ಹಾಲಿನ ದರ ಹೆಚ್ಚಳ, ಬೆಂಗಳೂರಿನಲ್ಲಿ ಐದು ಪೊಲೀಸ್ ಕಮಿಷನರೇಟ್ ರಚನೆ ವಿಚಾರಕ್ಕೆ ಸರ್ಕಾರದ ಮೇಲೆ ಅಶೋಕ್ ಗರಂ
ಹಾಲಿನ ದರ ಹೆಚ್ಚಳ ಹಾಗೂ ಬೆಂಗಳೂರಿನಲ್ಲಿ ಐದು ಪೊಲೀಸ್ ಕಮಿಷನರೇಟ್ ರಚನೆ ಮಾಡುವ ರಾಜ್ಯ ಸರ್ಕಾರದ ತೀರ್ಮಾನದ ವಿರುದ್ಧ ವಿಪಕ್ಷ ನಾಯಕ R. ಅಶೋಕ್ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಗೃಹಲಕ್ಷ್ಮಿಯರಿಗೆ 2000 ರೂಪಾಯಿ ಕೊಡುತ್ತೇವೆ ಅಂತಾ ಗಂಡ, ತಂದೆ, ತಮ್ಮ ಸೇರಿದಂತೆ ಎಲ್ಲರಿಗೂ ತೆರಿಗೆ ಹಾಕ್ತಿದ್ದೀರಿ. ಒಬ್ಬೊಬ್ಬ ಗಂಡಸರಿಂದ ತಿಂಗಳಿಗೆ 6000 ರೂಪಾಯಿ ವಸೂಲಿ ಮಾಡುತ್ತಿದ್ದೀರಿ ಎಂದವರು ಆರೋಪಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 06: ಹಾಲಿನ ದರ ಹೆಚ್ಚಳ ಮತ್ತು ಜಿಬಿಎ ವ್ಯಾಪ್ತಿಯಲ್ಲಿ ಐದು ಪೊಲೀಸ್ ಕಮಿಷನರೇಟ್ ರಚನೆ ಸಂಬಂಧ ಸಿಎಂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿನ ತೀರ್ಮಾನಕ್ಕೆ ವಿಪಕ್ಷ ನಾಯಕ ಆರ್. ಅಶೋಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಹಾಲಿನ ದರ ಹೆಚ್ಚಿಸಿ ಜನರ ಮೇಲೆ ಹೊರೆ ಹಾಕ್ತಿದ್ದೀರಿ. ಹಾಲಿನ ಸಬ್ಸಿಡಿ ದರ 8 ರೂ. ಹೆಚ್ಚಿಸುತ್ತೇವೆ ಎಂದು ಚುನಾವಣಾ ಪ್ರಣಾಳಿಕೆಯಲ್ಲೇ ಹೇಳಿದ್ರಿ. ಎಲ್ಲ ಭರವಸೆ ಈಡೇರಿಸಿದ್ದೇವೆ ಎನ್ನುವವರು ಇದನ್ಯಾಕೆ ಬಿಟ್ರಿ? ಎಲ್ಲ ಈಡೇರಿಸಿದ್ರೆ ಹಾಲಿನ ದರ ಏರಿಕೆ ಪ್ರಶ್ನೆಯೇ ಬರುತ್ತಿರಲಿಲ್ಲ ಎಂದವರು ಹೇಳಿದ್ದಾರೆ.
‘ಕಾಂಗ್ರೆಸ್ನವರು ದಗಾಕೋರರು’
ಗೃಹಲಕ್ಷ್ಮಿಯರಿಗೆ 2000 ರೂಪಾಯಿ ಕೊಡುತ್ತೇವೆ ಅಂತಾ ಗಂಡ, ತಂದೆ, ತಮ್ಮ ಸೇರಿದಂತೆ ಎಲ್ಲರಿಗೂ ತೆರಿಗೆ ಹಾಕ್ತಿದ್ದೀರಿ. ಒಬ್ಬೊಬ್ಬ ಗಂಡಸರಿಂದ ತಿಂಗಳಿಗೆ 6000 ರೂಪಾಯಿ ವಸೂಲಿ ಮಾಡುತ್ತಿದ್ದೀರಿ. ಅದರಲ್ಲಿ ಒಂದು ಭಾಗ 2000 ರೂ. ಡಿಕೆಶಿ ಇಟ್ಟುಕೊಳ್ಳುತ್ತಾರೆ. ಇನ್ನೊಂದು ಭಾಗ 2000 ರಾಹುಲ್ ಗಾಂಧಿಗೆ ಕಳಿಸುತ್ತಾರೆ. ಮತ್ತೊಂದು ಭಾಗ ಹೆಣ್ಣುಮಕ್ಕಳಿಗೆ 2000 ರೂ. ಕೊಡುತ್ತಾರೆ ಎಂದೂ ಅಶೋಕ್ ಆರೋಪಿಸಿದ್ದಾರೆ. ಈಗ ಸೆಕೆಂಡ್ ರೌಂಡ್ ತೆರಿಗೆ ಏರಿಕೆ ಶುರುವಾಗಿದೆ. ಹಿಂದೆ ಸಿದ್ದರಾಮಯ್ಯ ರುಬ್ಬಿ ದೋಸೆ ಮಾಡಿ ತಿಂದು ಹೋದರು. ಈಗ ಡಿ.ಕೆ.ಶಿವಕುಮಾರ್ ಇನ್ನೊಂದು ರೌಂಡ್ ರುಬ್ಬಿ ಮಸಾಲೆ ದೋಸೆ ಮಾಡಿ ತಿಂದು ಹೋಗುತ್ತಾರೆ. ಕಾಂಗ್ರೆಸ್ನವರು ದಗಾಕೋರರು ಎಂದು ಅಶೋಕ್ ಕಿಡಿ ಕಾರಿದ್ದಾರೆ.
ಇದನ್ನೂ ಓದಿ: ಜಿಬಿಎ ವ್ಯಾಪ್ತಿಯಲ್ಲಿ ಐದು ನಗರ ಪೊಲೀಸ್ ಕಮಿಷನರೇಟ್‌ಗಳಿಗೆ ಸಚಿವ ಸಂಪುಟ ಅನುಮೋದನೆ
‘ಬೆಂಗಳೂರು ಪೊಲೀಸ್ ಇತಿಹಾಸದಲ್ಲಿ ಇದು ಕರಾಳ ಅಧ್ಯಾಯ’
ಬೆಂಗಳೂರಿನಲ್ಲಿ ಐದು ಪೊಲೀಸ್ ಕಮಿಷನರೇಟ್ ರಚನೆ ವಿಚಾರವಾಗಿಯೂ ಟೀಕಿಸಿರುವ ಅಶೋಕ್, ಇದು ತುಘಲಕ್ ಸರ್ಕಾರ. ದುಡ್ಡು ಹೊಡೆಯುವುದಕ್ಕೆ ಈ ವಿಂಗಡನೆ ಮಾಡುತ್ತಿದ್ದಾರೆ. ಬೆಂಗಳೂರು ಪೊಲೀಸ್ ಇತಿಹಾಸದಲ್ಲಿ ಇದು ಕರಾಳ ಅಧ್ಯಾಯ. ಪೊಲೀಸ್ ಅಧಿಕಾರಿಗಳೆಲ್ಲಾ ನಮಗೆ ಫೋನ್ ಮಾಡಿದ್ದರು. ಐದು ಕಮಿಷನರೇಟ್ನಿಂದ ಬೆಂಗಳೂರಿಗೆ ಒಳ್ಳೆಯದಾಗಲ್ಲ. 5 ಪಾಲಿಕೆ ಮಾಡಿದ ಬಳಿಕ ಈಗ ಒಂದರಲ್ಲೂ ಹಣವಿಲ್ಲ. ಈ ಮನೆಹಾಳು ಕೆಲಸ ಪೊಲೀಸ್ ಇಲಾಖೆಗೂ ತಂದಿದ್ದಾರೆ. ಬೆಂಗಳೂರಿಗೆ ಒಬ್ಬ ಕಮಿಷನರ್ ಪರಂಪರಾಗತ ಬಂದಿದೆ. ಮುಂದೆ ಒಂದು ಪೊಲೀಸ್ ಠಾಣೆಗೆ ಒಬ್ಬ ಡಿಸಿಪಿ ಆಗ್ತಾರೆ. ಸರ್ಕಲ್ ಇನ್ಸ್ಪೆಕ್ಟರ್ಗಳು ಕಾನ್ಸ್ಟೇಬಲ್ಗಳಾಗುತ್ತಾರೆ, ಡಿಸಿಪಿಗಳೆಲ್ಲ ಸರ್ಕಲ್ ಇನ್ಸ್ಪೆಕ್ಟರ್ಗಳಾಗ್ತಾರೆ ಎಂದವರು ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಸಚಿವರು, ಅಧಿಕಾರಿಗಳ ಕೊಠಡಿ ನವೀಕರಣ, ಕುಮಾರಕೃಪಾ ಗೆಸ್ಟ್ಹೌಸ್ ನವೀಕರಣ ಕಾಮಗಾರಿ ಬಗ್ಗೆಯೂ ಮಾಹಿತಿ ಕೇಳಿ ಪತ್ರ ಬರೆದಿದ್ದೇನೆ. ಕಾರ್ಯದರ್ಶಿ ಅಂಜುಂ ಪರ್ವೇಜ್ಗೆ ಕರೆ ಮಾಡಿ ಕೇಳಿದ್ದೇನೆ. ನಾಳೆ ಮಾಹಿತಿ ಕೊಡುವೆ, ನಾಳೆ ಮಾಹಿತಿ ಕೊಡುವೆ ಅಂತಿದ್ದಾರೆ. ಮಾಹಿತಿ ಕೊಡದಿದ್ದರೆ ಅವರ ಕಚೇರಿ ಮುಂದೆ ಧರಣಿ ಮಾಡುವೆ. ನವೀಕರಣದ ಬಗ್ಗೆ ಎಲ್ಲಾ ದಾಖಲೆ ತೆಗೆದುಕೊಂಡು ಮಾತಾಡುವೆ ಎಂದು ಆರ್.ಅಶೋಕ್ ತಿಳಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 6:45 pm, Tue, 6 October 26




