Adivi Sesh: ‘ಗೂಢಾಚಾರಿ 2’ ಫಸ್ಟ್ ಲುಕ್ ಬಿಡುಗಡೆ; ಅಡಿವಿ ಶೇಷ್ ನಟನೆಯಲ್ಲಿ ಹೊಸ ಪ್ಯಾನ್ ಇಂಡಿಯಾ ಸಿನಿಮಾ
Goodachari 2 First Look: ಅಡಿವಿ ಶೇಷ್ ಅವರ ‘ಗೂಢಾಚಾರಿ 2’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣ ಆಗುತ್ತಿದೆ. ಜನವರಿ 9ರಂದು ಈ ಬಿಗ್ ಬಜೆಟ್ ಚಿತ್ರ ಲಾಂಚ್ ಆಗಲಿದೆ.
ಟಾಲಿವುಡ್ನಲ್ಲಿ ‘ಗೂಢಾಚಾರಿ’ ಸಿನಿಮಾ (Goodachari Movie) ಜನಮನ ಗೆದ್ದಿತ್ತು. ಖ್ಯಾತ ನಟ ಅಡಿವಿ ಶೇಷ್ ಅಭಿನಯದಲ್ಲಿ ಮೂಡಿಬಂದ ಆ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಕಲೆಕ್ಷನ್ ಮಾಡಿತ್ತು. ಈಗ ಆ ಚಿತ್ರಕ್ಕೆ ಸೀಕ್ವೆಲ್ ಸಿದ್ಧಗೊಳ್ಳುತ್ತಿದೆ. ‘ಗೂಢಾಚಾರಿ 2’ (Goodachari 2) ಚಿತ್ರ ಬರುವುದು ಖಚಿತವಾಗಿದೆ. ಅದನ್ನು ತಿಳಿಸುವ ಸಲುವಾಗಿ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಈ ಬಾರಿ ಕೂಡ ಅಡಿವಿ ಶೇಷ್ ಮುಖ್ಯ ಭೂಮಿಕೆ ನಿಭಾಯಿಸಲಿದ್ದು, ಜನವರಿ 9ರಂದು ಪ್ರೀ-ವಿಷನ್ ವಿಡಿಯೋ ರಿಲೀಸ್ ಆಗಲಿದೆ. ಪ್ರತಿ ಬಾರಿ ವಿಭಿನ್ನ ಸಿನಿಮಾಗಳ ಮೂಲಕ ಪ್ರೇಕ್ಷಕರನ್ನು ಎದುರುಗೊಳ್ಳುವ ಅಡಿವಿ ಶೇಷ್ (Adivi Sesh) ಅವರು ದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ‘ಮೇಜರ್’ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗಮನ ಸೆಳೆದ ಅವರು ಈಗ ಹೊಸ ಚಿತ್ರಕ್ಕಾಗಿ ಸಜ್ಜಾಗಿದ್ದಾರೆ.
ಅಡಿವಿ ಶೇಷ್ ಅವರಿಗೆ ದೇಶಾದ್ಯಂತ ಅಭಿಮಾನಿಗಳಿದ್ದಾರೆ. ಶಶಿ ಕಿರಣ್ ಟಿಕ್ಕ ನಿರ್ದೇಶನ ಮಾಡಿದ್ದ ‘ಗೂಢಾಚಾರಿ’ ಸಿನಿಮಾ ತೆಲುಗು ಚಿತ್ರರಂಗದಲ್ಲಿ ಹೊಸ ಅಲೆ ಸೃಷ್ಟಿಸಿತ್ತು. ಇವರಿಬ್ಬರ ಕಾಂಬಿನೇಷನ್ನಲ್ಲಿ ‘ಮೇಜರ್’ ಚಿತ್ರ ಗಮನ ಸೆಳೆಯಿತು. ಇತ್ತೀಚೆಗೆ ತೆರೆಕಂಡ ‘ಹಿಟ್ 2’ ಕೂಡ ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದ್ದು ಇದೀಗ ‘ಗೂಢಾಚಾರಿ’ ಸೀಕ್ವೆಲ್ಗಾಗಿ ಅಡಿವಿ ಶೇಷ್ ಸಕಲ ತಯಾರಿ ಮಾಡಿಕೊಂಡಿದ್ದಾರೆ.
‘ಗೂಢಾಚಾರಿ 2’ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ, ಬಿಗ್ ಬಜೆಟ್ನಲ್ಲಿ ನಿರ್ಮಾಣ ಆಗುತ್ತಿದೆ. ಅಡಿವಿ ಶೇಷ್ ನಟನೆಯ ‘ಮೇಜರ್’ ಚಿತ್ರದ ಸಂಕಲನಕಾರ ವಿನಯ್ ಕುಮಾರ್ ಸಿರಿಗಿನೀದಿ ಈ ಚಿತ್ರದ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. ಚಿತ್ರಕ್ಕೆ ಅಡಿವಿ ಶೇಷ್ ಕಥೆ ಬರೆದಿದ್ದಾರೆ. ‘ಕಾರ್ತಿಕೇಯ 2’, ‘ಮೇಜರ್’ ಹಾಗೂ ‘ದಿ ಕಾಶ್ಮೀರ್ ಫೈಲ್ಸ್’ ಮುಂತಾದ ಸೂಪರ್ ಹಿಟ್ ಸಿನಿಮಾ ನಿರ್ಮಾಣ ಮಾಡಿದ ದೊಡ್ಡ ನಿರ್ಮಾಣ ಸಂಸ್ಥೆಗಳು ‘ಗೂಢಾಚಾರಿ 2’ ಚಿತ್ರಕ್ಕೆ ಬಂಡವಾಳ ಹೂಡುತ್ತಿವೆ.
ಇದನ್ನೂ ಓದಿ: ‘ನನಗೆ ಸ್ಟ್ಯಾಮಿನಾ ಜಾಸ್ತಿ’; ಪುರುಷರ ಲೈಂಗಿಕ ಸಾಮರ್ಥ್ಯ ಟೀಕೆ ಮಾಡಿದ್ದ ನಟಿ ರೆಜಿನಾಗೆ ಸ್ಟಾರ್ ನಟನ ತಿರುಗೇಟು
ಪೀಪಲ್ ಮೀಡಿಯಾ ಫ್ಯಾಕ್ಟರಿ, ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಮತ್ತು AK ಎಂಟರ್ಟೇನ್ಮೆಂಟ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ಬ್ಯಾನರ್ ಅಡಿಯಲ್ಲಿ ಟಿ.ಜಿ. ವಿಶ್ವಪ್ರಸಾದ್ ಮತ್ತು ಅಭಿಷೇಕ್ ಅಗರ್ವಾಲ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಭಿಮಾನಿಗಳ ವಲಯದಲ್ಲಿ ಈ ಚಿತ್ರ ನಿರೀಕ್ಷೆ ಹುಟ್ಟುಹಾಕಿದೆ.
ಇದನ್ನೂ ಓದಿ: ರಕ್ಷಿತ್ ಶೆಟ್ಟಿಗೆ ತೆಲುಗಿನಲ್ಲಿ ತುಂಬಾ ಫ್ಯಾನ್ಸ್ ಇದ್ದಾರೆ ಎಂದ ಅಡಿವಿ ಶೇಷ್
ಸದ್ಯಕ್ಕೆ ಫಸ್ಟ್ ಲುಕ್ ಬಿಡುಗಡೆ ಮಾಡಿರುವ ಚಿತ್ರತಂಡ ಜನವರಿ 9ರಂದು ದೆಹಲಿ ಹಾಗೂ ಮುಂಬೈನಲ್ಲಿ ಚಿತ್ರದ ಪ್ರೀ-ವಿಷನ್ ವೀಡಿಯೋ ಅನಾವರಣ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಮೊದಲ ಪಾರ್ಟ್ನಲ್ಲಿ ಇದ್ದ ಕಲಾವಿದರ ಜೊತೆಗೆ ಒಂದಿಷ್ಟು ಹೊಸ ನಟರು ಕೂಡ ‘ಗೂಢಾಚಾರಿ 2’ ಚಿತ್ರತಂಡವನ್ನು ಸೇರಿಕೊಳ್ಳಲಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.