ಮೃತರನ್ನೂ ಬಿಡದ ಕಳ್ಳರು: ಮಹಿಳೆ ಮೈಮೇಲಿದ್ದ 18 ಗ್ರಾಂ ಚಿನ್ನಾಭರಣಗಳು ಕಳವು
ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ ಕೇರಳಂ ಮೂಲದ ಮಹಿಳೆಯ ಮೈಮೇಲಿದ್ದ ಸುಮಾರು 18 ಗ್ರಾಂ ಚಿನ್ನಾಭರಣಗಳ ಕಳ್ಳತವಾಗಿದೆ. ಅಪಘಾತ ನಡೆದ ಸ್ಥಳದಲ್ಲೇ ಈ ಅಮಾನವೀಯ ಕೃತ್ಯ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ಕುಟುಂಬಸ್ಥರು ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಉಡುಪಿ, ಮೇ 24: ಅಪಘಾತದಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡವರನ್ನೂ ಬಿಡದ ಕಳ್ಳರು, ಮೃತ ಮಹಿಳೆಯ ಮೈಮೇಲಿದ್ದ ಬಂಗಾರದ ಒಡವೆಗಳನ್ನು ಲಪಟಾಯಿಸಿರುವ (gold theft) ಅಮಾನವೀಯ ಘಟನೆ ಉಡುಪಿ (udupi) ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರಿನಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಕೊಲ್ಲೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಮುಖ್ಯಾಂಶಗಳು
- ಮೃತ ಮಹಿಳೆ ಮೈಮೇಲಿದ್ದ ಒಡವೆಗೆ ಕನ್ನ ಹಾಕಿದ ಖದೀಮರು
- ಅಪಘಾತದಲ್ಲಿ ಮೃತಪಟ್ಟವರನ್ನೂ ಬಿಡದ ಕಳ್ಳರು
- ಕೊಲ್ಲೂರು ಠಾಣೆಯಲ್ಲಿ ದೂರು ದಾಖಲು
ನಡೆದಿದ್ದೇನು?
ಮೇ 17ರಂದು ಕೊಲ್ಲೂರಿನ ದಳಿ ಎಂಬಲ್ಲಿ ಕೇರಳಂ ಮೂಲದ ಪ್ರವಾಸಿಗರು ಪ್ರಯಾಣಿಸುತ್ತಿದ್ದ ಜೀಪಿಗೆ ಮೀನು ಸಾಗಾಟ ಇನ್ಸುಲೇಟರ್ ವಾಹನವೊಂದು ಭೀಕರವಾಗಿ ಡಿಕ್ಕಿ ಹೊಡೆದಿತ್ತು. ಈ ಭೀಕರ ಅಪಘಾತದಲ್ಲಿ ಜ್ಯೋತಿ ಹಾಗೂ ಅರಿಯಾ ಅನೂಫ್ ಮೃತಪಟ್ಟಿದ್ದು, ಎಂಟು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ಆದರೆ, ಅಪಘಾತದ ಕರುಣಾಜನಕ ಪರಿಸ್ಥಿತಿಯಲ್ಲೂ ಕಳ್ಳರು ತಮ್ಮ ವಿಕೃತ ಬುದ್ಧಿ ತೋರಿಸಿದ್ದು, ಮೃತ ಮಹಿಳೆ ಜ್ಯೋತಿ ಅವರ ಮೈಮೇಲಿದ್ದ ಸುಮಾರು 18 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ಕದ್ದೊಯ್ದಿದ್ದಾರೆ.
ಇದನ್ನೂ ಓದಿ: ಉಂಡ ಮನೆಗೆ ಕನ್ನ ಹಾಕಿದ ಆಸಾಮಿ: ಕರ್ನಾಟಕ ಬ್ಯಾಂಕ್ಗೆ 16 ಲಕ್ಷ ರೂ ವಂಚನೆ
ಅಪಘಾತ ನಡೆದ ಸ್ಥಳದಲ್ಲಿ ಸೃಷ್ಟಿಯಾಗಿದ್ದ ಗೊಂದಲದ ವಾತಾವರಣವನ್ನೇ ಬಂಡವಾಳ ಮಾಡಿಕೊಂಡ ಖದೀಮರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಘಟನೆ ನಡೆದು ಒಂದು ವಾರದ ಬಳಿಕ ಜ್ಯೋತಿ ಅವರ ಕುಟುಂಬಸ್ಥರಿಗೆ ಚಿನ್ನ ನಾಪತ್ತೆಯಾಗಿರುವುದು ಗಮನಕ್ಕೆ ಬಂದಿದ್ದು, ಇದೀಗ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮೃತರೊಬ್ಬರ ಒಡವೆಗಳನ್ನು ಕದ್ದ ಕಳ್ಳರ ಈ ನೀಚ ಕೃತ್ಯಕ್ಕೆ ಸ್ಥಳೀಯರು ತೀವ್ರ ಆಕ್ರೋಶ ಹಾಗೂ ಬೇಸರ ವ್ಯಕ್ತಪಡಿಸಿದ್ದಾರೆ.
ಕಾರಿನಲ್ಲಿ ಬಂದು ಸರ ಕದಿದ್ದ ಹೈಟೆಕ್ ಕಳ್ಳನ ಬಂಧನ
ಶಿವಮೊಗ್ಗ ತಾಲೂಕಿನ ಅಬ್ಬಲಗೇರಿ ಗ್ರಾಮದ ಬಳಿ ಮೇ 23ರಂದು ನಡೆದ ಸರಗಳ್ಳತನ ಪ್ರಕರಣವನ್ನು ಗ್ರಾಮಾಂತರ ಪೊಲೀಸರು ಭೇದಿಸಿದ್ದಾರೆ. ಫೋರ್ಡ್ ಇಕೋಸ್ಪೋರ್ಟ್ ಕಾರಿನಲ್ಲಿ ಬಂದು ಯುವತಿಯ ಕೊರಳಿನಲ್ಲಿದ್ದ 10 ಗ್ರಾಂ ಚಿನ್ನದ ಸರ ಕದ್ದು ಪರಾರಿಯಾಗಿದ್ದ ಹೈಟೆಕ್ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಮಂಜುನಾಥ್ ಬಂಧಿತ ಆರೋಪಿ.
ಆರೋಪಿ ಮಂಜುನಾಥ್ ಮೇ 13ರಂದಷ್ಟೇ ವಿವಾಹವಾಗಿದ್ದ. ಶೋಕಿಗಾಗಿ ಸರಗಳ್ಳತನ ಮಾಡುತ್ತಿದ್ದ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪಿಎಸ್‌ಐ ನವೀನ್ ಮಠಪತಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿ ಮಂಜುನಾಥ್‌ನನ್ನು ಬಂಧಿಸಿದ್ದು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರು ಮತ್ತು 10 ಗ್ರಾಂ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:37 pm, Sun, 24 May 26




