ಕರ್ನಾಟಕದಲ್ಲಿ ಈ ವರ್ಷವೂ ಮಳೆ ಕೊರತೆ! ಹವಾಮಾನ ಇಲಾಖೆ ಅಂಕಿಅಂಶಗಳು ಇಲ್ಲಿವೆ ನೋಡಿ
ಕರ್ನಾಟಕದಲ್ಲಿ ಈ ವರ್ಷ ಉತ್ತಮ ಮುಂಗಾರು ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಜಿಲ್ಲೆಗಳು, ಮಲೆನಾಡು, ಕಾವೇರಿ ಜಲಾನಯನ ಪ್ರದೇಶಗಳಲ್ಲಿಯೂ ಮಳೆಯಾಗುತ್ತಿದೆ. ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿಯೂ ಮಳೆಯಾಗುತ್ತಿದೆ. ಆದರೂ ಈ ವರ್ಷ ಜೂನ್‌ನಲ್ಲಿ ವಾಡಿಕೆಗಿಂತ ಮಳೆ ಕೊರತೆ ಇದೆ ಎನ್ನುತ್ತಿವೆ ಅಂಕಿಅಂಶಗಳು. ಇದು ಆಶ್ಚರ್ಯ ಆದರೂ ಸತ್ಯ, ಇಲ್ಲಿದೆ ನೋಡಿ ವಿವರ.
ಬೆಂಗಳೂರು, ಜುಲೈ 3: ನೈಋತ್ಯ ಮುಂಗಾರು ಆರಂಭವಾಗಿ ಸುಮಾರು ಒಂದು ತಿಂಗಳ ನಂತರ, ಒಟ್ಟಾರೆಯಾಗಿ ಕರ್ನಾಟಕದಲ್ಲಿ ಜೂನ್‌ನಲ್ಲಿ ಶೇ 2 ರಷ್ಟು ಮಳೆ ಕೊರತೆ ದಾಖಲಾಗಿದೆ. ಜುಲೈನಲ್ಲಿ ದೇಶದ ಬಹುತೇಕ ಭಾಗಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದರೂ ಕರ್ನಾಟಕದಲ್ಲಿ ಸಾಧಾರಣ ಮಳೆಯಾಗಲಿದೆ ಎನ್ನಲಾಗಿದೆ. ರಾಜ್ಯದಲ್ಲಿ ಮಳೆಯ ಪ್ರಮಾಣ ಇನ್ನೆರಡು ದಿನ ಕಡಿಮೆಯಾಗಲಿದ್ದು, ನಂತರದ ದಿನಗಳಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ.
ಜೂನ್ 1 ರಿಂದ ಜುಲೈ 2 ರವರೆಗೆ ರಾಜ್ಯದಲ್ಲಿ ವಾಡಿಕೆಯಂತೆ 216.5 ಮಿಮೀ ಮಳೆಯಾಗಬೇಕಿದ್ದು, 212.5 ಮಿಮೀ ಮಳೆಯಾಗಿದೆ ಎಂದು ಹಾವಾಮಾನ ಇಲಾಖೆ ಅಂಕಿಅಂಶಗಳಿಂದ ತಿಳಿದುಬಂದಿದೆ. ಜುಲೈ ತಿಂಗಳ ವಾಡಿಕೆ ಮಳೆ 252.2 ಮಿಮೀ ಆಗಿದೆ.
ಯಾವ ಜಿಲ್ಲೆಯಲ್ಲಿ ಎಷ್ಟು ಮಳೆ ಕೊರತೆ?
ಹಾಸನ ಜಿಲ್ಲೆಯಲ್ಲಿ ಅತಿ ಹೆಚ್ಚು, ಅಂದರೆ ಶೇ 45ರಷ್ಟು ಕೊರತೆ ದಾಖಲಾಗಿದ್ದು, ವಾಡಿಕೆಯ 172.4 ಮಿಮೀಗೆ ಹೋಲಿಸಿದರೆ 95.6 ಮಿಮೀ ಮಳೆಯಾಗಿದೆ. ಹಾವೇರಿಯಲ್ಲಿ ಎರಡನೇ ಅತಿಹೆಚ್ಚು ಶೇ 43ರಷ್ಟು ಮಳೆ ಕೊರತೆಯಾಗಿದೆ. ಇಲ್ಲಿ ವಾಡಿಕೆಯ 130 ಮಿಮೀ ವಿರುದ್ಧ, 74.3 ಮಿಮೀ ಮಳೆಯಾಗಿದೆ.
ಯಾವ ಜಿಲ್ಲೆಗಳಲ್ಲಿ ಹೆಚ್ಚು ಮಳೆ?
ವಿಜಯಪುರ ಜಿಲ್ಲೆಯಲ್ಲಿ ಗರಿಷ್ಠ ಶೇ 136ರಷ್ಟು ಮಳೆಯಾಗಿದೆ. ಇಲ್ಲಿ ವಾಡಿಕೆಯ ಮಳೆ ಪ್ರಮಾಣ 91.8 ಮಿಮೀ ಆಗಿದ್ದು, ಈ ವರ್ಷ ಜೂನ್‌ನಲ್ಲಿ 216.3 ಮಿಮೀ ಮಳೆಯಾಗಿದೆ. ಅದರ ನಂತರ ಬಳ್ಳಾರಿಯಲ್ಲಿ ಶೇ 127 ರಷ್ಟು ಮಳೆಯಾಗಿದೆ. ವಾಡಿಕೆಯ ಮಳೆ ಪ್ರಮಾಣ 75 ಮಿಮೀಗೆ ಬದಲಾಗಿ 170.5 ಮಿಮೀ ದಾಖಲಾಗಿದೆ. ವಿಜಯನಗರ ಜಿಲ್ಲೆಯಲ್ಲಿ ಶೇ 116ರಷ್ಟು ಮಳೆಯಾಗಿದೆ.
ಬೆಂಗಳೂರು ನಗರ ಪ್ರದೇಶದಲ್ಲಿ ಶೇ 55ರಷ್ಟು ಅಧಿಕ ಮಳೆ ದಾಖಲಾಗಿದೆ. ಇಲ್ಲಿ ವಾಡಿಕೆಯ 77.8 ಮಿಮೀ ವಿರುದ್ಧ, 119.2 ಮಿಮೀ ಮಳೆ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರದಲ್ಲಿ ಶೇ 73ರಷ್ಟು ಅಧಿಕ ಮಳೆಯಾಗಿದೆ. ಇಲ್ಲಿ 69 ಮಿಮೀಗೆ ವಿರುದ್ಧವಾಗಿ, 119.2 ಮಿಮೀ ದಾಖಲಾಗಿದೆ.
ಇದನ್ನೂ ಓದಿ: Karnataka Rains: ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಜುಲೈ 9ರವರೆಗೂ ಭಾರಿ ಮಳೆಯಾಗುವ ಮುನ್ಸೂಚನೆ
ಮಳೆ ಕೊರತೆಯ ಇದ್ದರೂ ಸ್ವಲ್ಪ ಮಟ್ಟಿಗೆ ಜಲಾಶಯದ ಮಟ್ಟವನ್ನು ಹೆಚ್ಚಿಸಲು ಈಗ ಬಂದಿರುವ ಮಳೆಯಿಂದ ನೆರವಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿಗಾ ಕೇಂದ್ರದ (ಕೆಎಸ್‌ಎನ್‌ಡಿಎಂಸಿ) ಅಧಿಕಾರಿಗಳು ತಿಳಿಸಿದ್ದಾರೆ. ಮುಂಬರುವ ತಿಂಗಳುಗಳಲ್ಲಿ ಸಾಕಷ್ಟು ನೀರು ಇರುವುದನ್ನು ಖಚಿತಪಡಿಸಿಕೊಳ್ಳಲು ಜಲಾನಯನ ಪ್ರದೇಶಗಳಲ್ಲಿ ಈಗ ಮಳೆಯಾಗಬೇಕಿರುವುದು ಮುಖ್ಯವಾಗಿದೆ ಎಂದು ಅವರು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ