ಕಲಬುರಗಿ: ಹೊತ್ತಿ ಉರಿದ ಜೆಸ್ಕಾಂ ಪವರ್ ಸ್ಟೇಷನ್: 25 ಗ್ರಾಮಗಳಿಗೆ ವಿದ್ಯುತ್ ಸ್ಥಗಿತ
ಕಲಬುರಗಿ: ಜಿಲ್ಲೆಯ ಸೇಡಂ ತಾಲೂಕಿನ ಬಟಗೇರಾ ಗ್ರಾಮದಲ್ಲಿನ ಜೆಸ್ಕಾಂ ಪವರ್ ಸ್ಟೇಷನ್ ಹೊತ್ತಿ ಉರಿದಿದೆ. ಈ ಹಿನ್ನೆಲೆ ಸೇಡಂ ತಾಲೂಕಿನ 25 ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.
ಕಲಬುರಗಿ: ಜಿಲ್ಲೆಯ ಸೇಡಂ (Sedam) ತಾಲೂಕಿನ ಬಟಗೇರಾ ಗ್ರಾಮದಲ್ಲಿನ ಜೆಸ್ಕಾಂ ಪವರ್ ಸ್ಟೇಷನ್ (Gescom Power Station) ಹೊತ್ತಿ ಉರಿದಿದೆ. ನಿನ್ನೆ (ಏ.2) ರಂದು ಸಾಯಂಕಾಲ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಕೂಡಲೆ ವಿದ್ಯುತ್ ಸರಬರಾಜನ್ನು ಬಂದ್ ಮಾಡಲಾಗಿದೆ. ಈ ಹಿನ್ನೆಲೆ ಸೇಡಂ ತಾಲೂಕಿನ 25 ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ (Current Cut). ಇನ್ನು ಬಿಸಿಲಿನ ತಾಪಮಾನ ಹೆಚ್ಚಾಗಿ ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಅನಾಹುತ ಸಂಭವಿಸಿದೆ ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ಮಾಡುತ್ತಿದ್ದಾರೆ. ಸೇಡಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: ವಿದೇಶಿ ಕರೆನ್ಸಿ ನೀಡುವುದಾಗಿ ವಂಚನೆ, 6 ಮಂದಿ ಅಂತರಾಜ್ಯ ಆರೋಪಿಗಳ ಬಂಧನ
ವಿಷಕಾರಿ ಹುಲ್ಲು ಸೇವಿಸಿ 34 ಕುರಿಗಳ ಸಾವು
ದಾವಣಗೆರೆ: ವಿಷಕಾರಿ ಹುಲ್ಲು ತಿಂದು 34 ಕುರಿಗಳು ಮೃತಪಟ್ಟ ಘಟನೆ ದಾವಣಗೆರೆ ತಾಲೂಕಿನ ಮಾಯಕೊಂಡ ಬಳಿಯ ಒಂಟಿಹಾಳ್ ಗ್ರಾಮದಲ್ಲಿ ನಿನ್ನೆ (ಏ.2) ರಂದು ನಡೆದಿತ್ತು. ಅಡಿಕೆ ತೋಟದಲ್ಲಿ ಬೆಳೆದ ವಿಚಿತ್ರ ರೀತಿಯ ಹುಲ್ಲು ತಿಂದು ಕುರಿಗಳು ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದವು.
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಕುರಿದಾಸರಹಳ್ಳಿ ನಿವಾಸಿ ಡಿ. ಮಂಜಪ್ಪ ಕುರಿಗಳನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ. ವಿಷಕಾರಿ ಹುಲ್ಲು ತಿನ್ನುತ್ತಿದ್ದಂತೆ ಒಂದಾದ ಮೇಲೆ ಒಂದರಂತೆ ಕುರಿಗಳು ಮೃತಪಟ್ಟಿವೆ. ಇನ್ನೂ ಐವತ್ತಕ್ಕೂ ಹೆಚ್ಚು ಕುರಿಗಳು ಅಸ್ವಸ್ಥಗೊಂಡಿದ್ದವು. ಸಕಾಲಕ್ಕೆ ಪಶುವೈದ್ಯರಿಂದ ಚಿಕಿತ್ಸೆ ಸಿಕ್ಕಿದ್ದು ಪ್ರಾಣಾಪಾಯದಿಂದ ಕುರಿಗಳು ಪಾರಾಗಿವೆ.
14ನೇ ಮಹಡಿಯಿಂದ ಬಿದ್ದು 21 ವರ್ಷದ ಯುವಕ ಸಾವು
ಮಂಗಳೂರು: 21 ವರ್ಷದ ಯುವಕನೊಬ್ಬ 14ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ನಿನ್ನೆ (ಏ.2) ರಂದು ನಗರದ ಕೆಪಿಟಿ ಬಳಿಯಲ್ಲಿ ನಡೆದಿತ್ತು. ಅಬ್ದುಲ್ ಸಲೀಂ ಎಂಬುವವರ ಪುತ್ರ ಮೊಹಮ್ಮದ್ ಶಾಮಲ್ (21) ಘಟನೆಯಲ್ಲಿ ಮೃತಪಟ್ಟ ದುರ್ದೈವಿ. ಘಟನೆಯ ಬಗ್ಗೆ ಮಂಗಳೂರು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ. ಯುವಕನ ಸಾವಿಗೆ ಕಾರಣ ಏನು ಎಂದು ಇನ್ನು ಪತ್ತೆಯಾಗಿಲ್ಲ. ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು.
ಅಪಾರ್ಟ್‌ಮೆಂಟ್ 14ನೇ ಮಹಡಿಯಲ್ಲಿ ವಾಸವಿದ್ದರು. ಮಾರ್ಚ್ 30 ಮುಂಜಾನೆ 4.45 ರ ಸುಮಾರಿಗೆ ಶಾಮಲ್ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದರು. ಆತನ ದೇಹವನ್ನು ಎಜೆ ಆಸ್ಪತ್ರೆಗೆ ರವಾನಿಸಲಾಗಿತ್ತು. ಈ ಸಂಬಂಧ ಮೃತರ ಚಿಕ್ಕಪ್ಪ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿತ್ತು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ