ಗದಗ: ಒಣ ಮೆಣಸಿನಕಾಯಿ ಬೆಲೆ ಪಾತಾಳಕ್ಕೆ ಕುಸಿತ; ಅನ್ನದಾತರು ಕಂಗಾಲು

ಭೀಕರ ಬರಗಾಲದಲ್ಲೂ ಕೆಲ ರೈತರು ಕೆಂಪು ಸುಂದರಿ ಒಣ ಮೆಣಸಿನಕಾಯಿ ಭರ್ಜರಿಯಾಗಿ ಬೆಳೆದಿದ್ದರು. ಇಳುವರಿ ಕಡಿಮೆ ಇರೋದ್ರಿಂದ ಮಾರ್ಕೆಟ್​ನಲ್ಲಿ ಆರಂಭದಲ್ಲಿ ಬಂಗಾರ ಬೆಲೆ ಇತ್ತು. ಆದ್ರೆ, ಈಗ ಏಕಾಏಕಿ ಬೆಲೆ ಪಾತಾಳಕ್ಕೆ ಕುಸಿದಿದ್ದು, ಗದಗ ರೈತರು ಸಂಕಷ್ಟ ಎದುರಿಸುತ್ತಿದ್ದಾರೆ.

ಗದಗ: ಒಣ ಮೆಣಸಿನಕಾಯಿ ಬೆಲೆ ಪಾತಾಳಕ್ಕೆ ಕುಸಿತ; ಅನ್ನದಾತರು ಕಂಗಾಲು
ಒಣ ಮೆಣಸಿನಕಾಯಿ ಬೆಲೆ ಕುಸಿತ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Mar 17, 2024 | 4:32 PM

ಗದಗ, ಮಾ.17: ಜಿಲ್ಲೆಯಲ್ಲಿ ಈ ಬಾರಿ ಭೀಕರ ಬರಗಾಲ ಎದುರಾಗಿದೆ. ಆದರೂ ಬರಗಾಲದ ನಡುವೆ ರೈತರು ಟ್ರ್ಯಾಂಕರ್ ಮೂಲಕ ನೀರು ಹಾಕಿ ಮೆಣಸಿನಕಾಯಿ(Chilli) ಬೆಳೆದಿದ್ದಾರೆ. ಗದಗ(Gadag) ಜಿಲ್ಲೆಯ ಏಳು ತಾಲೂಕಿನಲ್ಲಿ ಅತೀ ಹೆಚ್ಚು ಬ್ಯಾಡಗಿ ಮೆಣಸಿನಕಾಯಿ ಬೆಳೆಯನ್ನು ಬೆಳೆಯಲಾಗುತ್ತದೆ. ಬ್ಯಾಡಗಿ ಮಾರುಕಟ್ಟೆಗೆ ಹೆಚ್ಚಿನ ಮೆಣಸಿನಕಾಯಿ ಗದಗ ಜಿಲ್ಲೆಯದ್ದೇ ಆಗಿರುತ್ತದೆ. ಕಳೆದ ಹದಿನೈದು ದಿನಗಳ ಹಿಂದೆ ಒಂದು ಕ್ವಿಂಟಾಲ್ ಒಣ ಮೆಣಸಿನಕಾಯಿಗೆ 60 ರಿಂದ 70 ಸಾವಿರಕ್ಕೂ ಹೆಚ್ಚು ಬೆಲೆಗೆ ಮಾರಾಟವಾಗಿತ್ತು. ಈವಾಗ ದಿಢೀರ್ ಒಣ ಮೆಣಸಿನಕಾಯಿ ಬೆಲೆ ಪಾತಾಳಕ್ಕೆ ಇಳದಿದ್ದು, ಒಂದು ಕ್ವಿಂಟಲ್ ಒಣ‌‌ ಮೆಣಸಿನಕಾಯಿಗೆ 10 ರಿಂದ 12 ಸಾವಿರ ರೂಪಾಯಿ ಮಾರಾಟವಾಗುತ್ತಿವೆ.

ಸರ್ಕಾರ ಬೆಂಬಲ ಬೆಲೆ‌ ನೀಡಿ ಒಣ ಮೆಣಸಿನಕಾಯಿ ಖರೀದಿಗೆ ಆಗ್ರಹ

ಇದರಿಂದ ಒಣ ಮೆಣಸಿನಕಾಯಿ ರಕ್ಷಣೆ ಮಾಡೋದು ರೈತರಿಗೆ ಸವಾಲಾಗಿದೆ. ಮನೆಯಲ್ಲಿಟ್ಟರೆ ಇಲಿ, ಹುಳುಗಳ ಕಾಟದ ಜೊತೆಗೆ, ಒಣ‌‌ ಮೆಣಸಿನಕಾಯಿ ಬಣ್ಣ ಬದಲಾಗಿ, ದರ ಮತ್ತಷ್ಟು ಕುಸಿತವಾಗುತ್ತದೆ. ಹೀಗಾಗಿ ಒಂದು ಚೀಲಕ್ಕೆ ಒಂದು ತಿಂಗಳಿಗೆ 30 ರೂಪಾಯಿ ಹಣ ಕೊಟ್ಟು ಕೋಲ್ಡ್‌ ಸ್ಟೋರೇಜ್​ನಲ್ಲಿ ಸ್ಟಾಕ್ ಮಾಡುತ್ತಿದ್ದಾರೆ. ಜಿಲ್ಲೆಯಾದ್ಯಂತ ಮೂರು ಕೋಲ್ಡ್‌ ಸ್ಟೋರೇಜ್ ಘಟಕಗಳಿದ್ದು, ಆ ಪೈಕಿ ಎರಡು ಸಂಪೂರ್ಣವಾಗಿ ಭರ್ತಿಯಾಗಿವೆ. ಇನ್ನೊಂದು ಎರಡು ದಿನದಲ್ಲಿ ಫುಲ್ ಆಗಲಿದೆ. ಹೀಗಾಗಿ ಮುಂದೆ ಎಲ್ಲಿ ಸ್ಟಾಕ್ ಮಾಡೋದು ಎನ್ನುವ ಚಿಂತೆಯಲ್ಲಿ ರೈತರು ಇದ್ದಾರೆ. ಕೂಡಲೇ ಸರ್ಕಾರ ಬೆಂಬಲ ಬೆಲೆ‌ ನೀಡಿ ಒಣ ಮೆಣಸಿನಕಾಯಿ ಖರೀದಿ ಮಾಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ.

ಇದನ್ನೂ ಓದಿ: ಒಣ ಮೆಣಸಿನಕಾಯಿ ಮಾರಾಟದಲ್ಲೂ ಕಲಬೆರಕೆ ಅಪಾಯ! ಅದಕ್ಕೇ ಮೇಳ ಆಯೋಜನೆ, ಕೆಂಪು ಸುಂದರಿಗೆ ಇದೆ ಬಂಗಾರದ ಬೆಲೆ

ಇನ್ನು ಒಂದು ಎಕರೆ ಒಣ ಮೆಣಸಿನಕಾಯಿ ಬೆಳೆಯಲು 1 ರಿಂದ 2 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ. ‌ಇವಾಗ ಒಂದು ಕ್ವಿಂಟಲ್ ಒಣ‌ ಮೆಣಸಿನಕಾಯಿಗೆ 10 ರಿಂದ‌ 12 ಸಾವಿರ ರೂಪಾಯಿ ಮಾರಾಟವಾಗುತ್ತಿವೆ‌. ಹೀಗಾಗಿ ಕೋಲ್ಡ್‌ ಸ್ಟೋರೇಜ್​ನಲ್ಲಿ ಇಟ್ಟು ಮುಂದೆ ಬೆಲೆ ಬಂದಾಗ ಮಾರಾಟ ಮಾಡಬೇಕು ಎನ್ನುವ ಲೆಕ್ಕಾಚಾರದಲ್ಲಿ ರೈತರು ಇದ್ದಾರೆ. ಆದ್ರೆ, ಟ್ರ್ಯಾಕ್ಟರ್ ಮೂಲಕ ಕೋಲ್ಡ್‌ ಸ್ಟೋರೇಜ್ ಬರೋದು, ಪುನಃ ಮತ್ತೆ ಮಾರಾಟಕ್ಕೆ ಮತ್ತೊಮ್ಮೆ ಮೆಣಸಿನಕಾಯಿ ತರೋದರಿಂದ ಸಾಗಾಣಿಕೆ ವೆಚ್ಚ ಕೂಡ ಹೆಚ್ಚಾಗುತ್ತದೆ. ಜಿಲ್ಲೆಯ ಎರಡು ಕೋಲ್ಡ್‌ ಸ್ಟೋರೇಜ್ ಭರ್ಗಿಯಾಗಿವೆ. ಮತ್ತೊಂದು ಬಹುತೇಕ ಭರ್ತಿ ಆಗ್ತಾಯಿದೆ. ಹೀಗಾಗಿ ರೈತರು ತಾ ಮುಂದೆ ನಾ ಮುಂದೆ ಅಂತಾ ಮುಂಜಾನೆಯಿಂದ ಕೋಲ್ಡ್‌ ಸ್ಟೋರೇಜ್‌ಗೆ ಟ್ರ್ಯಾಕ್ಟರ್​ನಲ್ಲಿ ಒಣ ಮೆಣಸಿನಕಾಯಿ ತಂದು ಸರತಿ ಸಾಲಿನಲ್ಲಿ ನಿಲ್ಲುವ ಸ್ಥಿತಿ ನಿರ್ಮಾಣವಾಗಿದೆ.

ಮೊದಲೇ ರೈತರು ಸಾಲ ಸೂಲ‌ ಮಾಡಿ ಮೆಣಸಿನಕಾಯಿ ಬೆಳೆದಿದ್ದಾರೆ. ಇವಾಗ ಮೆಣಸಿನಕಾಯಿ ಮಾರಾಟ ಮಾಡಿ ಸಾಲದಿಂದ ಮುಕ್ತಿಯಾಗಬೇಕು ಅಂದರೆ, ಬೆಲೆ ಇಲ್ಲ. ಕೋಲ್ಡ್‌ ಸ್ಟೋರೇಜ್ ಹಣಕೊಟ್ಟು ಮೆಣಸಿನಕಾಯಿ ಇಡುವ ಸ್ಥಿತಿ ನಿರ್ಮಾಣವಾಗಿದೆ. ಮುಂದೆ ಸೂಕ್ತವಾದ ಬೆಲೆ ಸಿಗದಿದ್ರೆ, ಅನ್ನದಾತ ಮತ್ತಷ್ಟು ಆರ್ಥಿಕ ಹೊರೆ ಎದುರಿಸಬೇಕಾಗುತ್ತದೆ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಂಡು, ಒಣ‌‌ ಮೆಣಸಿನಕಾಯಿಗೆ ಬೆಂಬಲ ಬೆಲೆ ಘೋಷಣೆ ಮಾಡಿ, ರೈತರ ನೆರವಿಗೆ ಧಾವಿಸಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ