ಕೋಮು ಸಂಘರ್ಷಕ್ಕೆ ತಿರುಗಿದ ಪುತ್ತೂರು ಡಿಜಿಟಲ್ ಸೇವಾ ಕೇಂದ್ರ ಗಲಾಟೆ: ಎಸ್‌ಪಿ ಖಡಕ್ ಎಚ್ಚರಿಕೆ
Puttur digital seva kendra conflict: ಪುತ್ತೂರಿನ ದರ್ಬೆ ಡಿಜಿಟಲ್ ಸೇವಾ ಕೇಂದ್ರದಲ್ಲಿ ನಡೆದ ಗಲಾಟೆ ಮಂಗಳೂರಿನಲ್ಲಿ ಕೋಲಾಹಲ ಸೃಷ್ಟಿಸಿದೆ. ಘಟನೆ ಸಂಬಂಧ ಓರ್ವನ ಬಂಧನವಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಬಂದ್‌ಗೆ ಕರೆ ನೀಡಿ, ಧಾರ್ಮಿಕ ವೈಮನಸ್ಸು ಹರಡಿದ ವ್ಯಕ್ತಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪೊಲೀಸರು ಶಾಂತಿ ಕಾಪಾಡಲು ಮನವಿ ಮಾಡಿದ್ದು, ವದಂತಿಗಳಿಗೆ ಕಿವಿಗೊಡದಂತೆ ತಿಳಿಸಿದ್ದಾರೆ.

ಮುಖ್ಯಾಂಶಗಳು
- ಡಿಜಿಟಲ್ ಸೇವಾ ಕೇಂದ್ರದ ಸಿಬ್ಬಂದಿ ಮತ್ತು ಗ್ರಾಹಕಿ ನಡುವೆ ಸಂಘರ್ಷ
- ಕೋಮುಸಂಘರ್ಷಕ್ಕೆ ತಿರುಗಿದ ಪುತ್ತೂರಿನ ಗಲಾಟೆ
- ಪ್ರಚೋದನೆ ನೀಡಿದವರ ವಿರುದ್ಧ ಎಫ್‌ಐಆರ್
ಮಂಗಳೂರು, ಆಗಸ್ಟ್ 23: ದಕ್ಷಿಣ ಕನ್ನಡ (dakshina kannada) ಜಿಲ್ಲೆಯ ಪುತ್ತೂರು ತಾಲೂಕಿನ ದರ್ಬೆಯಲ್ಲಿರುವ ಡಿಜಿಟಲ್ ಸೇವಾ ಕೇಂದ್ರದಲ್ಲಿ ಸಿಬ್ಬಂದಿ ಹಾಗೂ ಗ್ರಾಹಕಿ ನಡುವೆ ನಡೆದ ಕ್ಷುಲ್ಲಕ ಜಗಳ (Clash) ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ. ಇದಿಗ ಘಟನೆಗೆ ಕೋಮು ಬಣ್ಣ ತಿರುಗಿದ್ದು, ಸಾರ್ವಜನಿಕ ಶಾಂತಿ ಕದಡಲು ಯತ್ನಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಮತ್ತೊಂದೆಡೆ, ಬಂದ್‌ಗೆ ಕರೆ ನೀಡಿದ ಪೋಸ್ಟರ್ ಹಂಚಿಕೊಂಡ ಆರೋಪದಡಿ ಪುತ್ತೂರು ಮಾಜಿ ಬಿಜೆಪಿ ಶಾಸಕ ಸಂಜೀವ ಮಠಂದೂರು ಹೆಸರಿನ ಫೇಸ್‌ಬುಕ್ ಖಾತೆ ಹಾಗೂ ವಾಟ್ಸಾಪ್ ಖಾತೆಯೊಂದರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ನಡೆದಿದ್ದೇನು?
ಶುಕ್ರವಾರ ಸಂಜೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದರ್ಬೆ ಬಳಿ ಸುಳ್ಯದ ಜಾಲ್ಸೂರಿ ಫಾತಿಮತ್ ಮಿಸ್ವಾನ (32) ಎಂಬಾಕೆ ತನ್ನ ಸಹೋದರಿ ಹಾಗೂ ಸಹೋದರರ ಜೊತೆ ಡಿಜಿಟಲ್ ಸೇವಾ ಕೇಂದ್ರಕ್ಕೆ ಬಂದಿದ್ದರು. ಲ್ಯಾಮಿನೇಷನ್ಗೆ ಕೊಟ್ಟಿದ್ದ ದಾಖಲೆ ತಾಂತ್ರಿಕ ಕಾರಣದಿಂದ ಸುಟ್ಟು ಹೋಗಿತ್ತು. ಈ ವೇಳೆ ನಡೆದ ವಾದ ವಿವಾದಲ್ಲಿ ಹೊಡೆದಾಟ ಕೂಡ ನಡೆದಿತ್ತು. ಅಂಗಡಿ ಮಾಲೀಕರಾದ ಅಂಜನ ಪೈ, ಸುದರ್ಶನ್ ಪೈ ಹಾಗೂ ಫಾತಿಮತ್ ಹಾಗೂ ಜೊತೆ ಬಂದಿದ್ದವರ ನಡುವೆ ಮಾರಾಮಾರಿ ನಡೆದಿತ್ತು.
ಇದನ್ನೂ ಓದಿ: ಕಡಬ ತಾಲೂಕಿನ ಕೋಲ್ಪೆಯಲ್ಲಿ ನೈತಿಕ ಪೊಲೀಸ್ಗಿರಿ: 9 ಜನರ ವಿರುದ್ಧ FIR ದಾಖಲು
ಶಾಪ್ನಿಂದ ಹೊರಗೆ ತಲುಪಿದ ಹೊಡೆದಾಟದಲ್ಲಿ ಅಲ್ಲಿ ನೆರೆದಿದ್ದ ಕೆಲವರು ಭಾಗಿಯಾಗಿದ್ದರು. ಸ್ಥಳಕ್ಕೆ ಬಂದ ಪೊಲೀಸರ ಸಮ್ಮಖದಲ್ಲಿ ಹಲ್ಲೆ ನಡೆಸಿದ್ದರು. ಪೊಲೀಸ್ ವಾಹನದಲ್ಲಿ ವ್ಯಕ್ತಿಗಳನ್ನು ಹೊರಗೆಳೆದು ಹಲ್ಲೆ ಮಾಡಲಾಗಿದೆ. ಹೀಗಾಗಿ ಪೊಲೀಸರು ಲಾಠಿ ಚಾರ್ಜ್ ಮಾಡವ ಪರಿಸ್ಥಿತಿ ಕೂಡ ಎದುರಾಗಿತ್ತು. 3 ಪ್ರಕರಣ ದಾಖಲಿಸಿದ ಪೊಲೀಸರು ಸುದರ್ಶನ್ ಪೈ ನನ್ನ ಬಂಧಿಸಿದ್ದರು. ಇದೀಗ ಪ್ರಕರಣ ವಿವಾದಕ್ಕೆ ಕಾರಣವಾಗಿದೆ. ಪೊಲೀಸರು ಒಂದು ಕಡೆ ಮಾತ್ರ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ ಅಂತಾ ಹಿಂದೂ ಸಂಘಟನೆಗಳು ಆರೋಪಿಸಿವೆ. ಗಾಂಜಾ ಅಮಲಿನಲ್ಲಿ ಪೊಲೀಸರ ವಾಹನದ ಮೇಲೆ ದಾಳಿ ಮಾಡಿದವರು ಹಾಗೂ ಅಂಜನಾ ಪೈ ಅವರ ಮೇಲೆ ಹಲ್ಲೆ ಮಾಡಿದವರ ಬಂಧನ ಆಗಬೇಕು. ಇಲ್ಲಾಂದ್ರೆ ನಾಡಿದ್ದು ಮಂಗಳವಾರ ಪುತ್ತೂರು ಬಂದ್‌ಗೆ ಕರೆ ನೀಡುವುದಾಗಿ ಎಚ್ಚರಿಕೆ ನೀಡಿದ್ದರು.
ಬಂದ್‌ಗೆ ಕರೆ ನೀಡುವ ಪೋಸ್ಟರ್ ಹಂಚಿಕೊಂಡಿದ್ದ ವ್ಯಕ್ತಿ ವಿರುದ್ಧ ಎಫ್‌ಐಆರ್
ಇದೇ ವೇಳೆ ಸಾಮಾಜಿಕ ಜಾಲತಾಣಗಳಲ್ಲಿ ಬಂದ್‌ಗೆ ಕರೆ ನೀಡಿದ ಆರೋಪದಡಿ ದಿನೇಶ್ ಪಂಜಿಗ ಎಂಬವರ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ ಕಲಂ 353(2), 57 ಹಾಗೂ 189ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಯ ತನಿಖೆ ಸಂಪೂರ್ಣವಾಗಿ ಸಾಕ್ಷ್ಯಾಧಾರಗಳು ಹಾಗೂ ಕಾನೂನಿನ ಪ್ರಕಾರ ಪಾರದರ್ಶಕವಾಗಿ ನಡೆಯಲಿದ್ದು, ಸಾರ್ವಜನಿಕ ಅಥವಾ ಯಾವುದೇ ಕೋಮು ಒತ್ತಡಕ್ಕೆ ಮಣಿದು ಯಾರನ್ನೂ ಬಂಧಿಸಲು ಸಾಧ್ಯವಿಲ್ಲ ಎಂದು ಎಸ್‌ಪಿ ಅರುಣ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಪುತ್ತೂರಿನಲ್ಲಿ ತಾಲಿಬಾನ್ ಸಂಸ್ಕೃತಿ ನಡೆಯುತ್ತಿದೆ: ನಳೀನ್ ಕುಮಾರ್
ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಬಿಜೆಪಿ ಶಾಸಕ ಸಂಜೀವ ಮಠಂದೂರು ಅವರ ಹೆಸರಿನ “Sanjeeva Matandoor” ಎಂಬ ಫೇಸ್‌ಬುಕ್ ಖಾತೆಯನ್ನು ಹೊಂದಿರುವ ವ್ಯಕ್ತಿಯ ವಿರುದ್ಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಡಿಜಿಟಲ್ ಸೇವಾ ಕೇಂದ್ರದಲ್ಲಿ ನಡೆದ ಘಟನೆಗೆ ಸಂಬಂಧಿಸಿ ಬಂದ್‌ಗೆ ಕರೆ ನೀಡುವ ಪೋಸ್ಟರ್ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ. ಅಂಜನಾ ಪೈ ಆರೋಗ್ಯ ವಿಚಾರಿಸಿದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಪೊಲೀಸ್ ಇಲಾಖೆ ವಿರುದ್ಧ ಹರಿಹಾಯ್ದರು. ‘ಕಳೆದ ಕೆಲ ತಿಂಗಳಿಂದ ಪುತ್ತೂರಿನಲ್ಲಿ ತಾಲಿಬಾನ್ ಸಂಸ್ಕೃತಿ ನಡೆಯುತ್ತಿದೆ’ ಎಂದು ಕಿಡಿಕಾರಿದರು.
ಓರ್ವನ ಬಂಧನ: ಎಸ್ ಹೇಳಿದ್ದಿಷ್ಟು
ಘಟನೆ ಕುರಿತು ಪ್ರತಿಕ್ರಿಯಿಸಿರುವ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್, ‘ ಪ್ರಕರಣ ಸಂಬಂಧ ಈಗಾಗಲೇ ಓರ್ವನನ್ನು ಬಂಧಿಸಲಾಗಿದೆ. ಲಭ್ಯವಿರುವ ಸಿಸಿಟಿವಿ ಹಾಗೂ ವಿಡಿಯೋ ದೃಶ್ಯಾವಳಿಗಳನ್ನು ಪರಿಶೀಲಿಸಿ ತನಿಖೆ ಮುಂದುವರಿಸಲಾಗುತ್ತಿದ್ದು, ಸಾಕ್ಷ್ಯಾಧಾರಗಳ ಆಧಾರದಲ್ಲಿ ಮುಂದಿನ ಕಾನೂನು ಕ್ರಮಕೈಗೊಳ್ಳಲಾಗುವುದು. ಪೊಲೀಸ್ ವಾಹನದೊಳಗೆ ನೌಶಾದ್ ಎಂಬಾತನು ನುಗ್ಗಿ ಅನುಮಾನಾಸ್ಪದ ಕೃತ್ಯ ಎಸಗಿರುವುದು ದೃಶ್ಯಗಳಲ್ಲಿ ಕಂಡುಬಂದಿದ್ದು, ಅದರ ಬಗ್ಗೆಯೂ ತನಿಖೆ ನಡೆಯುತ್ತಿದೆ’ ಎಂದು ಎಸ್‌ಪಿ ತಿಳಿಸಿದರು.
‘ಘಟನೆಗೆ ಕೋಮು ಬಣ್ಣ ಬಳೆಯುವ ಪ್ರಯತ್ನ ಮಾಡಿದರೆ ಕಾನೂನು ಕ್ರಮಕೈಗೊಳ್ಳಲಾಗುವುದು. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡಬಾರದು. ಶಾಂತಿ ಸಭೆ ಕರೆಯಲಾಗಿದ್ದು, ಮಂಗಳವಾರ ಬಂದ್ ನಡೆಸಲು ಯತ್ನಿಸಿದರೆ ಕಾನೂನು ಕ್ರಮಕೈಗೊಳ್ಳಲಾಗುವುದು’ ಎಂದಿದ್ದಾರೆ.
ಇದನ್ನೂ ಓದಿ: 40 ಕಿಮೀ ಚೇಸಿಂಗ್: ಪ್ರಾಣ ಪಣಕ್ಕಿಟ್ಟು ಅಂತಾರಾಜ್ಯ ದನಗಳ್ಳರ ಹೆಡೆಮುರಿ ಕಟ್ಟಿದ ಯಾದಗಿರಿ ಪೊಲೀಸರು!
ಒಟ್ಟಾರೆ ಸಣ್ಣ ವಿವಾದವೊಂದು ಕೋಮು ಬಣ್ಣ ಪಡೆದು ರಾಜಕೀಯ ಸಂಘರ್ಷದ ವೇದಿಕೆಯಾಗಿದೆ. ಪೊಲೀಸ್ ಇಲಾಖೆ ಈ ವಿವಾದದ ಬೆನ್ನಲ್ಲೇ ಖಡಕ್ ನಡೆ ಅನುಸರಿಸಿದ್ದು, ನಿರ್ದಾಕ್ಷಿಣ್ಯ ಕ್ರಮದ ಎಚ್ಚರಿಕೆ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.




