ವಶದಲ್ಲಿದ್ದು, ಮುಂದಿನ ಕತೆ ಏನಾಗಿರಲಿದೆ ಎಂಬ ಕುತೂಹಲ ಪ್ರೇಕ್ಷಕರಲ್ಲಿದೆ. ಇದರ ನಡುವೆ ಸಿನಿಮಾದ ಎರಡನೇ ಭಾಗದ ಕತೆಯ ಬಗ್ಗೆ ‘ಕಲ್ಕಿ’ ಸಿನಿಮಾದ ಪ್ರೊಡಕ್ಷನ್ ಡಿಸೈನರ್ ಒಬ್ಬರು ಮಹತ್ವದ ಅಂಶಗಳನ್ನು ಬಿಟ್ಟುಕೊಟ್ಟಿದ್ದಾರೆ.
ಮೊದಲ ಭಾಗದಲ್ಲಿ ಕಮಲ್ ಹಾಸನ್ ಸುಪ್ರೀಂ ಯಾಸ್ಕಿನ್ ಪಾತ್ರದಲ್ಲಿ ನಟಿಸಿದ್ದಾರೆ. ಯಾಸ್ಕಿನ್, ಕಾಂಪ್ಲೆಕ್ಸ್ ಒಂದರಲ್ಲಿ ನೆಲೆಸಿರುತ್ತಾನೆ. ಆ ಕಾಂಪ್ಲೆಕ್ಸ್ ಕಾಶಿ ನಗರದಲ್ಲಿ ಇದೆ. ‘ಕಲ್ಕಿ’ ಸಿನಿಮಾದ ಪ್ರೊಡಕ್ಷನ್ ಡಿಸೈನರ್ ನಿತಿನ್ ಜಿಹಾನಿ ಚೌಧರಿ ಹೇಳಿರುವಂತೆ ಅಸಲಿಗೆ ಕತೆಯಲ್ಲಿ ಇನ್ನೂ ಆರು ಕಾಂಪ್ಲೆಕ್ಸ್ ಗಳಿವೆಯಂತೆ. ಆಫ್ರಿಕಾ, ಅಮೆರಿಕ, ಈಜಿಪ್ಟ್ ಹೀಗೆ ಒಟ್ಟು ಏಳು ಕಾಂಪ್ಲೆಕ್ಸ್ಗಳಿದ್ದು, ಎಲ್ಲ ಕಾಂಪ್ಲೆಕ್ಸ್ಗಳಲ್ಲಿಯೂ ಯಾಸ್ಕಿನ್ ಇದ್ದಾರೆ. ಅವರೆಲ್ಲರಿಗೂ ಸುಪ್ರೀಂ ಕಾಶಿಯ ಕಾಂಪ್ಲೆಕ್ಸ್ನ ಯಾಸ್ಕಿನ್.
ಈ ಏಳೂ ಯಾಸ್ಕಿನ್ಗಳು ಕಲಿಯ ಅಡಿಯಾಳುಗಳು. ಕಲಿಯುಗವನ್ನು ನಡೆಯುತ್ತಿರುವ ಕಲಿಯ ಆದೇಶ ಪಾಲಕರು ಎಂದು ಸಹ ನಿತಿನ್ ಜಿಹಾನಿ ಚೌಧರಿ ಹೇಳಿದ್ದಾರೆ. ನಿತಿನ್ರ ಈ ಹೇಳಿಕೆ ಪ್ರಭಾಸ್ ಅಭಿಮಾನಿಗಳಲ್ಲಿ ಇನ್ನಷ್ಟು ಗೊಂದಲ ಮೂಡಿಸಿದೆ. ಹಾಗಿದ್ದರೆ ಕಮಲ್ ಹಾಸನ್ ಮುಖ್ಯ ವಿಲನ್ ಅಲ್ಲವೆ, ಉಳಿದ ಏಳು ಯಾಸ್ಕಿನ್ ಪಾತ್ರವನ್ನು ಕಮಲ್ ಹಾಸನ್ ಅವರೇ ನಿರ್ವಹಿಸುತ್ತಾರಾ ಅಥವಾ ಬೇರೆಯವರು ನಿರ್ವಹಿಸುತ್ತಾರಾ ಎಂಬ ಅನುಮಾನ ಮೂಡಿದೆ. ಕಮಲ್ ಹಾಸನ್ ಯಾಸ್ಕಿನ್ ಆದರೆ ಕಲಿಯ ಪಾತ್ರದಲ್ಲಿ ಯಾರು ನಟಿಸಲಿದ್ದಾರೆ. ಇನ್ನು ಕಲ್ಕಿಯ ಪಾತ್ರದಲ್ಲಿ ಯಾರು ನಟಿಸುತ್ತಿದ್ದಾರೆ? ಇಷ್ಟು ವಿಸ್ತಾರದ ಕತೆ ಹೇಳಬೇಕಾದರೆ ‘ಕಲ್ಕಿ 2898 ಎಡಿ’ ಸಿನಿಮಾದ ಎಷ್ಟು ಭಾಗ ಬರಲಿದೆ ಎಂಬ ಅನುಮಾನಗಳು ಸಹ ಕಾಡುತ್ತಿವೆ.
ಇದನ್ನೂ ಓದಿ:ಪಾಕಿಸ್ತಾನದ ಚೆಲುವೆ ಸಜಲ್ ಅಲಿಗೆ ಜೋಡಿ ಆಗುತ್ತಾರಾ ನಟ ಪ್ರಭಾಸ್?
‘ಕಲ್ಕಿ 2898 ಎಡಿ’ ಸಿನಿಮಾದ ಕತೆ ಕುರುಕ್ಷೇತ್ರ ಯುದ್ಧದಲ್ಲಿ ಪ್ರಾರಂಭವಾಗಿ ಕಲಿಯುಗದ 2898ನೇ ವರ್ಷದ ವರೆಗೂ ನಡೆಯುತ್ತದೆ. ಸಿನಿಮಾದಲ್ಲಿ ಅಶ್ವತ್ಥಾಮನ ಪಾತ್ರದಲ್ಲಿ ನಟ ಅಮಿತಾಬ್ ಬಚ್ಚನ್ ನಟಿಸಿದ್ದಾರೆ. ಕರ್ಣನ ಪಾತ್ರದಲ್ಲಿ ಪ್ರಭಾಸ್ ನಟಿಸಿದ್ದಾರೆ. ಕಲ್ಕಿಯ ತಾಯಿಯ ಪಾತ್ರದಲ್ಲಿ ದೀಪಿಕಾ ಪಡುಕೋಣೆ ನಟಿಸಿದ್ದಾರೆ. ಸುಪ್ರೀಂ ಯಾಸ್ಕಿನ್ ಪಾತ್ರದಲ್ಲಿ ಕಮಲ್ ಹಾಸನ್ ನಟಿಸಿದ್ದಾರೆ. ಸಿನಿಮಾದ ಅಂತ್ಯದಲ್ಲಿ ಕಲ್ಕಿಯ ತಾಯಿಯನ್ನು ಕರ್ಣ ಅಥವಾ ಭೈರವ ಕಾಪಾಡಿ ಹೊತ್ತೊಯ್ಯುತ್ತಾನೆ. ಇತ್ತ ಯಾಸ್ಕಿನ್ ಗೆ ಕಲ್ಕಿಯ ಆಗಮನವಾಗುತ್ತಿರುವ ಸಂಗತಿ ತಿಳಿದು ಯುದ್ಧಕ್ಕೆ ಅಣಿಯಾಗುತ್ತಾನೆ. ಮುಂದಿನ ಭಾಗದಲ್ಲಿ ಏನಾಗುತ್ತದೆ ಕಾದು ನೋಡಬೇಕಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:49 am, Tue, 23 July 24