‘ಬಲರಾಮನ ದಿನಗಳು’ ಸಿನಿಮಾ ಸೇರಿಕೊಂಡ ‘ಕಲ್ಕಿ’ಯ ಸಂಗೀತ ನಿರ್ದೇಶಕ
Balaramana Dinagalu: ತಮಿಳಿನ ಹಲವು ಸೂಪರ್ ಹಿಟ್ ಸಿನಿಮಾಗಳಿಗೆ ಸಂಗೀತ ನೀಡಿರುವ ಖ್ಯಾತ ಸಂಗೀತ ನಿರ್ದೇಶಕ ಸಂತೋಷ್ ನಾರಾಯಣನ್ ಅವರು ಕನ್ನಡಕ್ಕೆ ಬಂದಿದ್ದಾರೆ. ‘ಬಲರಾಮನ ದಿನಗಳು’ ಸಿನಿಮಾಕ್ಕೆ ಅವರು ಸಂಗೀತ ನೀಡಿದ್ದಾರೆ.
ಇತ್ತೀಚೆಗೆ ಬಿಡುಗಡೆ ಆದ ‘ಕಲ್ಕಿ 2898 ಎಡಿ’ ಸಿನಿಮಾ ಸೇರಿದಂತೆ ತಮಿಳಿನ ಸೂಪರ್ ಹಿಟ್ ಸಿನಿಮಾಗಳಾದ ‘ಸೂದುಕುವಂ’, ‘ಪಿಜ್ಜಾ’, ‘ಕಬಾಲಿ’, ‘ಪರಿಯೇರುಂ ಪೆರುಮಾಳ್’, ‘ವಡಾ ಚೆನ್ನೈ’, ‘ಕರ್ಣನ್’, ‘ಜಗಮೇ ತಂದಿರಂ’, ‘ಚಿತ್ತ’ ತೆಲುಗಿನ ‘ದಸರಾ’ ಇನ್ನಿತರೆ ಬ್ಲಾಕ್ ಬಸ್ಟರ್ ಸಿನಿಮಾಗಳಿಗೆ ಸಂಗೀತ ನೀಡಿರುವ ಖ್ಯಾತ ಸಂಗೀತ ನಿರ್ದೇಶಕ ಸಂತೋಶ್ ನಾರಾಯಣ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ‘ಆ ದಿನಗಳು’ ಸಿನಿಮಾದ ನಿರ್ದೇಶಕ ಕೆಎಂ ಚೈತನ್ಯ ನಿರ್ದೇಶನ ಮಾಡಲಿರುವ ‘ಬಲರಾಮನ ದಿನಗಳು’ ಸಿನಿಮಾಕ್ಕೆ ಸಂತೋಶ್ ನಾರಾಯಣ್ ಸಂಗೀತ ನೀಡಲಿದ್ದಾರೆ.
ಪದ್ಮಾವತಿ ಫಿಲಂಸ್ ಲಾಂಛನದಲ್ಲಿ ಪದ್ಮಾವತಿ ಜಯರಾಂ ಹಾಗೂ ಶ್ರೇಯಸ್ ನಿರ್ಮಿಸುತ್ತಿರುವ ‘ಬಲರಾಮನ ದಿನಗಳು’ ಸಿನಿಮಾದಲ್ಲಿ ಟೈಗರ್ ವಿನೋದ್ ಪ್ರಭಾಕರ್ ನಾಯಕರಾಗಿ ನಟಿಸುತ್ತಿದ್ದು, ಇದು ಅವರ 25 ನೇ ಸಿನಿಮಾ. ಕೆಲ ತಿಂಗಳ ಹಿಂದಷ್ಟೇ ಸಿನಿಮಾದ ಘೋಷಣೆಯಾಗಿದೆ. ಈಗ ಹೊಸದಾಗಿ ಚಿತ್ರತಂಡ ಸೇರಿರುವ ಸಂತೋಶ್ ನಾರಾಯಣ್ ಅನ್ನು ಅದ್ಧೂರಿಯಾಗಿ ಚಿತ್ರತಂಡ ಸ್ವಾಗತ ಮಾಡಿದೆ. ವಿಶೇಷ ಕಾರ್ಯಕ್ರಮವೊಂದರ ಮೂಲಕ ಸಂತೋಶ್ ನಾರಾಯಣ್ ಅನ್ನು ಬರಮಾಡಿಕೊಂಡಿತು ‘ಬಲರಾಮನ ದಿನಗಳು’ ಚಿತ್ರತಂಡ.
ಕಾರ್ಯಕ್ರಮದಲ್ಲಿ ಮಾತನಾಡಿದ, ‘ನನ್ನ ತಾಯಿಗೆ ಕನ್ನಡ ಬರುತ್ತದೆ. ಅವರು ನನಗೂ ಸ್ವಲ್ಪ ಕನ್ನಡ ಹೇಳಿಕೊಟ್ಟಿದ್ದಾರೆ. ಬೆಂಗಳೂರಿಗೆ ಆಗಾಗ ಬರುತ್ತಿರುತ್ತೇನೆ. “ಬಲರಾಮನ ದಿನಗಳು” ನನ್ನ 51ನೇ ಚಿತ್ರ ಹಾಗೂ ನಾನು ಸಂಗೀತ ನೀಡುತ್ತಿರುವ ಕನ್ನಡದ ಮೊದಲ ಚಿತ್ರ. ಪದ್ಮಾವತಿ ಫಿಲಂಸ್, ಚೈತನ್ಯ ಹಾಗೂ ವಿನೋದ್ ಪ್ರಭಾಕರ್ ಅವರ ಜೊತೆಗೆ ಕೆಲಸ ಮಾಡುತ್ತಿರುವುದು ಖುಷಿಯಾಗಿದೆ. ಈ ಸಂದರ್ಭದಲ್ಲಿ ಗುರುಗಳಾದ ಇಳಯರಾಜ, ಎ.ಆರ್.ರೆಹಮಾನ್ ಅವರನ್ನು ನೆನಪಿಸಿಕೊಳ್ಳುತ್ತೇನೆ. ರಘು ದೀಕ್ಷಿತ್ ಅವರ “ನಿನ್ನ ಪೂಜೆಗೆ ಬಂದೆ ಮಾದೇಶ್ವರ” ಸೇರಿದಂತೆ ಕೆಲವು ಹಾಡುಗಳಿಗೆ ಪ್ರೋಗ್ರಾಮರ್ ಆಗಿ ಕೆಲಸ ಮಾಡಿದ್ದೇನೆ. ಅಜನೀಶ್ ಲೋಕನಾಥ್ ಹಾಗೂ ರವಿ ಬಸ್ರೂರ್ ಅವರ ಸಂಗಿತ ಇಷ್ಟ ಎಂದು ಹೇಳಿದ ಸಂತೋಷ್ ನಾರಾಯಣನ್, ಈ ಚಿತ್ರದಲ್ಲೂ ಒಳ್ಳೆಯ ಹಾಡುಗಳನ್ನು ಕೊಡುವ ಪ್ರಯತ್ನ ಮಾಡುತ್ತೇನೆ ಎಂದರು.
ಇದನ್ನೂ ಓದಿ:‘ಜೈಲಿನಲ್ಲಿ ದರ್ಶನ್ ಮೌನ; 1 ಸೆಕೆಂಡ್ ಮಾತ್ರ ಮಾತಾಡಿದ್ದು’: ವಿನೋದ್ ಪ್ರಭಾಕರ್
ನಾಯಕ ವಿನೋದ್ ರಾಜ್ ಮಾತನಾಡಿ, ‘ಇದು ನನ್ನ 25ನೇ ಸಿನಿಮಾ, ಕೆ.ಎಂ. ಚೈತನ್ಯ ನಿರ್ದೇಶನದ 10ನೇ ಸಿನಿಮಾ. ಸಂತೋಷ್ ನಾರಾಯಣನ್ ಬಂದಿರುವುಸು ಸಿನಿಮಾಕ್ಕೆ ಬಲ ಬಂದಿದೆ. ಸಂತೋಷ್ ನಾರಾಯಣನ್ ಅವರೇ ಯಾಕೆ? ಎಂಬ ಪ್ರಶ್ನೆ ಬರಬಹುದು. ಅವರ ಕೆಲಸವನ್ನು ಕರ್ನಾಟಕದ ಜನ ಒಪ್ಪಿಕೊಂಡಿದ್ದಾರೆ. ಅವರು ಯಾರು ಎಂದು ಗೊತ್ತಿಲ್ಲದಿರಬಹುದು, ಅವರ ಮುಖ ನೋಡದಿರಬಹುದು. ಆದರೆ, ಗ್ಯಾಂಗ್ಸ್ಟರ್ ಸಿನಿಮಾ ಸಂಬಂಧ ಪಟ್ಟ ಯಾವುದೇ ಪೋಸ್ಟ್ ನೋಡಿ, ಇವರ ಸಿಗ್ನೇಚರ್ ಸಂಗೀತ ಇದ್ದೇ ಇರುತ್ತದೆ. ಹಾಗಾಗಿ, ನಮ್ಮ ಚಿತ್ರತಂಡದವರೆಲ್ಲಾ ನಿರ್ಧಾರ ತೆಗೆದುಕೊಂಡು ಅವರನ್ನು ಕರೆಸಿದ್ದೇವೆ. ಇದೊಂದು ಗ್ಯಾಂಗ್ಸ್ಟರ್ & ಕಲ್ಟ್ ಸಿನಿಮಾ ಆಗಿರುವುದರಿಂದ ಅವರೇ ಸೂಕ್ತ ಎಂದನಿಸಿತು. ಅವರು ದೊಡ್ಡ ಸಂಗೀತ ನಿರ್ದೇಶಕ. ಅವರನ್ನು ಕರೆದುಕೊಂಡು ಬರುವುದು ಅಷ್ಟು ಸುಲಭವಾಗಿರಲಿಲ್ಲ. ಬಹಳ ಕಷ್ಟಪಟ್ಟು ಅವರನ್ನು ಕರೆದುಕೊಂಡು ಬಂದಿದ್ದೇವೆ. ‘ಕಲ್ಕಿ’ ಬಿಡುಗಡೆಗೂ ಮೊದಲೇ, ಮೇ ತಿಂಗಳಲ್ಲಿ ಅವರನ್ನು ಮಾತನಾಡಿಸಿದ್ದೆವು. ಅವರಿಗೆ ಚಿತ್ರಕಥೆ ರೀಡಿಂಗ್ ಕೊಡುತ್ತಿದ್ದಂತೆಯೇ ಒಪ್ಪಿಕೊಂಡರು. ಚಿತ್ರ ವಿಭಿನ್ನವಾಗಿದೆ, 70-80ರ ಕಾಲಘಟ್ಟದ ಚಿತ್ರವಾಗಿರುವುದರಿಂದ ಸಾಕಷ್ಟು ಪ್ರಯೋಗ ಮಾಡಬಹುದು ಎಂದು ಖುಷಿಪಟ್ಟು ಒಪ್ಪಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಕನ್ನಡಕ್ಕೆ ಕರೆದುಕೊಂಡು ಬಂದಿರುವ ಹೆಮ್ಮೆ ಇದೆ. ಚಿತ್ರದ ಕುರಿತು ಮುಂದಿನ ದಿನಗಳಲ್ಲಿ ಮಾತನಾಡುತ್ತೇನೆ ಎಂದರು ನಾಯಕ ಟೈಗರ್.
ಇದು 90 ರ ದಶಕದ ಕಾಲಘಟ್ಟದ ಭೂಗತಲೋಕದ ಕಥೆ. ಯಾವುದೇ ನೈಜ ಘಟನೆ ಅಥವಾ ವ್ಯಕ್ತಿಯ ಕುರಿತಾದ ಚಿತ್ರವಲ್ಲ. ಕಾಲ್ಪನಿಕ ಕಥೆ. ಟೈಗರ್ ಅವರ ಚಿತ್ರವನ್ನು ನಿರ್ದೇಶಿಸುವ ಆಸೆಯಿತ್ತು. ಅದು ಈ ಚಿತ್ರದ ಮೂಲಕ ಈಡೇರಿದೆ. ನಿರ್ಮಾಪಕರಾದ ಪದ್ಮಾವತಿ ಜಯರಾಂ ಮತ್ತು ಶ್ರೇಯಸ್ ಗೆ ವಂದನೆಗಳು. ಸಂತೋಷ್ ನಾರಾಯಣ್ ಅವರ ಸಂಗೀತ ನಿರ್ದೇಶನದಲ್ಲಿ ಒಳ್ಳೆಯ ಹಾಡುಗಳು ಬರಲಿದೆ ಎಂದು ನಿರ್ದೇಶಕ ಕೆ.ಎಂ.ಚೈತನ್ಯ ತಿಳಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ