ಜಿಲ್ಲೆಗೊಂದು ಗೋಶಾಲೆ ಘೋಷಣೆಯಾಗಿ 20 ತಿಂಗಳು ಕಳೆದರೂ ಕೇವಲ 12 ಜಿಲ್ಲೆಗಳಲ್ಲಿ ಮಾತ್ರ ಅವು ಅಸ್ತಿತ್ವಕ್ಕೆ ಬಂದಿವೆ
ಸರ್ಕಾರಿ ಮೂಲಗಳ ಪ್ರಕಾರ 12 ಗೋಶಾಲೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಮತ್ತು 8 ಜಿಲ್ಲೆಗಳಲ್ಲಿ ಕೊನೆಯ ಹಂತದಲ್ಲಿದೆ. ಉಳಿದ ಜಿಲ್ಲೆಗಳ ಪೈಕಿ ಎರಡರ ನಿರ್ಮಾಣ ಕಾರ್ಯ ಸೂರಿನ ಹಂತ ತಲುಪಿದೆ, 5 ಕಡೆಗಳಲ್ಲಿ ಪಿಲ್ಲರ್ಗಳನ್ನು ಹಾಕಲಾಗಿದೆ ಮತ್ತು ಉಳಿದ ಮೂರು ಜಿಲ್ಲೆಗಳಲ್ಲಿ ಕಾಮಗಾರಿ ಈಗಷ್ಟೇ ಆರಂಭಗೊಂಡಿದೆ.

ಹುಬ್ಬಳ್ಳಿ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ನಿರ್ಮಿಸುವ ನಿರ್ಧಾರ ಬಿಜೆಪಿ ಸರ್ಕಾರ (BJP Government) 20 ತಿಂಗಳು ಹಿಂದೆ ಪ್ರಕಟಿಸಿದ್ದರೂ ಇದುವರೆಗೆ ಕೇವಲ 12 ಮಾತ್ರ ಅವು ತಯಾರುಗೊಂಡಿವೆ. ಕಠಿಣ ಗೋಹತ್ಯೆ ನಿಷೇಧವನ್ನು ಕಾನೂನು (Anti-Cattle Slaughter Law) ಜಾರಿಗೊಳಿಸಿದ ನಂತರ ಸರ್ಕಾರ ಗೋಶಾಲೆಗಳ ನಿರ್ಮಿಸುವ ನಿರ್ಧಾರ ಪ್ರಕಟಿಸಿತ್ತು. ಮಾಂಸಕ್ಕಾಗಿ ದನಕರುಗಳನ್ನು (cattle) ಕೊಲ್ಲುವುದು ಮತ್ತು ಮಾರಾಟ ಮಾಡುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ.
ಸರ್ಕಾರಿ ಮೂಲಗಳ ಪ್ರಕಾರ 12 ಗೋಶಾಲೆಗಳ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ ಮತ್ತು 8 ಜಿಲ್ಲೆಗಳಲ್ಲಿ ಕೊನೆಯ ಹಂತದಲ್ಲಿದೆ. ಉಳಿದ ಜಿಲ್ಲೆಗಳ ಪೈಕಿ ಎರಡರ ನಿರ್ಮಾಣ ಕಾರ್ಯ ಸೂರಿನ ಹಂತ ತಲುಪಿದೆ, 5 ಕಡೆಗಳಲ್ಲಿ ಪಿಲ್ಲರ್ಗಳನ್ನು ಹಾಕಲಾಗಿದೆ ಮತ್ತು ಉಳಿದ ಮೂರು ಜಿಲ್ಲೆಗಳಲ್ಲಿ ಕಾಮಗಾರಿ ಈಗಷ್ಟೇ ಆರಂಭಗೊಂಡಿದೆ.
ಆಗಿನ ಮುಖ್ಯಮಂತ್ರಿಗಳಾಗಿದ್ದ ಬಿ ಎಸ್ ಯಡಿಯೂರಪ್ಪನವರು ಮಾರ್ಚ್ 2021 ರ ಬಜೆಟ್ ಭಾಷಣದಲ್ಲಿ ಜಾನುವಾರುಗಳ ರಕ್ಷಣೆಗಾಗಿ ಎಲ್ಲ ಜಿಲ್ಲೆಗಳಲ್ಲಿ ಗೋಶಾಲೆಗಳನ್ನು ನಿರ್ಮಿಸಲಾಗುವುದು ಎಂದು ಘೋಷಿಸಿದ್ದರು.
ಮಾಜಿ ಸಚಿವ ಮತ್ತು ಜನತಾ ದಳ (ಎಸ್) ಶಾಸಕಾಂಗ ಪಕ್ಷದ ಉಪನಾಯಕನಾಗಿರುವ ಬಂಡೆಪ್ಪ ಕಾಶೆಂಪುರ ಅವರು, ಎಲ್ಲ ಜಿಲ್ಲೆಗಳಲ್ಲಿ ಸರ್ಕಾರ ಗೋಶಾಲೆಗಳನ್ನು ನಿರ್ಮಿಸದಿರುವುದು ದುರದೃಷ್ಟಕರ ಎಂದು ಹೇಳಿದರು.
‘ಗೋಹತ್ಯೆ ನಿಷೇಧ ಕಾಯ್ದೆಯನ್ನು ಅನುಷ್ಠಾನಕ್ಕೆ ತಂದ 24-ಗಂಟೆ ಅವಧಿಯಲ್ಲಿ ಸರ್ಕಾರ ಗೋಶಾಲೆಗಳನ್ನು ನಿರ್ಮಿಸಬೇಕಿತ್ತು. ವಿಷಯದ ಮೇಲೆ ಅವರು ರಾಜಕಾರಣ ಮಾಡುತ್ತಾರೆಯೇ ಹೊರತು ಸೌಲಭ್ಯಗಳನ್ನು ಒದಗಿಸುವುದಿಲ್ಲ. ಬೀದರ್ ನಲ್ಲಿ ಇದುವರೆಗೆ ಗೋಶಾಲೆಯನ್ನು ನಿರ್ಮಿಸಿಲ್ಲ. ಯಡಿಯೂರಪ್ಪನವರ ನಂತರ ಮುಖ್ಯಾಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಾದರೂ ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿ ಗೋಶಾಲೆಗಳ ನಿರ್ಮಾಣ ಪೂರ್ತಿಗೊಳಿಸಬೇಕಿತ್ತು. ಪಶುಸಂಗೋಪನಾ ಸಚಿವರೇನೂ ಬದಲಾಗಿಲ್ಲ. ಆಗಿನವರೇ ಮುಂದುವರಿದಿದ್ದಾರೆ,’ ಎಂದು ಅವರು ಹೇಳಿದರು.
ಇಲಾಖೆಯಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಚಿಕ್ಕಮಗಳೂರು, ವಿಜಯಪುರ, ಹಾಸನ, ಮೈಸೂರು, ತುಮಕೂರು, ಕೋಲಾರ, ಉತ್ತರ ಕನ್ನಡ, ಹಾವೇರಿ, ಕೊಡಗು, ಕೊಪ್ಪಳ, ಚಾಮರಾಜನಗರ ಮತ್ತು ಬೆಂಗಳೂರು ಮೊದಲಾದ 12 ಜಿಲ್ಲೆಗಳಲ್ಲಿ ಗೋಶಾಲೆಗಳ ನಿರ್ಮಾಣ ಕಾರ್ಯ ಪೂರ್ತಿಯಾಗಿದೆ.
ಆಹಾರ ಮತ್ತು ನಾಗರಿಕ ಪೂರೈಕೆ ನಿಗಮದ ಮಾಜಿ ಉಪಾಧ್ಯಕ್ಷ ಮೋಹನ್ ಅಸುಂಡಿ, ಬಿಜೆಪಿ ನಾಯಕರು ಕೇವಲ ತಮ್ಮ ಹೇಳಿಕೆಗಳಲ್ಲಿ ಗೋಮಾತೆಯ ಬಗ್ಗೆ ಕಾಳಜಿ, ಸಹಾನುಭೂತಿ ವ್ಯಕ್ತಪಡಿಸುತ್ತಾರೆ. ಆದರೆ ವಾಸ್ತವದಲ್ಲಿ ಅವರಿಗೆ ಗೋವುಗಳ ಮೇಲೆ ಪ್ರೀತಿ, ಅಂತಃಕರಣ ಇಲ್ಲ ಎಂದರು. ಧಾರವಾಡ ಜಿಲ್ಲೆಯಲ್ಲಿ ಗೋಶಾಲೆಗಳ ಬಗ್ಗೆ ಕೇಳಿದಾಗೆಲ್ಲ ಅಧಿಕಾರಿಗಳು ಕಾಮಗಾರಿ ಜಾರಿಯಲ್ಲಿದೆ ಅಂತ ಹೇಳುತ್ತಾರೆ ಅಂತ ಅಸುಂಡಿ ಹೇಳಿದರು.
ಡಿಸೆಂಬರ್ ಅಂತ್ಯದವರೆಗೆ ಎಲ್ಲ ಜಿಲ್ಲೆಗಳಲ್ಲಿ ಗೋಶಾಲೆಗಳ ನಿರ್ಮಾಣ ಕಾರ್ಯ ಪೂರ್ತಿಗೊಳ್ಳಲಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಬಿ ಚವ್ಹಾಣ್ ಹೇಳಿದರು. 12 ಜಿಲ್ಲೆಗಳ ಗೋಶಾಲೆಗಳಲ್ಲಿ 200 ಕ್ಕೂ ಹೆಚ್ಚು ದನಕರುಗಳಿಗೆ ಆಶ್ರಯ ನೀಡಿ ಪೋಷಿಸಲಾಗುತ್ತಿದೆ ಎಂದು ಅವರು ಹೇಳಿದರು. ‘ಗೋವುಗಳನ್ನು ಸಂರಕ್ಷಿಸಿ ಪೋಷಿಸುವುದಕ್ಕೆ ನಾವು ಕಟಿಬದ್ಧರಾಗಿದ್ದೇವೆ. ಖಾಸಗಿ ಗೋಶಾಲೆಗಳ ಹಾಗೆ ಸರ್ಕಾರಿ ಗೋಶಾಲೆಗಳನ್ನು ‘ಆತ್ಮನಿರ್ಭರ್’ ಮಡುವುದು ನನ್ನ ಗುರಿಯಾಗಿದೆ. ಉಪ-ಉತ್ಪಾದನೆಗಳನ್ನು ತಯಾರಿಸುವ ಯೋಜನೆಯೂ ನಮ್ಮ ಮುಂದಿದೆ,’ ಎಂದು ಸಚಿವರು ಹೇಳಿದರು.
ಮತ್ತಷ್ಟು ಕರ್ನಾಟಕ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ