ಅಮೇಜಾನ್ನಿಂದ ಮನೆ ಮನೆಗೆ ಬರಲಿದೆ ‘ಕೂಲಿ’ ಸಿನಿಮಾ ಪೋಸ್ಟರ್
Coolie Movie: ರಜನಿಕಾಂತ್ ಅಭಿನಯದ ‘ಕೂಲಿ’ ಸಿನಿಮಾ ಪ್ರಚಾರಕ್ಕೆ ಅಮೇಜಾನ್ ಜೊತೆ ಕೈಜೋಡಿಸಿದೆ. ಅಮೇಜಾನ್ ಮೂಲಕ ಆರ್ಡರ್ ಮಾಡುವ ಪ್ರತಿ ಪಾರ್ಸೆಲ್‌ನಲ್ಲೂ ‘ಕೂಲಿ’ ಸಿನಿಮಾದ ಪೋಸ್ಟರ್ ಇರುತ್ತದೆ. ಇದು ಹೊಸ ರೀತಿಯ ಮಾರ್ಕೆಟಿಂಗ್ ತಂತ್ರ.ಇ-ಕಾಮರ್ಸ್ ಮೂಲಕ ಸಿನಿಮಾ ಪ್ರಚಾರ ಮಾಡುವುದು ಇದೇ ಮೊದಲು.

ಸಿನಿಮಾ ಪ್ರಚಾರಕ್ಕೆ ಒಬ್ಬರು ಒಂದೊಂದು ತಂತ್ರವನ್ನು ಉಪಯೋಗಿಸುತ್ತಾರೆ. ಇತ್ತೀಚೆಗೆ ಇದಕ್ಕೆ ಹೊಸ ಹೊಸ ಮಾರ್ಗಗಳನ್ನು ಕಂಡು ಹಿಡಿಯಲಾಗುತ್ತಿದೆ. ಸಿನಿಮಾ ಮಂದಿರದ ಸೀಟ್ಗಳ ಮೇಲೆ ಸಿನಿಮಾ ಪೋಸ್ಟರ್ನ ಕವರ್ ಹಾಕಲಾಗುತ್ತದೆ. ನೀರಿನ ಬಾಟಲಿಗಳ ಮೇಲೆ ಸಿನಿಮಾದ ಪೋಸ್ಟರ್ನ ಕಾಣಬಹುದು. ಪಾಪ್ಕಾರ್ನ್ ಡಬ್ಬಿ ಹಾಗೂ ಕೂಲ್ಡ್ರಿಂಗ್ಸ್ ನೀಡುವ ಕಪ್ಗಳ ಮೇಲೂ ಸಿನಿಮಾ ಪೋಸ್ಟರ್ ಅಂಟಿಸಿ ಪ್ರಚಾರ ಮಾಡಿದ ಉದಾಹರಣೆ ಇದೆ. ಆದರೆ, ‘ಕೂಲಿ’ ಸಿನಿಮಾ (Coolie Movie ) ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದೆ ಹೋಗಿದೆ ಎಂದರೆ ತಪ್ಪಾಗಲಿಕ್ಕಿಲ್ಲ. ಅದೇನು ಎಂಬುದನ್ನು ಇಲ್ಲಿ ನೋಡೋಣ.
‘ಕೂಲಿ’ ಸಿನಿಮಾದಲ್ಲಿ ರಜನಿಕಾಂತ್ ನಟಿಸಿದ್ದು, ಲೋಕೇಶ್ ಕನಗರಾಜ್ ಅವರು ನಿರ್ದೇಶನ ಮಾಡಿದ್ದಾರೆ. ಈ ಚಿತ್ರ ಆಗಸ್ಟ್ 14ರಂದು ರಿಲೀಸ್ ಆಗಲಿದೆ. ಈ ಸಿನಿಮಾ ಪ್ರಚಾರಕ್ಕೆ ತಂಡದವರು ಅಮೇಜಾನ್ ಪ್ರೈಮ್ ವಿಡಿಯೋ ಜೊತೆ ಕೈ ಜೋಡಿಸಿದ್ದಾರೆ. ಮನೆ ಮನೆಗೆ ಅಮೇಜಾನ್ ಪ್ರೈಮ್ ಮೂಲಕ ‘ಕೂಲಿ’ ಸಿನಿಮಾದ ಪೋಸ್ಟರ್ ಬರಲಿದೆ. ಅದು ಹೇಗೆ ಅಂತೀರಾ? ಇಲ್ಲಿದೆ ವಿವರ.
‘ಕೂಲಿ’ ತಂಡದವರು ಅಮೇಜಾನ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ. ವರದಿಗಳ ಪ್ರಕಾರ ನೀವು ಯಾವುದಾದರೂ ಆರ್ಡರ್ ಮಾಡಿದರೆ ಆ ಬಾಕ್ಸ್ ‘ಕೂಲಿ’ ಸಿನಿಮಾದ ಪೋಸ್ಟರ್ನಿಂದ ಕವರ್ ಆಗಿರುತ್ತದೆ. ಈ ಮೊದಲು ‘ಕಬಾಲಿ’ ಸಿನಿಮಾ ಸಮಯದಲ್ಲಿ ಏರ್ ಏಷ್ಯಾ ವಿಮಾನಕ್ಕೆ ಸಿನಿಮಾದ ಪೋಸ್ಟರ್ ಅಂಟಿಸಲಾಗಿತ್ತು. ಈಗ ಹೊಸ ರೀತಿಯಲ್ಲಿ ‘ಕೂಲಿ’ ಪ್ರಚಾರ ಆರಂಭಿಸಿದೆ.
ಇತ್ತೀಚೆಗೆ ಆನ್ಲೈನ್ಲ್ಲಿ ಆರ್ಡರ್ ಮಾಡುವವರ ಸಂಖ್ಯೆ ಹೆಚ್ಚಿದೆ. ಹೀಗಾಗಿ, ಅಮೇಜಾನ್ ಮೂಲಕ ಆರ್ಡರ್ ಮಾಡುವವರ ಮನೆಗೆ ‘ಕೂಲಿ’ ಸಿನಿಮಾ ಪೋಸ್ಟರ್ ತಲುಪಲಿದೆ. ಆನ್ಲೈನ್ ಜೊತೆಗೆ ಆಫ್ಲೈನ್ನಲ್ಲೂ ಸಿನಿಮಾದ ಪ್ರಚಾರ ಆಗಲಿದೆ. ಸಿನಿಮಾ ತಂಡ ಇ-ಕಾಮರ್ಸ್ ಸಂಸ್ಥೆಯನ್ನು ಸಿನಿಮಾ ಪ್ರಚಾರಕ್ಕೆ ಬಳಕೆ ಮಾಡಿಕೊಳ್ಳುತ್ತಿರುವುದು ಇದೇ ಮೊದಲು.
ಇದನ್ನೂ ಓದಿ: ‘ಕೂಲಿ’ ಸಿನಿಮಾದ ಬಹುತೇಕ ಶೂಟ್ನ ಬಾಡಿ ಡಬಲ್ ಮೂಲಕವೇ ಮುಗಿಸಿದ ನಿರ್ದೇಶಕ
ಈ ಸಿನಿಮಾದಲ್ಲಿ ರಜನಿಕಾಂತ್ ಜೊತೆ ತೆಲುಗಿನ ಅಕ್ಕಿನೇನಿ ನಾಗಾರ್ಜುನ, ಕನ್ನಡದ ಉಪೇಂದ್ರ, ಹಿಂದಿಯ ಆಮಿರ್ ಖಾನ್, ಮಲಯಾಳಂನ ಸೌಬಿನ್ ಶಾಹಿರ್ ನಟಿಸಿದ್ದಾರೆ. ಹೀಗಾಗಿ, ತೆಲುಗು ರಾಜ್ಯಗಳಲ್ಲಿ ರಜನಿ ಹಾಗೂ ನಾಗಾರ್ಜುನ ಇರುವ ಪೋಸ್ಟರ್ ಇರಲಿದೆ. ಕರ್ನಾಟಕದಲ್ಲಿ ರಜನಿ ಹಾಗೂ ಉಪೇಂದ್ರ ಅವರ ಪೋಸ್ಟರ್ ಪಾರ್ಸಲ್ ಇರಲಿದೆ. ಹಿಂದಿಯಲ್ಲಿ ಆಮಿರ್ ಖಾನ್, ಕೇರಳದಲ್ಲಿ ಸೌಬಿನ್ ಶಾಹಿರ್ ಕಾಣಿಸಲಿದ್ದಾರೆ. ಈ ಸಿನಿಮಾದಲ್ಲಿ ಶ್ರುತಿ ಹಾಸನ್, ಪೂಜಾ ಹೆಗ್ಡೆ, ಸತ್ಯರಾಜ್ ಇದ್ದಾರೆ. ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:30 am, Thu, 31 July 25







