ಕೋಲಾರ ನಗರಸಭೆಯಲ್ಲಿ ಸ್ವಚ್ವ ಭಾರತ್ ಯೋಜನೆ ಹೆಸರಲ್ಲಿ ಕೋಟ್ಯಾಂತರ ರೂ ಅಕ್ರಮ ಆರೋಪ
ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ ಇದ್ದ ಹಣವನ್ನು ಖರ್ಚು ಮಾಡಲೇಬೇಕು ಅನ್ನೋ ಉದ್ದೇಶದಿಂದ ಇಲ್ಲಿ 2.40 ಕೋಟಿ ರೂ. ಹಣವನ್ನು ರಾಮನ ಲೆಕ್ಕ, ಕೃಷ್ಣನ ಲೆಕ್ಕ ತೋರಿಸಿ ಖರ್ಚು ಮಾಡಿದ್ದಾರೆ. ಇಲ್ಲಿ ನಡೆದಿರುವ ಅವ್ಯವಹಾರ ಬಹಿರಂಗವಾಗಿಯೇ ಸಾಬೀತಾಗುವಂತಿದೆ.
ಕೋಲಾರ, ಅಕ್ಟೋಬರ್ 05: ಅದು ಸ್ವಚ್ಛ ಭಾರತ್ ಮಿಷನ್ (Swachh Bharat Mission) ಅಡಿಯಲ್ಲಿ ಘನ ತ್ಯಾಜ್ಯ ನಿರ್ವಹಣೆಗಾಗಿ ಖರೀದಿ ಮಾಡಲಾಗಿರುವ ಯಂತ್ರಗಳು ಮತ್ತು ವಾಹನಗಳು. ಆದರೆ ಅಲ್ಲಿ ಖರೀದಿ ಮಾಡಿರುವ ಯಂತ್ರಗಳ ಘನ ತ್ಯಾಜ್ಯವನ್ನು ಸ್ವಚ್ಛ ಮಾಡಿದ್ದಕ್ಕಿಂತ ನಗರಸಭೆಯಲ್ಲಿದ್ದ ಕೋಟ್ಯಾಂತರ ರೂ. ಹಣವನ್ನು ಸ್ವಚ್ಛ ಮಾಡಿ ಅಧಿಕಾರಿಗಳ ಜೇಬು ತುಂಬಿಸಿದೆ ಅನ್ನೋ ಆರೋಪ ಕೇಳಿಬಂದಿದೆ.
ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ 2.40 ಕೋಟಿ ರೂ. ಅನುದಾನ
ಕೋಲಾರ ನಗರಸಭೆ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಜನವರಿ ತಿಂಗಳಲ್ಲಿ ಟೆಂಡರ್ ಮೂಲಕ ಘನ ತ್ಯಾಜ್ಯ ನಿರ್ವಹಣೆ ಸಲುವಾಗಿ ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಇದ್ದ 2.40 ಕೋಟಿ ರೂ. ಅನುದಾನವನ್ನು ಬಳಕೆ ಮಾಡಲು ಕ್ರಿಯಾಯೋಜನೆಯನ್ನು ಸಿದ್ದಪಡಿಸಿದೆ. ಇದರಲ್ಲಿ 6 ಸಿಸಿ ಕ್ಯಾಮರಾ, 6 ಎಲೆಕ್ಟ್ರಿಕ್ ಮಿನಿ ಟಿಪ್ಪರ್, 1 ಕಾಂಪ್ಯಾಕ್ಟರ್, 2 ಚಾರ್ಜಿಂಗ್ ಪಾಯಿಂಟ್, 1 ಲೋಡರ್, 15 ಪುಶ್ ಕಾರ್ಟ್, 2 ಟ್ರಾಕ್ಟರ್ ಎಂಜಿನ್ ಖರೀದಿಗೆ ಕ್ರಿಯಾಯೋಜನೆ ರೂಪಿಸಿ ಅದಕ್ಕೆ ಆಡಳಿತಾತ್ಮಕ ಅನುಮೋದನೆ ಪಡೆಯಲಾಗಿದೆ.
ಇದನ್ನೂ ಓದಿ: ಫೇಲಾದ ವಿದ್ಯಾರ್ಥಿಗಳನ್ನು ಪಾಸ್ ಮಾಡುತ್ತಿದ್ದ ಜಾಲವನ್ನು ಬೇಧಿಸಿದ ಪೊಲೀಸರು
2.40 ಕೋಟಿ ರೂಪಾಯಿಗೆ ಈ ಮೇಲಿನ ಎಲ್ಲಾ ವಾಹನಗಳು ಹಾಗೂ ಯಂತ್ರ ಗಳ ಸರಬರಾಜು ಮಾಡಲು ಬೆಂಗಳೂರಿನ ಆಲ್ಫಾ ಟೆಕ್ನಾಲಜೀಸ್ ಅನ್ನೋ ಏಜೆನ್ಸಿಗೆ ನೀಡಲಾಗಿದ್ದು, ಈ ಏಜೆನ್ಸಿಯವರು ಖರೀದಿ ಮಾಡುವ ವೇಳೆಯಲ್ಲಿ ಎಲ್ಲಾ ವಾಹಗಳು ಹಾಗೂ ಯಂತ್ರಗಳನ್ನು ಮಾರುಕಟ್ಟೆ ಬೆಲೆಗಿಂತ ಸುಮಾರು ಹತ್ತು ಪಟ್ಟು ಹೆಚ್ಚಿನ ಬೆಲೆಗೆ ಖರೀದಿ ಮಾಡಿದ್ದಾರೆ. ಉದಾಹರಣೆಗೆ 6 ಬುಲೆಟ್ ಸಿಸಿ ಕ್ಯಾಮರಾಕ್ಕೆ ಮಾರುಕಟ್ಟೆ ಬೆಲೆ 10 ಸಾವಿರ ರೂ. ಇದ್ದರೆ ಇವರು ಕೊಟ್ಟಿರುವ ಬೆಲೆ 6.5 ಲಕ್ಷ ರೂಪಾಯಿ. ಇನ್ನು 34 ಸಾವಿರ ಬೆಲೆಯ 2 ಚಾರ್ಜಿಂಗ್ ಪಾಯಿಂಟ್ಗೆ 8 ಲಕ್ಷ ರೂ ನೀಡಲಾಗಿದೆ. ಅಲ್ಲದೆ 1.20 ಲಕ್ಷ ಬೆಲೆಯ 15 ಪುಶ್ ಕಾರ್ಟ್ಗೆ ಇಲ್ಲಿ 5.5 ಲಕ್ಷ ರೂಪಾಯಿ ನೀಡಲಾಗಿದೆ.
60 ಲಕ್ಷ ಬೆಲೆಯ 6 ಎಲೆಕ್ಟ್ರಿಕ್ ಮಿನಿ ಟಿಪ್ಪರ್ಗೆ 98 ಲಕ್ಷ ರೂಪಾಯಿ ನೀಡಲಾಗಿದೆ. ಅಷ್ಟೇ ಅಲ್ಲದೆ, 25 ಲಕ್ಷ ಬೆಲೆ ಬಾಳುವ ರೆಪ್ಯೂಸ್ ಕಾಂಪ್ಯಾಕ್ಟರ್ಗೆ 51 ಲಕ್ಷ ರೂಪಾಯಿ ನೀಡಿ ಖರೀದಿ ಮಾಡುವ ಮೂಲಕ ಬಹು ದೊಡ್ಡ ಅಕ್ರಮ ಎಸಗಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ. ಕೋಲಾರ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಅವರೇ ಬಹಿರಂಗ ಸಭೆಯಲ್ಲಿ ಈ ಬಗ್ಗೆ ಮಾತನಾಡಿ ತನಿಖೆಗೆ ಆಗ್ರಹಿಸಿದ್ದಾರೆ. ಅಷ್ಟೇ ಅಲ್ಲದೆ ನಗರಸಭೆ ಸದಸ್ಯರು ಕೂಡ ಅವ್ಯವಹಾರದ ಬಗ್ಗೆ ಆಕ್ರೋಶ ಹೊರ ಹಾಕಿದ್ದಾರೆ.
ಕೋಲಾರ ನಗರಸಭೆಯ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಇಲ್ಲದೆ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ನಗರಸಭೆಯ ಆಡಳಿತಾಧಿಕಾರಿ ಆಗಿದ್ದ ಸಂದರ್ಭದಲ್ಲಿ, ಅಂದರೆ ಜನವರಿ-2024 ರಲ್ಲಿ ತರಾತುರಿಯಲ್ಲಿ ಈ ಖರೀದಿ ಗೋಲ್ ಮಾಲ್ ಮಾಡಲಾಗಿದೆ. ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಇದ್ದ ಅನುದಾನವನ್ನು ಬಳಕೆ ಮಾಡಬೇಕು. ಜೊತೆಗೆ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ಆಗುವ ಮೊದಲೇ ಈ ಹಣವನ್ನು ತಿಂದು ಮುಗಿಸಬೇಕು ಅನ್ನೋ ಕಾರಣಕ್ಕೆ ಬೇಕಾಬಿಟ್ಟಿಯಾಗಿ ಸಿಕ್ಕಷ್ಟೇ ಬೆಲೆಯನ್ನು ನಮೂದು ಮಾಡಿ ಇರುವ ಹಣವನ್ನು ಡ್ರಾ ಮಾಡಲಾಗಿದೆ ಅನ್ನೋದು ಮೇಲ್ನೋಟಕ್ಕೆ ತಿಳಿದು ಬರುತ್ತಿದೆ.
ಇನ್ನು ಕ್ರಿಯಾಯೋಜನೆಯಲ್ಲಿ ನಮೂದಿಸಲಾಗಿರುವ ಬೆಲೆಯನ್ನು ನಾವು ಆನ್ ಲೈನ್ನಲ್ಲಿ ಅದರ ದರ ಪರೀಕ್ಷೆ ಮಾಡಿದಾಗ ಸಿಸಿ ಕ್ಯಾಮರಾ, ಪುಶ್ ಕಾರ್ಟ್, ಚಾರ್ಜಿಂಗ್ ಪಾಯಿಂಟ್, ಕಂಪ್ಯಾಕ್ಟರ್, ಲೋಡರ್, ಮಿಲಿ ಇವಿ ಟಿಪ್ಪರ್ ವಾಹನ ಎಲ್ಲದಕ್ಕೂ ಸುಮಾರು ಹತ್ತರಿಂದ ಇಪ್ಪತ್ತು ಪಟ್ಟು ಬೆಲೆ ಹೆಚ್ಚಿಗೆ ನೀಡಿ ಇಲ್ಲಿ ಖರೀದಿ ಮಾಡಿರುವ ಅಂಶ ಮೇಲ್ನೋಟಕ್ಕೆ ತಿಳಿದು ಬಂದಿದೆ. ಇನ್ನು ಈ ಬಗ್ಗೆ ಆಡಳಿತಾಧಿಕಾರಿ ಆಗಿದ್ದ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರನ್ನು ಕೇಳಿದರೆ ಇದರಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಈ ಬಗ್ಗೆ ಈಗಾಗಲೇ ತನಿಖೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ ಮೂರನೇ ಸಂಸ್ಥೆಯಿಂದಲೂ ಇದರ ಬಗ್ಗೆ ದೃಢೀಕರಣ ಮಾಡಿಸಲಾಗಿದೆ. ಯಾವುದೇ ಅವ್ಯವಹಾರ ನಡೆದಿಲ್ಲ ಎನ್ನುತ್ತಿದ್ದಾರೆ.
ಇದನ್ನೂ ಓದಿ: ಕೋಲಾರ ಹೊಸ ರಿಂಗ್ ರಸ್ತೆಗೆ ಸಂಕಷ್ಟ; ಬಿಡುಗಡೆಯಾಗಿದ್ದ 250 ಕೋಟಿ ರೂ. ವಾಪಾಸ್ ಪಡೆದ ಕೇಂದ್ರ ಸರ್ಕಾರ
ಸ್ವಚ್ಛ ಭಾರತ್ ಮಿಷನ್ ಯೋಜನೆಯಲ್ಲಿ ಇದ್ದ ಹಣವನ್ನು ಖರ್ಚು ಮಾಡಲೇಬೇಕು ಅನ್ನೋ ಉದ್ದೇಶದಿಂದ ಇಲ್ಲಿ 2.40 ಕೋಟಿ ರೂ. ಹಣವನ್ನು ರಾಮನ ಲೆಕ್ಕ, ಕೃಷ್ಣನ ಲೆಕ್ಕ ತೋರಿಸಿ ಖರ್ಚು ಮಾಡಿದ್ದಾರೆ. ಇಲ್ಲಿ ನಡೆದಿರುವ ಅವ್ಯವಹಾರ ಬಹಿರಂಗವಾಗಿಯೇ ಸಾಬೀತಾಗುವಂತಿದೆ, ಸ್ವಚ್ಛ ಭಾರತ್ ಮಿಷನ್ ಅಡಿಯಲ್ಲಿ ಘನ ತ್ಯಾಜ್ಯ ಕ್ಲೀನ್ ಮಾಡಬೇಕಿದ್ದ ಅಧಿಕಾರಿಗಳು ಇಲ್ಲಿ ಕೋಟಿ ಕೋಟಿ ರೂ ಹಣವನ್ನೇ ಕ್ಲೀನ್ ಮಾಡಿರುವುದು ದುರಂತ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.