ವಿಜಯಪುರ: ಒನ್ ನೇಷನ್ ಒನ್ ಕಾರ್ಡ್ ಹೆಸರಿನಲ್ಲಿ ಎನ್ಜಿಓ ಮಹಾಮೋಸ, 95 ಲಕ್ಷ ರೂ ವಂಚನೆ
ನೂತನವಾಗಿ ಜಾರಿಯಾಗಿರೋ ಒನ್ ನೇಷನ್ ಒನ್ ಕಾರ್ಡ್ ಯೋಜನೆಯನ್ನೇ ಬಂಡವಾಳ ಮಾಡಿಕೊಂಡ ತುಮಕೂರು ಜಿಲ್ಲೆ ಮಧುಗಿರಿ ಮೂಲದ ಎಸ್ ಸುಧೀರ್ ಬಾಬು ಉರ್ಪ್ ಸುಧೀರ್ ರೆಡ್ಡಿ ಹಾಗೂ ಶಶಾಂಕ್ ಎಸ್ ಎನ್ ಎಂಬುವವರು ಎನ್ ಜಹಿ ಓ ಮೂಲಕ ಜನರಿಗೆ ಪಂಗ ನಾಮ ಹಾಕಿದ್ದಾರೆ.
ವಿಜಯಪುರ, ಆ.10: ತುಮಕೂರು ಮೂಲದ ಇಬ್ಬರು ಯುವಕರು ಕೇಂದ್ರ ಸರ್ಕಾರದ ಯೋಜನೆಯ ಹೆಸರಿನಲ್ಲಿ ವಿಜಯಪುರ ಜಿಲ್ಲೆಯ ಉದ್ಯೋಗಾಕಾಂಕ್ಷಿಗಳಿಗೆ ಎನ್ಜಿಓದ ಮೂಲಕ ಮೋಸ ಮಾಡಿದ್ದಾರೆ. ಇತ್ತೀಚೆಗೆ ಆಡಳಿತಾತ್ಮಕ ದೃಷ್ಟಿಯಿಂದ, ಸೇವಾ ದೃಷ್ಟಿಯಿಂದ ಕೇಂದ್ರ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿ ಮಾಡಿದೆ. ಈ ಪೈಕಿ ಪ್ರಧಾನಿ ನರೇಂದ್ರ ಮೊದಿ ಅವರು ಜಾರಿಗೆ ತಂದ ಒನ್ ನೇಷನ್ ಒನ್ ಕಾರ್ಡ್ ಕೂಡಾ ಒಂದಾಗಿದೆ. ಹಲವಾರು ವಹಿವಾಟಿಗೆ ಈ ಕಾರ್ಡ್ ಬಳಕೆ ಮಾಡಬಹುದಾಗಿದೆ. ನೂತನವಾಗಿ ಜಾರಿಯಾಗಿರೋ ಒನ್ ನೇಷನ್ ಒನ್ ಕಾರ್ಡ್ ಯೋಜನೆಯನ್ನೇ ಬಂಡವಾಳ ಮಾಡಿಕೊಂಡ ತುಮಕೂರು ಜಿಲ್ಲೆ ಮಧುಗಿರಿ ಮೂಲದ ಎಸ್ ಸುಧೀರ್ ಬಾಬು ಉರ್ಪ್ ಸುಧೀರ್ ರೆಡ್ಡಿ ಹಾಗೂ ಶಶಾಂಕ್ ಎಸ್ ಎನ್ ಎಂಬುವವರು ಎನ್ ಜಹಿ ಓ ಮೂಲಕ ಜನರಿಗೆ ಪಂಗ ನಾಮ ಹಾಕಿದ್ದಾರೆ.
ಕೇಂದ್ರ ಸರ್ಕಾರದ ಒನ್ ನೇಷನ್ ಒನ್ ಕಾರ್ಡ್ ನ ಯೋಜನೆಯನ್ನು ಕರ್ನಾಟಕಕ್ಕೆ ಅನ್ವಯಿಸುವಂತೆ ಗುತ್ತಿಗೆ ಪಡೆದಿದ್ದೇವೆ, ಈ ಯೋಜನೆಯಲ್ಲಿ ಸಾಕಷ್ಟು ಉದ್ಯೋಗಾವಕಾಶವಿದೆ ಎಂದು ವಿಜಯಪುರದ ಎನ್ಜಿಓವೊಂದರ ಮುಖ್ಯಸ್ಥರನ್ನು ನಂಬಿಸಿದ್ಧಾರೆ. ಆರೋಪಿತರು ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನ ತೊರವಿ ಗ್ರಾಮದ ಸ್ಪೂರ್ತಿ ವುಮೆನ್ಸ್ ರೂರಲ್ ಡೆವೆಲಪ್ಮೆಂಟ್ ಅಸಸೋಷಿಯೇಷನ್ ಸಂಸ್ಥೆಯ ಮುಖ್ಯಸ್ಥೆ ಶಶಿಕಲಾ ತಳಸದಾರ ಎಂಬುವವರಿಗೆ ಸಂಪರ್ಕಿಸಿ ಇಡೀ ರಾಜ್ಯದಲ್ಲಿ ಒನ್ ನೇಷನ್ ಒನ್ ಕಾರ್ಡ್ ಯೋಜನೆ ಗುತ್ತಿಗೆ ನಮಗೆ ಸಿಕ್ಕಿದೆ ಎಂದು ನಂಬಿಸಿದ್ದಾರೆ. ಯೋಜನೆಯ ಎನರಾಲ್ಮೆಂಟ್ ಮಾಡುವುದು, ಮಾಡಿದ ಕಾರ್ಡ್ಗಳನ್ನು ಪ್ರಿಂಟ್ ತೆಗೆಯುವ ಕೆಲಸಕ್ಕೆ ಒಂದು ಗ್ರಾಮ ಪಂಚಾಯತಿಗೆ ಒಬ್ಬರು ಸಂಯೋಜಕರು ಹಾಗೂ 25 ಜನ ಸಹಾಯಕರು, ಕಂಪ್ಯೂಟರ್ ಆಪರೇಟರ್ಸ್, ಡಾಟಾ ಎಂಟ್ರೀ ಮಾಡುವವರು ಬೇಕಾಗಿದೆ.
ಸಿಇಎನ್ ಪೊಲೀಸರಿಂದ ಆರೋಪಿಗಳ ಬಂಧನ
ಇಡೀ ರಾಜ್ಯದ ನೇಮಕಾತಿಯನ್ನು ನಿಮ್ಮ ಎನ್ಜಿಓದಿಂದ ಮಾಡಿಕೊಳ್ಳುತ್ತೇವೆಂದು ಶಶಿಕಲಾ ಅವರಿಗೆ ನಂಬಿಸಿದ್ದಾರೆ. ಇನ್ನು ಕೋ ಆರ್ಡಿನೇಟರ್ ಪೋಸ್ಟಿಗೆ 10 ಸಾವಿರ ರೂಪಾಯಿ, ಇತರರಿಗೆ 1299 ರೂಪಾಯಿ ಭದ್ರಾ ಶುಲ್ಕ ಉದ್ಯೋಗಾಕಾಂಕ್ಷಿಗಳಿಂದ ಪಡೆಯಬೇಕು. ನಾವು ಆನ್ ಲೈನ್ ಮೂಲಕ ಪರೀಕ್ಷೆ ನಡೆಸುತ್ತೇವೆಂದು ನಂಬಿಸಿದ್ದಾರೆ. ಇವರ ಮಾತನ್ನು ನಂಬಿ ವುಮೆನ್ಸ್ ರೂರಲ್ ಡೆವೆಲಪ್ಮೆಂಟ್ ಅಸೋಸಿಯೇಷನ್ ಸಂಸ್ಥೆಯ ಮುಖ್ಯಸ್ಥೆ ಶಶಿಕಲಾ ತಳಸದಾರ ರಾಜ್ಯದ ವಿವಿಧ ಭಾಗದ 6000 ಜನರಿಂದ ಡಿಪಾಸಿಟ್ ಹಣವನ್ನು ತಮ್ಮ ಖಾತೆಗೆ ಹಾಕಿಸಿಕೊಂಡು ಬಳಿಕ ಆ ಹಣವನ್ನು ಎಸ್ ಸುಧೀರ್ ಬಾಬು ಉರ್ಪ್ ಸುಧೀರ್ ರೆಡ್ಡಿ ಹಾಗೂ ಶಶಾಂಕ್ ಅವರು ಹೇಳಿದ ಖಾತೆಗಳಿಗೆ ಜಮಾ ಮಾಡಿದ್ದಾರೆ. ನಂತರ ಇವರ ವರ್ತನೆ ಮೇಲೆ ಸಂಶಯಗೊಂಡ ಶಶಿಕಲಾ ನಗರದ ಸಿಇಎನ್ ಪೊಲೀಸರಿಗೆ ದೂರು ನೀಡಿದ್ದಾರೆ. ತ್ವರಿತವಾಗಿ ತನಿಖೆ ನಡೆಸಿದ ಸಿಇಎನ್ ಪೊಲೀಸ್ ಇನ್ಸ್ ಪೆಕ್ಟರ್ ರಮೇಶ ಆವಜಿ ಹಾಗು ಇತರ ಸಿಬ್ಬಂದಿ ಎಸ್ ಸುಧೀರ್ ಬಾಬು ಉರ್ಪ್ ಸುಧೀರ್ ರೆಡ್ಡಿ ಹಾಗೂ ಶಶಾಂಕ್ ಎಸ್ ಎನ್ ಎಂಬುವರನ್ನು ಹೆಡೆಮುರಿ ಕಟ್ಟಿ ತಂದಾಗ ಒನ್ ನೇಷನ್ ಒನ್ ಕಾರ್ಡ್ ಯೋಜನೆಗೂ ಇವರಿಗೆ ಯಾವುದೇ ಸಂಬಂಧ ಇಲ್ಲ. ಇದೆಲ್ಲಾ ಮೋಸ ಎಂಬುದು ಗೊತ್ತಾಗಿದೆ.
ಇದನ್ನೂ ಓದಿ: ಕೆಆರ್ ಆಸ್ ಜಲಾಶಯದಿಂದ ವಿಸಿ ಮತ್ತು ಆಣೆಕಟ್ಟು ನಾಲೆಗಳಿಗೆ ಷರತ್ತಿನ ಮೇಲೆ ನೀರು ಹರಿಸುವ ಆದೇಶ ಹೊರಡಿಸಿದ ಕೃಷಿ ಇಲಾಖೆ
ಈ ರೀತಿಯಾಗಿ ಒನ್ ನೇಷನ್ ಒನ್ ಕಾರ್ಡ್ ಯೋಜನೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಉದ್ಯೋಗ ನೀಡುವ ಭರವಸೆಯಿಂದ ಭದ್ರತಾ ಠೇವಣಿಯ ರೂಪದಲ್ಲಿ ಶಶಿಕಲಾ ತಳಸದಾರ ಮೂಲಕ ಆರೋಪಿತರು ಒಟ್ಟು 95 ಲಕ್ಷ 75 ಸಾವಿರ 548 ರೂಪಾಯಿಗಳನ್ನು ಎಸ್ ಸುಧೀರ್ ಬಾಬು ಉರ್ಪ್ ಸುಧೀರ್ ರೆಡ್ಡಿ ಹಾಗೂ ಶಶಾಂಕ್ ಹಾಗೂ ಇತರರ ಖಾತೆಗಳಿಗೆ ಆನ್ ಲೈನ್ ಮೂಲಕ, ಗೂಗಲ್ ಪೇ ಮೂಲಕ, ಆರ್ ಟಿ ಜಿ ಎಸ್ ಹಾಗೂ ಇ ಎಫ್ ಟಿ ಮೂಲಕ ಹಣ ಹಾಕಿಸಿಕೊಂಡಿದ್ದಾರೆ. ಜೊತೆಗೆ ಈ ಯೋಜನೆಗೆ ಬೇಕಾದ ಕಂಪ್ಯೂಟರ್, ಬಯೋಮೆಟ್ರಿಕ್ ಯಂತ್ರ, ಪ್ರಿಂಟರ್ ಸೇರಿದಂತೆ ಎಲ್ಲವನ್ನೂ ನಾವು ಕೊಡುತ್ತೇವೆಂದು ಹೇಳಿ ಯಾವುದನ್ನೂ ಪೂರೈಸಿಲ್ಲ. ಇವರ ಜೊತೆಗೆ ಮತ್ತಷ್ಟು ಜನ ಕೈವಾಡವಿರೋ ಸಂಶಯವಿದ್ದು ಅವರನ್ನೂ ಬಂಧಿಸುವಲ್ಲಿ ನಿರತರಾಗಿದ್ದಾರೆ. ಸದ್ಯ ಬಂಧಿತರಿಂದ ಮೂರು ಕಂಪ್ಯೂಟರ್, ಸಿಪಿಯುಗಳನ್ನು, ನಕಲಿ ಪ್ರಮಾಣ ಪತ್ರ, ಎಟಿಎಂ ಕಾರ್ಡ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಈ ಪ್ರಕರಣಗದಲ್ಲಿ ಭಾಗಿಯಾಗಿದ್ದಾರೆನ್ನಲಾದ 14 ಜನರ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. 10 ಲಕ್ಷ ಡೆಬಿಟ್ ಪ್ರೀಜ್ ಮಾಡಿಸಿದ್ದಾರೆ. ಸದ್ಯ ತನಿಖೆ ಮುಂದುವರೆದಿದ್ದು ತನಿಖೆ ಬಳಿಕ ಮತ್ತಷ್ಟು ಮಾಹಿತಿ ಸಿಗಲಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಇಡೀ ಪ್ರಕರಣವನ್ನು ಬೇಧಿಸಿ ಆರೋಪಿತರನ್ನು ಬಂಧಿಸಿದ ತಂಡಕ್ಕೆ ಎಸ್ಪಿ ಆನಂದಕುಮಾರ ಶ್ಲಾಘಿಸಿದ್ದಾರೆ. ಒನ್ ನೇಷನ್ ಒನ್ ಕಾರ್ಡ್ ಯೋಜನೆಯನ್ನೇ ಉಪಯೋಗಿಸಿಕೊಂಡು ಉದ್ಯೋಗಾಂಕ್ಷಿಗಳಿಗೆ ಕೆಲಸ ನೀಡುವ ಆಮೀಷದಿಂದ ಎನ್ ಜಿ ಓ ಮೂಲಕ ಹಣ ಲೂಟಿ ಮಾಡಿದ್ದು ಮಾತ್ರ ಸಿನೀಮಿಯ ಮಾದರಿಯಲ್ಲೇ ಆರೋಪಿತರು ಪ್ಕ್ಯಾನ್ ಮಾಡಿದ್ದು ಕಂಡು ಬಂದಿದೆ.
ವಿಜಯಪುರ ಜಿಲ್ಲೆಗೆ ಸಂಬಂಧಿಸಿ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ