ಕೊರೊನಾ ಅಲೆಯ ಅಬ್ಬರ: ಧಾರವಾಡ ನಗರ ಪ್ರದೇಶವೇ ಹೆಚ್ಚು ಅಪಾಯಕಾರಿ, ಗ್ರಾಮೀಣ ಪ್ರದೇಶ ಸುರಕ್ಷಿತ
ಉತ್ತರ ಕರ್ನಾಟಕದ ಕೇಂದ್ರ ಬಿಂದು ಧಾರವಾಡ ಆಗಿರುವುದರಿಂದ ಹೊರ ಜಿಲ್ಲೆಯ ಸೋಂಕಿತರು ಕೂಡ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಆಗಲು ಕಾರಣ ಎನ್ನುವುದು ಅಧಿಕಾರಿಗಳ ಪ್ರತಿಪಾದನೆ. ಜಿಲ್ಲೆಯಲ್ಲಿ ಒಟ್ಟು 3155 ಬೆಡ್ಗಳ ವ್ಯವಸ್ಥೆ ಇದೆ. ಈ ಪೈಕಿ ಜೂನ್ 10 ರ ಮಾಹಿತಿಯಂತೆ 1081 ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಧಾರವಾಡ: ರಾಜ್ಯದಲ್ಲಿ ಕೊರೊನಾದ ಎರಡನೇ ಅಲೆಯ ತೀವ್ರತೆ ಲಾಕ್ಡೌನ್ ಕಾರಣದಿಂದಾಗಿ ನೀಧಾನವಾಗಿ ಕಡಿಮೆಯಾಗುತ್ತಿದ್ದು, ಒಟ್ಟು ಐದು ಹಂತಗಳಲ್ಲಿ ಲಾಕ್ಡೌನ್ ಸಡಿಲಿಕೆ ಮಾಡುವುದಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಅಲ್ಲದೇ ಪಾಸಿಟಿವಿಟಿ ರೇಟ್ ಶೇ. 5 ಕ್ಕಿಂತ ಕಡಿಮೆಯಾದರೆ ಮಾತ್ರ ಲಾಕ್ಡೌನ್ ಸಂಪೂರ್ಣವಾಗಿ ತೆಗೆದು ಹಾಕಲಾಗುವುದು ಎಂದು ತಿಳಿಸಿದ್ದಾರೆ. ಅದರಂತೆ ಬಹುತೇಕ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಶೇ. 5 ಕ್ಕಿಂತ ಕಡಿಮೆ ಇದೆ ಮತ್ತು ಅಂತಹ ಜಿಲ್ಲೆಗಳಲ್ಲಿ ಲಾಕ್ಡೌನ್ ಸಡಿಲಿಕೆ ಮಾಡಲಾಗುತ್ತಿದೆ. ಆದರೆ ಧಾರವಾಡದ ಪರಿಸ್ಥಿತಿ ಇನ್ನು ಸುಧಾರಿಸಿಲ್ಲ. ಧಾರವಾಡದ ಗ್ರಾಮೀಣ ಭಾಗ ಸಂಪೂರ್ಣವಾಗಿ ಕೊರೊನಾ ಮುಕ್ತವಾಗಿದೆ. ಅದರೆ ನಗರ ಪ್ರದೇಶದಲ್ಲಿ ಕೊರೊನಾ ಹೆಚ್ಚಳ ಕಂಡು ಬಂದಿದ್ದು, ಅಧಿಕಾರಿಗಳಿಗೆ ಆತಂಕ ಎದುರಾಗಿದೆ.
ಹಳ್ಳಿಗಳತ್ತ ಅಪಾಯದ ಹೆಜ್ಜೆ ಹಾಕಿದ್ದ ಕೊರೊನಾ ಇದೀಗ ನಗರ ಪ್ರದೇಶದ ಜನರನ್ನು ಕಾಡಲಾರಂಭಿಸಿದೆ. ಕಳೆದ ಕೆಲ ದಿನಗಳ ಅಂಕಿ-ಅಂಶಗಳನ್ನು ನೋಡಿದರೆ ಇದು ಸ್ಪಷ್ಟವಾಗಿ ಗೋಚರಿಸುತ್ತದೆ. ಕೊವಿಡ್ ಪಾಸಿಟಿವಿಟಿ ದರ ಶೇ. 5 ರೊಳಗೆ ಬಂದರೆ ಲಾಕ್ಡೌನ್ ತೆರವುಗೊಳಿಸುವುದಾಗಿ ಸರಕಾರ ಹೇಳಿತ್ತು. ಆದರೆ ಧಾರವಾಡ ಜಿಲ್ಲೆಯ ಪಾಸಿಟಿವಿಟಿ ರೇಟ್ ಶೇ. 5 ರ ಕೆಳಗಡೆ ಬಂದಿಲ್ಲ. ಜಿಲ್ಲೆಯ ಐದು ತಾಲೂಕುಗಳ ಪಾಸಿಟಿವಿಟಿ ರೇಟ್ ಶೇ. 3.32 ಕ್ಕೆ ಇಳಿದಿದ್ದರೆ, ಹುಬ್ಬಳ್ಳಿ-ಧಾರವಾಡ ನಗರದಲ್ಲಿ ಇದರ ಪ್ರಮಾಣ ಇನ್ನೂ 17.88 ರಷ್ಟು ಇದೆ.
ಮೈ ಮರೆತರೆ ಕಾದಿದೆ ಅಪಾಯ ಕೊರೊನಾಕ್ಕೆ ಸಂಬಂಧಿಸಿದಂತೆ ಮೇ. 31 ರಿಂದ ಜೂನ್ 8 ರವರೆಗೆ ಜಿಲ್ಲಾಡಳಿತ ನೀಡಿದ ಮಾಹಿತಿಯನ್ನು ಅವಲೋಕಿಸಿದರೆ ಕೊವಿಡ್ ನಗರ ಪ್ರದೇಶದಲ್ಲಿ ಹೆಚ್ಚು ಕಂಡು ಬರುತ್ತಿದೆ. ಪ್ರಮುಖವಾಗಿ ಅವಳಿ ನಗರದ 20 ವಾರ್ಡ್ಗಳಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಇದು ಜಿಲ್ಲಾಡಳಿತದ ನಿದ್ರೆಯನ್ನು ಕೆಡಿಸಿದ್ದು, ಜನರು ಈಗಲೂ ಎಚ್ಚರಿಕೆಯಿಂದ ಇರುವಂತೆ ಸಂದೇಶವನ್ನು ರವಾನಿಸಿದೆ.
ಅವಳಿ ನಗರದಲ್ಲಿ ಸೋಂಕಿನ ಪ್ರಮಾಣ ತೀವ್ರ ಮೇ. 31 ರವರೆಗೂ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ 100 ರೊಳಗೆ ಬರುತ್ತಿತ್ತು. ಆದರೆ ಜೂನ್ 1 ರ ಬಳಿಕ ಇದು ನೂರರ ಗಡಿ ದಾಟುತ್ತಿದೆ. ಜೂನ್ 2 ರಂದು ಅವಳಿ ನಗರದಲ್ಲಿ 1074 ಜನರನ್ನು ಪರೀಕ್ಷೆಗೆ ಒಳಪಡಿಸಿದಾಗ, ಅದರಲ್ಲಿ 289 ಜನರಲ್ಲಿ ಸೋಂಕು ದೃಢಪಟ್ಟಿದೆ. ಜೂನ್ 4 ರಂದು ಪರೀಕ್ಷೆಗೊಳಪಟ್ಟ 949 ಜನರ ಪೈಕಿ 224 ಜನರಲ್ಲಿ ಸೋಂಕು ದೃಢಪಟ್ಟಿದೆ. ಜೂನ್ 5 ರಂದು 869 ಜನರ ಪೈಕಿ 215 ಜನರಲ್ಲಿ ಸೋಂಕು ದೃಢಪಟ್ಟಿದೆ. ಇನ್ನು ಹಳ್ಳಿಗಳಲ್ಲಿ ಪರೀಕ್ಷೆ ಪ್ರಮಾಣ ಹೆಚ್ಚು ಮಾಡಿದ್ದರೂ ಸೋಂಕಿತರ ಸಂಖ್ಯೆಯಲ್ಲಿ ತೀವ್ರ ಇಳಿಮುಖವಾಗಿದೆ.
ಜಿಲ್ಲೆಯಲ್ಲಿ 9 ದಿನಗಳಲ್ಲಿ ಕಂಡು ಬಂದ ಕೊವಿಡ್ ಪ್ರಕರಣ ಹಾಗೂ ಪಾಸಿಟಿವಿಟಿ ರೇಟ್ಗಳ ವಿವರ
ದಿನಾಂಕ ಹು-ಧಾ ನಗರ ಗ್ರಾಮೀಣ ಪ್ರದೇಶ (ಪರೀಕ್ಷೆ – ಪಾಸಿಟಿವ್) (ಪರೀಕ್ಷೆ – ಪಾಸಿಟಿವ್) ———————————————————————————— ಮೇ. 31 1375 – 70 1709 – 22 ಜೂ. 01 1125 – 230 1546 – 133 ಜೂ. 02 1074 – 289 1721 – 65 ಜೂ. 03 973 – 164 1761 – 48 ಜೂ. 04 949 – 224 1559 – 58 ಜೂ. 05 869 – 215 1515 – 65 ಜೂ. 06 493 – 77 684 – 06 ಜೂ. 07 1100 – 179 2098 – 67 ಜೂ. 08 1039 – 161 2368 – 33 —————————————————————————————– ಒಟ್ಟು 8997 – 1609 14961 – 497 —————————————————————————————–
ಶೇ. 20 ರಷ್ಟು ಹೊರ ಜಿಲ್ಲೆಗಳ ರೋಗಿಗಳು ಉತ್ತರ ಕರ್ನಾಟಕದ ಕೇಂದ್ರ ಬಿಂದು ಧಾರವಾಡ ಆಗಿರುವುದರಿಂದ ಹೊರ ಜಿಲ್ಲೆಯ ಸೋಂಕಿತರು ಕೂಡ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಆಗಲು ಕಾರಣ ಎನ್ನುವುದು ಅಧಿಕಾರಿಗಳ ಪ್ರತಿಪಾದನೆ. ಜಿಲ್ಲೆಯಲ್ಲಿ ಒಟ್ಟು 3155 ಬೆಡ್ಗಳ ವ್ಯವಸ್ಥೆ ಇದೆ. ಈ ಪೈಕಿ ಜೂನ್ 10 ರ ಮಾಹಿತಿಯಂತೆ 1081 ಸೋಂಕಿತರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ 201 ಜನರು ಹೊರ ಜಿಲ್ಲೆಯವರೇ ಆಗಿದ್ದಾರೆ. ಅಲ್ಲದೇ ಅವರೆಲ್ಲರೂ ವೆಂಟಿಲೇಟರ್ ಇಲ್ಲವೇ ಐಸಿಯು ಬೆಡ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತೀರ ಗಂಭೀರ ಸ್ಥಿತಿಯಲ್ಲಿರುವ ಶೇ. 25 ಕ್ಕೂ ಹೆಚ್ಚು ರೋಗಿಗಳು ಹೊರ ಜಿಲ್ಲೆಯವರೇ ಆಗಿದ್ದಾರೆ ಎನ್ನುವುದು ಗಮನಿಸಬೇಕಾದ ಸಂಗತಿ.
ಜಿಲ್ಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿಯೇ ನಿತ್ಯವೂ ಹೆಚ್ಚಿನ ಪಾಸಿಟಿವಿಟಿ ರೇಟ್ ಬರುತ್ತಿದೆ. ಹೀಗಾಗಿ ಈ ಬಗ್ಗೆ ಜಾಗೃತಿ ವಹಿಸಲಾಗಿದೆ. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಡೆದಿದೆ. ಗ್ರಾಮೀಣ ಪ್ರದೇಶದಲ್ಲಿ ಸೋಂಕಿನ ಪ್ರಮಾಣ ಇಳಿಮುಖವಾಗಿರುವುದು ಸಮಾಧಾನ ತಂದಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ್ ತಿಳಿಸಿದ್ದಾರೆ.
ಇದನ್ನೂ ಓದಿ:
Covid-19 Karnataka Update: ಕರ್ನಾಟಕದಲ್ಲಿ 8,249 ಮಂದಿಗೆ ಕೊರೊನಾ ಸೋಂಕು, 159 ಸಾವು
Published On - 1:37 pm, Sat, 12 June 21