ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡಿಸಿ ಬೆಂಗಳೂರಲ್ಲಿ ಬಿಜೆಪಿ ಪ್ರೊಟೆಸ್ಟ್: ಆಚಾರವಿಲ್ಲದ ನಾಲಿಗೆ ಎಂದು ಪೋಸ್ಟ್ ಮಾಡಿ ಕುಮಾರಸ್ವಾಮಿ ಕಿಡಿ
ಪ್ರಧಾನಿ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೀಡಿದ ಹೇಳಿಕೆ ಖಂಡಿಸಿ ಬೆಂಗಳೂರಿನಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ನಡೆಸಿದೆ. ವಿಪಕ್ಷ ನಾಯಕರಾದ ಆರ್. ಅಶೋಕ್ ಮತ್ತು ಛಲವಾದಿ ನಾರಾಯಣಸ್ವಾಮಿ ಕಾಂಗ್ರೆಸ್ ವಿರುದ್ಧ ಮುಗಿಬಿದ್ದಿದ್ದರೆ, ಖರ್ಗೆ ಹೇಳಿಕೆ ಅವಹೇಳನಕಾರಿ. ರಾಜಕೀಯ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ, ಮಾನವೀಯತೆಯ ಅಣಕ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 26: ಪ್ರಧಾನಿ ನರೇಣದ್ರ ಮೋದಿ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬೆಂಗಳೂರಿನ ಫ್ರೀಡಂಪಾರ್ಕ್ನಲ್ಲಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ. ದೇಶದ ಜನರ ಬಳಿ ಖರ್ಗೆ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ ಪ್ರತಿಭಟನಾಕಾರರು, ಖರ್ಗೆ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೆರಳುತ್ತಿದ್ದ ಬಿಜೆಪಿ ನಾಯಕರನ್ನು ಪೊಲೀಸರು ತಡೆದಿದ್ದು, ಬ್ಯಾರಿಕೇಡ್ ಹತ್ತಿ ಮುನ್ನುಗಲು ನಾಯಕರು ಯತ್ನಿಸಿದ ಕಾರಣ ವಿಪಕ್ಷ ನಾಯಕರಾದ ಅಶೋಕ್, ಛಲವಾದ ನಾರಾಯಣಸ್ವಾಮಿ, ಶಾಸಕರಾದ ಎನ್. ರವಿಕುಮಾರ್, ಸಿ.ಕೆ. ರಾಮಮೂರ್ತಿ, ಡಾ. ಅಶ್ವಥ್ ನಾರಾಯಣ ಸೇರಿದಂತೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಪೊಲೀಸರು ವಶಕ್ಕೆ ಪಡೆದ ಪ್ರಸಂಗ ನಡೆದಿದೆ.
‘ಎಐಸಿಸಿ ಅಧ್ಯಕ್ಷ ಖರ್ಗೆಗೆ ಅರಳು ಮರುಳು’
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿರುವ ವಿಪಕ್ಷ ನಾಯಕ ಆರ್. ಅಶೋಕ್, ಅವರಿಗೆ ಅರಳು ಮರುಳು ಶುರುವಾಗಿದೆ ಎಂದಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಹಾಳು ಮಾಡಲು ಇಬ್ಬರು ಖರ್ಗೆ ಸಾಕು. ಒಬ್ಬರು ಮಲ್ಲಿಕಾರ್ಜುನ ಖರ್ಗೆ, ಇನ್ನೊಬ್ಬರು ಪ್ರಿಯಾಂಕ್ ಖರ್ಗೆ ಎಂದವರು ತಿವಿದಿದ್ದಾರೆ. ಈ ವಯಸ್ಸಿನಲ್ಲಿ ದೇವರ ಜಪ ಮಾಡಿಕೊಂಡು ಇರಬೇಕಿತ್ತು. ಆದರೆ ಅರುಳೋ ಮರುಳೋ ಅಂತಾ ದಿನಾ ಮೋದಿ ಮೋದಿ ಅಂತಾರೆ. ಅಷ್ಟು ಕೀಳು ಮಟ್ಟದಲ್ಲಿ ಖರ್ಗೆ ಮಾತಾಡುತ್ತಾರೆ ಎಂದು ಅಶೋಕ್ ಕಿಡಿ ಕಾರಿದ್ದಾರೆ. ಖರ್ಗೆ ಮಾತು ಕಾಂಗ್ರೆಸ್ನ ಹೀನ ಸಂಸ್ಕೃತಿ ತೋರಿಸುತ್ತದೆ. ಖರ್ಗೆ ಹೋಗಿದ್ದ ಕಡೆ ತೊಳೆದಿದ್ದಕ್ಕೆ ಹೋರಾಟ ಮಾಡಿದರು. ಈಗ ನಿಮ್ಮ ಬಾಯಿಯನ್ನು ಯಾವುದರಿಂದ ತೊಳೆಯಬೇಕು ಹೇಳಿ ಎಂದು ಅಶೋಕ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ‘ಮೋದಿ ಮಾತ್ರ ಅಲ್ಲ, ಅವರಪ್ಪನೂ ಅಧಿಕಾರದಿಂದ ಕೆಳಗಿಳಿಯುತ್ತಾರೆ’; ವೇದಿಕೆಯಲ್ಲೇ ರೊಚ್ಚಿಗೆದ್ದ ಮಲ್ಲಿಕಾರ್ಜುನ ಖರ್ಗೆ
‘ಖರ್ಗೆ ಯಾರ ಓಲೈಕೆಗೆ ಇಳಿದಿದ್ದಾರೆ?’
ಖರ್ಗೆ ಹೇಳಿಕೆ ವಿರುದ್ಧ ಇಡೀ ದೇಶದಲ್ಲಿ ಬಿಜೆಪಿ ಸೆಟೆದು ನಿಂತಿದೆ. ಮಲ್ಲಿಕಾರ್ಜುನ ಖರ್ಗೆ ಗೌರವಾನ್ವಿತ ವ್ಯಕ್ತಿ, ಆದ್ರೆ ದೆಹಲಿಗೆ ಹೋದ ಮೇಲೆ ಕೆಟ್ಟ ಪರಂಪರೆ ಶುರು ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಯಾರ ಓಲೈಕೆಗೆ ಇಳಿದಿದ್ದಾರೆ? ಈ ಮೊದಲು ಪ್ರಧಾನಿ ಮೋದಿಯನ್ನು ವಿಷ ಸರ್ಪ ಅಂದರು. ಕೆಟ್ಟ ಪದ ಬಳಸಿದರು, ಅವರ ತಾಯಿಗೂ ನಿಂದಿಸಿದರು. ಈಗ ಮೋದಿಯವರ ತಂದೆ ಬಗ್ಗೆ ಖರ್ಗೆ ಮಾತನಾಡಿದ್ದಾರೆ ಎಂದು
‘ಕಾಂಗ್ರೆಸ್ ಪಕ್ಷದ ಅಧಃಪತನದ ಪರಮಾವಧಿ’
ರಾಷ್ಟ್ರದ ಗೌರವಾನ್ವಿತ ಪ್ರಧಾನಿಗಳಾದ ಶ್ರೀ @NarendraModi ಅವರ ಬಗ್ಗೆ @INCIndia ಅಧ್ಯಕ್ಷ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಅವಹೇಳನಕಾರಿ ಮಾತ್ರವಲ್ಲ, ರಾಜಕೀಯ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ. ಅವರ ಮಾತು ಮಾನವೀಯತೆಯ ಅಣಕ ಹಾಗೂ ಅವರಲ್ಲಿ ಅಡಗಿರುವ ನಿಗೂಢ ಕ್ರೂರ ಮನಃಸ್ಥಿತಿಯ ಪ್ರತೀಕ. ಅದುವೇ ಇಂತಹ ನುಡಿಮುತ್ತುಗಳನ್ನು ನುಡಿಸಿರಬೇಕು.
‘ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ’ ಎಂದು ಶ್ರೀ ಪುರಂದರದಾಸರು ಸುಮ್ಮನೆ ಹೇಳಿದ್ದಲ್ಲ, ಬಹುಶಃ ಇಂಥ ನಾಲಿಗೆಗಳನ್ನು ತಿದ್ದಬೇಕು ಎಂಬ ಉದ್ದೇಶದಿಂದಲೇ ಹೇಳಿರಬೇಕು. ಖರ್ಗೆ ಅವರ ಈ ಹೇಳಿಕೆಯನ್ನು ಖಂಡಿಸುತ್ತೇನೆ.
ಮಾನ್ಯ ಪ್ರಧಾನಿಗಳ ಪೂಜ್ಯ ತಂದೆಯವರನ್ನು ರಾಜಕೀಯ ಟಾರ್ಗೆಟ್ ಮಾಡಿಕೊಂಡು ಖರ್ಗೆ ಅವರು ನೀಡಿರುವ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಹಿರಿತನವಿದ್ದರೂ ಮಾತಿನಲ್ಲಿ ಅವರು ತೋರಿದ ಸಣ್ಣತನ ಕ್ಷಮಾರ್ಹವಲ್ಲ. ಅವರ ವರ್ತನೆ ಕೇವಲ ಹತಾಶೆಯಷ್ಟೇ ಅಲ್ಲ, ನಾಚಿಕೆಗೇಡಿತನದ್ದು. ಇದು ಕಾಂಗ್ರೆಸ್ ಪಕ್ಷದ ಅಧಃಪತನದ ಪರಮಾವಧಿ. ಖರ್ಗೆ ಅವರು ಪ್ರಧಾನಿಗಳ ಕ್ಷಮೆ ಕೇಳಿ ತಮ್ಮ ಹಿರಿತನದ ಮರ್ಯಾದೆ ಉಳಿಸಿಕೊಳ್ಳಬೇಕು.
@PMOIndia @kharge
— ಹೆಚ್.ಡಿ.ಕುಮಾರಸ್ವಾಮಿ | HD Kumaraswamy (@hd_kumaraswamy) October 26, 2026
ಪ್ರಧಾನಿ ಮೋದಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಅವಹೇಳನಕಾರಿ. ರಾಜಕೀಯ ಶಿಷ್ಟಾಚಾರದ ಸ್ಪಷ್ಟ ಉಲ್ಲಂಘನೆ, ಮಾನವೀಯತೆಯ ಅಣಕವಾಗಿದೆ. ಇದು ಖರ್ಗೆ ಅವರಲ್ಲಿ ಅಡಗಿರುವ ನಿಗೂಢ ಕ್ರೂರ ಮನಃಸ್ಥಿತಿಯ ಪ್ರತೀಕ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಕೂಡ ಆರೋಪಿಸಿದ್ದಾರೆ. ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ ಎಂದು ಪುರಂದರದಾಸರು ಸುಮ್ಮನೆ ಹೇಳಿದ್ದಲ್ಲ. ಬಹುಶಃ ಇಂಥ ನಾಲಿಗೆಗಳನ್ನು ತಿದ್ದಬೇಕೆಂಬ ಉದ್ದೇಶದಿಂದಲೇ ಹೇಳಿರಬೇಕು. ಪ್ರಧಾನಿಗಳ ತಂದೆಯನ್ನು ಖರ್ಗೆ ರಾಜಕೀಯವಾಗಿ ಟಾರ್ಗೆಟ್ ಮಾಡಿದ್ದಾರೆ. ಖರ್ಗೆ ಅವರ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಸಾರ್ವಜನಿಕ ಜೀವನದಲ್ಲಿ ಸುದೀರ್ಘ ಹಿರಿತನವಿದ್ದರೂ ಮಾತಿನಲ್ಲಿ ಸಣ್ಣತನ ತೋರಿದ್ದಾರೆ. ಅವರ ಈ ಸಣ್ಣತನ ಕ್ಷಮಾರ್ಹವಲ್ಲ. ಅವರ ವರ್ತನೆ ಕೇವಲ ಹತಾಶೆಯಷ್ಟೇ ಅಲ್ಲ, ನಾಚಿಕೆಗೇಡಿತನದ್ದು. ಕಾಂಗ್ರೆಸ್ ಪಕ್ಷದ ಅಧಃಪತನದ ಪರಮಾವಧಿ ಇದು ಎಂದವರು ತಿವಿದಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:08 pm, Mon, 26 October 26




