ಕೊಡಗಿನಲ್ಲಿ ಮಳೆ: ಜಿಲ್ಲೆಯಲ್ಲಿ ಭಾರೀ ವಾಹನ ಸಂಚಾರ ನಿಷೇಧ
ಕೊಡಗು ಜಿಲ್ಲೆಯಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ರಸ್ತೆ ಕುಸಿತ ತಡೆಯಲು ಅಧಿಕ ಭಾರದ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಿ ಜಿಲ್ಲಾಧಿಕಾರಿ ಡಾ ವೆಂಕಟರಾಜಾ ಆದೇಶ ಹೊರಡಿಸಿದ್ದಾರೆ. ಆದೇಶ ಅನುಷ್ಠಾನಕ್ಕೆ ಜಿಲ್ಲೆಯ ಗಡಿಗಳಲ್ಲಿ 24 ಗಂಟೆಯೂ ನಿಗಾ ಇಡಲಾಗಿದೆ.
ಮಡಿಕೇರಿ, ಜೂನ್.30: ರಾಜ್ಯದಲ್ಲಿ ಮುಂಗಾರು (Monsoon) ಮಳೆ ಆರ್ಭಟ ಜೋರಾಗಿದೆ. ಅದರಲ್ಲೂ ಕೊಡಗಿನಲ್ಲಿ (Kodagu) ಭಾರಿ ಮಳೆ ಬೀಳುತ್ತಿದ್ದು ಜಿಲ್ಲೆಯಲ್ಲಿ ಭಾರೀ ವಾಹನ ಸಂಚಾರ ನಿಷೇಧ ಹೇರಿ ಜಿಲ್ಲಾಧಿಕಾರಿ ಡಾ ವೆಂಕಟರಾಜಾ (Dr Venkataraja)ಆದೇಶ ಹೊರಡಿಸಿದ್ದಾರೆ. ರಸ್ತೆ ಕುಸಿತ ತಡೆಯಲು ಅಧಿಕ ಭಾರದ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ. ಮರಳು, ಮರದ ಧಿಮ್ಮಿ ಸಾಗಾಣಿಕೆ ಲಾರಿಗಳಿಗೂ ನಿಷೇಧ ಹೇರಲಾಗಿದೆ. 18,500 ಕೆಜಿಗಿಂತ ಅಧಿಕ ಭಾರದ ವಾಹನಗಳ ಸಂಚಾರ ನಿಷೇಧ ಹೇರಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಆದೇಶ ಅನುಷ್ಠಾನಕ್ಕೆ ಜಿಲ್ಲೆಯ ಗಡಿಗಳಲ್ಲಿ 24 ಗಂಟೆಯೂ ನಿಗಾ ಇಡಲಾಗಿದೆ. ಸಾರಿಗೆ, ಪೊಲೀಸ್ ಸಿಬ್ಬಂದಿ ಹೆದ್ದಾರಿಯಲ್ಲಿ ಪೆಟ್ರೊಲಿಂಗ್ ನಡೆಸಲಿದ್ದಾರೆ. ಹಾಲು, ಇಂಧನ, ಅನಿಲ ಪೂರೈಸುವ ವಾಹನಗಳಿಗೆ ವಿನಾಯಿತಿ ನೀಡಲಾಗಿದೆ. ಮಳೆಗಾಲ ಮುಗಿಯುವವರೆಗೂ ಜಿಲ್ಲೆಯಲ್ಲಿ ಬೃಹತ್ ವಾಹನಗಳ ಸಂಚಾರ ನಿಷೇಧವಿರಲಿದ್ದು. ಸದ್ಯ ಜುಲೈ 01ರಿಂದ 30ರ ವರೆಗೆ ನಿಷೇಧ ಹೇರಿ ಆದೇಶ ಹೊರಡಿಸಲಾಗಿದೆ.
ಸರಕು ಸಾಗಾಣೆ ವಾಹನಗಳು ಪ್ರತಿ ದಿನ ಸಂಚರಿಸುವುದರಿಂದ ರಸ್ತೆ ಬದಿಯ ಮಣ್ಣು ಕುಸಿಯುತ್ತಿದೆ. ಇದರಿಂದ ರಸ್ತೆಯ ಮೇಲೆ ಮಣ್ಣು ಬಿದ್ದು, ರಸ್ತೆ ಸಂಚಾರಕ್ಕೆ ತೊಂದರೆಯಾಗಿ ಸಾಕಷ್ಟು ಅಪಘಾತಗಳಿಗೆ ಕಾರಣವಾಗುತ್ತಿದೆ. ಮಳೆಯಿಂದಾಗಿ ರಸ್ತೆ ಕುಸಿತ ಭೀತಿ ಕೂಡ ಎದುರಾಗಿದೆ. ಈ ಎಲ್ಲಾ ಕಾರಣದಿಂದಾಗಿ ಭಾರೀ ತೂಕದ ವಾಹನಗಳಿಗೆ ನಿಷೇಧ ಹೇರಲಾಗಿದೆ.
ಇದನ್ನೂ ಓದಿ: ವಿಜಯನಗರ: ಡಿವೈಡರ್ಗೆ ಕಾರು ಡಿಕ್ಕಿಯಾಗಿ ಇಬ್ಬರು ಸಾವು, ನಾಲ್ವರಿಗೆ ಗಾಯ
18,500 ಕೆಜಿಗಿಂತ ಹೆಚ್ಚಿನ ತೂಕದ ಸರಕು ಸಾಗಾಣಿಕೆ ವಾಹನ, ಮಲ್ಟಿ ಆಕ್ಸಿಲ್ ಟ್ರಕ್‌ಗಳ ಸಂಚಾರ ಮತ್ತು ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೈನರ್ಸ್, ಲಾಂಗ್ ಚಾಸಿಸ್(ಮಲ್ಟಿ ಆಕ್ಸಿಲ್) ವಾಹನಗಳು ಮತ್ತು ಮರಳು ಸಾಗಾಣಿಕೆ, ಮರದ ದಿಮ್ಮಿಗಳನ್ನು ಸಾಗಿಸುವ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ಮಳೆಗಾಲ ಮುಗಿಯುವವರೆಗೆ ನಿರ್ಭಂದಿಸಲಾಗಿದೆ.
ದುಬಾರೆ ಪ್ರವೇಶಕ್ಕೆ ಅರಣ್ಯ ಇಲಾಖೆ ಅವಕಾಶ
ಇನ್ನು ಮತ್ತೊಂದೆಡೆ ಕೊಡಗಿನಲ್ಲಿ ತಕ್ಕ ಮಟ್ಟಿಗೆ ಮಳೆ ಅಬ್ಬರ ತಗ್ಗಿದ ಹಿನ್ನೆಲೆ ದುಬಾರೆಯಲ್ಲಿ ಕಾವೇರಿ ಪ್ರವಾಹ ಇಳಿಕೆಯಾಗಿದೆ. ದುಬಾರೆ ಪ್ರವೇಶಕ್ಕೆ ಅರಣ್ಯ ಇಲಾಖೆ ಅವಕಾಶ ನೀಡಿದೆ. ಎರಡು ದಿನಗಳ ಹಿಂದೆ ಪ್ರವೇಶ ನಿಷೇಧಿಸಿದ್ದ ಅರಣ್ಯ ಇಲಾಖೆ ಈಗ ನಿಷೇಧ ವಾಪಾಸ್ ಪಡೆದಿದೆ. ಪ್ರವಾಸಿಗರ ಪ್ರಯಾಣಕ್ಕೆ ನಾಲ್ಕು ಮೋಟಾರ್ ಬೋಟ್ ಲಭ್ಯವಿದೆ. ಕುಶಾಲನಗರ ತಾಲೂಕಿನ ನಂಜರಾಪಟ್ಟಣ ಗ್ರಾಮದಲ್ಲಿರೋ ದುಬಾರೆ ಆನೆ ಶಿಬಿರ ಈಗ ಪ್ರವಾಸಿಗರಿಗೆ ಓಪನ್ ಆಗಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ