ಮೆಗಾ ಸ್ಟಾರ್ ಚಿರಂಜೀವಿಗೆ ಯುಕೆ ಪಾರ್ಲಿಮೆಂಟ್ನಲ್ಲಿ ಸಿಗಲಿದೆ ವಿಶೇಷ ಗೌರವ
ಮೆಗಾ ಸ್ಟಾರ್ ಅಭಿಮಾನಿಗಳು ‘ವಿಶ್ವಂಭರ’ ಸಿನಿಮಾದ ಬಿಡುಗಡೆಗೆ ಕಾಯುತ್ತಿದ್ದಾರೆ. ಈ ನಡುವೆ ಇನ್ನೊಂದು ಸಿಹಿ ಸುದ್ದಿ ಕೇಳಿಬಂದಿದೆ. ನಟ ಚಿರಂಜೀವಿ ಅವರಿಗೆ ಯುಕೆ ಪಾರ್ಲಿಮೆಂಟ್ನಲ್ಲಿ ‘ಜೀವಮಾನ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಇದು ಚಿರಂಜೀವಿ ಅವರ ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ಹೆಮ್ಮೆ ತಂದಿದೆ.

ಟಾಲಿವುಡ್ನ ಹಿರಿಯ ನಟ ಮೆಗಾ ಸ್ಟಾರ್ ಚಿರಂಜೀವಿ (Megastar Chiranjeevi) ಅವರಿಗೆ ವಿದೇಶದಲ್ಲೂ ಅಭಿಮಾನಿಗಳು ಇದ್ದಾರೆ. ಚಿತ್ರರಂಗಕ್ಕೆ ಚಿರಂಜೀವಿ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಟನಾಗಿ ಮಾತ್ರವಲ್ಲದೇ ಸಮಾಜಮುಖಿ ಕೆಲಸಗಳ ಮೂಲಕವೂ ಅವರು ಜನರಿಗೆ ಹತ್ತಿರ ಆಗಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಈಗಾಗಲೇ ಅನೇಕ ಪ್ರಶಸ್ತಿಗಳು ಬಂದಿವೆ. ಈಗ ಆ ಪ್ರಶಸ್ತಿಗಳ ಪಟ್ಟಿಗೆ ಇನ್ನೊಂದು ಗೌರವ ಸೇರ್ಪಡೆ ಆಗುತ್ತಿದೆ. ಯುಕೆ ಪಾರ್ಲಿಮೆಂಟ್ನಲ್ಲಿ (UK Parliament) ಮೆಗಾ ಸ್ಟಾರ್ ಚಿರಂಜೀವಿ ಅವರನ್ನು ಗೌರವಿಸಲಾಗುತ್ತಿದೆ. ಮಾರ್ಚ್ 19ರಂದು ಅವರಿಗೆ ‘ಜೀವಮಾನ ಸಾಧನೆ’ ಪ್ರಶಸ್ತಿ ನೀಡಲಾಗುತ್ತಿದೆ.
ಲಂಡನ್ನಲ್ಲಿ ಇರುವ ಹೌಸ್ ಆಫ್ ಕಾಮನ್ಸ್, ಯುಕೆ ಪಾರ್ಲಿಮೆಂಟ್ನಲ್ಲಿ ಚಿರಂಜೀವಿಗೆ ಗೌರವ ಸಮರ್ಪಣೆ ಆಗಲಿದೆ. ಅದಕ್ಕಾಗಿ ಮಾರ್ಚ್ 19ರಂದು ದಿನಾಂಕ ನಿಗದಿ ಆಗಿದೆ. ಸಾಂಸ್ಕೃತಿಕ ನಾಯಕತ್ವದ ಮೂಲಕ ಜನಸೇವೆ ಮಾಡಿದ್ದಕ್ಕಾಗಿ ಚಿರಂಜೀವಿ ಅವರಿಗೆ ಈ ಗೌರವ ಸಲ್ಲಿಕೆ ಆಗುತ್ತಿದೆ ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ. ಯುಕೆ ಪಾರ್ಲಿಮೆಂಟ್ನಲ್ಲಿ ತಮ್ಮ ನೆಚ್ಚಿನ ನಟನಿಗೆ ಜೀವಮಾನ ಸಾಧನೆ ಪ್ರಶಸ್ತಿ ಸಿಗಲಿದೆ ಎಂಬ ಸುದ್ದಿ ತಿಳಿದು ಫ್ಯಾನ್ಸ್ ಖುಷಿಯಾಗಿದ್ದಾರೆ.
ಚಿರಂಜೀವಿ ಅವರಿಗೆ ಈಗಾಗಲೇ ಅನೇಕ ಗೌರವಗಳು ಸಂದಿವೆ. ಭಾರತ ಸರ್ಕಾರ ನೀಡುವ ಪದ್ಮಭೂಷಣ, ಪದ್ಮ ವಿಭೂಷಣ ಪ್ರಶಸ್ತಿಗಳು ಕೂಡ ಸಿಕ್ಕಿದೆ. 2006ರಲ್ಲಿ ಅವರಿಗೆ ‘ಪದ್ಮ ಭೂಷಣ’ ಪ್ರಶಸ್ತಿ ನೀಡಲಾಗಿತ್ತು. 2024ರಲ್ಲಿ ‘ಪದ್ಮ ವಿಭೂಷಣ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂದಿ ಅವಾರ್ಡ್, ಫಿಲ್ಮ್ ಫೇರ್ ಅವಾರ್ಡ್ಗಳು ಕೂಡ ಅವರಿಗೆ ಸಿಕ್ಕಿವೆ.
ಇದನ್ನೂ ಓದಿ: ಚಿರಂಜೀವಿ, ಪವನ್ ಕಲ್ಯಾಣ್ ಸಹೋದರ ನಾಗಬಾಬು ಆಸ್ತಿ ಎಷ್ಟು?
ಈಗಲೂ ಚಿತ್ರರಂಗದಲ್ಲಿ ಚಿರಂಜೀವಿ ಅವರು ಆ್ಯಕ್ಟೀವ್ ಆಗಿದ್ದಾರೆ. ಆದರೆ ಸಿನಿಮಾಗಳ ಸಂಖ್ಯೆ ಕಡಿಮೆ ಆಗಿದೆ. 2023ರಲ್ಲಿ ಚಿರಂಜೀವಿ ನಟನೆಯ ‘ವಾಲ್ತೇರು ವೀರಯ್ಯ’ ಹಾಗೂ ‘ಭೋಲಾ ಶಂಕರ್’ ಸಿನಿಮಾಗಳು ಬಿಡುಗಡೆ ಆಗಿದ್ದವು. ಈಗ ಅವರು ‘ವಿಶ್ವಂಭರ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ‘ಯುವಿ ಕ್ರಿಯೇಷನ್ಸ್’ ಮೂಲಕ ಈ ಸಿನಿಮಾ ನಿರ್ಮಾಣ ಆಗುತ್ತಿದೆ. ಪಾತ್ರವರ್ಗದಲ್ಲಿ ಚಿರಂಜೀವಿ ಜೊತೆ ತ್ರಿಷಾ ಕೃಷ್ಣನ್, ಮೀನಾಕ್ಷಿ ಚೌಧರಿ, ಆಶಿಕಾ ರಂಗನಾಥ್ ಮುಂತಾದವರು ನಟಿಸುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.