ದೇಹದಲ್ಲಿ ಈ ಲಕ್ಷಣಗಳು ಕಂಡುಬಂದರೆ ಬೇಡ ನಿರ್ಲಕ್ಷ್ಯ: ಅವಾಗಿರಬಹುದು ಬ್ರೈನ್ ಸ್ಟ್ರೋಕ್ ಮುನ್ಸೂಚನೆ!
ಬ್ರೈನ್ ಸ್ಟ್ರೋಕ್ ಉಂಟಾಗಲು ಯಾವುದೇ ವಯಸ್ಸಿನ ಮಿತಿ ಇಲ್ಲ. ಹೀಗಿದ್ದರೂ ಇತ್ತೀಚೆಗೆ ಯುವ ಜನತೆಯಲ್ಲಿ ಈ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಅಷ್ಟಕ್ಕೂ ಇದಕ್ಕೆ ಅಸಲೀ ಕಾರಣ ಏನು? ರೋಗದ ಲಕ್ಷಣ ಮತ್ತು ತಡೆಗಟ್ಟುವಿಕೆ ಹೇಗೆ? ಎಂಬ ಬಗ್ಗೆ ತಿಳಿದುಕೊಳ್ಳಲೇ ಬೇಕಿದೆ.

ಬ್ರೈನ್ ಸ್ಟ್ರೋಕ್ ಪ್ರಕರಣಗಳು ಇಂದಿನ ಕಾಲದಲ್ಲಿ ವೇಗವಾಗಿ ಹೆಚ್ಚುತ್ತಿದ್ದು, ಇದು ಗಂಭೀರ ಆರೋಗ್ಯ ಸಮಸ್ಯೆಯಾಗಿ ಮಾರ್ಪಟ್ಟಿದೆ. ಬ್ರೈನ್ ಸ್ಟ್ರೋಕ್ ಅಂದರೆ ಮೆದುಳಿಗೆ ಹೋಗುವ ರಕ್ತದ ಸರಬರಾಜು ಅಕಸ್ಮಾತ್ ಕಡಿಮೆಯಾಗುವುದು ಅಥವಾ ರಕ್ತನಾಳ ಸ್ಫೋಟಗೊಂಡು ಒಳಗೆ ರಕ್ತಸ್ರಾವವಾಗುವುದು. ಇದರಿಂದ ಮೆದುಳಿನ ಸೆಲ್‌ಗಳು ಹಾನಿಗೊಳಗಾಗುತ್ತವೆ. ಈ ರೀತಿ ಆಗುವುದಕ್ಕೆ ಹಲವು ಕಾರಣಗಳಿವೆ. ಹೈ ಬ್ಲಡ್ ಪ್ರೆಶರ್, ಡಯಾಬಿಟೀಸ್, ಹೈ ಕೊಲೆಸ್ಟ್ರಾಲ್, ಧೂಮಪಾನ, ಅತಿಯಾದ ತೂಕ ಮತ್ತು ಕೆಟ್ಟ ಜೀವನಶೈಲಿಯ ಪರಿಣಾಮ ಬಹಳ ಮುಖ್ಯವಾದವು. ಇದಲ್ಲದೆ, ಹೆಚ್ಚು ಒತ್ತಡ, ಶಾರೀರಿಕ ಚಟುವಟಿಕೆಗಳ ಕೊರತೆ ಮತ್ತು ಸರಿಯಲ್ಲದ ಆಹಾರ ಪದ್ಧತಿಗಳು ಕೂಡ ಬ್ರೈನ್ ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತವೆ.
ಇನ್ನು ಈ ರೋಗಕ್ಕೆ ಯಾವುದೇ ವಯಸ್ಸಿನ ಮಿತಿ ಇಲ್ಲ. ಯಾವುದೇ ವಯಸ್ಸಿನವರಲ್ಲೂ ಇದು ಕಾಣಿಸಿಕೊಳ್ಳಬುದು. ಆದರೆ 50 ವರ್ಷ ಮೇಲ್ಪಟ್ಟವರು, ಹೃದಯ ರೋಗಿಗಳು, ಡಯಾಬಿಟೀಸ್ ಮತ್ತು ಹೈ ಬಿಪಿ ಇರುವವರಿಗೆ ಹೆಚ್ಚಿನ ಅಪಾಯ ಇದ್ದು, ಇತ್ತೀಚಿಗೆ ಯುವಕರಲ್ಲಿಯೂ ಇದರ ಪ್ರಮಾಣ ಹೆಚ್ಚುತ್ತಿರುವುದು ನಿಜಕ್ಕೂ ಆತಂಕಕಾರಿ ವಿಷಯ.
ಇದನ್ನೂ ಓದಿ: ಈ ಲಕ್ಷಣಗಳು ದೇಹದಲ್ಲಿ ಕಂಡುಬಂದ್ರೆ ನಿಮಗೆ ಹೃದಯದಲ್ಲಿ ಬ್ಲಾಕೇಜ್ ಇರಬಹುದು ಎಚ್ಚರ!
ಲಕ್ಷಣಗಳು ಏನು?
- ದೇಹದ ಒಂದು ಭಾಗದಲ್ಲಿ ಅಕಸ್ಮಾತ್ ದುರ್ಬಲತೆ
- ಮುಖದ ಒಂದು ಭಾಗ ಬಾಗುವುದು ಅಥವಾ ನಗಲು ಕಷ್ಟವಾಗುವುದು
- ತುಟಿಗಳು ಒಂದು ಕಡೆ ಭಾರ ಎನಿಸುವುದು
- ಮಾತನಾಡಲು ತೊಂದರೆ, ಪದಗಳನ್ನು ಸರಿಯಾಗಿ ಉಚ್ಚರಿಸಲಾಗದಿರುವುದು
- ಇತರರ ಮಾತು ಅರ್ಥಮಾಡಿಕೊಳ್ಳಲು ಕಷ್ಟವಾಗುವುದು
- ಅಕಸ್ಮಾತ್ ತೀವ್ರ ತಲೆನೋವು
- ತಲೆ ಸುತ್ತುವುದು
- ಕಣ್ಣುಗಳಿಗೆ ಮಂಕಾಗುವಿಕೆ ಅಥವಾ ಡಬಲ್ ದೃಷ್ಟಿ ಕಾಣುವುದು
- ಸಮತೋಲನ ಕಳೆದುಕೊಳ್ಳುವುದು, ನಡೆಯಲು ಕಷ್ಟವಾಗುವುದು
- ಕೈ ಅಥವಾ ಕಾಲು ಎತ್ತಲು ದುರ್ಬಲತೆ ಅನುಭವ
ಬ್ರೈನ್ ಸ್ಟ್ರೋಕ್ ಲಕ್ಷಣಗಳು ಕಂಡುಬಂದ ತಕ್ಷಣವೇ ಕ್ರಮ ಕೈಗೊಳ್ಳುವುದು ಅತ್ಯಗತ್ಯ. ಪ್ರತಿಯೊಂದು ನಿಮಿಷವೂ ಬಹಳ ಅಮೂಲ್ಯ. ರೋಗಿಯನ್ನು ಆರಾಮದಾಯಕವಾಗಿ ಮಲಗಿಸಿ, ತಲೆಯನ್ನು ಸ್ವಲ್ಪ ಎತ್ತರದಲ್ಲಿಡಿ. ರೋಗಿಯನ್ನು ಶಾಂತವಾಗಿರಿಸಲು ಪ್ರಯತ್ನಿಸಿ. ಏನನ್ನೂ ತಿನ್ನಲು ಅಥವಾ ಕುಡಿಯಲು ಕೊಡಬೇಡಿ. ಉಸಿರಾಟ, ನಾಡಿ ಮತ್ತು ಪ್ರಜ್ಞೆಯ ಸ್ಥಿತಿಯನ್ನು ಗಮನದಲ್ಲಿಡಿ. ತಕ್ಷಣವೇ ರೋಗಿಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಿರಿ ಎಂಬುದು ವೈದ್ಯರ ಸಲಹೆ.
ಬ್ರೈನ್ ಸ್ಟ್ರೋಕ್ ತಡೆಗಟ್ಟುವುದು ಹೇಗೆ?
- ನಿಯಮಿತವಾಗಿ ವ್ಯಾಯಾಮ ಮಾಡಿ
- ತೂಕ ನಿಯಂತ್ರಣದಲ್ಲಿಡಿ
- ಹಣ್ಣು, ತರಕಾರಿ, ಸಂಪೂರ್ಣ ಧಾನ್ಯಗಳುಳ್ಳ ಸಮತೋಲನ ಆಹಾರ ಸೇವಿಸಿ
- ಉಪ್ಪು ಮತ್ತು ಎಣ್ಣೆಯ ಸೇವನೆ ಕಡಿಮೆ ಮಾಡಿ
- ಧೂಮಪಾನ ಮತ್ತು ಮದ್ಯಪಾನ ತ್ಯಜಿಸಿ
- ಹೈ ಬಿಪಿ, ಡಯಾಬಿಟೀಸ್ ಮತ್ತು ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿ ಇರಲು ನಿಯಮಿತವಾಗಿ ಪರೀಕ್ಷೆ ಮಾಡಿಸಿಕೊಳ್ಳಿ.
ಇನ್ನು ಚಿಕಿತ್ಸೆ ಸ್ಟ್ರೋಕ್‌ನ ಪ್ರಕಾರಕ್ಕೆ ಅವಲಂಬಿತವಾಗಿರುತ್ತದೆ. ವೈದ್ಯರು ಔಷಧಿ, ಫಿಜಿಯೋಥೆರಪಿ ಅಥವಾ ಅಗತ್ಯವಿದ್ದರೆ ಶಸ್ತ್ರಚಿಕಿತ್ಸೆ ಸಲಹೆ ಮಾಡಬಹುದು. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರಕಿದರೆ, ಮೆದುಳಿನ ಹಾನಿ ಕಡಿಮೆ ಆಗಿ ಚೇತರಿಕೆಯ ಸಾಧ್ಯತೆ ಹೆಚ್ಚು ಎಂಬುದು ಆರೋಗ್ಯ ತಜ್ಞರ ಅಭಿಪ್ರಾಯ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:21 pm, Tue, 24 March 26
