ಮನೆ ಬಾಗಿಲಿಗೆ 72 ಗಂಟೆಯಲ್ಲಿ ಪಿಂಚಣಿ ಸಲಹೆ: ಸರ್ಕಾರಕ್ಕೆ ಐಡಿಯಾ ನೀಡಿದ್ದು ಕಲಬುರಗಿ ಡಿ.ಸಿ ಯಶವಂತ ಗುರುಕರ್ -ಭೇಷ್ ಎಂದರು ಸಚಿವ ಅಶೋಕ್
Revenue Minister R Ashoka: "ಹಲೋ ಕಂದಾಯ ಸಚಿವರೇ" ಎಂದು ಈ ವಿನೂತನ ಯೋಜನೆಯ ಬಗ್ಗೆ ಸಲಹೆ ನೀಡಿದಕ್ಕೆ ಕಂದಾಯ ಸಚಿವ ಅರ್. ಅಶೋಕ ಅವರು ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.
ಕಲಬುರಗಿ: ಮನೆ ಬಾಗಿಲಿಗೆ ಸಾಮಾಜಿಕ ಭದ್ರತಾ ಪಿಂಚಣಿಯನ್ನು 72 ಗಂಟೆಯಲ್ಲಿ ನೀಡುವ ಯೋಜನೆಯನ್ನು (Pension within 72 hours) ರಾಜ್ಯ ಸರ್ಕಾರ ಜಾರಿಗೊಳಿಸಿದೆ. ಪಿಂಚಣಿಗಾಗಿ ಸರ್ಕಾರಿ ಕಚೇರಿಯಿಂದ ಕಚೇರಿಗೆ ಅಲೆಯುವುದು ಇದರಿಂದ ತಪ್ಪಿದ್ದು, ಈ ಯೋಜನೆಯಿಂದ ಅನೇಕರು ಸುಲಭವಾಗಿ ಪಿಂಚಣಿ ಪಡೆಯುವಂತಾಗಿದೆ. ಆದರೆ ಇಂತಹದೊಂದು ಸಲಹೆಯನ್ನು ಸರ್ಕಾರಕ್ಕೆ ನೀಡಿದ್ದು ಕಲಬುರಗಿ ಜಿಲ್ಲಾಧಿಕಾರಿ ಯಶವಂತ ಗುರಕರ್ ಅವರು (IAS Yeshwanth Gurukar).
ಹೌದು ವಿನೂತನ ಯೋಜನೆಯ ಬಗ್ಗೆ ಸಲಹೆ ನೀಡಿದಕ್ಕೆ ಕಂದಾಯ ಸಚಿವ ಅರ್. ಅಶೋಕ ಅವರು (Revenue Minister R Ashoka) ಕಲಬುರಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಅವರಿಗೆ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.
ಫ್ಲಿಪ್ ಕಾರ್ಟ್ ಎಂಬ ಖಾಸಗಿ ದೈತ್ಯ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸಿ ಅನುಭವ ಹೊಂದಿರುವ ಯಶವಂತ ವಿ. ಗುರುಕರ್ ಅವರು ಸರ್ಕಾರಿ ವ್ಯವಸ್ಥೆಯಲ್ಲಿ ಕಾಲಮಿತಿಯಲ್ಲಿ ಪಿಂಚಣಿ ಒದಗಿಸಲು ಉದ್ದೇಶಿಸಿ ಇದನ್ನು ಕಲಬುರಗಿ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಉದ್ದೇಶಿಸಿದರು.
ಈ ವಿಷಯ ಕಂದಾಯ ಸಚಿವರಿಗೆ ಗೊತ್ತಾಗಿದ್ದೆ ತಡ ಡಿ.ಸಿ. ಅವರನ್ನು ಸಂಪರ್ಕಿಸಿದ ಸಚಿವರು ಅಗತ್ಯ ಸಲಹೆ ಪಡೆದು ಕಲಬುರಗಿಯಷ್ಟೆ ಅಲ್ಲ ರಾಜ್ಯದಾದ್ಯಂತ ಇದನ್ನು ಜಾರಿಗೆ ತರೋಣ ಎಂದು ತಿಳಿಸಿ ಕಳೆದ ಮೇ 11ಕ್ಕೆ ಅಧಿಕೃತ ಸರ್ಕಾರಿ ಆದೇಶ ಹೊರಡಿಸುವ ಮೂಲಕ ರಾಜ್ಯದಾದ್ಯಂತ ಈ ಯೋಜನೆ ಜಾರಿಗೊಳಿಸಿದ್ದರು.
ಸಾರ್ವಜನಿಕರು ಟೋಲ್ ಫ್ರೀ ಸಂ. 155245 ಸಂಖ್ಯೆ ಕರೆ ಮಾಡಿ “ಹಲೋ ಕಂದಾಯ ಸಚಿವರೇ” ಎಂಬ ಕೇಂದ್ರಿಕೃತ ಸಹಾಯವಾಣಿಗೆ ಮಾಹಿತಿ ನೀಡಿದರೆ ಸಾಕು, ಗ್ರಾಮ ಲೆಕ್ಕಾಧಿಕಾರಿಗಳೇ ಪಿಂಚಣಿದಾರರ ಮನೆಗೆ ತೆರಳಿ ನವೋದಯ ತಂತ್ರಾಂಶದ ಮೂಲಕ ಆಧಾರ್ ಸೇರಿದಂತೆ ಅಗತ್ಯ ದಾಖಲೆಗಳು ಪಡೆದು ಕಚೇರಿ ಕೆಲಸ ದಿನದ 72 ಗಂಟೆಯಲ್ಲಿ ಪಿಂಚಣಿ ಮಂಜೂರಾತಿ ನೀಡಲಾಗುತ್ತದೆ. ಹೇಗಿದೆ ವ್ಯವಸ್ಥೆ!?