ಬೆಂಗಳೂರು ತೊರೆಯುತ್ತಿವೆ ಪಕ್ಷಿಗಳು, ಉಳಿಸಿಕೊಳ್ಳಲು ಏನು ಮಾಡಬೇಕಿದೆ?

ಯೂರೋಪ್, ಚೀನಾ, ಮಂಗೋಲಿಯಾ, ಹಿಮಾಲಯಗಳಿಂದ ಸಾವಿರಾರು ಸಂಖ್ಯೆಯ ಹಕ್ಕಿಗಳು ಬೆಂಗಳೂರಿಗೆ ವಲಸೆ ಬರುತ್ತಿದ್ದವು. ಆದರೆ ಈಗ ಆ ಹಕ್ಕಿಗಳು ಬೆಂಗಳೂರಿಗೆ ಬರುತ್ತಿಲ್ಲ ಏಕೆ? ಬೆಂಗಳೂರಿಗೆ ಬರುತ್ತಿದ್ದ ಹಕ್ಕಿಗಳೆಲ್ಲ ಎಲ್ಲಿ ಹೋದವು?

ಬೆಂಗಳೂರು ತೊರೆಯುತ್ತಿವೆ ಪಕ್ಷಿಗಳು, ಉಳಿಸಿಕೊಳ್ಳಲು ಏನು ಮಾಡಬೇಕಿದೆ?
Follow us
ಮಂಜುನಾಥ ಸಿ.
|

Updated on:May 06, 2024 | 10:36 AM

‘ಹಕ್ಕಿ ಹಾರುತಿದೆ ನೋಡಿದಿರಾ’ ಪದ್ಯದಲ್ಲಿ ಕವಿ ದ.ರಾ ಬೇಂದ್ರೆ, ಕಾಲವನ್ನು ಅಥವಾ ಸಮಯವನ್ನು ಹಕ್ಕಿಗೆ ಹೋಲಿಸಿದ್ದಾರೆ. ಹಕ್ಕಿ ಹಾರಿದಂತೆ ಕಾಲ ಸರಿದು ಹೋಗುತ್ತಿದೆ ಎಂದಿದ್ದಾರೆ ಕವಿ. ವೈರುಧ್ಯವೆಂದರೆ ಈಗ ಹಕ್ಕಿಗಳ ಪಾಲಿಗೆ ಕಾಲ ಸರಿದು ಹೋಗುತ್ತಿದೆ. ಅವುಗಳ ಅಸ್ಥಂಗತದ ಕಾಲ ಸನ್ನಿಹಿತವಾಗುತ್ತಿದೆ. ಮನುಷ್ಯ ಭೂಮಿಯ ಮೇಲೆ ಹುಟ್ಟುವ ಲಕ್ಷಾಂತರ ವರ್ಷಗಳ ಮುಂಚೆಯೇ ಭೂಮಿಯ ಮೇಲೆ ಜನಿಸಿದ್ದ ಹಕ್ಕಿಗಳು ಈಗ ನಿಧಾನಕ್ಕೆ ತನ್ನ ಸಹ ಒಡೆತನದ ಭೂಮಿಯನ್ನು ಬಿಟ್ಟು ಕಣ್ಮರೆಯಾಗುತ್ತಿವೆ. ಸ್ಟೇಟ್ ಆಫ್ ಇಂಡಿಯಾಸ್ ಬರ್ಡ್ಸ್ ನ 2023ರ ವರದಿಯ ಪ್ರಕಾರ 338 ಪಕ್ಷಿ ಪ್ರಭೇಧಗಳ ಶೇಕಡ 60% ಹಕ್ಕಿಗಳು ಇಲ್ಲವಾಗಿವೆ. ಭಾರತದ ಇತರೆ ಭಾಗದ ಕತೆ ಬಿಡಿ, ಬೆಂಗಳೂರಿನಿಂದಲೇ ಎಷ್ಟೋ ಅಪರೂಪದ ಹಕ್ಕಿಗಳು ಕಣ್ಮರೆಯಾಗಿವೆ. ನಾವುಗಳು ಅದನ್ನು ಗುರುತಿಸುವ ಗೋಜಿಗೂ ಹೋಗಿಲ್ಲ!

ಬೆಂಗಳೂರನ್ನು ಗ್ಲೋಬಲ್ ಸಿಟಿ ಮಾಡುವ ಭರದಲ್ಲಿ ನೂರಾರು ವರ್ಷಗಳಿಂದ ಬೆಂಗಳೂರನ್ನು ತಮ್ಮ ಮನೆ ಮಾಡಿಕೊಂಡಿದ್ದ ಹಕ್ಕಿಗಳನ್ನು ನಾವು ಅವುಗಳ ಮನೆಯಿಂದಲೇ ಹೊರಗಟ್ಟಿದ್ದೇವೆ. ಚಳಿಗಾಲದ ಸಮಯದಲ್ಲಿ ದೂರ-ದೂರದ ದೇಶಗಳಿಂದ ಅಪರೂಪದಲ್ಲಿ ಅಪರೂಪದ ಹಕ್ಕಿಗಳು ಹಿಂಡು ಹಿಂಡಾಗಿ ಬೆಂಗಳೂರಿಗೆ ಬರುತ್ತಿದ್ದವು, ಅವುಗಳಲ್ಲಿ ಹಲವಾರು ಹಕ್ಕಿಗಳು ಇಂದು ಕಣ್ಮರೆಯಾಗಿವೆ. ಬೆಂಗಳೂರಿನಲ್ಲಿ ಹಲವು ಪ್ರಭೇದದ ಹಕ್ಕಿಗಳಿಗೆ ಅನುಕೂಲಕರವಾದ ವಿವಿಧ ಗುಣಲಕ್ಷಣಗಳನ್ನು ಹೊಂದಿದ ಆವಾಸಸ್ಥಾನ (ಹ್ಯಾಬಿಟಾಟ್)ಗಳಿದ್ದವು. ತಮಗೆ ಅನುಕೂಲಕರವಾದ ವಾಸಸ್ಥಾನಗಳನ್ನು ಅರಸಿ ದೂರ ದೂರದಿಂದ ಹಕ್ಕಿಗಳು ವಲಸೆ ಬರುತ್ತಿದ್ದವು. ಆದರೆ ಕಳೆದ 10-15 ವರ್ಷಗಳಲ್ಲಿ ಆವಾಸಸ್ಥಾನಗಳೆಲ್ಲ ಗುರುತೇ ಸಿಗದ ರೀತಿಯಲ್ಲಿ ಬದಲಾಗಿ ಹೋಗಿವೆ. ಆವಾಸಸ್ಥಾನಗಳ ನಷ್ಟವೇ ವಲಸೆ ಹಕ್ಕಿಗಳು ಬೆಂಗಳೂರನ್ನು ತೊರೆಯಲು ಪ್ರಮುಖ ಕಾರಣ ಎಂದು ಗುರುತಿಸುತ್ತಾರೆ ಹವ್ಯಾಸಿ ಪಕ್ಷಿ ವೀಕ್ಷಕ ಕ್ಲೆಮೆಂಟ್ ಫ್ರಾನ್ಸಿಸ್. ಇವರು ಕಳೆದ 35 ವರ್ಷಗಳಿಂದಲೂ ವನ್ಯಜೀವಿ ಫೋಟೊಗ್ರಫಿ ಹಾಗೂ ಪಕ್ಷಿ ವೀಕ್ಷಣೆ ಹಾಗೂ ಅಧ್ಯಯನ ಮಾಡುತ್ತಿದ್ದಾರೆ.

Spotted Crack

ಸ್ಪಾಟೆಡ್ ಕ್ರೇಕ್ ಚಿತ್ರ: ದೀಪಲ್ ಎಲ್​ಎಂ

ಬೆಂಗಳೂರಿನ ಹೆಸರುಘಟ್ಟ, ಟಿಜೆ ಹಳ್ಳಿ, ನಗರದ ಹೊರವಲಯದಲ್ಲಿರುವ ಹೊಸಕೋಟೆ ಕೆರೆ, ಆನೆಕಲ್, ಮೈಸೂರು ರಸ್ತೆಯ ಒಣ ಗುಡ್ಡಗಳು, ನಂದಿ ಬೆಟ್ಟ ಇವುಗಳು ವಲಸೆ ಹಕ್ಕಿಗಳ ಪ್ರಮುಖ ಆವಾಸಸ್ಥಾನಗಳಾಗಿದ್ದವು. ಬೆಂಗಳೂರಿನಲ್ಲಿದ್ದ ಹಲವು ಕೆರೆಗಳು ಹಲವು ಪ್ರಭೇದದ ಹಕ್ಕಿಗಳನ್ನು ಸೆಳೆಯುತ್ತಿದ್ದವು. ಆದರೆ ಕಳೆದ ಕೆಲವೇ ವರ್ಷಗಳಲ್ಲಿ ಬೆಂಗಳೂರಿನ ಹಲವು ಕೆರೆಗಳನ್ನು ಮುಚ್ಚಿ ಸೈಟುಗಳನ್ನಾಗಿ ಬದಲಾವಣೆ ಮಾಡಿ, ಅಪಾರ್ಟ್ಮೆಂಟ್, ಮಾಲ್ಗಳ ನಿರ್ಮಾಣ ಮಾಡಲಾಗಿದೆ. ಇದು ಕೇವಲ ಹಕ್ಕಿಗಳ ಮೇಲೆ ಮಾತ್ರವೇ ಅಲ್ಲ, ಬೆಂಗಳೂರಿನ ಜನರ ಮೇಲೆ, ಬೆಂಗಳೂರಿನ ವಾತಾವರಣದ ಮೇಲೂ ಭಾರಿ ದೊಡ್ಡ ಪರಿಣಾಮ ಬೀರಿದೆ, ಅದರ ಪರಿಣಾಮವನ್ನು ಈಗಾಗಲೇ ಬೆಂಗಳೂರಿಗರು ಎದುರಿಸುತ್ತಿದ್ದಾರೆ, ಭವಿಷ್ಯ ಇನ್ನೂ ಹೆಚ್ಚಿನ ಸಂಕಷ್ಟದಿಂದ ಕೂಡಿರಲಿದೆ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ ಕ್ಲೆಮೆಂಟ್.

Ruddy Shelduck

ರಡ್ಡಿ ಶೆಲ್ಡಕ್, ಚಿತ್ರ: ದೀಪಕ್ ಎಲ್​ಎಂ

‘ಹೆಸರುಘಟ್ಟ ಒಂದು ಅಪರೂಪದ ಹ್ಯಾಬಿಟಾಟ್ ಆಗಿತ್ತು. ಅಲ್ಲಿ ಜೌಗು, ಹಸಿರು ಹಾಸು, ಗದ್ದೆ ಹೀಗೆ ಹಲವು ವಿಧದ ಹಕ್ಕಿಗಳಿಗೆ ಒಗ್ಗುವ ಪರಿಸರವಿತ್ತು. ಇದೇ ಕಾರಣಕ್ಕೆ ಹೆಸರುಘಟ್ಟಕ್ಕೆ ಹಲವು ಪ್ರಭೇದದ ಹಕ್ಕಿಗಳು ಬರುತ್ತಿದ್ದವು. ಯೂರೋಪ್ ದೇಶಗಳಿಂದ ಹ್ಯಾರಿಯರ್ ಹಕ್ಕಿಗಳು ನೂರಾರು ಸಂಖ್ಯೆಯಲ್ಲಿ ಹೆಸರುಘಟ್ಟಕ್ಕೆ ಬರುತ್ತಿದ್ದವು. ಆದರೆ ಈಗ ಅವುಗಳ ಸಂಖ್ಯೆ ತೀವ್ರವಾಗಿ ಕ್ಷೀಣಿಸಿದೆ. ರೆಡ್ ನೆಕ್ಕಡ್ ಫಾಲ್ಕನ್ ಗಳು ಸಹ ದೊಡ್ಡ ಸಂಖ್ಯೆಯಲ್ಲಿ ಹೆಸರುಘಟ್ಟದಲ್ಲಿ ಕಾಣುತ್ತಿದ್ದವು. ಆಲದ ಮರ, ಅರಳಿ ಮರಗಳಲ್ಲಿ ಗೂಡು ಕಟ್ಟುತ್ತಿದ್ದವು. ಮನೆಗಳ ಹತ್ತಿರ, ಕೆರೆಗಳ ಪಕ್ಕದಲ್ಲಿ ಸಿಗುತ್ತಿದ್ದ ಹಕ್ಕಿಗಳ ಭೇಟೆ ಆಡುತ್ತಿದ್ದವು, ಆದರೆ ಈಗ ಅವು ಅಪರೂಪಕ್ಕೆ ಕಾಣುತ್ತವೆ. ಸ್ಟೆಪಿ ಈಗಲ್ ಸಹ ಹೆಸರುಘಟ್ಟಕ್ಕೆ ಬರುವುದನ್ನು ನಿಲ್ಲಿಸಿದೆ ಎಂದು ಪಟ್ಟಿ ನೀಡುತ್ತಾರೆ ಕ್ಲೆಮೆಂಟ್. ಬಾರ್ ಹೆಡೆಡ್ ಗೂಸ್ (Bar headed goose) ಎಂಬ ಪಕ್ಷಿಗಳು ಚೀನಾ, ಮಂಗೋಲಿಯಾ ಹಿಮಾಲಯಗಳಿಂದ ಟಿಜಿ ಹಳ್ಳಿಗೆ ಹಿಂಡು-ಹಿಂಡಾಗಿ ವಲಸೆ ಬರುತ್ತಿದ್ದವು. ಕೆರೆ ಪಕ್ಕದ ಗದ್ದೆಗಳೇ ಅವುಗಳ ಆವಾಸವಾಗಿತ್ತು. ಆದರೆ ಗದ್ದೆಗಳು ಇಲ್ಲವಾದಂತೆ ವಲಸೆ ಬರುವ ಹಕ್ಕಿಗಳ ಸಂಖ್ಯೆ ಕ್ಷೀಣಿಸಿತು. ಇವು ಅತ್ಯಂತ ಎತ್ತರ ಹಾರುವ ಬಾತು ಜಾತಿಗೆ ಸೇರಿದ ಹಕ್ಕಿಗಳು. ಮೌಂಟ್ ಎವರೇಸ್ಟ್ ಮೇಲೆ ಕೂತ ಏಕೈಕ ಬಾತು ಜಾತಿಯ ಹಕ್ಕಿಗಳಿವು. ಆದರೆ ಇವು ಸಹ ಈಗ ಬೆಂಗಳೂರಿಗೆ ಬರುತ್ತಿಲ್ಲ. ರಡ್ಡಿ ಶೆಲ್ಡಕ್ (ruddy shelduck) ಎಂಬ ಅಪರೂಪದ ಬಾತು ಜಾತಿಗೆ ಸೇರಿದ ಹಕ್ಕಿಗಳು ಸಹ ಬರುತ್ತಿದ್ದವು. ಲಿಟಲ್ ಸ್ಟಿಂಟ್ ಎನ್ನುವ ಸುಂದರವಾದ ಪಕ್ಷಿ ಆರ್ಟಿಕ್ ಇಂದ ಬೆಂಗಳೂರಿಗೆ ಬರುತ್ತಿತ್ತು. ಆದರೆ ಆ ಪಕ್ಷಿ ಈಗ ಕಾಣುತ್ತಲೇ ಇಲ್ಲ’ ಎಂದು ಬೇಸರದಿಂದ ನುಡಿದರು ಕ್ಲೆಮೆಂಟ್.

Red Necked Falcon

ರೆಡ್ ನೆಕ್ಡ್ ಫಾಲ್ಕನ್, ಚಿತ್ರ: ಕ್ಲೆಮೆಂಟ್ ಪ್ರಾನ್ಸಿಸ್

‘ಬೆಂಗಳೂರಿನ ಹೊರವಲಯಗಳಲ್ಲಿ ಹಲವು ಬೆಟ್ಟ ಗುಟ್ಟಗಳು ಇದ್ದವು. ಅಲ್ಲಿ ಕೆಲವು ಅಪರೂಪದ ಗೂಬೆಗಳು, ದೊಡ್ಡ ಗಾತ್ರದ ಇಂಡಿಯನ್ ರಾಕ್ ಈಗಲ್ ಮತ್ತು ಗೂಬೆಗಳು (Indian rock eagle-ಕೊಂಬಿನ ಗೂಬೆ), ಹದ್ದುಗಳು ವಾಸಿಸುತ್ತಿದ್ದವು. ಆದರೆ ಬೆಟ್ಟಗಳನ್ನು ಕೊರೆದು ಕ್ವಾರಿಗಳನ್ನಾಗಿ ಮಾಡಿದ ಬಳಿಕ ಅವುಗಳ ಸಂಖ್ಯೆ ವಿಪರೀತವಾಗಿ ಕ್ಷೀಣಿಸಿದೆ. ನಂದಿ ಬೆಟ್ಟದಲ್ಲಿ ಹಸಿರು ಉಳಿದುಕೊಂಡಿದೆಯಾದರೂ, ಅಲ್ಲಿಯೂ ಸಹ ಇತ್ತೀಚೆಗೆ ಜನಜಂಗುಳಿ ಹೆಚ್ಚಾಗಿದೆ. ಮಾನವನ ಸಂಪರ್ಕಕ್ಕೆ ಬಂದ ಹ್ಯಾಬಿಟಾಟ್​ಗಳು ತಮ್ಮ ಮೂಲಗುಣವನ್ನು ಕಳೆದುಕೊಳ್ಳುತ್ತವೆ. ನಂದಿ ಬೆಟ್ಟದಿಂದಲೂ ಪಕ್ಷಿಗಳು ನಿಧಾನಕ್ಕೆ ದೂರಾಗುತ್ತಿವೆ. ಕೆಲವೇ ವರ್ಷಗಳ ಹಿಂದೆ ಎಲ್ಲೆಂದರಲ್ಲಿ ಕಾಣ ಸಿಗುತ್ತಿದ್ದ ಗುಬ್ಬಿಗಳು ಈಗ ಎಷ್ಟು ಅಪರೂಪವಾಗಿಬಿಟ್ಟಿವೆ. ನಮ್ಮ ಕಣ್ಣೆದುರಲ್ಲೇ ಅವುಗಳ ಸಂಖ್ಯೆ ಕಡಿಮೆ ಆಗುತ್ತಿದೆ’ ಎಂದು ಕಣ್ಣ ಮುಂದಿನ ಸತ್ಯವನ್ನು ಬಿಚ್ಚಿಟ್ಟರು ಕ್ಲೆಮೆಂಟ್.

Palid Harrier

ಪ್ಯಾಲಿಡ್ ಹ್ಯಾರಿಯರ್, ಚಿತ್ರ: ಕ್ಲೆಮೆಂಟ್ ಪ್ರಾನ್ಸಿಸ್

ರೆಡ್ ನೆಕ್ಕಡ್ ಫಾಲ್ಕನ್, ಸ್ಟೆಪಿ ಈಗಲ್, ಪೈಲ್ಡ್ ಹ್ಯಾರಿಯರ್, ಕ್ರೇಕ್ಸ್, ಲಿಟಲ್ ಸ್ಟಿಂಟ್(little stint), ರೆಡ್ ನೆಕ್ಡ್ ಪಿಪಿಟ್ (red necked pipit), ಏಶಿಯನ್ ಫೇರಿ ಬ್ಲೂಬರ್ಡ್ (Asian fairy bluebird)ಇನ್ನೂ ಕೆಲವು ಪಕ್ಷಿಗಳು ಬೆಂಗಳೂರಿನಲ್ಲಿ ಈಗ ಅಪರೂಪದಲ್ಲಿ ಅಪರೂಪದವಾಗಿವೆ. ಬೆಂಗಳೂರಿನಲ್ಲಿದ್ದ ಹ್ಯಾಬಿಟಾಟ್ಗಳು ಹಾಳಾಗಿದ್ದರೆ ಹಕ್ಕಿಗಳು ಮೈಸೂರೋ, ಚೆನ್ನೈಗೋ ಹೋಗುತ್ತವೆ ಬಿಡಿ ಎಂದು ಸಾಮಾನ್ಯರು ಭಾವಿಸಬಹುದು. ಆದರೆ ವಾಸ್ತವ ಹಾಗಿರುವುದಿಲ್ಲ. ಪಕ್ಷಿಗಳ ಜೀವನಕ್ರಮದಲ್ಲಿ ಅವುಗಳ ಹ್ಯಾಬಿಟಾಟ್ಗೆ ಪ್ರಮುಖ ಸ್ಥಾನ. ಒಂದೊಮ್ಮೆ ಹಕ್ಕಿಗಳಿಗೆ ವಾಸಿಸಲು ಅನುಕೂಲಕರ ಆವಾಸಸ್ಥಾನ ಸಿಗಲಿಲ್ಲವೆಂದರೆ ಮೊದಲಿಗೆ ಅನುಕೂಲಕರ ಆವಾಸಸ್ಥಾನಕ್ಕಾಗಿ ಹುಡುಕುತ್ತದೆ. ಒಂದೊಮ್ಮೆ ಸಿಗಲಿಲ್ಲವೆಂದರೆ ಅವು ಬೇರೆಡೆ ಹೋಗಿ ನೆಲೆಸುವುದಿಲ್ಲ ಬದಲಿಗೆ ಸತ್ತೇ ಹೋಗುತ್ತವೆ ಎನ್ನುತ್ತಾರೆ ಹಲವು ವರ್ಷಗಳಿಂದ ಪಕ್ಷಿ ವೀಕ್ಷಣೆಯಲ್ಲಿ ತೊಡಗಿರುವ ಕ್ಲೆಮೆಂಟ್.

Little Stint

ಲಿಟಲ್ ಸ್ಟಿಂಟ್, ಚಿತ್ರ: ಕ್ಲೆಮೆಂಟ್ ಫ್ರಾನ್ಸಿಸ್

ಪಕ್ಷಿಗಳ ಆವಾಸಸ್ಥಾನ ನಷ್ಟವಾಗುವಾಗಲು, ಮನುಷ್ಯನ ಅತಿಕ್ರಮಣಶೀಲತೆಯನ್ನೇ ಮುಖ್ಯ ಕಾರಣವನ್ನಾಗಿ ಗುರುತಿಸುತ್ತಾರೆ ವನ್ಯಜೀವಿ ಫೋಟೊಗ್ರಾಫರ್ ಹಾಗೂ ಪಕ್ಷಿ ವೀಕ್ಷಕ ದೀಪಕ್. ‘ರಿಯಲ್ ಎಸ್ಟೇಟ್ ಹೊಡೆತಕ್ಕೆ ಸಿಕ್ಕಿ ಬೆಂಗಳೂರು ತನ್ನ ಮೂಲ ರೂಪವನ್ನೇ ಕಳೆದುಕೊಂಡಿವೆ. ಹ್ಯಾಬಿಟಾಟ್ಗಳು ಇಂದು ಇದ್ದಂತೆ ನಾಳೆ ಇರಲು ಬಿಡುತ್ತಿಲ್ಲ. ಅಷ್ಟು ತ್ವರಿತವಾಗಿ ಬೆಂಗಳೂರು ಬದಲಾಗುತ್ತಿದೆ. ಇದರ ಜೊತೆಗೆ ಅಲ್ಪ ಜ್ಞಾನಿ ಪ್ರಕೃತಿ ಪ್ರೇಮಿಗಳಿಂದಲೂ ಕೆಲವು ಸಮಸ್ಯೆಗಳು ಸೃಷ್ಟಿಯಾಗತ್ತಿವೆ. ಹುಲ್ಲುಗಾವಲು, ಕುರುಚಲು ಕಂಡ ಕೂಡಲೇ ಅದನ್ನು ‘ವೇಸ್ಟ್ ಲ್ಯಾಂಡ್’ ಎಂದುಕೊಂಡು ಗಿಡಗಳನ್ನು ಬೆಳೆಸಲು ಪ್ರಾರಂಭಿಸುತ್ತಾರೆ. ಆದರೆ ಹುಲ್ಲುಗಾವಲು, ಕುರುಚಲುಗಳು ಸಹ ಹಲವು ಪಕ್ಷಿಗಳ ಆವಾಸ ಸ್ಥಾನವಾಗಿರುತ್ತದೆ ಎಂಬ ಅರಿವು ಅವರಿಗೆ ಇರುವುದಿಲ್ಲ’ ಎನ್ನುತ್ತಾರೆ.

Bar Headed Goose

ಬಾರ್ ಹೆಡೆಡ್ ಗೂಸ್, ಚಿತ್ರ: ದೀಪಕ್ ಎಲ್​ಎಂ

‘ಸರ್ಕಾರ ಸಹ ವನ್ಯ ಜೀವಿಗಳಿಗೆ, ಅದರಲ್ಲೂ ಹುಲಿ, ಸಿಂಹ, ಚಿರತೆಗಳ ರಕ್ಷಣೆಗೆ ನೀಡುತ್ತಿರುವ ಪ್ರಾಶಸ್ತ್ಯ ಹಕ್ಕಿಗಳ ರಕ್ಷಣೆಗೆ ನೀಡುತ್ತಿಲ್ಲ. ಅದಕ್ಕೆ ಮುಖ್ಯ ಕಾರಣ ಹಕ್ಕಿಗಳ ಬಗ್ಗೆ ಅಧ್ಯಯನದ ಕೊರತೆ, ಮಾಹಿತಿಯ ಕೊರತೆ. ಪ್ರಾಣಿಗಳನ್ನು ಸಹ ಜೀವಿಗಳನ್ನಾಗಿ ಪರಿಗಣಿಸಿದಷ್ಟು ಹಕ್ಕಿಗಳನ್ನು ಸಹಜೀವಿಗಳನ್ನಾಗಿ ಪರಿಗಣಿಸಿಲ್ಲ. ಹಕ್ಕಿಗಳ ಮಹತ್ವದ ಅರಿವು ಸರ್ಕಾರಗಳಿಗೂ ಇಲ್ಲ, ಜನರಿಗೂ ಇಲ್ಲ. ಹಕ್ಕಿಗಳು, ರೈತ ಸ್ನೇಹಿ, ಅರಣ್ಯ ರಕ್ಷಕ. ಹಕ್ಕಿಗಳು ಇಲ್ಲದೇ ಹೋದರೆ ಪ್ರಕೃತಿಯಲ್ಲಿ ದೊಡ್ಡ ಏರು-ಪೇರುಗಳಾಗುತ್ತವೆ. ಹಕ್ಕಿಗಳ ಮಹತ್ವದ ಬಗ್ಗೆ ಎಳವೆಯಿಂದಲೇ ಮಕ್ಕಳಿಗೆ ಕಲಿಸಬೇಕಾದ ಅವಶ್ಯಕತೆ ಇದೆ. ಹಕ್ಕಿಗಳ ಬಗ್ಗೆ, ಅವುಗಳ ಜೀವನ ಕ್ರಮದ ಬಗ್ಗೆ ಮಾಹಿತಿಯನ್ನು ಮಕ್ಕಳಿಗೆ ತಿಳಿ ಹೇಳಬೇಕಿದೆ’ ಎನ್ನುವುದು ದೀಪಕ್ ಅವರ ಮಾತು.

Indian Rock Owl

ಇಂಡಿಯನ್ ರಾಕ್ ಓಲ್, ಚಿತ್ರ: ದೀಪಕ್ ಎಲ್​ಎಂ

ಹಕ್ಕಿಗಳು ಇಲ್ಲವಾದರೆ ಏನಾಗಿಬಿಡುತ್ತದೆ? ಎಂದು ಕೆಲವರಿಗೆ ಅನಿಸಬಹುದೇನೋ, ಹಕ್ಕಿಗಳು ನಮ್ಮ ಪರಿಸರದ ಸಮತೋಲನ ಕಾಪಾಡುವಲ್ಲಿ ಮುಖ್ಯ ಭೂಮಿಕೆ ನಿಭಾಯಿಸುತ್ತವೆ. ಪಕ್ಷಿಗಳು ಇಲ್ಲವಾದರೆ ಕೀಟಗಳ ಸಂತತಿ ಶರವೇಗದಲ್ಲಿ ಬೆಳೆಯುತ್ತದೆ. ಇದರಿಂದಾಗಿ ರೈತ ಫಸಲು ಬೆಳೆಯುವುದು ದುಸ್ತರವಾಗುತ್ತದೆ. ಪಕ್ಷಿಗಳನ್ನು ಬೀಜವಾಹಕಗಳೆಂದೂ ಕರೆಯಲಾಗುತ್ತದೆ. ಪಕ್ಷಿಗಳು ಇಲ್ಲವಾದರೆ ಹೊಸ ಬೀಜಪ್ರಸರಣೆ ಇಲ್ಲವಾಗುತ್ತದೆ. ಅರಣ್ಯದ ಬೆಳವಣಿಗೆ ಕುಂಠಿತವಾಗುತ್ತದೆ. ಎಷ್ಟೋ ಪ್ರಭೇದದ ಗಿಡ-ಮರಗಳು ಅಳಿದು ಹೋಗುತ್ತವೆ. ಅಂತಿಮವಾಗಿ ಪಕ್ಷಿಗಳು ಇಲ್ಲವಾದ ಕೆಲವು ದಶಕಗಳ ಬಳಿಕ ಮನುಷ್ಯನೂ ಇಲ್ಲವಾಗಿಬಿಡುತ್ತಾನೆ. ಹಾಗಾಗಿ ಭೂಮಿಯ ಮೇಲೆ ಪಕ್ಷಿಗಳ ಉಳಿವು ಅತ್ಯಂತ ಅವಶ್ಯಕ. ಮನುಷ್ಯ ತನ್ನ ಜೀವದ ಬಗ್ಗೆ ಜೀವನದ ಬಗ್ಗೆ ಮಾತ್ರವೇ ಅಲ್ಲದೆ, ಸಹಜೀವಿಯಾದ ಪಕ್ಷಿಗಳ ಜೀವ, ಜೀವನದ ಬಗ್ಗೆಯೂ ಯೋಚಿಸಬೇಕಿದೆ. ಪಕ್ಷಿಗಳನ್ನು ಉಳಿಸಿಕೊಳ್ಳುವಲ್ಲಿ ಕಾರ್ಯಪ್ರವೃತ್ತನಾಗಬೇಕಿದೆ.

Published On - 10:25 am, Mon, 6 May 24

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ