AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆ ವೇಳೆ ನಡೆದ 5 ಸ್ವಾರಸ್ಯಕರ ಘಟನೆಗಳಿವು

ಕರ್ನಾಟಕ ವಿಧಾನಪರಿಷತ್ ಚುನಾವಣೆಯು ಹಲವು ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಯಿತು.ಬಿಜೆಪಿಯ ಉಚ್ಛಾಟಿತ​​ ಶಾಸಕರ ನಡೆ, ಅನಾರೋಗ್ಯದ ನಡುವೆಯೂ ಡಿಸಿಎಂ ಸೇರಿ ಕೆಲ ಶಾಸಕರ ಮತದಾನ ಸೇರಿ ಹಲವು ವಿಚಾರಗಳು ಗಮನ ಸೆಳೆದವು. ಯತ್ನಾಳ್​​ ಮತದಾನದ ವೇಳೆ ಭಾರಿ ಹೈಡ್ರಾಮಾವೂ ನಡೆದಿದ್ದು, ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಕರ್ನಾಟಕ ವಿಧಾನ ಪರಿಷತ್​​ ಚುನಾವಣೆ ವೇಳೆ ನಡೆದ 5 ಸ್ವಾರಸ್ಯಕರ ಘಟನೆಗಳಿವು
ವಿಧಾನ ಪರಿಷತ್​​ ಚುನಾವಣೆ ವೇಳೆ ನಡೆದ ಸ್ವಾರಸ್ಯಕರ ಘಟನೆಗಳಿವುImage Credit source: Tv9 Kannada
ಪ್ರಸನ್ನ ಹೆಗಡೆ
|

Updated on:Jun 18, 2026 | 3:33 PM

Share

ಬೆಂಗಳೂರು, ಜೂನ್​​ 18: ಭಾರಿ ಕುತೂಹಲ ಮೂಡಿಸಿರುವ ಕರ್ನಾಟಕ ವಿಧಾನ ಪರಿಷತ್​​ ಚುನಾವಣೆ ಮುಕ್ತಾಯಗೊಂಡಿದ್ದು, ಎಲ್ಲ 222 ಶಾಸಕರಿಂದ ಮತದಾನ ನಡೆದಿದೆ. ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಮೊದಲನೇ ಮತ ಚಲಾಯಿಸಿದ್ದರೆ, ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಕೊನೆಯದಾಗಿ ಮತ ಹಾಕಿದ್ದಾರೆ. ರಾಜ್ಯದ ಮೂರೂ ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಈ ಚುನಾವಣೆ ಕೆಲವು ಸ್ವಾರಸ್ಯಕರರ ಘಟನೆಗಳಿಗೂ ಸಾಕ್ಷಿಯಾಗಿದೆ.

‘ಕೈ’ ನಾಯಕರ ಜೊತೆ ಬಿಜೆಪಿ ಉಚ್ಛಾಟಿತ ಶಾಸಕರು

ಬಿಜೆಪಿಯಿಂದ ಉಚ್ಛಾಟನೆಗೊಂಡಿರುವ ಶಾಸಕರಾದ ಎಸ್​​.ಟಿ. ಸೋಮಶೇಖರ್​​ ಮತ್ತು ಶಿವರಾಮ ಹೆಬ್ಬಾರ್​​ ಚುನಾವಣೆ ವೇಳೆ ಕಾಂಗ್ರೆಸ್​​ ನಾಯಕರ ಜೊತೆಗೆ ಗುರುತಿಸಿಕೊಂಡಿದ್ದು ಕಂಡುಬಂತು. ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ ಕಾಂಗ್ರೆಸ್ ನಾಯಕರಿದ್ದ ಕೊಠಡಿಯಲ್ಲಿ ಹೆಬ್ಬಾರ್, ಸೋಮಶೇಖರ್ ಕೂಡ ಉಪಸ್ಥಿತರಿದ್ದರು.

ಇದನ್ನೂ ಓದಿ: ಕಾಂಗ್ರೆಸ್‌ಗೆ ‘ಆತ್ಮಸಾಕ್ಷಿ’ ಮತ ಹಾಕಿದ ಎಸ್.ಟಿ.ಸೋಮಶೇಖರ್; ಜಿಟಿಡಿ ಬಗ್ಗೆ ಜೆಡಿಎಸ್ ಅಭ್ಯರ್ಥಿ ಮಹತ್ವದ ಹೇಳಿಕೆ

ಡಿಸಿಎಂಗಾಗಿ ಕಾದು ಕಾದು ಮತ ಚಲಾಯಿಸಿದ ಸಿಎಂ

ಡಿಸಿಎಂ ಪರಮೇಶ್ವರ್​​ ಜೊತೆ ಮತಚಲಾಯಿಸಲೆಂದು ಕಾದು ಕಾದು ಕೊನೆಗೆ ಸಿಎಂ ಡಿ.ಕೆ. ಶಿವಕುಮಾರ್​ ಒಬ್ಬರೇ ತೆರಳಿ ಮತ ಚಲಾಯಿಸಿದ್ದಾರೆ. ಮಧ್ಯಾಹ್ನ 1 ಗಂಟೆಗೆ ಡಾ.ಪರಮೇಶ್ವರ್ ಬರ್ತಾರೆ ಎನ್ನಲಾಗಿತ್ತಾದರೂ 1.30 ಕಳೆದರೂ ಬಂದಿರಲಿಲ್ಲ. ಅನಾರೋಗ್ಯದ ಹಿನ್ನೆಲೆ ತಡವಾಗಿ ಪರಮೇಶ್ವರ್​​ ಆಗಮಿಸಿದ್ದು, ಮಾಸ್ಕ್‌ ಹಾಕಿಕೊಂಡು ಬಂದೇ ವೋಟ್​​ ಮಾಡಿದ್ದಾರೆ.

ಯತ್ನಾಳ್​​ ಮತ ಚಲಾವಣೆ ವೇಳೆ ಹೈಡ್ರಾಮಾ

ಇನ್ನು ಬಿಜೆಪಿ ಉಚ್ಛಾಟಿತ ಶಾಸಕ ಯತ್ನಾಳ್​​ ಮತ ಹಾಕಲು ಬಂದ ವೇಳೆ ಭಾರಿ ಹೈಡ್ರಾಮಾವೇ ನಡೆದಿದೆ. ಯತ್ನಾಳ್‌ ಮತ ಹಾಕಲು ಬಂದಾಗ ಮತಕೇಂದ್ರದಲ್ಲಿದ್ದ ಕಾಂಗ್ರೆಸ್​​ನ ಉಗ್ರಪ್ಪ ಆಕ್ಷೇಪ ತೆಗೆದಿದ್ದು, ಮತ ಹಾಕುವ ಬಗ್ಗೆ ಅವರು ಬಹಿರಂಗವಾಗಿ ಪತ್ರ ಬರೆದಿದ್ದಾರೆ. ಹೀಗಾಗಿ ಅವರ ಮತವನ್ನು ಮತಪೆಟ್ಟಿಗೆಗೆ ಹಾಕಬೇಡಿ ಎಂದು ಚುನಾವಣಾಧಿಕಾರಿಯನ್ನು ಒತ್ತಾಯಿಸಿದ್ದಾರೆ. ಆದರೆ ಇದನ್ನು ಬಿಜೆಪಿ ಮತಗಟ್ಟೆ ಏಜೆಂಟ್ ಗಳಾದ ಎನ್. ರವಿಕುಮಾರ್ ಮತ್ತು ಕೆ.ಎಸ್. ನವೀನ್ ವಿರೋಧಿಸಿದ್ದು, ಅಂತಿಮವಾಗಿ ಉಗ್ರಪ್ಪ ಆಕ್ಷೇಪವನ್ನು ತಿರಸ್ಕರಿಸಿ ಯತ್ನಾಳ್​​ಗೆ ಮತ ಹಾಕಲು ಚುನಾವಣಾಧಿಕಾರಿ ಅವಕಾಶ ನೀಡಿದ್ದಾರೆ.

ಪ್ರತ್ಯೇಕವಾಗಿ ಬಂದು ಮತ ಚಲಾಯಿಸಿದ ಜಿಟಿಡಿ

ಚುನಾವಣಾ ಅಖಾಡಕ್ಕಿಳಿಸಿರುವ ಏಕೈಕ ಅಭ್ಯರ್ಥಿಯ ಗೆಲುವಿಗೆ ಜೆಡಿಎಸ್​​ ನಾನಾ ಕಸರತ್ತು ನಡುವೆ, ಜಿ.ಟಿ.ದೇವೇಗೌಡ ಪ್ರತ್ಯೇಕವಾಗಿ ಬಂದು ಮತ ಚಲಾಯಿಸಿರೋದು ಭಾರಿ ಕುತೂಹಲ ಮೂಡಿಸಿದೆ. ಜಿ.ಟಿ.ದೇವೇಗೌಡ ಮತ ಜೆಡಿಎಸ್​ಗೆ ತಪ್ಪಿರುವ ಸಾಧ್ಯತೆ ಬಗ್ಗೆಯೂ ಲೆಕ್ಕಾಚಾರ ಶುರುವಾಗಿದೆ.

ವ್ಹೀಲ್​​ ಚೇರ್​​ನಲ್ಲಿ ಬಂದ ಕಾಗವಾಡ ಶಾಸಕ

ಕಾಗವಾಡದ ಕಾಂಗ್ರೆಸ್ ಶಾಸಕ ರಾಜು ಕಾಗೆ ಅವರು ಆರೋಗ್ಯ ಸಮಸ್ಯೆಯ ನಡುವೆಯೂ ವ್ಹೀಲ್​​ ಚೇರ್​​ನಲ್ಲಿ ಆಗಮಿಸಿ ತಮ್ಮ ಹಕ್ಕು ಚಲಾಯಿಸಿದ್ದಾರೆ. ಮತ್ತೋರ್ವ ಶಾಸಕ ಇಕ್ಬಾಲ್​​ ಹುಸೇನ್​​ ಕೂಡ ಅನಾರೋಗ್ಯದ ನಡುವೆಯೂ ಆಗಮಿಸಿ ಮತದಾನ ಪ್ರಕ್ರಿಯೆಯಲ್ಲಿ ಭಾಗಿಯಾಗಿರೋದು ಗಮನ ಸೆಳೆದಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 3:32 pm, Thu, 18 June 26

Follow Us