AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿದ್ಯಾರ್ಥಿಗಳ ಫ್ರೀ ಬಸ್ ಪಾಸ್​ಗೆ ಇಂದಿನಿಂದ ಅರ್ಜಿ ಸಲ್ಲಿಕೆ ಶುರು: ಈ ದಾಖಲೆಗಳು ಕಡ್ಡಾಯ

ರಾಜ್ಯದಲ್ಲಿ ಗಂಡು ಮಕ್ಕಳ ಉಚಿತ ವಿದ್ಯಾರ್ಥಿ ಬಸ್ ಪಾಸ್ ವಿತರಣೆಗೆ ಇಂದಿನಿಂದ ಚಾಲನೆ ಸಿಕ್ಕಿದ್ದು, ‘ಸೇವಾಸಿಂಧು’ ಪೋರ್ಟಲ್ ಮೂಲಕ ಅರ್ಜಿ ಸಲ್ಲಿಕೆ ಆರಂಭವಾಗಿದೆ. ಆಧಾರ್ ಕಾರ್ಡ್, ಕಾಲೇಜು ರಶೀದಿ ಮತ್ತು ಕಾಲೇಜು ಪ್ರಾಂಶುಪಾಲರ ಸಹಿ-ಸೀಲ್ ಇರುವ ಅರ್ಜಿಯೊಂದಿಗೆ ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅಪ್ಲೈ ಮಾಡಬಹುದಾಗಿದ್ದು, ಅನುಮೋದನೆ ಸಿಕ್ಕ ಬಳಿಕ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಪಾಸ್ ವಿತರಿಸಲಾಗುತ್ತದೆ.

ವಿದ್ಯಾರ್ಥಿಗಳ ಫ್ರೀ ಬಸ್ ಪಾಸ್​ಗೆ ಇಂದಿನಿಂದ ಅರ್ಜಿ ಸಲ್ಲಿಕೆ ಶುರು: ಈ ದಾಖಲೆಗಳು ಕಡ್ಡಾಯ
ವಿದ್ಯಾರ್ಥಿಗಳ ಉಚಿತ ಬಸ್ ಪಾಸ್‌ಗೆ ಇಂದಿನಿಂದ ಅರ್ಜಿ ಸಲ್ಲಿಕೆ ಆರಂಭImage Credit source: tv9
ಗಣಪತಿ ಶರ್ಮಾ
|

Updated on: Jun 12, 2026 | 9:07 AM

Share

ಬೆಂಗಳೂರು, ಜೂನ್ 12: ಪ್ರಸಕ್ತ ಶೈಕ್ಷಣಿಕ ಸಾಲಿನ ಉಚಿತ ವಿದ್ಯಾರ್ಥಿ ಬಸ್ ಪಾಸ್‌ಗಾಗಿ (Student Bus Pass) ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಅಧಿಕೃತವಾಗಿ ಆರಂಭವಾಗಿದೆ. ಈ ಕುರಿತು ಸಾರಿಗೆ ಇಲಾಖೆಯು ಈಗಾಗಲೇ ಸ್ಪಷ್ಟ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದು, ಅರ್ಹ ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಜೂನ್ 12ರಿಂದಲೇ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯ (Shakti Scheme) ಅಡಿಯಲ್ಲಿ ಈಗಾಗಲೇ ರಾಜ್ಯದ ಎಲ್ಲಾ ಶಾಲಾ-ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯ ಇರುವುದರಿಂದ ಹೆಣ್ಣು ಮಕ್ಕಳು ಪ್ರತ್ಯೇಕವಾಗಿ ಬಸ್ ಪಾಸ್ ಪಡೆಯುವ ಅವಶ್ಯಕತೆ ಇರುವುದಿಲ್ಲ. ಮುಖ್ಯಮಂತ್ರಿಗಳು ಘೋಷಣೆ ಮಾಡಿರುವ ಈ ನೂತನ ಉಚಿತ ಬಸ್ ಪಾಸ್ ಸೌಲಭ್ಯವು ಕೇವಲ ಗಂಡು ಮಕ್ಕಳಿಗೆ (ವಿದ್ಯಾರ್ಥಿಗಳಿಗೆ) ಅನ್ವಯಿಸಲಿದ್ದು, ಅವರು ಕಡ್ಡಾಯವಾಗಿ ಅರ್ಜಿ ಸಲ್ಲಿಸಿ ಪಾಸ್ ಪಡೆದುಕೊಳ್ಳಬೇಕಾಗುತ್ತದೆ. ಇನ್ನು ಈಗಾಗಲೇ ಹಣ ನೀಡಿ ಪಾಸ್ ಪಡೆದುಕೊಂಡಿರುವ ವಿದ್ಯಾರ್ಥಿಗಳಿಗೆ ಮುಂದಿನ 15 ದಿನಗಳಲ್ಲಿ ಹಣ ಮರುಪಾವತಿ (Refund) ಮಾಡಲಾಗುವುದು ಎಂದು ಇಲಾಖೆ ತಿಳಿಸಿದೆ. ಇದಕ್ಕಾಗಿ ಸರ್ಕಾರ ಒಟ್ಟು 86,86,25,000 ಕೋಟಿ ರೂ. ಹಣವನ್ನು ನಾಲ್ಕು ಸಾರಿಗೆ ನಿಗಮಗಳಿಗೆ ಬಿಡುಗಡೆ ಮಾಡಿದೆ.

ಅರ್ಜಿ ಸಲ್ಲಿಕೆ ಎಲ್ಲಿ? ಬೇಕಾಗುವ ದಾಖಲೆಗಳೇನು?

ವಿದ್ಯಾರ್ಥಿಗಳು ತಮ್ಮ ಮೊಬೈಲ್, ಯಾವುದೇ ಸೈಬರ್ ಸೆಂಟರ್, ಬೆಂಗಳೂರು ಒನ್, ಕರ್ನಾಟಕ ಒನ್ ಅಥವಾ ನಾಡಕಚೇರಿಗಳ ಮೂಲಕ ‘ಸೇವಾಸಿಂಧು (Seva Sindhu)’ ಪೋರ್ಟಲ್‌ನಲ್ಲಿ ಲಾಗಿನ್ ಆಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಈ ಕೆಳಗಿನ ದಾಖಲೆಗಳು ಕಡ್ಡಾಯವಾಗಿ ಬೇಕಾಗುತ್ತವೆ;

  • ವಿದ್ಯಾರ್ಥಿಯ ಆಧಾರ್ ಕಾರ್ಡ್
  • ಶಾಲಾ/ಕಾಲೇಜು ಪ್ರವೇಶಾತಿ ರಶೀದಿ (College Admission Receipt)
  • ವಿದ್ಯಾರ್ಥಿಯ ಇತ್ತೀಚಿನ 2 ಪಾಸ್‌ಪೋರ್ಟ್ ಅಳತೆಯ ಫೋಟೋಗಳು

ಮುಖ್ಯವಾಗಿ, ಆನ್‌ಲೈನ್ ಅರ್ಜಿಯ ಪ್ರತಿಯಲ್ಲಿ ವಿದ್ಯಾರ್ಥಿ ಓದುತ್ತಿರುವ ವಿದ್ಯಾಸಂಸ್ಥೆಯ ಮುಖ್ಯಸ್ಥರಿಂದ (Principal/Head Master) ಕಡ್ಡಾಯವಾಗಿ ಸಹಿ ಮತ್ತು ಅಧಿಕೃತ ಸೀಲ್ ಹಾಕಿಸಿಕೊಂಡಿರಬೇಕು.

ಪಾಸ್ ವಿತರಣೆ ಹೇಗೆ?

ವಿದ್ಯಾರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ ನಂತರ, ಆಯಾ ಅರ್ಜಿಗಳನ್ನು ಬಿಎಂಟಿಸಿ (BMTC), ಕೆಎಸ್‌ಆರ್‌ಟಿಸಿ (KSRTC), ವಾಯುವ್ಯ (NWKRTC) ಮತ್ತು ಕಲ್ಯಾಣ ಕರ್ನಾಟಕ (KKRTC) ಸಾರಿಗೆ ನಿಗಮಗಳ ಪಾಸ್ ವಿಭಾಗದ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ. ವಿದ್ಯಾರ್ಥಿಯ ಶಾಲಾ-ಕಾಲೇಜಿನ ಮಾಹಿತಿ ನಿಖರವಾಗಿದ್ದಲ್ಲಿ ಅರ್ಜಿಯನ್ನು ಅನುಮೋದಿಸಲಾಗುತ್ತದೆ (Approval). ಅರ್ಜಿ ಅನುಮೋದನೆಗೊಂಡ ತಕ್ಷಣ ವಿದ್ಯಾರ್ಥಿಯ ಮೊಬೈಲ್ ಸಂಖ್ಯೆಗೆ ಸಂದೇಶ (SMS) ಬರಲಿದ್ದು, ಆ ಬಳಿಕ ನಿಗದಿಪಡಿಸಿದ ಕೌಂಟರ್‌ಗಳಲ್ಲಿ ಪಾಸ್ ಪಡೆಯಬಹುದು.

ಬೆಂಗಳೂರಿನ ಮೆಜೆಸ್ಟಿಕ್, ಕೆಂಗೇರಿ, ಶಾಂತಿನಗರ, ಎಲೆಕ್ಟ್ರಾನಿಕ್ ಸಿಟಿ, ಹೊಸಕೋಟೆ, ಆನೇಕಲ್ ಸೇರಿದಂತೆ ಪ್ರಮುಖ ಆರು ಟಿಟಿಎಂಸಿ (TTMC) ಕೇಂದ್ರಗಳಲ್ಲಿ ಹಾಗೂ ರಾಜ್ಯದ ಎಲ್ಲಾ ಪ್ರಮುಖ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ವಿದ್ಯಾರ್ಥಿಗಳು ಭೌತಿಕ ಪಾಸ್‌ಗಳನ್ನು ಪಡೆದುಕೊಳ್ಳಬಹುದಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us