ಕಳೆದ 54 ದಿನಗಳಿಂದ ಕಡಲತೀರದಲ್ಲಿದ್ದ ಮೊಟ್ಟೆ ಸಂರಕ್ಷಣೆ; ಸಮುದ್ರದ ಒಡಲು ಸೇರಿದ 103 ಆಲಿವ್ ರಿಡ್ಲೆ ಆಮೆ ಮರಿಗಳು
ಒಂದು ಬಾರಿ ಈ ಆಮೆ ಮೊಟ್ಟೆ ಇಟ್ಟರೆ ಸುಮಾರು 100 ಕ್ಕೂ ಹೆಚ್ಚು ಇಡುತ್ತವೆ. ಆದರು ಇತ್ತಿಚಿನ ದಿನಗಳಲ್ಲಿ ಈ ಆಮೆಗಳ ಸಂಖ್ಯೆ ತೀರಾ ಕಡಿಮೆ ಆಗುತ್ತಿದ್ದು, ಆಳಿವಿನ ಅಂಚಿಗೆ ಬಂದಿವೆ. ಹೀಗಾಗಿ ಸರ್ಕಾರ ಇವುಗಳನ್ನ ಸಂರಕ್ಷಣೆ ಮಾಡುವ ಯೋಜನೆಗೆ ಮುಂದಾಗಿದೆ.
ಉತ್ತರ ಕನ್ನಡ: ಜಿಲ್ಲೆಯ ಕಡಲತೀರ ಅನೇಕ ಅಪರೂಪದ ಜೀವಸಂಕುಲಗಳ ವಾಸಸ್ಥಾನವಾಗಿದೆ. ಅದರಲ್ಲೂ ಅಳಿವಿನ ಅಂಚಿನಲ್ಲಿರುವ ಆಲಿವ್ ರಿಡ್ಲೆ(Olive Ridley) ಆಮೆಗಳು ಕಡಲತೀರವನ್ನ ಸಂತಾನೋತ್ಪತ್ತಿ ತಾಣವನ್ನಾಗಿಸಿಕೊಂಡು, ಕಳೆದ 54 ದಿನಗಳ ಹಿಂದೆ ಮೊಟ್ಟೆಗಳನ್ನ ಇಟ್ಟು ತೆರಳಿದ್ದವು. ಆ ಮೊಟ್ಟೆಗಳನ್ನ(Eggs) ಅರಣ್ಯ ಇಲಾಖೆ(Forest department) ಗೂಡು ಕಟ್ಟುವ ಮೂಲಕ ಸಂರಕ್ಷಣೆ ಮಾಡಿತ್ತು. ಇಂದು ಆ ಮೊಟ್ಟೆಗಳನ್ನು ಒಡೆದುಕೊಂಡು ಮರಿಗಳು ಹೊರ ಬಂದವು. ಸದ್ಯ ಮರಿಗಳನ್ನು ಸುರಕ್ಷಿತವಾಗಿ ಸಮುದ್ರದ ಒಡಲಿಗೆ ಸೇರಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ದೇವಭಾಗ ಕಡಲತೀರದಲ್ಲಿ ಆಮೆ ಕಂಡುಬಂದಿದೆ. ಸುಮಾರು 140 ಕಿಮೀ ವಿಸ್ತಾರವಾದ ಕಡಲತೀರ ಹೊಂದಿರುವ ಉತ್ತರ ಕನ್ನಡ ಜಿಲ್ಲೆ. ಹಲವು ಅಪರೂಪದ ಜೀವಿಸಂಕುಲದ ವಾಸಸ್ಥಾನವಾಗಿದೆ. ಅದರಲ್ಲೂ ಅಳಿವಿನ ಅಂಚಿನಲ್ಲಿರುವ ಆಲಿವ್ ರಿಡ್ಲೆ ಆಮೆಗಳು ಜಿಲ್ಲೆಯ ದೇವಭಾಗ, ಅಂಕೋಲದ ಕೇಣಿಭಾಗ, ಹೊನ್ನಾವರ ಹೀಗೆ ಹಲವು ಭಾಗಗಳಲ್ಲಿ ಮೊಟ್ಟೆ ಇಟ್ಟು ತೆರಳಿದ್ದವು. ಅದರಲ್ಲಿ ದೇವಭಾಗದಲ್ಲಿ 55 ದಿನಗಳ ಹಿಂದೆ ಕಡಲಾಮೆ ಮೊಟ್ಟೆ ಇಟ್ಟು ತೆರಳಿತ್ತು. ಇಂದು ಆ ಮೊಟ್ಟೆಗಳನ್ನ ಒಡೆದುಕೊಂಡು ಮರಿಗಳು ಹೊರ ಬಂದವು. ಅವುಗಳನ್ನು ಅತ್ಯಂತ ಸುರಕ್ಷಿತವಾಗಿ ಅರಣ್ಯ ಇಲಾಖೆ ನೇತೃತ್ವದಲ್ಲಿ ಸಮುದ್ರಕ್ಕೆ ಬಿಡಲಾಯಿತು.
ಹಿಂದೆಂದೂ ಇಂತಹ ಕಾರ್ಯ ಮಾಡಿರದ ಅರಣ್ಯ ಇಲಾಖೆ. ಸರ್ಕಾರದ ನಿರ್ದೆಶನದ ಮೇರೆಗೆ ಈ ವರ್ಷ ಮೊಟ್ಟೆಗಳ ಸಂರಕ್ಷಣೆ ಮಾಡಿದೆ. ಜೊತೆಗೆ ಮರಿಗಳನ್ನು ಸಮುದ್ರಕ್ಕೆ ಬಿಡುವ ಮೂಲಕ ಸಂತೋಷ ಹಂಚಿಕೊಂಡಿದೆ. ಇನ್ನು ಅಳಿವಿನ ಅಂಚಿನಲ್ಲಿರುವ ಪ್ರಾಣಿಗಳ ಸಂರಕ್ಷಣೆ ಕಾಯ್ದೆ ಅಡಿ, ಆಲಿವ್ ರಿಡ್ಲೆ ಆಮೆ ಮರಿಗಳನ್ನ ಸುರಕ್ಷಿತವಾಗಿ ಸಂರಕ್ಷಣೆ ಮಾಡಿ ಇಂದು ಅರಣ್ಯ ಇಲಾಖೆ ಸಮುದ್ರದ ಒಡಲಿಗೆ ಸೇರಿಸಿದೆ ಎಂದು ಎಸಿಎಪ್ ಮಂಜುನಾಥ ನಾವಿ ಹೇಳಿದ್ದಾರೆ.
ಇನ್ನೂ ಕರ್ನಾಟಕದ ಕಡಲತೀರ ಪ್ರದೇಶದಲ್ಲಿ ಮೂರು ಪ್ರಬೇಧದ ಆಮೆಗಳನ್ನ ನಾವು ಕಾಣಬಹುದು. ಗ್ರೀನ ಟರ್ಟಲ್, ಹಾಕ್ ಬಿಲ್ಡ್, ಆಲಿವ್ ರಿಡ್ಲೆ ಹೀಗೆ ಮೂರು ಪ್ರಬೇಧಗಳಿವೆ. ಅದರಲ್ಲಿ ಆಲಿವ್ ರಿಡ್ಲೆ ಆಮೆ ಉತ್ತರ ಕನ್ನಡ ಜಿಲ್ಲೆಯ ಕಡಲತೀರವನ್ನ ತನ್ನ ಸಂತಾನೋತ್ಪತ್ತಿ ತಾಣವನ್ನಾಗಿ ಆಯ್ಕೆ ಮಾಡಿಕೊಂಡಿದೆ. ಪ್ರಮುಖವಾಗಿ ಈ ಆಮೆಗಳು ಜನವರಿ ತಿಂಗಳಿನಿಂದ ಮಾರ್ಚ್ವರಗೆ ಸಂತಾನೋತ್ಪತ್ತಿ ಮಾಡುತ್ತವೆ. ಪ್ರಶಾಂತವಾದ ಕಡಲತೀರ ಪ್ರದೇಶದಲ್ಲಿ ಹುಣ್ಣಿಮೆ ಬೆಳಕಿನಲ್ಲಿ ಬಂದು ಮರಳಿನಲ್ಲಿ ಗೂಡು ಕಟ್ಟಿ ಮೊಟ್ಟೆಯಿಟ್ಟು, ಮರಳಿ ಆ ಗೂಡನ್ನು ಮುಚ್ಚಿ ಯಾರಿಗೂ ಗೊತ್ತಾಗದಂತೆ ತಾನು ಬಂದ ದಾರಿಯನ್ನ ಅಳಿಸುತ್ತಾ ಮರಳಿ ಸಮುದ್ರಕ್ಕೆ ಸೇರಿಕೊಳ್ಳುತ್ತವೆ.
ಒಂದು ಬಾರಿ ಈ ಆಮೆ ಮೊಟ್ಟೆ ಇಟ್ಟರೆ ಸುಮಾರು 100 ಕ್ಕೂ ಹೆಚ್ಚು ಇಡುತ್ತವೆ. ಆದರು ಇತ್ತಿಚಿನ ದಿನಗಳಲ್ಲಿ ಈ ಆಮೆಗಳ ಸಂಖ್ಯೆ ತೀರಾ ಕಡಿಮೆ ಆಗುತ್ತಿದ್ದು, ಆಳಿವಿನ ಅಂಚಿಗೆ ಬಂದಿವೆ. ಹೀಗಾಗಿ ಸರ್ಕಾರ ಇವುಗಳನ್ನ ಸಂರಕ್ಷಣೆ ಮಾಡುವ ಯೋಜನೆಗೆ ಮುಂದಾಗಿದೆ. ಈ ಆಮೆಗಳ ಪ್ರಾಮುಖ್ಯತೆ ಎನೆಂದರೆ, ಸಮುದ್ರದ ಆಹಾರ ಸರಪಳಿಯನ್ನ ಭದ್ರತೆಗೊಳಿಸುತ್ತವೆ. ಅನುಪಯುಕ್ತವಾದ ಜೆಲ್ಲಿ ಮೀನುಗಳನ್ನ ಇದು ಭಕ್ಷಿಸುವುದರಿಂದ ಮೀನುಗಾರಿಗೆ, ಮೀನಿನ ಸಂತತಿಯಲ್ಲಿ ಬಹಳ ಉಪಯುಕ್ತವಾದ ಪಾತ್ರ ವಹಿಸುತ್ತವೆ.
ವಿಪರ್ಯಾಸವೆಂದರೆ 100 ಆಮೆಗಳಲ್ಲಿ ಕೇವಲ ಒಂದು ಅಥವಾ ಎರಡು ಆಮೆಗಳು ಮಾತ್ರ ಯೌವ್ವನದ ಸ್ಥತಿ ತಲುಪುತ್ತವೆ ಎಂಬ ಉಲ್ಲೆಖಗಳಿವೆ. ಹೀಗಾಗಿ ಇದರ ಸಂತತಿ ಕಡಿಮೆ ಇದೆ. ಮುಖ್ಯವಾಗಿ ಜನರಲ್ಲಿ ಕೂಡ ಇದರ ಬಗ್ಗೆ ಅರಿವು ಅವಶ್ಯಕವಾಗಿ ಬೇಕಿದೆ. ಯಾಕೆಂದರೆ ಈ ಆಮೆಗಳ ಮೊಟ್ಟೆ, ಹೆಚ್ಚು ಪ್ರೋಟೀನ್ ಯುಕ್ತವಾಗಿದ್ದರಿಂದ ಇವುಗಳನ್ನ ತಿನ್ನುತ್ತಾರೆ. ಇದನ್ನ ತಪ್ಪಿಸಬೇಕು. ಆಗ ಮಾತ್ರ ನಾವು ಕಡಲತೀರದ ಅಪರೂಪದ ಪ್ರಾಣಿಗಳನ್ನು ಸಂರಕ್ಷಣೆ ಮಾಡಲು ಸಾಧ್ಯತೆ ಇದೆ ಎಂದು ಡಾ. ಶಿವಕುಮಾರ್ ಹೇಳಿದ್ದಾರೆ.
ಒಟ್ಟಾರೆಯಾಗಿ ಕಡಲತೀರದ ಅಪರೂಪದ 103 ಆಲಿವ ರಿಡ್ಲೆ ಆಮೆ ಮರಿಗಳನ್ನ ಅತ್ಯಂತ ಸುರಕ್ಷಿತವಾಗಿ, ಅರಣ್ಯ ಇಲಾಖೆಯ ಸಮ್ಮುಖದಲ್ಲಿ ಸಮುದ್ರದ ಒಡಲಿಗೆ ಸೇರಿಸಲಾಯಿತು. ಅಳಿವಿನ ಅಂಚಿನಲ್ಲಿರುವ ಆಮೆಗಳ ಸಂರಕ್ಷಣೆ ಮಾಡುವುದು ಕೇವಲ ಸರ್ಕಾರದ ಕೆಲಸ ಮಾತ್ರವಲ್ಲ ಸಾರ್ವಜನಿಕರದ್ದು ಇದೆ. ಜನರು ಆಮೆಗಳನ್ನು ಮತ್ತು ಅದರ ಮೊಟ್ಟೆಗಳನ್ನ ತಿನ್ನುವುದು ಬಿಡಬೇಕು. ಅವುಗಳ ಸಂರಕ್ಷಣೆಗೆ ಮುಂದಾಗಬೇಕು ಎಂಬುವುದು ನಮ್ಮ ಆಶಯ.
ವರದಿ: ವಿನಾಯಕ ಬಡಿಗೇರ
ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಅಪರೂಪದ ಆಲಿವ್ ರಿಡ್ಲೆ ಆಮೆಯ ಮೊಟ್ಟೆಗಳು ಪತ್ತೆ