‘ದಿ ರಾಜಾ ಸಾಬ್’ ಸಿನಿಮಾದ ಟೀಸರ್ ಲೀಕ್; ಪ್ರಭಾಸ್ ಅಭಿಮಾನಿಗಳಿಗೆ ನಿರಾಸೆ
‘ದಿ ರಾಜಾ ಸಾಬ್’ ಚಿತ್ರದ ಟೀಸರ್ ನೋಡಲು ಕಾದಿದ್ದ ಪ್ರಭಾಸ್ ಅಭಿಮಾನಿಗಳಿಗೆ ಸಖತ್ ನಿರಾಸೆ ಆಗಿದೆ. ಯಾಕೆಂದರೆ, ಸೋಶಿಯಲ್ ಮೀಡಿಯಾದಲ್ಲಿ ಈ ಟೀಸರ್ ಲೀಕ್ ಆಗಿದೆ. ತುಣುಕುಗಳು ವೈರಲ್ ಆಗಿವೆ. ಲೀಕ್ ಮಾಡಿದವರ ವಿರುದ್ಧ ಹಾಗೂ ಶೇರ್ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಚಿತ್ರತಂಡದವರು ನಿರ್ಧರಿಸಿದ್ದಾರೆ.

ಪ್ರಭಾಸ್ ನಟನೆಯ ‘ದಿ ರಾಜಾ ಸಾಬ್’ (The Raja Saab) ಸಿನಿಮಾ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ. ಈ ಚಿತ್ರದ ಟೀಸರ್ ನೋಡಲು ಫ್ಯಾನ್ಸ್ ಕಾದಿದ್ದಾರೆ. ಜೂನ್ 16ರಂದು ಚಿತ್ರತಂಡದವರು ಟೀಸರ್ ಬಿಡುಗಡೆ ಮಾಡಲು ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಆದರೆ ಅದಕ್ಕೂ ಮುನ್ನವೇ ಚಿತ್ರತಂಡದವರಿಗೆ ಶಾಕ್ ಎದುರಾಗಿದೆ. ‘ದಿ ರಾಜಾ ಸಾಬ್’ ಟೀಸರ್ (The Raja Saab Teaser) ಲೀಕ್ ಆಗಿದೆ. ಆನ್ಲೈನ್ನಲ್ಲಿ ಇದರ ತುಣುಕುಗಳನ್ನು ಶೇರ್ ಮಾಡಲಾಗುತ್ತಿದೆ. ಇದರಿಂದ ಅಭಿಮಾನಿಗಳಿಗೆ ಬೇಸರ ಆಗಿದೆ. ಅಲ್ಲದೇ, ಟೀಸರ್ ಲೀಕ್ ಮಾಡಿದವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ನಿರ್ಮಾಪಕರು ಎಚ್ಚರಿಕೆ ನೀಡಿದ್ದಾರೆ.
‘ದಿ ರಾಜಾ ಸಾಬ್’ ಸಿನಿಮಾ ತಂಡದ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಿಂದ ಈ ಬಗ್ಗೆ ಪೋಸ್ಟ್ ಮಾಡಲಾಗಿದೆ. ‘ಚಿತ್ರದ ಲೀಕ್ ಕಂಟೆಂಟ್ಗಳನ್ನು ಶೇರ್ ಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಮತ್ತು ಖಾತೆಯನ್ನು ಸಸ್ಪೆಂಡ್ ಮಾಡಲಾಗುವುದು. ನಮಗೆ ಎಲ್ಲರೂ ಸಹಕಾರ ನೀಡಿ ಎಂದು ಮನವಿ ಮಾಡುತ್ತೇವೆ. ಜವಾಬ್ದಾರಿಯಿಂದ ಸೆಲೆಬ್ರೇಟ್ ಮಾಡೋಣ. ಎಚ್ಚರದಿಂದಿರಿ’ ಎಂದು ಚಿತ್ರತಂಡದವರು ವಾರ್ನಿಂಗ್ ಕೊಟ್ಟಿದ್ದಾರೆ.
ಟೀಸರ್ ಲೀಕ್ ಆಗಿರುವುದಕ್ಕೆ ಯಾರು ಹೊಣೆ ಎಂದು ಪ್ರಶ್ನೆ ಮಾಡಲಾಗುತ್ತಿದೆ. ಚಿತ್ರತಂಡದ ಒಳಗಿನವರೇ ಈ ಕೃತ್ಯ ಎಸಗಿರಬಹುದು ಎಂದು ಶಂಕಿಸಲಾಗುತ್ತಿದೆ. ಇದು ಕೇವಲ ಟೀಸರ್ಗೆ ಉಂಟಾಗಿರುವ ಸಂಕಷ್ಟ ಎಂದು ನಿರ್ಲಕ್ಷ್ಯ ಮಾಡುವಂತಿಲ್ಲ. ರಿಲೀಸ್ ಸಮಯದಲ್ಲಿ ಇಡೀ ಸಿನಿಮಾ ಪೈರಸಿ ಆದರೆ ನಿರ್ಮಾಪಕರಿಗೆ ದೊಡ್ಡ ನಷ್ಟ ಆಗುತ್ತದೆ. ಹಾಗಾಗಿ ಈಗಿನಿಂದಲೇ ಎಚ್ಚರಿಕೆ ವಹಿಸಬೇಕಿದೆ.
Strict action will be taken and handles will be suspended immediately if any leaked content from #TheRajaSaab is found….
We request everyone to cooperate and stand with us in protecting the experience….
Let’s celebrate responsibly. Be aware. ⚠️
— The RajaSaab (@rajasaabmovie) June 13, 2025
ಮಾರುತಿ ನಿರ್ದೇಶನದಲ್ಲಿ ‘ದಿ ರಾಜಾ ಸಾಬ್’ ಸಿನಿಮಾ ಮೂಡಿಬರುತ್ತಿದೆ. ಇದು ಹಾರರ್ ಕಥೆ ಇರುವ ಸಿನಿಮಾ. ಇದೇ ಮೊದಲ ಬಾರಿಗೆ ಪ್ರಭಾಸ್ ಅವರು ಹಾರರ್ ಸಿನಿಮಾ ಮಾಡಿರುವುದು ವಿಶೇಷ. ಈ ಚಿತ್ರದಲ್ಲಿ ಪ್ರಭಾಸ್ ಅವರಿಗೆ ಬೇರೆ ಬೇರೆ ರೀತಿಯ ಗೆಟಪ್ಗಳು ಇವೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್ಗಳು ಸಾಕಷ್ಟು ಕುತೂಹಲ ಮೂಡಿಸಿವೆ.
ಇದನ್ನೂ ಓದಿ: 50 ಕೋಟಿ ರೂಪಾಯಿ ಸಂಭಾವನೆ ಕಡಿಮೆ ಮಾಡಿಕೊಂಡ ಪ್ರಭಾಸ್; ಕಾರಣ ಏನು?
ಈ ಚಿತ್ರದಲ್ಲಿ ಪ್ರಭಾಸ್ ಅವರು ದ್ವಿಪಾತ್ರ ಮಾಡುತ್ತಿದ್ದಾರೆ ಎನ್ನಲಾಗಿದೆ. ಟೀಸರ್ ಬಿಡುಗಡೆಯಾದರೆ ಕಥೆ ಬಗ್ಗೆ ಇನ್ನಷ್ಟು ಸುಳಿವು ಸಿಗಲಿದೆ. ಡಿಸೆಂಬರ್ 5ರಂದು ‘ದಿ ರಾಜಾ ಸಾಬ್’ ಸಿನಿಮಾ ಬಿಡುಗಡೆ ಆಗಲಿದೆ. ಪ್ರಭಾಸ್ ಜೊತೆ ನಿಧಿ ಅಗರ್ವಾಲ್, ಸಂಜಯ್ ದತ್, ರಿಧಿ ಕುಮಾರ್, ಮಾಳವಿಕಾ ಮೋಹನನ್ ಮುಂತಾದವರು ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.