ಗೃಹ ಜ್ಯೋತಿ ಯೋಜನೆ ಪರಿಷ್ಕರಣೆ: ಗೊಂದಲ ಬೇಡ; ಇಲ್ಲಿದೆ ಪ್ರಕ್ರಿಯೆ ಹೇಗೆಂಬ ಮಾಹಿತಿ
ಕರ್ನಾಟಕ ಸರ್ಕಾರದ ಗೃಹಜ್ಯೋತಿ ಯೋಜನೆಯ ಫಲಾನುಭವಿಗಳ ಪರಿಷ್ಕರಣೆ ಕಾರ್ಯ ಭರದಿಂದ ಸಾಗಿದೆ. ಅನರ್ಹರನ್ನು ಹೊರಗಿಡಲು ಮನೆ-ಮನೆ ಪರಿಶೀಲನೆ ನಡೆಸಲಾಗುತ್ತಿದ್ದು, ಅರ್ಜಿ ಸಲ್ಲಿಕೆಯ ಅಂತಿಮ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಲಾಗಿದೆ. ಹೀಗಿದ್ದರೂ ಹಲವು ಗೊಂದಲಗಳು ಫಲಾನುಭವಿಗಳಲ್ಲಿ ಮುಂದುವರಿದಿದ್ದು, ಅವುಗಳಿಗೆಲ್ಲ ಸಂಪೂರ್ಣವಾದ ಉತ್ತರ ಇಲ್ಲಿದೆ.

ಬೆಂಗಳೂರು, ಸೆಪ್ಟೆಂಬರ್ 08: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ ಗೃಹಜ್ಯೋತಿ ಯೋಜನೆಯ ಪರಿಷ್ಕರಣೆಯ ಕಾರ್ಯ ಭರದಿಂದ ಸಾಗಿದೆ. ಅನರ್ಹ ಫಲಾನುಭವಿಗಳನ್ನು ಹೊರಗಿಡುವ ಉದ್ದೇಶದಿಂದ ಈ ಕಾರ್ಯ ನಡೆಸಲಾಗುತ್ತಿದ್ದು, ಈಗಾಗಲೇ ಶೇ.72ರಷ್ಟು ಫಲಾನುಭವಿಗಳು ಪರಿಷ್ಕರಣೆ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. ಹೀಗಿದ್ದರೂ ಹಲವರಿಗೆ ಈ ಬಗ್ಗೆ ಸಾಕಷ್ಟು ಗೊಂದಲಗಳು ಮುಂದುವರಿದಿವೆ. ಪರಿಷ್ಕರಣೆ ಯಾಕೆ? ಏನೆಲ್ಲ ದಾಖಲೆ ಅಗತ್ಯ? ಎಲ್ಲಿ ಅರ್ಜಿ ಸಲ್ಲಿಸಬೇಕು ಎಂಬಿತ್ಯಾದಿ ಪ್ರಶ್ನೆಗಳು ಹಾಗೆಯೇ ಉಳಿದುಕೊಂಡಿದೆ. ಇನ್ನೂ ಲಕ್ಷಾಂತರ ಮಂದಿ ಫಲಾನುಭವಿಗಳ ಪರಿಷ್ಕರಣೆ ಕಾರ್ಯ ಬಾಕಿ ಇರುವ ಹಿನ್ನೆಲೆಯಲ್ಲಿ ಅಂತಿಮ ಗಡುವನ್ನು ಸರ್ಕಾರ ಈಗಾಗಲೇ ವಿಸ್ತರಿಸಿದೆ.
ಗೃಹ ಜ್ಯೋತಿ ಯೋಜನೆಯ ಪರಿಷ್ಕರಣೆ ಅರ್ಜಿ ಸಲ್ಲಿಕೆಗೆ ಏನು ಮಾಡಬೇಕು?
ಗೃಹ ಜ್ಯೋತಿ ಯೋಜನೆಯ ಪರಿಷ್ಕರಣೆ ಅಥವಾ ಮರು ಪರಿಶೀಲನೆಗಾಗಿ ನಿಮ್ಮ ಮನೆಗೆ ಬರುವ ಎಸ್ಕಾಂ ಸಿಬ್ಬಂದಿಗೆ ಅಗತ್ಯ ದಾಖಲೆಗಳನ್ನು ನೀಡಿ ಮೊಬೈಲ್ ಆಪ್ ಮೂಲಕ ವಿವರಗಳನ್ನು ನವೀಕರಿಸಬೇಕು. ಒಂದು ವೇಳೆ ಅವರು ಬಂದಾಗ ನೀವು ಲಭ್ಯವಿಲ್ಲದಿದ್ದಲ್ಲಿ ನಿಮ್ಮ ವ್ಯಾಪ್ತಿಯ ಕಚೇರಿಗೆ ಭೇಟಿ ನೀಡಿ ನವೀಕರಣ ಅರ್ಜಿ ಪಡೆದು, ಅಗತ್ಯ ದಾಖಲೆಗಳ ಜೊತೆ ಸಲ್ಲಿಸಬಹುದಾಗಿದೆ.
ಇದನ್ನೂ ಓದಿ: ಗೃಹ ಜ್ಯೋತಿ ಮರುಪರಿಶೀಲನೆಗೆ ಲಕ್ಷಾಂತರ ಫಲಾನುಭವಿಗಳ ನಿರಾಸಕ್ತಿ: ಫ್ರೀ ಕರೆಂಟ್ ಕೈತಪ್ಪುವ ಭೀತಿಯಿಂದ ಮಾಹಿತಿ ನೀಡಲು ಹಿಂದೇಟು!
ಗೃಹ ಜ್ಯೋತಿ ಯೋಜನೆಯ ಪರಿಷ್ಕರಣೆ ಅರ್ಜಿ ಸಲ್ಲಿಸಲು ಏನೆಲ್ಲ ದಾಖಲೆ ಬೇಕು?
ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಿದ್ಯುತ್ ಬಿಲ್, ಬಾಡಿಗೆದಾರರಾಗಿದ್ದರೆ ಬಾಡಿಗೆ ಒಪ್ಪಂದದ ಪತ್ರ , ಪಾನ್ ಕಾರ್ಡ್ ಮತ್ತು ಭಾವಚಿತ್ರವೊಂದನ್ನು ನೀವು ಪರಿಶೀಲನೆ ವೇಳೆ ದಾಖಲೆಯಾಗಿ ನೀಡಬೇಕಾಗುತ್ತದೆ.
ಅರ್ಜಿಯ ಜೊತೆಗೆ ನಿಗದಿತ ದಾಖಲೆಗೆಳ ಪೈಕಿ ಒಂದನ್ನು ನೀಡದಿದ್ದರೂ ಏನಾಗಲಿದೆ?
ಗೃಹ ಜ್ಯೋತಿ ಯೋಜನೆಯ ಮರುಪರಿಶೀಲನೆ ವೇಳೆ ನೀವು ಯಾವುದೇ ಪ್ರಮುಖ ದಾಖಲೆಯನ್ನು ನೀಡದಿದ್ದರೆ ಅಥವಾ ನಿರಾಕರಿಸಿದರೆ, ನಿಮ್ಮ ಉಚಿತ ವಿದ್ಯುತ್ ಸೌಲಭ್ಯವು ರದ್ದಾಗುವ ಅಥವಾ ಸ್ಥಗಿತಗೊಳ್ಳುವ ಸಾಧ್ಯತೆ ಇರುತ್ತದೆ. ನೀವು ಆದಾಯ ತೆರಿಗೆ ಪಾವತಿದಾರರಲ್ಲದಿದ್ದರೆ ಅಥವಾ ಪ್ಯಾನ್ ಕಾರ್ಡ್ ಇಲ್ಲದಿದ್ದರೆ, ಸಿಬ್ಬಂದಿಗೆ ಆ ವಿಷಯವನ್ನು ತಿಳಿಸಿ ಆಪ್‌ನಲ್ಲಿ ನಮೂದಿಸಬಹುದು. ಪ್ಯಾನ್ ಕಾರ್ಡ್ ಇಲ್ಲದ ತಕ್ಷಣ ಸೌಲಭ್ಯ ಕಡಿತವಾಗುವುದಿಲ್ಲ.
ಯಾರೆಲ್ಲ ಗೃಹ ಜ್ಯೋತಿ ಯೋಜನೆಗೆ ಅರ್ಹರಾಗಲಿದ್ದಾರೆ?
ಅರ್ಜಿದಾರರು ಕಡ್ಡಾಯವಾಗಿ ಕರ್ನಾಟಕ ರಾಜ್ಯದ ಖಾಯಂ ನಿವಾಸಿಯಾಗಿರಬೇಕು ಅಥವಾ ರಾಜ್ಯದ ಮತದಾರರಾಗಿರಬೇಕು. ಈ ಯೋಜನೆ ಕೇವಲ ಮನೆಗಳಲ್ಲಿ ವಿದ್ಯುತ್ ಬಳಕೆಗೆ ಮಾತ್ರ ಅನ್ವಯಿಸುತ್ತದೆ. ವಾಣಿಜ್ಯ ಅಥವಾ ವ್ಯಾಪಾರ ಸಂಸ್ಥೆಗಳ ವಿದ್ಯುತ್ ಸಂಪರ್ಕಗಳಿಗೆ ಇದು ಅನ್ವಯಿಸುವುದಿಲ್ಲ.
ಬಾಡಿಗೆದಾರರಿಗೆ ಗೃಹ ಜ್ಯೋತಿ ಯೋಜನೆಯ ಪ್ರಯೋಜನ ಸಿಗಲಿದೆಯೇ?
ಹೌದು, ಸ್ವಂತ ಮನೆ ಇರುವವರು ಮಾತ್ರವಲ್ಲದೆ, ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬಗಳೂ ಸಹ ಈ ಯೋಜನೆಗೆ ಅರ್ಹರು. ಇದಕ್ಕಾಗಿ ಬಾಡಿಗೆ ಕರಾರು ಪತ್ರ ಅಥವಾ ಆ ವಿಳಾಸವಿರುವ ವೋಟರ್ ಐಡಿಯನ್ನು ನೀಡಬೇಕಾಗುತ್ತದೆ.
ಗೃಹ ಜ್ಯೋತಿ ಯೋಜನೆಯ ಪರಿಷ್ಕರಣೆ ಅರ್ಜಿ ಸಲ್ಲಿಸಲು ಕೊನೆ ದಿನ ಯಾವುದು?
ಕರ್ನಾಟಕ ಸರ್ಕಾರದ ಗೃಹ ಜ್ಯೋತಿ ಯೋಜನೆಯ ಫಲಾನುಭವಿಗಳ ವಿವರಗಳ ಪರಿಷ್ಕರಣೆ (ಮರು ನೋಂದಣಿ / ಮನೆ-ಮನೆ ಪರಿಶೀಲನೆ) ಪ್ರಕ್ರಿಯೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವನ್ನು ಸೆಪ್ಟೆಂಬರ್ 30, 2026 ರವರೆಗೆ ವಿಸ್ತರಿಸಿದೆ.
ಗೃಹ ಜ್ಯೋತಿ ಯೋಜನೆಯ ಪರಿಷ್ಕರಣೆ ಅರ್ಜಿ ಸಲ್ಲಿಕೆ ಗಡುವು ವಿಸ್ತರಣೆ ಆಗಲಿದೆಯೇ?
ಮೊದಲು ಈ ಪ್ರಕ್ರಿಯೆಗೆ ಆಗಸ್ಟ್ 31, 2026 ಕೊನೆಯ ದಿನಾಂಕವಾಗಿತ್ತು, ಆದರೆ ಸಾರ್ವಜನಿಕರ ಅನುಕೂಲಕ್ಕಾಗಿ ಇಂಧನ ಇಲಾಖೆ ಹಾಗೂ ಎಸ್ಕಾಂ (ESCOM) ಅಧಿಕಾರಿಗಳು ಈ ಗಡುವನ್ನು ಇನ್ನೂ ಒಂದು ತಿಂಗಳ ಕಾಲ ವಿಸ್ತರಿಸಿದ್ದಾರೆ. ಆದರೆ ಮತ್ತೆ ಗಡುವು ವಿಸ್ತರಣೆ ಬಗ್ಗೆ ಯಾವುದೇ ಮಾಹಿತಿ ಈವರೆಗೆ ಲಭ್ಯವಿಲ್ಲ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:25 pm, Tue, 8 September 26




