ಬೆಂಗಳೂರಲ್ಲಿ ಕಸದ ಹಾವಳಿಗೆ ಜಿಬಿಎ ಕಠಿಣ ಬ್ರೇಕ್: ರಸ್ತೆಗೆ ತ್ಯಾಜ್ಯ ಎಸೆದರೆ ಕ್ಷಮೆಯಿಲ್ಲ ಎಂದ ಸಚಿವ ಕೃಷ್ಣಬೈರೇಗೌಡ
ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಸಭೆಯಲ್ಲಿ ಸಿಲಿಕಾನ್ ಸಿಟಿಯ ತ್ಯಾಜ್ಯ ನಿರ್ವಹಣೆ ಕುರಿತು ಗಂಭೀರ ಚರ್ಚೆ ನಡೆಯಿತು. ಸಚಿವ ಕೃಷ್ಣಬೈರೇಗೌಡರು ಸ್ವಚ್ಛತೆಗೆ ಬಿಗಿ ಕ್ರಮ ಎಚ್ಚರಿಸಿದರು. ಮನೆ ಬಾಗಿಲಿಗೆ ಕಸ ಸಂಗ್ರಹ ವಾಹನ, ಸಾರ್ವಜನಿಕರ ಸಹಭಾಗಿತ್ವ ಕಡ್ಡಾಯ. ನಗರದ ಮೂಲಸೌಕರ್ಯ, ರಸ್ತೆ, ಸಂಚಾರ ಸುಧಾರಣೆಗೂ ಸರ್ವಪಕ್ಷ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಯಿತು. ಸ್ವಚ್ಛ ಹಾಗೂ ಸುಂದರ ಬೆಂಗಳೂರು ನಿರ್ಮಾಣಕ್ಕೆ GBA ಬದ್ಧ.

ಬೆಂಗಳೂರು ಸೆ.5: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವತಿಯಿಂದ ವಿಕಾಸಸೌಧದಲ್ಲಿ ಆಯೋಜಿಸಲಾಗಿದ್ದ ಸರ್ವಪಕ್ಷ ಜನಪ್ರತಿನಿಧಿಗಳ ಮಹತ್ವದ ಸಭೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನ ‘ತ್ಯಾಜ್ಯ ನಿರ್ವಹಣೆ’ (Solid Waste Management) ಹಾಗೂ ಕಸದ ಸಮಸ್ಯೆಯ ಕುರಿತು ಗಂಭೀರ ಚರ್ಚೆ ನಡೆಯಿತು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರು, ನಗರದ ನೈರ್ಮಲ್ಯ ಕಾಪಾಡುವ ನಿಟ್ಟಿನಲ್ಲಿ ಸಾರ್ವಜನಿಕರು ಹಾಗೂ ಅಧಿಕಾರಿಗಳಿಗೆ ಸ್ಪಷ್ಟ ಹಾಗೂ ಖಡಕ್ ಎಚ್ಚರಿಕೆಯನ್ನು ನೀಡಿದ್ದಾರೆ.
ಪ್ರತಿಯೊಬ್ಬರ ಮನೆ ಬಾಗಿಲಿಗೂ ಕಸ ಸಂಗ್ರಹಿಸುವ ವಾಹನ ತೆರಳುವಂತೆ ನೋಡಿಕೊಳ್ಳುವುದು ಜಿಬಿಎ ಮುಖ್ಯ ಕರ್ತವ್ಯವಾಗಿದೆ. ಸಾರ್ವಜನಿಕರು ಕಸವನ್ನು ಕಡ್ಡಾಯವಾಗಿ ಕಸದ ಗಾಡಿಗೇ ನೀಡಬೇಕು. ಒಂದು ವೇಳೆ ಸಮಯದ ಅಭಾವವಿದ್ದರೆ ಮನೆಯ ಕಾಂಪೌಂಡ್ ಮೇಲೆ ತಂದು ಇಟ್ಟರೂ ಸಿಬ್ಬಂದಿ ಅದನ್ನು ಸ್ವೀಕರಿಸಲಿದ್ದಾರೆ.
“ನಾವು ರಸ್ತೆಗೆ ಅಥವಾ ಸಾರ್ವಜನಿಕ ಸ್ಥಳಗಳಿಗೇ ಕಸ ಚೆಲ್ಲುತ್ತೇವೆ ಎನ್ನುವವರ ವಿರುದ್ಧ ಯಾವುದೇ ದಾಕ್ಷಿಣ್ಯವಿಲ್ಲದೆ ಅತ್ಯಂತ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು,” ಎಂದು ಸಚಿವರು ಎಚ್ಚರಿಸಿದ್ದಾರೆ. ಸಾಲು ಸಾಲು ರಸ್ತೆಬದಿ ಕಸದ ರಾಶಿಗಳಿಗೆ ಮುಕ್ತಿ ಹಾಡಿ, ಸಂಪೂರ್ಣ ಸ್ವಚ್ಛ ಬೆಂಗಳೂರು ನಿರ್ಮಿಸಲು ಸರ್ಕಾರ ಮತ್ತು ಜಿಬಿಎ ಈ ಬಿಗಿ ಕ್ರಮಕ್ಕೆ ಮುಂದಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರವು (GBA) ಸಿಲಿಕಾನ್ ಸಿಟಿಯ ಸಮಗ್ರ ಅಭಿವೃದ್ಧಿಗೆ ಮತ್ತೊಂದು ಪ್ರಮುಖ ಹಾಗೂ ಮಹತ್ವದ ಹೆಜ್ಜೆಯನ್ನಿಟ್ಟಿದೆ. ನಗರದ ರಸ್ತೆ, ಮೂಲಸೌಕರ್ಯ, ಸಂಚಾರ ವ್ಯವಸ್ಥೆ ಹಾಗೂ ನೈರ್ಮಲ್ಯಕ್ಕೆ ಸಂಬಂಧಿಸಿದ ಪ್ರಮುಖ ಕಾಮಗಾರಿಗಳ ಕುರಿತು ಚರ್ಚೆಗಳು ನಡೆದಿದೆ.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರ ನೇರ ನಿರ್ದೇಶನದಂತೆ ಈ ಸಭೆಯನ್ನು ಕರೆಯಲಾಗಿದ್ದು, ನಗರದ ಅಭಿವೃದ್ಧಿಗೆ ರಾಜಕೀಯವನ್ನು ಬದಿಗೊತ್ತಿ ಎಲ್ಲ ಪ್ರತಿನಿಧಿಗಳನ್ನು ಒಂದೇ ವೇದಿಕೆಗೆ ತರುವುದು ಜಿಬಿಎ ಮುಖ್ಯ ಉದ್ದೇಶವಾಗಿತ್ತು. ರಾಜಧಾನಿ ಬೆಂಗಳೂರಿನ ಅಭಿವೃದ್ಧಿಗಾಗಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳ ಶಾಸಕರು, ಸಂಸದರು, ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರನ್ನು (MLC) ಸಭೆಗೆ ಆಹ್ವಾನಿಸಲಾಗಿತ್ತು.
ಇದನ್ನೂ ಓದಿ: ಸವದತ್ತಿಯಲ್ಲಿ ಪತ್ತೆಯಾಯ್ತು ಪ್ರಾಚೀನ ಚಿನ್ನದ ನಾಣ್ಯಗಳ ನಿಧಿ
ನಗರದಲ್ಲಿ ಬಾಕಿ ಉಳಿದಿರುವ ಮೂಲಸೌಕರ್ಯ ಕಾಮಗಾರಿಗಳು, ರಸ್ತೆಗಳ ಗುಂಡಿ ದುರಸ್ತಿ ಹಾಗೂ ಸಂಚಾರ ದಟ್ಟಣೆ ನಿರ್ವಹಣೆ ಕುರಿತು ಜನಪ್ರತಿನಿಧಿಗಳೊಂದಿಗೆ ನೇರವಾಗಿ ಚರ್ಚೆ ನಡೆಸಲಾಗಿತ್ತು. ಅಲ್ಲದೆ, ನೂತನ ಅಭಿವೃದ್ಧಿ ಯೋಜನೆಗಳ ಪ್ರಸ್ತಾವನೆಗಳನ್ನು ಸಭೆಯಲ್ಲಿ ಮಂಡಿಸಲಾಯಿತು. ಪಕ್ಷಭೇದ ಮರೆತು ಬೆಂಗಳೂರು ನಗರವನ್ನು ಸುಂದರ ಹಾಗೂ ಮೂಲಸೌಕರ್ಯ ಸಜ್ಜಿತ ನಗರವನ್ನಾಗಿ ಪರಿವರ್ತಿಸಲು ಜಿಬಿಎ ಆಯೋಜಿಸಿರುವ ಈ ಒಗ್ಗಟ್ಟಿನ ಚರ್ಚಾ ವೇದಿಕೆ ಮಹತ್ವದ ಯಶಸ್ವಿಯನ್ನು ಸಾಧಿಸಿದೆ ಎಂದು ಸಚಿವರು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




