ಚಂದನ್ ಶೆಟ್ಟಿ ಜೊತೆ ಮತ್ತೆ ಒಂದಾಗಿ ಬಾಳುತ್ತೀರಾ? ನೇರವಾಗಿ ಉತ್ತರ ನೀಡಿದ ನಿವೇದಿತಾ ಗೌಡ
ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ ಅವರು ಜೊತೆಯಾಗಿ ಸುದ್ದಿಗೋಷ್ಠಿ ಮಾಡಿದರು. ಈಗ ಅವರಿಬ್ಬರು ಮತ್ತೆ ಒಂದಾಗುವ ಸಾಧ್ಯತೆ ಏನಾದರೂ ಇದೆಯಾ ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ನಿವೇದಿತಾ ಗೌಡ ಅವರು ನೇರವಾಗಿ ಉತ್ತರಿಸಿದ್ದಾರೆ. ‘ಮುದ್ದು ರಾಕ್ಷಸಿ’ ಸಿನಿಮಾದ ಸುದ್ದಿಗೋಷ್ಠಿ ಇದಾಗಿದ್ದು, ಹಲವು ಪ್ರಶ್ನೆಗಳಿಗೆ ನಿವೇದಿತಾ ಪ್ರತಿಕ್ರಿಯೆ ನೀಡಿದ್ದಾರೆ.

ನಟಿ ನಿವೇದಿತಾ ಗೌಡ ಅವರು ಡಿವೋರ್ಸ್ ಪಡೆದ ನಂತರ ಬಿಂದಾಸ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುತ್ತಾ, ರಿಯಾಲಿಟಿ ಶೋಗಳಲ್ಲಿ ಭಾಗವಹಿಸುತ್ತಾ ಅವರು ಖುಷಿಯಾಗಿದ್ದಾರೆ. ಈ ನಡುವೆ ಸಿನಿಮಾಗಳ ಆಫರ್ ಕೂಡ ಅವರಿಗೆ ಬರುತ್ತಿವೆ. ವಿಶೇಷ ಏನೆಂದರೆ, ‘ಮುದ್ದು ರಾಕ್ಷಸಿ’ ಸಿನಿಮಾದಲ್ಲಿ ಅವರು ಮಾಜಿ ಪತಿ ಚಂದನ್ ಶೆಟ್ಟಿ ಜೊತೆ ನಟಿಸಿದ್ದಾರೆ. ಇಬ್ಬರು ಕೂಡ ಲವರ್ಸ್ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಸುದ್ದಿಗೋಷ್ಠಿ ಇಂದು (ಮಾರ್ಚ್ 11) ನಡೆದಿದೆ. ಈ ವೇಳೆ ಅವರಿಗೆ ಹಲವು ಪ್ರಶ್ನೆಗಳು ಎದುರಾದವು. ವೈಯಕ್ತಿಕ ಜೀವನದ ಬಗ್ಗೆ ಕೇಳಿಬಂದ ಪ್ರಶ್ನೆಗೂ ಅವರು ಉತ್ತರ ನೀಡಿದ್ದಾರೆ.
ವಿಚ್ಛೇದನ ಪಡೆದಿದ್ದರೂ ಕೂಡ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಅವರು ಪರಸ್ಪರ ಆರೋಪಗಳನ್ನು ಮಾಡಿಕೊಂಡಿಲ್ಲ. ‘ಆಗಿನ ಸಂದರ್ಭ ಬೇರೆ, ಈಗಿನ ಸಂದರ್ಭ ಬೇರೆ. ಡಿವೋರ್ಸ್ ಪಡೆದವರು ಮತ್ತೆ ಒಂದಾದ ಉದಾಹರಣೆ ಕೂಡ ಇದೆ. ನಿಮಗೂ ಆ ರೀತಿ ಏನಾದರೂ ಅನಿಸಿದೆಯಾ. ಈಗ ಚಂದನ್ ಶೆಟ್ಟಿ ಅವರನ್ನು ನೋಡಿದಾಗ ನೀವು ಎಮೋಷನಲ್ ಆಗಿದ್ದೀರಲ್ಲ’ ಎಂದು ಪ್ರಶ್ನೆ ಕೇಳಲಾಗಿದೆ. ಅದಕ್ಕೆ ನಿವೇದಿತಾ ಅವರು ಉತ್ತರಿಸಿದರು.
‘ಖಂಡಿತವಾಗಿಯೂ ನಾನು ಎಮೋಷನಲ್ ಆಗಿದ್ದೇನೆ. ಇಂಥ ಪ್ರಶ್ನೆ ಕೇಳಿದರೆ ಸ್ವಲ್ಪ ಟ್ರಿಕ್ಕಿ ಆಗಿರುತ್ತದೆ. ಏನೂ ಫೀಲ್ ಆಗಿಯೇ ಇಲ್ಲ ಅಂತ ಹೇಳೋಕೆ ಆಗಲ್ಲ. ಅಷ್ಟು ವರ್ಷ ಜೊತೆಗಿದ್ದ ಮೇಲೆ ಖಂಡಿತಾ ಫೀಲ್ ಆಗುತ್ತದೆ. ಬೇರೆ ಜೋಡಿಗಳ ಬಗ್ಗೆ ನನಗೆ ಗೊತ್ತಿಲ್ಲ. ಪರಸ್ಪರ ಪ್ರೀತಿ ಜಾಸ್ತಿ ಇದ್ದಿದ್ದರಿಂದ ಅವರೆಲ್ಲ ಒಂದಾಗಿರಬಹುದು. ಆದರೆ ನಮ್ಮಲ್ಲಿ ಅಷ್ಟೊಂದು ಹೊಂದಾಣಿಕೆ ಇರಲಿಲ್ಲ. ಹಾಗಾಗಿ ಮತ್ತೆ ನಾವು ಒಂದಾಗಲ್ಲ’ ಎಂದು ನಿವೇದಿತಾ ಗೌಡ ಅವರು ಹೇಳಿದ್ದಾರೆ.
ವಿಚ್ಛೇದನ ಆದಾಗ ಸಾಮಾನ್ಯವಾಗಿ ಹುಡುಗಿಯ ಮೇಲೆಯೇ ಆರೋಪ ಬರುತ್ತದೆ. ಪ್ರತಿ ಬಾರಿ ಹೆಣ್ಮಕ್ಕಳೇ ಟಾರ್ಗೆಟ್ ಆಗುತ್ತಾರೆ. ಈ ಬಗ್ಗೆಯೂ ನಿವೇದಿತಾ ಗೌಡ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇದನ್ನೂ ನೋಡಿ: ಮತ್ತೆ ಚಂದನ್ ಶೆಟ್ಟಿ ತಬ್ಬಿಕೊಂಡು ಕಣ್ಣೀರು ಹಾಕಿದ ನಿವೇದಿತಾ ಗೌಡ
‘ನಮ್ಮ ಸಮಾಜವೇ ಹಾಗೆ ಇದೆ. ಏನೇ ಆದರೂ ಹುಡುಗಿಯರದ್ದೇ ತಪ್ಪು ಎನ್ನುತ್ತಾರೆ. ಇವರೇ ಸರಿ ಇಲ್ಲ ಎಂದು ಆರೋಪ ಮಾಡ್ತಾರೆ. ನಮ್ಮ ಜೀವನದಲ್ಲಿ ಏನೆಲ್ಲ ಸಮಸ್ಯೆ ಇತ್ತು ಎಂಬುದು ಯಾರಿಗೂ ಗೊತ್ತಿರಲ್ಲ. ನಾವು ಅದನ್ನು ಹೇಳಿಕೊಳ್ಳುವ ಅಗತ್ಯ ಕೂಡ ಇಲ್ಲ. ಜನರ ಮನಸ್ಥಿತಿಯನ್ನು ನಾವು ಸರಿ ಮಾಡೋಕೆ ಆಗಲ್ಲ. ಅದೆಲ್ಲ ಅವರಿಗೆ ಬರಬೇಕು. ಒಬ್ಬರ ಬಗ್ಗೆ ಕೆಟ್ಟದಾಗಿ ಮಾತನಾಡಬಾರದು ಎಂಬ ಮನುಷ್ಯತ್ವ ಎಲ್ಲರಿಗೂ ಇರಲ್ಲ ಎನಿಸುತ್ತದೆ’ ಎಂದಿದ್ದಾರೆ ನಿವೇದಿತಾ ಗೌಡ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.