Belur R Tirthankara: ಹೊಯ್ಸಳರ ನಾಡಿನ ಅಪ್ಪಟ ಕನ್ನಡ ಅಭಿಮಾನಿ! ಅವರ ವೈಶಿಷ್ಟ್ಯಗಳನ್ನು ನೋಡಿದರೆ ಬೆರಗಾಗುತ್ತೀರಾ
Kannada Rajyotsava: ತೀರ್ಥಂಕರ ಅವರ ಕನ್ನಡ ಪ್ರೀತಿಗೆ ಹಲವರು ಮಾರು ಹೋಗಿದ್ದಾರೆ. ಕಳೆದ ಹಲವು ವರ್ಷಗಳಿಂದ ತೀರ್ಥಂಕರ ಅವರು ಕನ್ನಡದ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಇವರಿಗೆ ಆಂಗ್ಲಭಾಷೆ ಗೊತ್ತಿದ್ದರೂ, ಕನ್ನಡ ಹೊರತಾಗಿ ಬೇರೆ ಭಾಷೆ ಮಾತನಾಡುವುದಿಲ್ಲ.
ಕರುನಾಡಿನ ಸಮಸ್ತ ಜನರ ತಾಯಿ ಭಾಷೆ ಕನ್ನಡ. ಹಿರಿತನದ ವಿಷಯ ಬಂದಾಗ ಮೊದಲು ನೆನಪಾಗುವುದು ಹಾಸನ ಜಿಲ್ಲೆ (Hassan) ಬೇಲೂರು ತಾಲ್ಲೂಕಿನ ಹಲ್ಮಿಡಿ ಗ್ರಾಮ. ಏಕೆಂದರೆ ಈ ಗ್ರಾಮ ಕನ್ನಡದ ಮೊದಲ ಹಲ್ಮಿಡಿ ಶಿಲಾ ಶಾಸನವನ್ನು ಕೊಡುಗೆಯಾಗಿ ನೀಡಿದೆ. ಅಷ್ಟೇ ಅಲ್ಲ, ಕನ್ನಡಕ್ಕೆ ಶಾಸ್ತ್ರೀಯ ಮಾನ್ಯತೆ ಕೂಡ ದೊರೆತಿರುವುದು ಈ ಕಾರಣದಿಂದಲೇ. ಇಂತಹ ಬೇಲೂರಿನಲ್ಲಿ ಜೀವ ಕನ್ನಡ, ಬದುಕು ಕನ್ನಡ ಎನ್ನುವ ಅಪ್ಪಟ ಕನ್ನಡದ ಅಭಿಮಾನಿಯೊಬ್ಬರು (Kannada Fan) ಇದ್ದಾರೆ. ಇವರು ಕನ್ನಡ ಭಾಷೆಯನ್ನು ಪ್ರೀತಿಸಿ ಆರಾಧಿಸುವ ಪರಿಯೇ ಬೇರೆ! ಯಾರೀ ಕನ್ನಡದ ಆರಾಧಕ ಅಂತೀರಾ? ಈ ಸ್ಟೋರಿ ನೋಡಿ..
ಇವರ ಹೆಸರು ಬಿ. ಆರ್. ತೀರ್ಥಂಕರ (Belur R Tirthankara). ವಯಸ್ಸು 61 ದಾಟಿದ್ದರೂ ಕನ್ನಡವೇ (Kannada) ನನ್ನ ಉಸಿರು, ಬದುಕು ಎಂದುಕೊಂಡಿರುವ ಇವರು ನಿತ್ಯವೂ ಕನ್ನಡ ಆರಾಧನೆ ಮಾಡುತ್ತಾ ಕನ್ನಡ ಭಾಷೆಯ ಪ್ರಚಾರ ಮಾಡುತ್ತಿದ್ದಾರೆ. ಅದರಲ್ಲೂ ಕನ್ನಡ ರಾಜ್ಯೋತ್ಸವ (Kannada Rajyotsava) ಆಚರಣೆಯಾಗುವ ನವೆಂಬರ್ ತಿಂಗಳು ಬಂತೆಂದರೆ ಸಾಕು, ಇವರ ಮನೆ, ಮನ, ವ್ಯವಹಾರ ಬದುಕು ಎಲ್ಲವೂ ಕನ್ನಡಮಯವಾಗಿ ಬಿಡುತ್ತೆ. ಮನೆಯ ಬಣ್ಣವೂ ಕೆಂಪು ಮತ್ತು ಹಳದಿ. ಇವರ ಅಂಗಡಿಯಲ್ಲಿ ಮಾರಾಟವಾಗುವ ಎಲ್ಲಾ ವಸ್ತುಗಳ ಬಣ್ಣವೂ ಕೂಡ ಹಳದಿ ಮತ್ತು ಕೆಂಪು. ಅಷ್ಟೇ ಏಕೆ ಇವರು ಧರಿಸುವ ಉಡುಪಿನ ಬಣ್ಣ, ಹಣೆಗೆ ಇಡುವುದು ಅರಿಶಿನ, ಕುಂಕುಮ. ಬಳಸುವ ಪೆನ್ನು ಹಳದಿ ಕೆಂಪು ಎಂಬುದು ವಿಶೇಷ.
ತೀರ್ಥಂಕರ ಅವರ ಕನ್ನಡ ಪ್ರೀತಿಗೆ ಹಲವರು ಮಾರು ಹೋಗಿದ್ದಾರೆ. ಕಳೆದ ಹಲವು ವರ್ಷಗಳಿಂದ ತೀರ್ಥಂಕರ ಅವರು ಕನ್ನಡದ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಇವರಿಗೆ ಆಂಗ್ಲಭಾಷೆ ಗೊತ್ತಿದ್ದರೂ, ಕನ್ನಡ ಹೊರತಾಗಿ ಬೇರೆ ಭಾಷೆ ಮಾತನಾಡುವುದಿಲ್ಲ. ಎಲ್ಲರೂ ಕನ್ನಡ ಕಲಿತು ಮಾತನಾಡಬೇಕು ಎನ್ನೋದು ಇವರ ಬಯಕೆ. ಬೇಲೂರು ಪಟ್ಟಣದಲ್ಲಿರುವ ಇವರ ಅಂಗಡಿಯ ಎಲ್ಲಾ ವಸ್ತುಗಳು ಕನ್ನಡ ಬಾವುಟದ ಬಣ್ಣದಲ್ಲೇ.
ಸುಮಾರು ನಾಲ್ಕು ಲಕ್ಷ ರೂ. ಹಣ ಹಾಕಿ, ಎರಡೇ ಬಣ್ಣ ಇರುವ ವಸ್ತುಗಳನ್ನು ಖರೀದಿ ಮಾಡುತ್ತಾರೆ. ಕನ್ನಡ ರಾಜ್ಯೋತ್ಸವ ಆಚರಣೆಗೆ ಒಂದು ವಾರ ಇರುವಾಗಲೇ ಬೇಕಾದ ವಸ್ತುಗಳನ್ನು ಖರೀದಿಸಿ ಆಕರ್ಷಕ ವಾಗಿ ಜೋಡಿಸುತ್ತಾರೆ. ನವೆಂಬರ್ ತಿಂಗಳಿನಲ್ಲಿ 100 ರೂ ವಸ್ತು ಖರೀದಿ ಮಾಡಿದರೆ ಶೇ. 20 ರಷ್ಟು, 200 ರೂ ವಸ್ತು ಖರೀದಿಸಿದರೆ ಶೇ. 40 ರಷ್ಟು ರಿಯಾಯಿತಿ ನೀಡಿ ಮಾರಾಟ ಮಾಡುತ್ತಾ ಕನ್ನಡದ ಮೇಲಿನ ತಮ್ಮ ಅಭಿಮಾನ ಮೆರೆಯುತ್ತಾರೆ.
ಇಲ್ಲಿನ ಕನ್ನಡಿಗರಿಗೆ, ರೈತರಿಗೆ ಅನುಕೂಲವಾಗುವ ಗೃಹ ಹಾಗೂ ಕೃಷಿ ಬಳಕೆ ವಸ್ತುಗಳನ್ನಷ್ಟೇ ತೀರ್ಥಂಕರ ಮಾರಾಟ ಮಾಡುತ್ತಾರೆ. ಕನ್ನಡ ಬಾವುಟದ ಬಣ್ಣದಲ್ಲೇ ಮನೆ ಕಟ್ಟಬೇಕು ಎಂಬ ಅವರ ಕನಸು ಐದು ವರ್ಷಗಳ ಹಿಂದೆ ನನಸಾಗಿದೆ. ಇವರ ಮನೆಯ ಹೆಸರು, ಭಾವಚಿತ್ರ ಸೇರಿದಂತೆ ಎಲ್ಲ ಹೆಸರು ಕನ್ನಡದಲ್ಲೇ ಇವೆ.
ಕನ್ನಡ ಎಂದರೆ ಇವರಿಗೆ ಪಂಚಪ್ರಾಣ. ಎಲ್ಲರು ಕನ್ನಡದಲ್ಲಿ ವ್ಯವಹರಿಸಲು ಪ್ರೇರೇಪಿಸುವ ಮೂಲಕ ಅನೇಕರಿಗೆ ಇವರು ಮಾದರಿಯಾಗಿದ್ದಾರೆ. ತೀರ್ಥಂಕರರ ಬೈಕ್ ಕೂಡ ಕನ್ನಡ ಬಾವುಟದಿಂದ ಅಲಂಕೃತವಾಗಿದೆ. ನವೆಂಬರ್ ಮಾಸದಲ್ಲಿ ಕನ್ನಡದಲ್ಲಿ ಬದುಕಿ ಆರಾಧಿಸಿ ವ್ಯವಹರಿಸೋ ಇವರ ಕನ್ನಡ ಅಭಿಮಾನಕ್ಕೆ ಜನರೂ ಫಿದಾ ಆಗಿದ್ದಾರೆ ಎನ್ನುತ್ತಾರೆ ತೀರ್ಥಂಕರರೊಬ್ಬರ ಅಭಿಮಾನಿ ಯದು.
ಒಟ್ನಲ್ಲಿ ತೀರ್ಥಂಕರ ಅವರು ಅಪ್ಪಟ ಕನ್ನಡ ಅಭಿಮಾನಿ. ಇವರು ಮಾತೃ ಭಾಷೆಯ ಮೇಲಿಟ್ಟಿರುವ ಅಪಾರವಾದ ಗೌರವ, ಪ್ರೀತಿ ಮೆಚ್ಚಿ ಈ ಬಾರಿ ಇವರಿಗೆ ಬೇಲೂರು ತಾಲೂಕು ಆಡಳಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಹಿಂದೆ ಜಿಲ್ಲಾಡಳಿತದಿಂದಲೂ ಗಣರಾಜ್ಯೋತ್ಸವ ದಿನದಂದು ಇವರಿಗೆ ಸನ್ಮಾನಿಸಿ ಗೌರವಿಸಲಾಗಿದೆ.
ಇವರು ಕನ್ನಡ ಭಾಷೆ, ನೆಲ, ಜಲದ ಬಗ್ಗೆ ಇಟ್ಟಿರುವ ಅಭಿಮಾನ, ಪ್ರೀತಿ ಎಂತಹದು ಎಂಬುದಕ್ಕೆ ಇವರ ಮನೆ, ಅಂಗಡಿ ನೋಡಿದರೆ ತಿಳಿಯಲಿದೆ. ಇವರು ವರನಟ ಡಾ. ರಾಜ್ ಕುಮಾರ್ ಅವರ ಅಭಿಮಾನಿಯಾಗಿದ್ದು ಹಲವು ಪ್ರಶಸ್ತಿ ಲಭಿಸಿವೆ. ತೀರ್ಥಂಕರ ಅವರ ಭಾಷಾಭಿಮಾನ ನಿಜಕ್ಕೂ ಶ್ಲಾಘನೀಯವಾದದ್ದು. (ವರದಿ: ಮಂಜುನಾಥ್ ಕೆ.ಬಿ. ಟಿವಿ 9, ಹಾಸನ)