‘ಕೆಂಪೇಗೌಡ ಬಸ್ ನಿಲ್ದಾಣ’ ಮೆಜೆಸ್ಟಿಕ್ ಆಗಿದ್ದು ಹೇಗೆ?: ಒಂದು ಕಾಲದ ಧರ್ಮಾಂಬುಧಿ ಕೆರೆ ಇಂದು ಏಷ್ಯಾದ ಬೃಹತ್ ಸಾರಿಗೆ ಕೇಂದ್ರ
ಬೆಂಗಳೂರಿನ ಕೇಂದ್ರ ಕೆಂಪೇಗೌಡ ಬಸ್ ನಿಲ್ದಾಣವನ್ನು 'ಮೆಜೆಸ್ಟಿಕ್' ಎಂದು ಕರೆಯಲು ಸಮೀಪದ ಪ್ರಸಿದ್ಧ 'ಮೆಜೆಸ್ಟಿಕ್ ಥಿಯೇಟರ್' ಕಾರಣ. 1920ರ ದಶಕದಲ್ಲಿ ಈ ಪ್ರದೇಶ ಮನರಂಜನಾ ಕೇಂದ್ರವಾಗಿತ್ತು. ಥಿಯೇಟರ್ ನೆಲಸಮವಾದರೂ, ಆ ಹೆಸರು ಜನರ ಮನಸ್ಸಲ್ಲಿ ಉಳಿದಿದೆ. ಮೊದಲು ಕೆರೆಯಿದ್ದ ಈ ಜಾಗ, ನಂತರ ಸಭೆಗಳಿಗೆ ವೇದಿಕೆಯಾಗಿ, ಇಂದು 5000ಕ್ಕೂ ಹೆಚ್ಚು ಬಸ್‌ಗಳ ಸಂಚಾರ ನಿರ್ವಹಿಸುವ ಬೆಂಗಳೂರಿನ ಜೀವನಾಡಿಯಾಗಿದೆ.

ಬೆಂಗಳೂರು, ಆ.21: ಬೆಂಗಳೂರಿನ ಕೇಂದ್ರ ಬಿಂದು ಕೆಂಪೇಗೌಡ ಬಸ್ ನಿಲ್ದಾಣ,, ಇದೊಂದು ಬಸ್ ನಿಲ್ದಾಣ ಮಾತ್ರವಲ್ಲ. ಇದು ಎಷ್ಟೋ ಬಡವರಿಗೆ, ವ್ಯಾಪಾರ ಮಾಡುವವರಿಗೆ ಆಧಾರವಾಗಿರುವ ಸ್ಥಳ, ಅನೇಕ ಸಿನಿಮಾ ನಟರೂ ಕೂಡ ಇಲ್ಲಿಂದಲ್ಲೇ ಬದುಕು ಕಟ್ಟಿಕೊಂಡವರು. ಆದರೆ ಇಂದು ಇದು ಕೆಂಪೇಗೌಡ ಬಸ್ ನಿಲ್ದಾಣವಾಗಿ ಉಳಿದಿಲ್ಲ. ಮುಂಬೈ ಅನ್ನು ‘ಬಾಂಬೆ’ ಎಂದು, ಕೋಲ್ಕತ್ತಾವನ್ನು ‘ಕಲ್ಕತ್ತಾ’ ಎಂದೇ ಕರೆಯುವಂತೆ, ಈ ಕೆಂಪೇಗೌಡ ಬಸ್ ನಿಲ್ದಾಣಕ್ಕೆ ಇಂದಿಗೂ ಸಾರ್ವಜನಿಕರು ‘ಮೆಜೆಸ್ಟಿಕ್’ ಎಂದೇ ಗುರುತಿಸುತ್ತಾರೆ. ಯಾಕೆ? ಇದಕ್ಕೆ ಕಾರಣವೇನು? ನಗರಾಭಿವೃದ್ಧಿ ಹಾಗೂ ಸರ್ಕಾರಿ ದಾಖಲೆಗಳಲ್ಲಿ ಕೆಂಪೇಗೌಡರ ಹೆಸರು ಅಧಿಕೃತವಾಗಿದ್ದರೂ, ಸಾರ್ವಜನಿಕರ ಬಾಯಲ್ಲಿ ‘ಮೆಜೆಸ್ಟಿಕ್’ ಎಂಬ ಹೆಸರು ಆಳವಾಗಿ ಬೇರೂರಿದೆ.
ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಆ ಹೆಸರು ಬರಲು ಕಾರಣ, ಒಮ್ಮೆ ಇದರ ಸಮೀಪದಲ್ಲೇ ಇದ್ದ ‘ಮೆಜೆಸ್ಟಿಕ್’ ಎಂಬ ಪ್ರಸಿದ್ಧ ಚಿತ್ರಮಂದಿರ (Majestic Theatre). 1920ರ ದಶಕದಲ್ಲೇ ಗಾಂಧಿನಗರ, ಸುಭಾಷ್ ನಗರ ಹಾಗೂ ಕೆ.ಜಿ. ರಸ್ತೆ ಭಾಗವು ಬೆಂಗಳೂರಿನ ಪ್ರಮುಖ ಕೇಂದ್ರವಾಗಿತ್ತು. ಇತಿಹಾಸಕಾರ ಸುರೇಶ್ ಮೂನಾ ಹಾಗೂ ಚಲನಚಿತ್ರ ವಿಮರ್ಶಕ ಕೆ. ಪುಟ್ಟಸ್ವಾಮಿ ಅವರ ಪ್ರಕಾರ, ಈ ಚಿತ್ರಮಂದಿರಕ್ಕೆ ಸಿ.ವಿ. ರಾಮನ್ ಹಾಗೂ ಕೆ.ಪಿ. ಪುಟ್ಟಣ್ಣ ಚೆಟ್ಟಿ ಅವರಂತಹ ಪ್ರಖ್ಯಾತ ವ್ಯಕ್ತಿಗಳು ಭೇಟಿ ನೀಡುತ್ತಿದ್ದರು.
ದಶಕಗಳ ಕಾಲ ಚಿತ್ರಪ್ರೇಮಿಗಳನ್ನು ರಂಜಿಸಿದ್ದ ಮೆಜೆಸ್ಟಿಕ್ ಚಿತ್ರಮಂದಿರವನ್ನು 2010ರ ಸುಮಾರಿಗೆ ಕೆಡವಲಾಯಿತು. ಪುನೀತ್ ರಾಜ್‌ಕುಮಾರ್ ಅಭಿನಯದ ಸೂಪರ್‌ಹಿಟ್ ‘ಮಿಲನ’ ಚಿತ್ರವೇ ಇಲ್ಲಿ ಪ್ರದರ್ಶನಗೊಂಡ ಕೊನೆಯ ಸಿನಿಮಾ ಎಂದು ಹೇಳಲಾಗಿದೆ. 20ನೇ ಶತಮಾನದ ಆರಂಭದಲ್ಲಿ ಈ ಕೆರೆ ಭಾಗಶಃ ಒಣಗಿಹೋಯಿತು. ತದನಂತರ ಆ ಖಾಲಿ ಮೈದಾನವನ್ನು ನಾಟಕ ಪ್ರದರ್ಶನಗಳು, ಸರ್ಕಸ್ ಹಾಗೂ ವಸ್ತುಪ್ರದರ್ಶನಗಳಿಗೆ ಬಳಸಲಾಗುತ್ತಿತ್ತು.
ಇದನ್ನೂ ಓದಿ: ಉಡುಪಿ: ಹಾನಿಕಾರಕ ರಾಸಾಯನಿಕ ಬಳಸಿ ಬಾಳೆಕಾಯಿ ಹಣ್ಣಾಗಿಸುವ ಜಾಲ ಪತ್ತೆ, 10890 ಕೆಜಿ ಹಣ್ಣು ನಾಶ
ಜವಾಹರಲಾಲ್ ನೆಹರೂ ಸೇರಿದಂತೆ ಅನೇಕ ಪ್ರಮುಖ ನಾಯಕರು ಸಾರ್ವಜನಿಕ ಸಭೆಗಳನ್ನು ನಡೆಸಲು ಈ ಮೈದಾನ ಸಾಕ್ಷಿಯಾಗಿತ್ತು. ಕಾಲಕ್ರಮೇಣ ಇದು ನಗರದ ಬೃಹತ್ ಕೆಂಪೇಗೌಡ ಬಸ್ ನಿಲ್ದಾಣವಾಗಿ ರೂಪಾಂತರಗೊಂಡಿತು. ಇಂದು ದಿನನಿತ್ಯ ಸುಮಾರು 5,000ಕ್ಕೂ ಹೆಚ್ಚು ಬಸ್‌ಗಳ ಸಂಚಾರವನ್ನು ನಿರ್ವಹಿಸುವ ಈ ಸಾರಿಗೆ ಹಬ್, ಬೆಂಗಳೂರಿಗರಿಗೆ ಅತ್ಯಂತ ನಂಬಿಕಸ್ಥ ಜಾಗವಾಗಿದೆ. “ನಗರದಲ್ಲಿ ಎಲ್ಲೇ ದಾರಿ ತಪ್ಪಿದರೂ, ಸುಮ್ಮನೆ ಮೆಜೆಸ್ಟಿಕ್‌ಗೆ ತಲುಪು, ಅಲ್ಲಿಂದ ಮನೆಗೆ ಹೋಗಬಹುದು” ಎಂಬ ಮಾತನ್ನು ಪ್ರತಿಯೊಬ್ಬ ಬೆಂಗಳೂರಿಗನೂ ತನ್ನ ಜೀವಿತಾವಧಿಯಲ್ಲಿ ಒಮ್ಮೆಯಾದರೂ ಕೇಳಿರುತ್ತಾನೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




