ಹುಬ್ಬಳ್ಳಿಯಲ್ಲಿ ಇನ್ಫೋಸಿಸ್ ಅಡ್ವಾನ್ಸ್ಡ್ ಟೆಕ್ ಸೆಂಟರ್ ಅನಾವರಣ: ಎಐ, ಸೈಬರ್ ಭದ್ರತೆ ಮೇಲೆ ನಿಗಾ
ಇನ್ಫೋಸಿಸ್ ಸಂಸ್ಥೆ ಹುಬ್ಬಳ್ಳಿಯಲ್ಲಿ ಅತ್ಯಾಧುನಿಕ ಎಐ, ಸೈಬರ್ ಸೆಕ್ಯುರಿಟಿ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟಿಸಿದೆ. ಸಚಿವರಾದ ಎಂ.ಬಿ. ಪಾಟೀಲ್ ಮತ್ತು ಪ್ರಿಯಾಂಕ್ ಖರ್ಗೆ ಈ ಕೇಂದ್ರವನ್ನು ಉದ್ಘಾಟಿಸಿದ್ದು, ಉತ್ತರ ಕರ್ನಾಟಕದ ಐಟಿ ಅಭಿವೃದ್ಧಿಗೆ ಇದು ಮಹತ್ವದ ಕೊಡುಗೆ ಎಂದು ಹೇಳಿದ್ದಾರೆ.

ಹುಬ್ಬಳ್ಳಿ, ಆಗಸ್ಟ್ 07: ಇನ್ಫೋಸಿಸ್ (Infosys) ಸಂಸ್ಥೆ ಹುಬ್ಬಳ್ಳಿಯಲ್ಲಿ ಅತ್ಯಾಧುನಿಕ ಎಐ (AI), ಸೈಬರ್ ಸೆಕ್ಯುರಿಟಿ ಮತ್ತು ಸ್ಪೇಸ್‌ಟೆಕ್ ಕೇಂದ್ರವನ್ನು ಪ್ರಾರಂಭಿಸಿದೆ. ಈ ಅತ್ಯಾಧುನಿಕ ಕೇಂದ್ರವನ್ನು ಕರ್ನಾಟಕದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳು ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂಬಿ ಪಾಟೀಲ್ ಮತ್ತು ಐಟಿ -ಬಿಟಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ಉದ್ಘಾಟಿಸಿದರು. ‘ಇನ್ಫೋಸಿಸ್ ಲಿವಿಂಗ್ ಲ್ಯಾಬ್ಸ್’ ಹುಬ್ಬಳ್ಳಿ -ಧಾರವಾಢ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ಇನ್ನಷ್ಟು ಐಟಿ ಕಂಪೆನಿಗಳು ನೆಲಗೊಳ್ಳಲು ಪ್ರೇರಣೆ ಆಗಲಿದೆ.
ಹುಬ್ಬಳ್ಳಿಯಲ್ಲಿ ಪ್ರಾರಂಭವಾಗಿರುವ ಈ ಅತ್ಯಾಧುನಿಕ ಕೇಂದ್ರವು ಎಐ, ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಭದ್ರತೆ, ಎಂಜಿನಿಯರಿಂಗ್ ಸೇವೆಗಳು, ಎಸ್ಎಪಿ ಮತ್ತು ಬಾಹ್ಯಾಕಾಶ ತಂತ್ರಜ್ಞಾನದಂತಹ ಪ್ರಮುಖ ಕ್ಷೇತ್ರಗಳಲ್ಲಿ ಸುಧಾರಿತ ಡಿಜಿಟಲ್ ಪರಿಹಾರಗಳನ್ನು ಒದಗಿಸುವ ನಿಟ್ಟಿನಲ್ಲಿ ಗಮನಹರಿಸುತ್ತದೆ ಎಂದು ಇನ್ಫೋಸಿಸ್ ತಿಳಿಸಿದೆ.
ಕರ್ನಾಟಕದ ಐಟಿ ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲು: ಎಂಬಿ ಪಾಟೀಲ್
ಈ ಬಗ್ಗೆ ಟ್ವೀಟ್ ಮಾಡಿರುವ ಸಚಿವ ಎಂಬಿ ಪಾಟೀಲ್, ಇನ್ಫೋಸಿಸ್ ಹುಬ್ಬಳ್ಳಿ ಡೆವಲಪ್ ಮೆಂಟ್ ಸೆಂಟರ್ ಉದ್ಘಾಟನೆ ಉತ್ತರ ಕರ್ನಾಟಕದ ಐಟಿ ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲು. ಇನ್ಫೋಸಿಸ್ನ ಹುಬ್ಬಳ್ಳಿ ಕ್ಯಾಂಪಸ್ನಲ್ಲಿ ಸುಧಾರಿತ AI, ಸೈಬರ್ ಭದ್ರತೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟಿಸಲು ಸಂತೋಷವಾಯಿತು ಎಂದಿದ್ದಾರೆ.
ಸಚಿವ ಎಂಬಿ ಪಾಟೀಲ್ ಟ್ವೀಟ್
ಇನ್ಫೋಸಿಸ್ ಹುಬ್ಬಳ್ಳಿ ಡೆವಲಪ್ ಮೆಂಟ್ ಸೆಂಟರ್ ಉದ್ಘಾಟನೆ ಉತ್ತರ ಕರ್ನಾಟಕದ ಐಟಿ ಪ್ರಯಾಣದಲ್ಲಿ ಪ್ರಮುಖ ಮೈಲಿಗಲ್ಲು!
ಇನ್ಫೋಸಿಸ್ ನ ಹುಬ್ಬಳ್ಳಿ ಕ್ಯಾಂಪಸ್ ನಲ್ಲಿ ಸುಧಾರಿತ AI, ಸೈಬರ್ ಭದ್ರತೆ ಮತ್ತು ಬಾಹ್ಯಾಕಾಶ ತಂತ್ರಜ್ಞಾನ ಕೇಂದ್ರವನ್ನು ಉದ್ಘಾಟಿಸಲು ಸಂತೋಷವಾಯಿತು.
ಕೆಲವೇ ವರ್ಷಗಳ ಹಿಂದೆ 200 ಉದ್ಯೋಗಿಗಳಿದ್ದ ಕ್ಯಾಂಪಸ್ ನಲ್ಲಿ… pic.twitter.com/D90PCmXM6M
— M B Patil (@MBPatil) August 6, 2025
ಕೆಲವೇ ವರ್ಷಗಳ ಹಿಂದೆ 200 ಉದ್ಯೋಗಿಗಳಿದ್ದ ಕ್ಯಾಂಪಸ್ನಲ್ಲಿ ಇಂದು 1,000 ಕ್ಕೂ ಹೆಚ್ಚು ತಂತ್ರಜ್ಞರನ್ನು ಹೊಂದುವ ಮಟ್ಟಕ್ಕೆ ವಿಸ್ತಾರಗೊಂಡಿರುವುದು ಶ್ಲಾಘನೀಯ ಬೆಳವಣಿಗೆ. ಸಂಸ್ಥಾಪಕರಾದ ಶ್ರೀ ನಾರಾಯಣ ಮೂರ್ತಿ ಮತ್ತು ಶ್ರೀಮತಿ ಸುಧಾ ಮೂರ್ತಿಯವರು ಉತ್ತರಕರ್ನಾಟಕದವರಾಗಿರುವುದು, ಈ ಭಾಗದ ಯುವ ಪ್ರತಿಭೆಗಳಿಗೆ ಉದ್ಯೋಗ ಅವಕಾಶಗಳನ್ನು ಸೃಷ್ಟಿಸಿಕೊಡುವ ನಿಟ್ಟಿನಲ್ಲಿ ಈ ಕ್ಯಾಂಪಸ್ ಸ್ಥಾಪಿಸಿರುವುದು ಗೌರವಾನ್ವಿತ ಸಂಗತಿ.
ಮುಂಬರುವ ದಿನಗಳಲ್ಲಿ ಬೆಂಗಳೂರಿನ ಕ್ಯಾಂಪಸ್ಗಿಂತಲೂ ಈ ಕ್ಯಾಂಪಸ್ ಬೃಹತ್ ಆಗಿ ಬೆಳೆಯುವಂತಾಗಲಿ. ಈ ಭಾಗದಲ್ಲಿ ಇನ್ನಷ್ಟು ಉದ್ಯೋಗಗಳು ಸೃಷ್ಟಿಯಾಗಲಿ ಎಂಬ ಹಾರೈಕೆ ನನ್ನದು. ಈ ಕೇಂದ್ರವು ವಿವಿಧ ಕ್ಷೇತ್ರಗಳಲ್ಲಿ ಜಾಗತಿಕ ಗ್ರಾಹಕರಿಗೆ ಸೇವೆ ಸಲ್ಲಿಸುತ್ತದೆ. AI, ಕ್ಲೌಡ್, ಎಂಜಿನಿಯರಿಂಗ್ ಸೇವೆಗಳು ಮತ್ತು ಬಾಹ್ಯಾಕಾಶ ತಂತ್ರಜ್ಞಾನದಂತಹ ಕ್ಷೇತ್ರಗಳಲ್ಲಿ ನಾವೀನ್ಯತೆಯನ್ನು ವೇಗಗೊಳಿಸುತ್ತದೆ ಎಂದು ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ ಹೇಳಿದ್ದಿಷ್ಟು
ಸಚಿವ ಪ್ರಿಯಾಂಕ್ ಖರ್ಗೆ ಕೂಡ ಟ್ವೀಟ್ ಮಾಡಿದ್ದು, ಇನ್ಫೋಸಿಸ್ ಹುಬ್ಬಳ್ಳಿಯಲ್ಲಿರುವ ತನ್ನ ಅಭಿವೃದ್ಧಿ ಕೇಂದ್ರದಲ್ಲಿ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಕೇವಲ ಎರಡು ವರ್ಷಗಳಲ್ಲಿ, ಇನ್ಫೋಸಿಸ್ 1,000 ಕ್ಕೂ ಹೆಚ್ಚು ತಂತ್ರಜ್ಞರೊಂದಿಗೆ ಅಭಿವೃದ್ಧಿ ಹೊಂದುತ್ತಿರುವ ಕೇಂದ್ರವನ್ನು ನಿರ್ಮಿಸಿದೆ. ಇದು ಕರ್ನಾಟಕದ ನಾವೀನ್ಯತೆ ನಕ್ಷೆಯಲ್ಲಿ ಹುಬ್ಬಳ್ಳಿಯ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಸರಿಯಾದ ಉದ್ದೇಶ ಮತ್ತು ಪರಿಸರ ವ್ಯವಸ್ಥೆಯೊಂದಿಗೆ, ವಿಶ್ವ ದರ್ಜೆಯ ಸಾಮರ್ಥ್ಯಗಳು ರಾಜ್ಯಾದ್ಯಂತ ಅಭಿವೃದ್ಧಿ ಹೊಂದಬಹುದು ಎಂಬುದಕ್ಕೆ ಈ ಕೇಂದ್ರ ಸಾಕ್ಷಿಯಾಗಿದೆ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:02 pm, Thu, 7 August 25




