AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾಲ್ವರು ನಾಪತ್ತೆ ಕೇಸ್​ಗೆ ತಿರುವು: ಕೋಟ್ಯಂತರ ರೂ ವಂಚಿಸಿ ನಾಪತ್ತೆಯಾಗಿರುವ ಸ್ನೇಹಿತನ ಹಾದಿ ಹಿಡಿದ್ರಾ ದಂಪತಿ?

Davangere missing family Case: ದಾವಣಗೆರೆಯಲ್ಲಿ ಒಂದೇ ಕುಟುಂಬದ ನಾಲ್ವರು ನಾಪತ್ತೆ ಪ್ರಕರಣಕ್ಕೆ ಹೊಸ ತಿರುವು ಪಡೆದುಕೊಂಡಿದೆ. 2023ರಲ್ಲಿ ಇದೇ ರೀತಿಯ ಒಂದು ಪ್ರಕರಣ ನಡೆದಿತ್ತು. 7.27 ಕೋಟಿ ರೂ ಅವ್ಯವಹಾರ ಮಾಡಿ ವ್ಯಕ್ತಿ ನಾಪತ್ತೆಯಾಗಿದ್ದ. ಅಂದು ನಾಪತ್ತೆಯಾಗಿದ್ದ ವ್ಯಕ್ತಿ, ಇದೀಗ ನಾಪತ್ತೆಯಾಗಿರುವ ರಮೇಶ್‌ಕುಮಾರ್​​​ ಸ್ನೇಹಿತರು. ಹೀಗಾಗಿ ಇದೊಂದು ಚೈನ್ ಲಿಂಕ್ ಶಂಕೆ ವ್ಯಕ್ತವಾಗಿದೆ.

ನಾಲ್ವರು ನಾಪತ್ತೆ ಕೇಸ್​ಗೆ ತಿರುವು: ಕೋಟ್ಯಂತರ ರೂ ವಂಚಿಸಿ ನಾಪತ್ತೆಯಾಗಿರುವ ಸ್ನೇಹಿತನ ಹಾದಿ ಹಿಡಿದ್ರಾ ದಂಪತಿ?
ರಮೇಶ್, ರಮೇಶ್ ಕುಮಾರ್, ಜಯಶೀಲImage Credit source: tv9 kannada
ಬಸವರಾಜ್​ ದೊಡ್ಡಮನಿ, ದಾವಣಗೆರೆ
| Edited By: |

Updated on: Aug 21, 2026 | 4:15 PM

Share

ದಾವಣಗೆರೆ, ಆಗಸ್ಟ್​​ 21: ದಾವಣಗೆರೆ (Davanagere) ನಗರದ ಬನಶಂಕರಿ ಬಡಾವಣೆಯ ಒಂದೇ ಕುಟುಂಬದ ನಾಲ್ವರು ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣಕ್ಕೆ (Missing Family) ಇದೀಗ ರೋಚಕ ತಿರುವು ಸಿಕ್ಕಿದೆ. ಕೋಟ್ಯಂತರ ರೂ ಹಣದ ಅವ್ಯವಹಾರ ನಡೆಸಿ, ಇದೇ ರೀತಿಯಲ್ಲಿ ಈ ಹಿಂದೆ ನಾಪತ್ತೆಯಾಗಿದ್ದ ತನ್ನ ಸ್ನೇಹಿತನ ಹಾದಿಯನ್ನೇ ಹಿಡಿದು ಈ ದಂಪತಿಯೂ ಮಕ್ಕಳೊಂದಿಗೆ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಪ್ರಕರಣ ಸ್ಥಳೀಯರಲ್ಲಿ ಭಾರೀ ಸಂಚಲನ ಮೂಡಿಸಿದೆ.

ಹಳೆಯ ವಂಚನೆಯ ಜಾಲದ ನಂಟು

ದಾವಣಗೆರೆಯ ಬನಶಂಕರಿ ಬಡಾವಣೆ ನಿವಾಸಿ ರಮೇಶಕುಮಾರ್ ಹಾಗೂ ಜಯಶೀಲಾ ದಂಪತಿ ತಮ್ಮಿಬ್ಬರು ಮಕ್ಕಳೊಂದಿಗೆ ಆಗಸ್ಟ್ 14ರಂದು ದಿಢೀರನೇ ನಾಪತ್ತೆಯಾಗಿದ್ದರು. ‘ನಾವು ಎಲ್ಲಾದರೂ ದೂರ ಹೋಗುತ್ತಿದ್ದೇವೆ’ ಎಂದು ಪತ್ರವೊಂದನ್ನು ಬರೆದಿಟ್ಟು ಇಡೀ ಕುಟುಂಬವೇ ಕಣ್ಮರೆಯಾಗಿತ್ತು. ಮೇಲ್ನೋಟಕ್ಕೆ ಇದು ಕೌಟುಂಬಿಕ ಸಮಸ್ಯೆಯಿಂದ ನಡೆದ ಘಟನೆಯಂತೆ ಕಂಡರೂ, ಪೊಲೀಸರ ಆಳವಾದ ತನಿಖೆಯಲ್ಲಿ ಹಳೆಯ ಹೂಡಿಕೆ ವಂಚನೆಯ ಜಾಲದ ನಂಟೊಂದು ಬಯಲಾಗಿದೆ.

7.27 ಕೋಟಿ ರೂ ಅವ್ಯವಹಾರ ಮಾಡಿ ನಾಪತ್ತೆ

ಸದ್ಯ ನಾಪತ್ತೆಯಾಗಿರುವ ರಮೇಶಕುಮಾರ್ ಸ್ನೇಹಿತನಾಗಿದ್ದ ರಮೇಶ್ ಎಂಬಾತ, ‘ಈಶ್ವರಿ ಎಂಟರ್‌ಪ್ರೈಸಸ್’ ಎಂಬ ಸಂಸ್ಥೆಯನ್ನು ಹುಟ್ಟುಹಾಕಿ ಜನರಿಗೆ ವಂಚಿಸಿದ್ದ. ಹೂಡಿಕೆ ಮಾಡಿದ ಹಣಕ್ಕೆ ಪ್ರತಿ ತಿಂಗಳು ಶೇಕಡಾ 4 ರಿಂದ 6 ರಷ್ಟು ಆಕರ್ಷಕ ಲಾಭಾಂಶ ಕೊಡುವುದಾಗಿ ನಂಬಿಸಿ ಬರೋಬ್ಬರಿ ನೂರಕ್ಕೂ ಹೆಚ್ಚು ಜನರಿಂದ 7.27 ಕೋಟಿಗೂ ಅಧಿಕ ಹಣ ಸಂಗ್ರಹಿಸಿದ್ದ. ಬಳಿಕ 2023ರ ಏಪ್ರಿಲ್ 15ರಂದು ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದ. ಇನ್ನೂ ಪತ್ತೆಯಾಗಿಲ್ಲ.

ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ನಾಪತ್ತೆ: ಮನೆಯಲ್ಲಿ ಪತ್ರ ಪತ್ತೆ

ಅಚ್ಚರಿಯೆಂದರೆ, ಇದೀಗ ನಾಪತ್ತೆಯಾಗಿರುವ ರಮೇಶಕುಮಾರ್​​​​ ಕೂಡ ಅಂದು ಹಣ ಕಳೆದುಕೊಂಡಿದ್ದರು. ಸ್ನೇಹಿತ ರಮೇಶ್, ಆತನ ಪತ್ನಿ ಛಾಯಾ ಹಾಗೂ ಸಹೋದರ ಜಗದೀಶ್ ವಿರುದ್ಧ 2023ರ ಜೂನ್ 15ರಂದು ದಾವಣಗೆರೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಸ್ವತಃ ರಮೇಶಕುಮಾರ್ ವಂಚನೆ ದೂರು ದಾಖಲಿಸಿದ್ದರು.

ಚೈನ್ ಲಿಂಕ್ ಶಂಕೆ: ಪೊಲೀಸರ ತೀವ್ರ ಶೋಧ

ಸದ್ಯ ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ನಾಪತ್ತೆ ಆಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಇದು ಹಳೆಯ ವಂಚನೆ ಜಾಲದ ಚೈನ್ ಲಿಂಕ್ ಇರಬಹುದೇ ಅಥವಾ ಇಬ್ಬರೂ ಸ್ನೇಹಿತರು ಮೊದಲೇ ಪ್ಲ್ಯಾನ್​ ಮಾಡಿ ಈ ರೀತಿ ನಾಟಕವಾಡುತ್ತಿದ್ದಾರೆಯೇ ಎಂಬ ಆಯಾಮದಲ್ಲಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮಕ್ಕಳನ್ನೂ ಕರೆದೊಯ್ದು ತಲೆಮರೆಸಿಕೊಂಡಿರುವ ಕುಟುಂಬದ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us