ಹುಬ್ಬಳ್ಳಿ: ಸರ್ಕಾರಿ ನೌಕರಿಗಾಗಿ ಆರು ವರ್ಷದಿಂದ ಕಾದಿದ್ದವರಿಗೆ ಇನ್ನೂ ಸಿಕ್ಕಿಲ್ಲ ನೇಮಕಾತಿ ಪತ್ರ!
ಅಧಿಕಾರಿಗಳು ಮತ್ತು ಸರ್ಕಾರದ ದ್ವಂದ್ವ ನೀತಿಯಿಂದ ಇದೀಗ ಸಾವಿರಕ್ಕೂ ಅಧಿಕ ಜನ, ಸರ್ಕಾರಿ ನೌಕರಿಯಿಂದ ವಂಚಿತರಾಗಿದ್ದಾರೆ. ಅರ್ಜಿ ಹಾಕಿ, ಸರ್ಕಾರಿ ನೌಕರಿಗಾಗಿ ಆರು ವರ್ಷದಿಂದ ಕಾದಿದ್ದವರಿಗೆ ಇದೀಗ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುದ್ದೆ ಕಡಿತ ನಿರ್ಧಾರದಿಂದ ತೀವ್ರ ನಿರಾಶೆಯಾಗಿದೆ. ಆರ್ಥಿಕ ಸಮಸ್ಯೆಯ ನೆಪವೊಡ್ಡಿ ನಿಗಮವು ಹುದ್ದೆಗಳನ್ನು ಕಡಿತ ಮಾಡಿದ್ದು, ಸಾವಿರಾರು ಅಭ್ಯರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ಹುಬ್ಬಳ್ಳಿ, ಜುಲೈ 19: ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (NWKRTC) ಆರ್ಥಿಕ ಸಮಸ್ಯೆಯ ನೆಪವೊಡ್ಡಿ ಹಲವು ಹುದ್ದೆಗಳನ್ನು ಕಡಿತಗೊಳಿಸಿದ್ದು, ಇದರಿಂದಾಗಿ ಸರ್ಕಾರಿ ನೌಕರಿಗಾಗಿ (Govt Jobs) ಆರು ವರ್ಷಗಳಿಂದ ಕಾದು ಕುಳಿತಿದ್ದವರಿಗೆ ನಿರಾಶೆಯಾಗಿದೆ. ಅಭ್ಯರ್ಥಿಗಳು ಈಗ ಪ್ರತಿಭಟನೆಗೆ ಮುಂದಾಗಿದ್ದಾರೆ. ಹುಬ್ಬಳ್ಳಿಯಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಡ್ರೈವರ್, ಕಂಡಕ್ಟರ್ ಆಗಬೇಕು ಅಂತ ಕನಸು ಕಂಡವರು ಸಂಸ್ಥೆಯ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಧಾರವಾಡ (Dharawad), ಬೆಳಗಾವಿ, ಗದಗ, ಬೀದರ್, ಹಾಸನ ಸೇರಿದಂತೆ ರಾಜ್ಯದ ವಿವಿದಡೆಯಿಂದ ಬಂದಿದ್ದ ನೂರಾರು ಅಭ್ಯರ್ಥಿಗಳು ನಿಗಮದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಗಮದಿಂದ ನಮಗೆ ಅನ್ಯಾಯವಾಗುತ್ತಿದೆ, ನ್ಯಾಯಬೇಕು ಎಂದು ಪ್ರತಿಭಟನಾ ನಿರತರು ಆಗ್ರಹಿಸಿದ್ದಾರೆ. ಈ ಅಭ್ಯರ್ಥಿಗಳು ಸಾರಿಗೆ ಸಚಿವರ ಮುಂದೆಯೇ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೂ ಪ್ರಯೋಜನವಾಗಿರಲಿಲ್ಲ.
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಹುದ್ದೆ ಕಡಿತ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿರುವ ಖಾಲಿಯಿದ್ದ 2814 ಚಾಲಕ, ನಿರ್ವಾಹಕ, ಡ್ರೈವರ್ ಕಂ ಕಂಡಕ್ಟರ್ ಹುದ್ದೆಗಳಿಗೆ 2019 ರಲ್ಲಿ ನಿಗಮ ಅರ್ಜಿ ಆಹ್ವಾನಿಸಿತ್ತು. ಅಂದು ಬರೋಬ್ಬರಿ 57 ಸಾವಿರ ಅಭ್ಯರ್ಥಿಗಳು ತಲಾ 600 ರೂಪಾಯಿ ನೀಡಿ ಅರ್ಜಿ ಹಾಕಿದ್ದರು. ನಂತರ ಕೋವಿಡ್ ಬಂದಿದ್ದರಿಂದ, ಎರಡು ವರ್ಷ ನೇಮಕಾತಿ ಪ್ರಕ್ರಿಯೇ ನಡೆದಿರಲಿಲ್ಲ. ನಂತರ ಅಭ್ಯರ್ಥಿಗಳ ದೈಹಿಕ ಪರೀಕ್ಷೆ,ದಾಖಲಾತಿಗಳ ಪರಿಶೀಲನೆ ನಡೆದಿತ್ತು. ಚಾಲನಾ ಪರೀಕ್ಷೆಯನ್ನು ಕೂಡಾ ನಡೆಸಲಾಗಿತ್ತು. ಎಲ್ಲಾ ಹಂತದಲ್ಲಿ ಅರ್ಹತೆ ಪಡೆದಿದ್ದ ಸರಿಸುಮಾರು 20 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು ಡ್ರೈವರ್, ಕಂಡಕ್ಟರ್ ಆಗುತ್ತೇವೆ ಎಂದು ಕನಸು ಕಂಡಿದ್ದರು. ಆದರೆ ಇದೀಗ ನಿಗಮದ ಚೆಲ್ಲಾಟದಿಂದ ಸಾವಿರಾರು ಅಭ್ಯರ್ಥಿಗಳ ಕನಸು ನುಚ್ಚು ನೂರಾಗುತ್ತಿದೆ. ಯಾಕೆಂದರೆ ನಿಗಮವು 2814 ಹುದ್ದೆಗಳನ್ನು ಕಡಿತ ಮಾಡಿ, ಕೇವಲ 1000 ಹುದ್ದೆಗಳಿಗೆ ಮಾತ್ರ ಇದೀಗ ಭರ್ತಿ ಮಾಡಿಕೊಂಡಿದೆ.
ರಾಜ್ಯದಲ್ಲಿ ಕೋವಿಡ್ ಉಂಟಾದ ನಂತರ ಆರ್ಥಿಕ ನೆಪವೊಡ್ಡಿ ಇಲಾಖೆ, ಕೇವಲ ಸಾವಿರ ಹುದ್ದೆಗಳನ್ನು ಮಾತ್ರ ಭರ್ತಿ ಮಾಡಿಕೊಂಡಿದೆ. ಎರಡನೇ ಲಿಸ್ಟ್ ನಲ್ಲಿ ತಮ್ಮ ಹೆಸರು ಬರುತ್ತೆ ಎಂದು ಕಾದಿದ್ದವರಿಗೆ ಹುದ್ದೆಗಳನ್ನು ಕಡಿತ ಮಾಡಿದ್ದು ಶಾಕ್ ನೀಡಿದೆ. ಅವರ ಆಕ್ರೋಶಕ್ಕೂ ಕಾರಣವಾಗಿದೆ.
ಅಭ್ಯರ್ಥಿಗಳು ಹೇಳುವುದೇನು?
ಈಗಾಗಲೇ ನಾವು ಅರ್ಜಿ ಹಾಕಿ ಆರು ವರ್ಷವಾಗಿದೆ. ನಾವು ಎಲ್ಲಾ ರೀತಿಯಿಂದಲು ಅರ್ಹತೆ ಹೊಂದಿದ್ದೇವೆ. ಇದೀಗ ಬರೋಬ್ಬರಿ 1814 ಹುದ್ದೆಗಳನ್ನು ಕಡಿತ ಮಾಡುವುದರಿಂದ, 1814 ಅಭ್ಯರ್ಥಿಗಳಿಗೆ ಅನ್ಯಾಯವಾಗುತ್ತದೆ. ನಿಗಮ ಮತ್ತು ಸಾರಿಗೆ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿಯಾಗುತ್ತಿದೆ. ಅವರು ನಮ್ಮ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಮೊದಲೇ ಅಧಿಸೂಚನೆ ಹೊರಡಿಸಿದಂತೆ ಎಲ್ಲಾ ಹುದ್ದೆಗಳಿಗೆ ನೇಮಕಾತಿ ಮಾಡಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಸಾರ್ವಜನಿಕವಾಗಿ ಕೈ ಎತ್ತಿದ್ದ ಸಿಎಂ: ಅವಮಾನದಿಂದ ರಾಜೀನಾಮೆಗೆ ಮುಂದಾಗಿದ್ದ ಪೊಲೀಸ್ ಅಧಿಕಾರಿಗೆ ಜಾಕ್‌ಪಾಟ್
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಶುಕ್ರವಾರ ಹುಬ್ಬಳ್ಳಿಗೆ ಬಂದಾಗ ನಿಗಮದ ಕಚೇರಿ ಮುಂದೆಯೇ ಪ್ರತಿಭಟನೆ ನಡೆಸಿ, ತಮ್ಮ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದ್ದರು. ಈ ಸಮಯದಲ್ಲಿ ಪ್ರತಿಭಟನಾ ನಿರತರ ಬಳಿ ಆಗಮಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ನಿಮ್ಮ ಜೊತೆ ನಾನಿದ್ದೇನೆ ಎಂದು ಭರವಸೆ ನೀಡಿದ್ದಾರೆ. ಇದೀಗ ಸಾವಿರ ಹುದ್ದೆಗಳನ್ನು ಮತ್ತೆ ಭರ್ತಿ ಮಾಡಿಕೊಳ್ಳಲಾಗುತ್ತಿದ್ದು, ಅದರಲ್ಲಿ ನೊಂದವರಿಗೆ ಅವಕಾಶ ನೀಡುವ ಬಗ್ಗೆ ಕಾನೂನು ತಜ್ಞರ ಜೊತೆ ಚರ್ಚೆ ಮಾಡುತ್ತಿರುವುದಾಗಿ ಹೇಳಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ