ಬೀದರ್: ಕಮರಿ ಹೋಗುತ್ತಿದೆ ಕಲಿಯುವ ಕನಸು; ಇದು ರಸ್ತೆಯಿಲ್ಲದ ತಾಂಡಾ ಮಕ್ಕಳ ನಿತ್ಯದ ಗೋಳು
ನವಾಬರ ಕಾಲದ ಮಣ್ಣಿನ ರಸ್ತೆಗಳಲ್ಲಿಯೇ ಇವರು ಓಡಾಡಬೇಕಿದೆ. ತೆಲಂಗಾಣ-ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ತಾಂಡಾಗಳ ಮಕ್ಕಳ ಗೋಳಿನ ಕಥೆ ಇದು.
ಸ್ವಾತಂತ್ರ್ಯ ಬಂದು ಏಳು ದಶಕ ಕಳೆದರೂ ಈ ತಾಂಡಾಗಳಿಗೆ ಸರ್ಕಾರಿ ಬಸ್ಗಳು ಬಂದ ಉದಾಹರಣೆ ಇಲ್ಲ. ಶಾಲೆಗಳಲ್ಲಿ ಕಲಿಯಬೇಕು ಎನ್ನುವ ಹುಮ್ಮಸ್ಸಿರುವ ಮಕ್ಕಳು ಪ್ರತಿದಿನ ಕಿಲೋಮೀಟರ್ಗಟ್ಟಲೆ ನಡೆಯಬೇಕಿದೆ. ನವಾಬರ ಕಾಲದ ಅದೇ ಮಣ್ಣಿನ ರಸ್ತೆಗಳಲ್ಲಿಯೇ ಇವರು ಓಡಾಡಬೇಕಿದೆ. ತೆಲಂಗಾಣ-ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಿರುವ ಕರ್ನಾಟಕದ ತಾಂಡಾಗಳ ಮಕ್ಕಳ ಗೋಳಿನ ಕಥೆ ಇದು.
ವರದಿ: ಸುರೇಶ್ ನಾಯಕ್, ಟಿವಿ 9, ಬೀದರ್
ನಲವತ್ತಕ್ಕೂ ಹೆಚ್ಚು ಓದುವ ಮಕ್ಕಳಿರುವ ಬೀದರ್ ಜಿಲ್ಲೆಯ ಹಲವು ತಾಂಡಾಗಳಿಗೆ ಸಾರಿಗೆ ಸೌಲಭ್ಯ ಮರೀಚಿಕೆಯಾಗಿದೆ. ಕೆಲ ತಾಂಡಾಗಳಿಗೆ ರಸ್ತೆ ಸಂಪರ್ಕ ಚೆನ್ನಾಗಿದೆ, ಹಲವು ತಾಂಡಾಗಳಿಗೆ ಆ ಭಾಗ್ಯವೂ ಇಲ್ಲ. ಓದುವ ಮಕ್ಕಳು ಹತ್ತಾರು ಕಿಮೀ ನಡೆದು ಪಕ್ಕದ ಊರುಗಳಿಗೆ ಹೋಗಬೇಕಿದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತಲಾ ಒಂದು ಗಂಟೆಯನ್ನು ನಡೆಯಲೆಂದೇ ಮೀಸಲಿಡಬೇಕಿದೆ.
ಕರ್ನಾಟಕದ ತುತ್ತತುದಿಯಲ್ಲಿರುವ ಬೀದರ್ ಜಿಲ್ಲೆಯು ರಾಜ್ಯದ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಅಭಿವೃದ್ಧಿಯ ಇತರ ಮಾನದಂಡಗಳಲ್ಲಿಯೂ ಹಿಂದುಳಿದಿದೆ. ಸ್ವಾತಂತ್ರ್ಯ ಬಂದು ಏಳು ದಶಕಗಳು ಉರುಳಿದರೂ ಇಲ್ಲಿನ ಹಲವು ತಾಂಡಾಗಳಿಗೆ ಬಸ್ ಸೌಕರ್ಯ ಸಿಕ್ಕಿಲ್ಲ. ಹೀಗಾಗಿ ತಾಂಡಾದ ಜನರು ಸಮೀಪದ ಊರುಗಳಿಗೆ ಹೋಗಬೇಕಾದರೆ ನಡೆದುಕೊಂಡು, ಇಲ್ಲವೇ ಬೈಕ್ನಲ್ಲಿ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಔರಾದ್ ತಾಲೂಕಿನ ವಡಗಾಂವ್ ಸರ್ಕಲ್ ವ್ಯಾಪ್ತಿಯ ಚಿಕ್ಲಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಬಾಜಿರಾಮ್ ತಾಂಡಾ, ರಾಮ್ಪುರ್ ತಾಂಡಾ, ಫೂಮಾ ತಾಂಡಾ, ಕಿಶನ್ ತಾಂಡಾಗಳ ನಿವಾಸಿಗಳು ಅನುಭವಿಸುತ್ತಿರುವ ಸಂಕಷ್ಟ ಪರಿಸ್ಥಿತಿ ಹೆಚ್ಚು ಕಡಿಮೆ ಒಂದೇ ರೀತಿಯಲ್ಲಿದೆ. ಈ ತಾಂಡಾಗಳಿಗೆ ಸೇರಿದ 40ಕ್ಕೂ ಹೆಚ್ಚಿನ ಮಕ್ಕಳು ಮಣ್ಣಿನ ರಸ್ತೆಯಲ್ಲಿ ನಡೆದುಕೊಂಡು ಹೋಗಬೇಕಿದೆ. ಈ ಸಮಸ್ಯೆಯಿಂದಾಗಿಯೇ ಹಲವು ಹೆಣ್ಣು ಮಕ್ಕಳು ಶಿಕ್ಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿ, ವಿವಾಹವಾಗುತ್ತಿದ್ದಾರೆ. ಈ ತಾಂಡಾಗಳ ನಿವಾಸಿಗಳಿಗೆ ಹೆಣ್ಣು ಕೊಡಲು ಸಹ ಎಲ್ಲರೂ ಹಿಂದೆಮುಂದೆ ನೋಡುತ್ತಿದ್ದಾರೆ.
ಮಳೆಗಾಲದಲ್ಲಿ ಒಂದು ದಿನ ಶಾಲೆಗೆ ಹೋದರೆ ಇನ್ನೊಂದು ದಿನ ಶಾಲೆಗೆ ರಜೆ ಹಾಕಿ ಮನೆಯಲ್ಲಿ ಕುಳಿತುಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ಮುಂಜಾನೆ ಒಂದು ಸಲವಾದರೂ ಬಸ್ನ ವ್ಯವಸ್ಥೆ ಮಾಡಿ ಎಂದು ಸ್ಥಳಿಯ ರಾಜಕಾರಣಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಪ್ರತಿದಿನ ವಿದ್ಯಾರ್ಥಿಗಳು ಶಾಲೆಗೆ ಬರಬೇಕು ಎಂದರೆ ಪರಿಚಯಸ್ಥರ ಬೈಕ್‌ಗಳು ಅಥವಾ ಊರಿಗೆ ಬಂದ ಆಟೋಗಳಲ್ಲಿಯೇ ಬರಬೇಕು. ಸಮಯಕ್ಕೆ ವಾಹನಗಳು ಸಿಗದಿದ್ದಾಗ. ಗುಡ್ಡಗಾಡು ಪ್ರದೇಶಗಳಲ್ಲಿ ನಡೆದುಕೊಂಡು ಬರಬೇಕಾಗುತ್ತದೆ. ಈ ಭಯಾನದ ತೋಳಗಳ ಸಂಚಾರವಿರುವುದರಿಂದ ವಿದ್ಯಾರ್ಥಿಗಳಿಗೆ ಪ್ರಾಣಾಪಾಯದ ಸಂಭವನೀಯತೆ ಹೆಚ್ಚಾಗಿದೆ. ರಸ್ತೆ ಮತ್ತು ವಾಹನ ಸೌಕರ್ಯ ಇಲ್ಲದಿರುವುದರಿಂದ ಎಷ್ಟೋ ಬಾರಿ ರೋಗಿಗಳು ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದ ಉದಾಹರಣೆಗಳಿವೆ. ಹತ್ತಾರು ಸಮಸ್ಯೆಗಳಿದ್ದರೂ ಸ್ಥಳೀಯ ಶಾಸಕರು ಅಥವಾ ಸಂಸದರು ಸಮಸ್ಯೆ ಪರಿಹರಿಸುವ ಬಗ್ಗೆ ಗಮನ ಹರಿಸಿಲ್ಲ ಎಂದು ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ.
‘ನಮ್ಮ ತಾಂಡಾಕ್ಕೆ ಬಸ್-ರಸ್ತೆ ವ್ಯವಸ್ಥೆಯಿಲ್ಲ. 4 ಕಿಮೀ ನಡೆದು ಮುಖ್ಯರಸ್ತೆಗೆ ಬರಬೇಕಿದೆ. ಪ್ರತಿಕೂಲ ಹವಾಮಾನವಿದ್ದಾಗ ನಮ್ಮ ಕಷ್ಟ ಇನ್ನಷ್ಟು ಹೆಚ್ಚಾಗುತ್ತದೆ. ಪ್ರತಿದಿನ ಶಾಲೆಗಳಿಗೆ ತಡವಾಗಿ ಹೋಗುವಂತಾಗಿದೆ’ ಎಂದು ಬಾಜರಂಗ್ ತಾಂಡಾದ ನಿವಾಸಿ, 2ನೇ ಪಿಯುಸಿ ವಿದ್ಯಾರ್ಥಿ ಗೋಪಿನಾಥ್ ಪ್ರತಿಕ್ರಿಯಿಸಿದರು. ‘ಇಲ್ಲಿ ಸುತ್ತಮುತ್ತ 5 ತಾಂಡಾಗಳಿವೆ. ಹುಡುಗರನ್ನು ಬಿಟ್ಟು ಪೋಷಕರು ಕಾರ್ಖಾನೆಗಳಿಗೆ ಕೆಲಸಕ್ಕೆ ಹೋಗುತ್ತಾರೆ. ಮಕ್ಕಳನ್ನು ಶಾಲೆಗೆ ಬಿಡಲು ಯಾರೂ ಇರುವುದಿಲ್ಲ. ಸರಿಯಾದ ರಸ್ತೆ, ಬಸ್ ವ್ಯವಸ್ಥೆ ಮಾಡಬೇಕಿದೆ. ಸಾಕಷ್ಟು ಬಾರಿ ಶಾಸಕರು ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ’ ಎಂದು ತಾಂಡಾದ ಮುಖ್ಯಸ್ಥರಾದ ಬಾಬುರಾವ್ ರಾಠೋಡ್ ಹೇಳಿದರು.