ಶುಭಂ ಟ್ರೇಲರ್: 9 ಗಂಟೆಗೆ ಬರುವ ಧಾರಾವಾಹಿ ನೋಡಿ ದೆವ್ವ ಆದ ಹೆಂಗಸರ ಕಥೆ
ಸಮಂತಾ ರುತ್ ಪ್ರಭು ಅವರು ‘ಶುಭಂ’ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾದಲ್ಲಿ ಹಾರರ್-ಕಾಮಿಡಿ ಕಹಾನಿ ಇದೆ. ರಾತ್ರಿ 9 ಗಂಟೆಗೆ ಸೀರಿಯಲ್ ನೋಡುವ ಹೆಂಗಸರೆಲ್ಲ ದೆವ್ವ ಆಗುತ್ತಾರೆ. ಅದರಿಂದ ಗಂಡಸರಿಗೆ ಕಾಟ ಶುರುವಾಗುತ್ತದೆ. ಇಂಥ ಒಂದು ಡಿಫರೆಂಟ್ ಕಥೆಯಿರುವ ‘ಶುಭಂ’ ಸಿನಿಮಾದ ಟ್ರೇಲರ್ ಬಿಡುಗೆಯಾಗಿ ಸದ್ದು ಮಾಡುತ್ತಿದೆ.

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಸಿನಿಮಾಗಳ ಆಯ್ಕೆಯಲ್ಲಿ ಸಖತ್ ಚ್ಯೂಸಿ ಆಗಿದ್ದಾರೆ. ಸಿಕ್ಕ ಸಿಕ್ಕ ಸಿನಿಮಾಗಳನ್ನೆಲ್ಲ ಅವರು ಒಪ್ಪಿಕೊಳ್ಳುತ್ತಿಲ್ಲ. ಇನ್ನು, ನಿರ್ಮಾಪಕಿಯಾಗಿ ಕೂಡ ಅವರು ಆ್ಯಕ್ಟೀವ್ ಆಗಿದ್ದಾರೆ. ‘ಟ್ರಲಾಲಾ ಮೂವಿಂಗ್ ಪಿಕ್ಚರ್ಸ್’ ಸಂಸ್ಥೆ ಮೂಲಕ ಅವರು ಹೊಸಬರಿಗೆ ಅವಕಾಶ ನೀಡುತ್ತಿದ್ದಾರೆ. ಈ ನಿರ್ಮಾಣ ಸಂಸ್ಥೆಯಿಂದ ಸಿದ್ಧವಾಗಿರುವ ಮೊದಲ ಸಿನಿಮಾ ‘ಶುಭಂ’ (Subham) ಈಗ ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾದ ಟ್ರೇಲರ್ (Subham Trailer) ಬಿಡುಗಡೆ ಆಗಿದ್ದು, ಇದರಲ್ಲಿ ಹಾರರ್ ಕಥೆಯ ಎಳೆ ಬಿಟ್ಟುಕೊಡಲಾಗಿದೆ. ಈ ಸಿನಿಮಾದಲ್ಲಿ ಸಮಂತಾ ಅವರು ಅತಿಥಿ ಪಾತ್ರ ಮಾಡಿದ್ದಾರೆ.
ಹಾರರ್ ಕಾಮಿಡಿ ಶೈಲಿಯಲ್ಲಿ ‘ಶುಭಂ’ ಸಿನಿಮಾ ಮೂಡಿಬಂದಿದೆ. ಇದರ ಕಥೆ ಡಿಫರೆಂಟ್ ಆಗಿದೆ. ಹೊಸದಾಗಿ ಮದುವೆಯಾದ ಗಂಡಸರು ತಮ್ಮ ಹೆಂಡತಿಯರನ್ನು ಹದ್ದುಬಸ್ತಿನಲ್ಲಿ ಇಟ್ಟುಕೊಳ್ಳಬೇಕು ಎಂದು ಬಯಸುತ್ತಾರೆ. ಅವರ ಆಸೆಯಂತೆ ನಡೆಯುವುದು ರಾತ್ರಿ 9 ಗಂಟೆ ತನಕ ಮಾತ್ರ. ಯಾಕೆಂದರೆ, 9 ಗಂಟೆಗೆ ಶುರುವಾಗುವ ಒಂದು ಸೀರಿಯಲ್ ನೋಡುತ್ತಿದ್ದಂತೆಯೇ ಪತ್ನಿಯರೆಲ್ಲ ದೆವ್ವ ಆಗುತ್ತಾರೆ!
9 ಗಂಟೆಗೆ ಬರುವ ಆ ಧಾರಾವಾಹಿಗೂ, ದೆವ್ವದ ಕಾಟಕ್ಕೂ ಏನು ಸಂಬಂಧ ಎಂಬುದನ್ನು ತಿಳಿಯುವ ಕೌತುಕ ಪ್ರೇಕ್ಷಕರಲ್ಲಿ ಮೂಡಿದೆ. ಮೇ 9ರಂದು ‘ಶುಭಂ’ ಸಿನಿಮಾ ಬಿಡುಗಡೆ ಆಗಲಿದೆ. ಇದರಲ್ಲಿ ಸಮಂತಾ ರುತ್ ಪ್ರಭು ಅವರು ಮಂತ್ರವಾದಿಯಾಗಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟ್ರೇಲರ್ನಲ್ಲಿ ಅವರ ಪಾತ್ರದ ಝಲಕ್ ತೋರಿಸಲಾಗಿದೆ.
ಶುಭಂ ಸಿನಿಮಾ ಟ್ರೇಲರ್:
ಇತ್ತೇಚೆಗೆ ‘ಅನಿಮಲ್’ ರೀತಿಯ ಸಿನಿಮಾಗಳಲ್ಲಿ ಆಲ್ಫಾ ಮೇಲ್ ಎಂಬ ವಿಷಯವನ್ನು ವೈಭವೀಕರಿಸಲಾಗಿತ್ತು. ಆದರೆ ‘ಶುಭಂ’ ಸಿನಿಮಾದಲ್ಲಿ ಆಲ್ಫಾ ಮೇಲ್ ಪರಿಕಲ್ಪನೆಯನ್ನು ಲೇವಡಿ ಮಾಡಲಾಗಿದೆ. ಈ ಕಾರಣದಿಂದ ಕೂಡ ಈ ಸಿನಿಮಾದ ಟ್ರೇಲರ್ ಸುದ್ದಿ ಆಗುತ್ತಿದೆ. ಟ್ರೇಲರ್ ನೋಡಿದ ಪ್ರೇಕ್ಷಕರು ಮೆಚ್ಚುಗೆ ಸೂಚಿಸುತ್ತಿದ್ದಾರೆ.
ಇದನ್ನೂ ಓದಿ: ಹೊಸ ಬಾಯ್ಫ್ರೆಂಡ್ ಜೊತೆ ತಿರುಪತಿಗೆ ಬಂದು ಪೂಜೆ ಸಲ್ಲಿಸಿದ ಸಮಂತಾ
ಹರ್ಷಿತ್ ರೆಡ್ಡಿ, ರವಿರೆಡ್ಡಿ ಶ್ರೀನಿವಾಸ್, ಚರಣ್ ಪೆರಿ, ಶ್ರಿಯಾ ಕೊಂತಮ್, ಶ್ರಾವಣಿ ಲಕ್ಷ್ಮಿ, ಶಾಲಿನಿ, ವಂಶಿದರ್ ಮುಂತಾದವರು ‘ಶುಭಂ’ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಸಮಂತಾ ನಿರ್ಮಾಣದ ಮೊದಲ ಸಿನಿಮಾ ಎಂಬ ಕಾರಣದಿಂದಲೂ ‘ಶುಭಂ’ ಮೇಲೆ ಅಭಿಮಾನಿಗಳಿಗೆ ನಿರೀಕ್ಷೆ ಮೂಡಿದೆ. ಸಮಂತಾಗಾಗಿಯೇ ತಾವು ಈ ಸಿನಿಮಾ ನೋಡುವುದಾಗಿ ಅಭಿಮಾನಿಗಳು ಕಮೆಂಟ್ ಮಾಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








