ಸ್ನಾಯು ಸೆಳೆತ, ದಣಿವನ್ನು ನಿರ್ಲಕ್ಷಿಸಬೇಡಿ! ಇದು ಮ್ಯಾಗ್ನೀಷಿಯಂ ಕೊರತೆಯ ಲಕ್ಷಣವಾಗಿರಬಹುದು…
ದೇಹದ ಆರೋಗ್ಯ ಕಾಪಾಡಿಕೊಳ್ಳಲು ಮ್ಯಾಗ್ನೀಷಿಯಂ ಪ್ರಮುಖವಾಗಿ ಬೇಕಾದ ಖನಿಜ. ಇದರ ಕೊರತೆ ಉಂಟಾದಾಗ ದೇಹದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು ಅದನ್ನು ತಿಳಿದುಕೊಂಡು ಅಂತಹ ಸಮಸ್ಯೆ ಕಡಿಮೆ ಮಾಡಿಕೊಳ್ಳಲು ಯಾವ ರೀತಿ ಆಹಾರ ಸೇವನೆ ಮಾಡಬೇಕು, ಹೇಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಬೇಕು. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ದೇಹ ಆರೋಗ್ಯವಾಗಿರಲು ವಿಟಮಿನ್‌ಗಳು ಮಾತ್ರವಲ್ಲ, ವಿವಿಧ ಖನಿಜಾಂಶಗಳೂ ಅಗತ್ಯ. ವಿಟಮಿನ್ ಡಿ ಮತ್ತು ಬಿ12 ಕೊರತೆಯ ಬಗ್ಗೆ ಸಾಮಾನ್ಯವಾಗಿ ಹೆಚ್ಚು ಮಾತನಾಡಲಾಗುತ್ತದೆ. ಆದರೆ ದೇಹದ ಹಲವು ಪ್ರಮುಖ ಕಾರ್ಯಗಳಲ್ಲಿ ಪಾತ್ರವಹಿಸುವ ಮ್ಯಾಗ್ನೀಷಿಯಂ ಎಂಬ ಖನಿಜದ ಬಗ್ಗೆಯೂ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ. ಇದರ ಕೊರತೆ ಉಂಟಾದಾಗ ದೇಹದಲ್ಲಿ ಕೆಲವು ಲಕ್ಷಣಗಳು ಕಾಣಿಸಿಕೊಳ್ಳಬಹುದು ಅದನ್ನು ತಿಳಿದುಕೊಂಡು ಅಂತಹ ಸಮಸ್ಯೆ ಕಡಿಮೆ ಮಾಡಿಕೊಳ್ಳಲು ಯಾವ ರೀತಿ ಆಹಾರ ಸೇವನೆ ಮಾಡಬೇಕು, ಹೇಗೆ ಆರೋಗ್ಯ ಕಾಪಾಡಿಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳಬೇಕು.
ಮ್ಯಾಗ್ನೀಷಿಯಂ ದೇಹಕ್ಕೆ ಏಕೆ ಮುಖ್ಯ?
ಸಾಮಾನ್ಯವಾಗಿ ಮ್ಯಾಗ್ನೀಷಿಯಂ ದೇಹದಲ್ಲಿ ಸ್ನಾಯು ಮತ್ತು ನರಗಳ ಸಾಮಾನ್ಯ ಕಾರ್ಯ, ರಕ್ತದಲ್ಲಿನ ಸಕ್ಕರೆ ನಿಯಂತ್ರಣ, ರಕ್ತದೊತ್ತಡದ ನಿರ್ವಹಣೆ ಸೇರಿದಂತೆ ಹಲವು ಪ್ರಕ್ರಿಯೆಗಳಲ್ಲಿ ಪಾತ್ರವಹಿಸುತ್ತದೆ. ಜೊತೆಗೆ ದೇಹದಲ್ಲಿ ಶಕ್ತಿ ಉತ್ಪಾದನೆ ಮತ್ತು ಮೂಳೆಗಳ ಆರೋಗ್ಯಕ್ಕೂ ಇದು ಅಗತ್ಯವಾದ ಖನಿಜವಾಗಿದೆ.
ಕೊರತೆಯಾದರೆ ಯಾವ ಲಕ್ಷಣಗಳು ಕಾಣಿಸಬಹುದು?
ಮ್ಯಾಗ್ನೀಷಿಯಂ ಕಡಿಮೆಯಾದಾಗ ಆರಂಭದಲ್ಲಿ ಲಕ್ಷಣಗಳು ಸ್ಪಷ್ಟವಾಗಿ ಕಾಣಿಸದೇ ಇರಬಹುದು. ಆದರೆ ಕೆಲವರಲ್ಲಿ ನಿರಂತರ ದಣಿವು, ದೌರ್ಬಲ್ಯ, ಹಸಿವು ಕಡಿಮೆಯಾಗುವುದು, ವಾಕರಿಕೆ, ಸ್ನಾಯುಗಳಲ್ಲಿ ಸೆಳೆತ ಅಥವಾ ಕಾಲುಗಳಲ್ಲಿ ಮರಗಟ್ಟಿದ ಅನುಭವ ಆಗಬಹುದು. ತೀವ್ರ ಕೊರತೆಯಾದರೆ ಕೈ-ಕಾಲುಗಳಲ್ಲಿ ಜುಮ್ಮೆನಿಸುವುದು, ಸ್ನಾಯುಗಳ ಅಸಹಜ ಸೆಳೆತ, ಹೃದಯ ಬಡಿತದಲ್ಲಿ ಅಸಹಜತೆ ಸೇರಿದಂತೆ ಗಂಭೀರ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಹಾಗಾಗಿ ನಿರಂತರವಾಗಿ ಇಂತಹ ಲಕ್ಷಣಗಳು ಕಂಡುಬಂದರೆ ಸ್ವಯಂ ಔಷಧಿ ತೆಗೆದುಕೊಳ್ಳುವ ಬದಲು ವೈದ್ಯರನ್ನು ಸಂಪರ್ಕಿಸಿ ಸೂಕ್ತ ಪರೀಕ್ಷೆ ಮಾಡಿಸಿಕೊಳ್ಳುವುದು ಮುಖ್ಯ.
ಇದನ್ನೂ ಓದಿ: ಪುಂಡಿ ಸೊಪ್ಪಿನ ಬಗ್ಗೆ ಕೇಳಿದ್ದೀರಾ? ಇದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳೇನು?
ಮ್ಯಾಗ್ನೀಷಿಯಂ ಕೊರತೆಯಿಂದ ಕ್ಯಾನ್ಸರ್ ಬರುತ್ತದೆಯೇ?
ಇದು ಹಲವರಲ್ಲಿ ಮೂಡುವ ಪ್ರಮುಖ ಪ್ರಶ್ನೆ. ಪ್ರಸ್ತುತ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ ಮ್ಯಾಗ್ನೀಷಿಯಂ ಕೊರತೆಯೇ ನೇರವಾಗಿ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಮ್ಯಾಗ್ನೀಷಿಯಂ ದೇಹದ ಹಲವು ಜೈವಿಕ ಪ್ರಕ್ರಿಯೆಗಳಲ್ಲಿ ಭಾಗವಹಿಸಿದರೂ, ಅದರ ಕೊರತೆ ಮತ್ತು ಕ್ಯಾನ್ಸರ್ ನಡುವೆ ನೇರ ಕಾರಣ-ಪರಿಣಾಮ ಸಂಬಂಧವನ್ನು ದೃಢಪಡಿಸಲು ಇನ್ನಷ್ಟು ಸಂಶೋಧನೆ ಅಗತ್ಯವಿದೆ. ಆದ್ದರಿಂದ ಮ್ಯಾಗ್ನೀಷಿಯಂ ಕಡಿಮೆಯಾಗಿದೆ ಎಂದಾಕ್ಷಣ ಕ್ಯಾನ್ಸರ್ ಅಪಾಯವಿದೆ ಎಂದು ಭಯಪಡುವ ಅಗತ್ಯವಿಲ್ಲ.
ಯಾವ ಆಹಾರಗಳಲ್ಲಿ ಮ್ಯಾಗ್ನೀಷಿಯಂ ಸಿಗುತ್ತದೆ?
ಮ್ಯಾಗ್ನೀಷಿಯಂ ಪಡೆಯಲು ದುಬಾರಿ ಆಹಾರಗಳನ್ನೇ ಅವಲಂಬಿಸಬೇಕಿಲ್ಲ. ಬಾದಾಮಿ, ಗೋಡಂಬಿ, ಎಳ್ಳು, ಕುಂಬಳಕಾಯಿ ಬೀಜಗಳು ಉತ್ತಮ ಮೂಲಗಳಾಗಿವೆ. ಪಾಲಕ್‌ನಂತಹ ಹಸಿರು ಸೊಪ್ಪುಗಳು, ಕಡಲೆ, ರಾಜ್ಮಾ, ಬೇಳೆಕಾಳುಗಳು ಮತ್ತು ಸಂಪೂರ್ಣ ಧಾನ್ಯಗಳಲ್ಲೂ ಮ್ಯಾಗ್ನೀಷಿಯಂ ದೊರೆಯುತ್ತದೆ. ಭಾರತೀಯ ಆಹಾರ ಪದ್ಧತಿಯಲ್ಲಿ ರಾಗಿ, ಸಜ್ಜೆ, ಕಡಲೆ, ಬೇಳೆ, ಬೀಜಗಳು ಮತ್ತು ಹಸಿರು ಸೊಪ್ಪುಗಳನ್ನು ನಿಯಮಿತವಾಗಿ ವಿವಿಧ ರೀತಿಯಲ್ಲಿ ಸೇರಿಸಿಕೊಳ್ಳುವುದು ಸಹಾಯಕ. ಆಹಾರದ ಮೂಲಕ ಅಗತ್ಯ ಪೋಷಕಾಂಶ ಪಡೆಯುವುದು ಸಾಮಾನ್ಯವಾಗಿ ಉತ್ತಮ ವಿಧಾನ. ಮ್ಯಾಗ್ನೀಷಿಯಂ ಸಪ್ಲಿಮೆಂಟ್‌ಗಳನ್ನು ವೈದ್ಯರ ಸಲಹೆಯಿಲ್ಲದೆ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬಾರದು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




