ಕಾವೇರಿ ವಿವಾದ: ಕರ್ನಾಟಕ ಸಿಎಂ ಭೇಟಿ ವಿಚಾರವಾಗಿ ಕೊನೆಗೂ ಮೌನ ಮುರಿದ ತಮಿಳುನಾಡು ಸಿಎಂ ವಿಜಯ್
ಕಾವೇರಿ ವಿವಾದದ ವಿಚಾರದಲ್ಲಿ ಕಾನೂನು ಹೋರಾಟ ಮುಂದುವರಿಸುವುದಾಗಿ ತಮಿಳುನಾಡು ಸಿಎಂ ವಿಜಯ್ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ. ಆದರೆ ಸಕಾರಾತ್ಮಕ ಫಲಿತಾಂಶದ ನಿರೀಕ್ಷೆಯಲ್ಲಿ ಕರ್ನಾಟಕದೊಂದಿಗೆ ಮಾತುಕತೆ ನಡೆಸುವ ಉದ್ದೇಶದಿಂದ ಬೆಂಗಳೂರಿಗೆ ಭೇಟಿ ನೀಡುವ ಆಲೋಚನೆ ಹೊಂದಿದ್ದಾಗಿಯೂ ತಿಳಿಸಿದ್ದಾರೆ. ಇದರೊಂದಿಗೆ, ಕರ್ನಾಟಕ ಸಿಎಂ ಜತೆಗಿನ ಮಾತುಕತೆ ವಿಚಾರವಾಗಿ ಅವರು ಮೊದಲ ಬಾರಿಗೆ ಮೌನಮುರಿದಂತಾಗಿದೆ.

ಮುಖ್ಯಾಂಶಗಳು
- ಕಾವೇರಿ ವಿವಾದ, ಮೇಕೆದಾಟು ವಿಚಾರ ತಮಿಳುನಾಡು ವಿಧಾನಸಭೆಯಲ್ಲಿ ಪ್ರಸ್ತಾಪ
- ಕರ್ನಾಟಕದ ಜನತೆಗೆ ಮಾತುಕತೆಗೆ ಒಲವು ಹೊಂದಿದ್ದೆ ಎಂದ ಸಿಎಂ ವಿಜಯ್
- ಡಿಕೆಶಿ ಜತೆಗಿನ ಮಾತುಕತೆ ಸಾಧ್ಯತೆ ವಿಚಾರವಾಗಿ ಕೊನೆಗೂ ಮೌನಮುರಿದ ವಿಜಯ್
ಚೆನ್ನೈ, ಆಗಸ್ಟ್ 7: ಕಾವೇರಿ ನದಿ ನೀರು ಹಂಚಿಕೆ (Cauvery Dispute) ವಿವಾದ ಹಾಗೂ ಮೇಕೆದಾಟು ಯೋಜನೆ ವಿಚಾರವಾಗಿ ತಮಿಳುನಾಡು ಸಿಎಂ ಜೋಸೆಫ್ ವಿಜಯ್ (Joseph Vijay) ಹಾಗೂ ಕರ್ನಾಟಕ ಸಿಎಂ ಡಿಕೆ ಶಿವಕುಮಾರ್ ಮಾತುಕತೆ ನಿಗದಿಯಾದ ಬಗ್ಗೆ ಇತ್ತೀಚೆಗೆ ವರದಿಯಾಗಿತ್ತು. ಆದರೆ, ಆಗಸ್ಟ್ 3 ರಂದು ನಡೆಯಬೇಕಿದ್ದ ಆ ಮಾತುಕತೆ ಆಗಿರಲೇ ಇಲ್ಲ. ಈ ವಿಚಾರವಾಗಿ ಇದೀಗ ಸಿಎಂ ವಿಜಯ್ ಮೌನಮುರಿದಿದ್ದಾರೆ. ತಮಿಳುನಾಡು ವಿಧಾನಸಭೆಯಲ್ಲಿ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ತಮ್ಮ ಸರ್ಕಾರದ ಕಾನೂನು ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ಆದರೆ, ಸಕಾರಾತ್ಮಕ ಫಲಿತಾಂಶ ಸಿಗುವ ಸಾಧ್ಯತೆಯನ್ನು ಪರಿಗಣಿಸಿ, ಬೆಂಗಳೂರಿಗೆ ತೆರಳಿ ಕರ್ನಾಟಕದ ನಾಯಕರೊಂದಿಗೆ ಮಾತುಕತೆ ನಡೆಸುವ ಪ್ರಯತ್ನ ಮಾಡಬೇಕು ಎಂಬ ಆಲೋಚನೆ ತಮ್ಮಲ್ಲಿತ್ತು ಎಂದು ತಿಳಿಸಿದ್ದಾರೆ.
ಮೇಕೆದಾಟು ಯೋಜನೆ ವಿಚಾರವಾಗಿ ಕರ್ನಾಟಕ ಮತ್ತು ತಮಿಳುನಾಡು ನಡುವೆ ಮತ್ತೆ ವಿವಾದ ತೀವ್ರಗೊಂಡಿರುವ ಬೆನ್ನಲ್ಲೇ, ಜೋಸೆಫ್ ವಿಜಯ್ ಮಹತ್ವದ ಹೇಳಿಕೆ ನೀಡಿದ್ದಾರೆ. ಕಾವೇರಿ ವಿಚಾರದಲ್ಲಿ ಅಗ್ಗದ ರಾಜಕೀಯ ಮಾಡಲು ತಾವು ಬಯಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಿಧಾನಸಭೆಯಲ್ಲಿ ಕಾವೇರಿ ವಿಚಾರ ಪ್ರಸ್ತಾಪಿಸಿದ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರಿಗೆ ಉತ್ತರಿಸಿದ ಸಿಎಂ ವಿಜಯ್, 1969ರಿಂದ ತಮಿಳುನಾಡು ಕಾವೇರಿ ವಿವಾದವನ್ನು ಹೇಗೆ ಎದುರಿಸಿದೆ ಎಂಬುದನ್ನು ವಿವರಿಸಿದರು. ಆರಂಭದಲ್ಲಿ ಮಾತುಕತೆಗೆ ಆದ್ಯತೆ ನೀಡಲಾಗಿತ್ತು. ಬಳಿಕ ಕಾನೂನು ಹೋರಾಟದ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವ ನಿಲುವು ಮುಂದುವರಿದಿದೆ ಎಂದರು.
ಸರ್ವಪಕ್ಷ ಸಭೆ ಕರೆಯಲು ಉದಯನಿಧಿ ಸ್ಟಾಲಿನ್ ಆಗ್ರಹ
ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ವಿರುದ್ಧ ತಮಿಳುನಾಡಿನಲ್ಲಿ ರಾಜಕೀಯ ಒತ್ತಡವೂ ಹೆಚ್ಚಾಗಿದೆ. ಕರ್ನಾಟಕ ಯೋಜನೆ ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡಿನ ಎಲ್ಲ ಪಕ್ಷಗಳು ಒಗ್ಗಟ್ಟಿನಿಂದ ನಿಲ್ಲಬೇಕು ಎಂದು ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಆಗ್ರಹಿಸಿದ್ದಾರೆ.
ಮೇಕೆದಾಟು ಜಲವಿವಾದದ ಕುರಿತು ಸರ್ವಪಕ್ಷ ಸಭೆ ಕರೆಯಬೇಕು ಹಾಗೂ ತಮಿಳುನಾಡಿನ ಕೃಷಿ ಮತ್ತು ನೀರಾವರಿ ಹಕ್ಕುಗಳ ರಕ್ಷಣೆಗೆ ಒಗ್ಗಟ್ಟಿನ ಹೋರಾಟ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಅಲ್ಲದೆ, ಕರ್ನಾಟಕ ಪ್ರವಾಸ ಕೈಗೊಳ್ಳುವ ಬಗ್ಗೆ ಸಿಎಂ ವಿಜಯ್ ಸ್ಪಷ್ಟನೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದಿನ ಡಿಎಂಕೆ ಸರ್ಕಾರದ ವಿರುದ್ಧ ಸಚಿವ ಆದವ್ ಅರ್ಜುನ್ ವಾಗ್ದಾಳಿ
ಇದೇ ವೇಳೆ, ಮೇಕೆದಾಟು ವಿಚಾರದಲ್ಲಿ ಹಿಂದಿನ ಡಿಎಂಕೆ ಸರ್ಕಾರದ ವಿರುದ್ಧ ತಮಿಳುನಾಡು ಸಚಿವ ಆದವ್ ಅರ್ಜುನ್ ವಾಗ್ದಾಳಿ ನಡೆಸಿದ್ದಾರೆ. ಡಿಎಂಕೆ ಆಡಳಿತದ ಅವಧಿಯಲ್ಲಿ ಸುಪ್ರೀಂಕೋರ್ಟ್‌ನಲ್ಲಿ ಮೇಕೆದಾಟು ಸಂಬಂಧಿತ ಅರ್ಜಿಗಳು ಹಲವು ಬಾರಿ ಹಿನ್ನಡೆ ಅನುಭವಿಸಿವೆ ಎಂದು ಆರೋಪಿಸಿದ್ದಾರೆ. ಸ್ಟಾಲಿನ್ ಸರ್ಕಾರದ ಅವಧಿಯಲ್ಲಿ ಸಲ್ಲಿಸಲಾಗಿದ್ದ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ವಜಾಗೊಂಡಿತ್ತು. ಬಳಿಕ ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ಹಾಗೂ ಕ್ಯೂರೇಟಿವ್ ಅರ್ಜಿಯೂ ತಿರಸ್ಕೃತವಾಗಿವೆ ಎಂದು ಸಚಿವರು ವಿಧಾನಸಭೆಯಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಯೋಜನೆಗೆ ತಮಿಳುನಾಡು ಕ್ಯಾತೆ, ಮತ್ತೊಂದು ಹೆಜ್ಜೆ ಮುಂದಿಟ್ಟ ವಿಜಯ್: ಸಿಎಂ ಡಿಕೆ ಶಿವಕುಮಾರ್ ಖಡಕ್ ಪ್ರತಿಕ್ರಿಯೆ
ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣವನ್ನು ಸಮರ್ಪಕವಾಗಿ ಮಂಡಿಸದಿರುವುದೇ ಈ ಹಿನ್ನಡೆಗೆ ಕಾರಣ ಎಂದು ಆರೋಪಿಸಿದ ಅವರು, ಹೊಸ ಕಾನೂನು ತಂಡದೊಂದಿಗೆ ಟಿವಿಕೆ ಸರ್ಕಾರ ಕಾವೇರಿ ಹಾಗೂ ಮೇಕೆದಾಟು ವಿಚಾರದಲ್ಲಿ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




