Savitribai Phule Birth Anniversary: ಮಹಿಳಾ ಶಿಕ್ಷಣಕ್ಕಾಗಿ ಹೋರಾಡಿದ ಗಟ್ಟಿಗಿತ್ತಿ ಸಾವಿತ್ರಿಬಾಯಿ ಫುಲೆ
ಪುರುಷ ಪ್ರಧಾನ ಸಮಾಜದಲ್ಲಿ ಮೂರು ಗೋಡೆಯೊಳಗೆ ಬಂಧಿಯಾಗಿದ್ದ ಮಹಿಳೆಗೂ ಶಿಕ್ಷಣ ಪಡೆಯುವ ಹಕ್ಕಿದೆ ಎಂದು ತೋರಿಸಿಕೊಟ್ಟ ದಿಟ್ಟ ಮಹಿಳೆ ಸಾವಿತ್ರಿಬಾಯಿ ಫುಲೆ. ಕೇವಲ ಶಿಕ್ಷಣ ಕೇತ್ರದಲ್ಲಿ ಮಾತ್ರವಲ್ಲದೇ ಕುಟುಂಬದಿಂದ ಶೋಷಣೆಗೆ ಒಳಗಾದ ಮಹಿಳೆಯರಿಗಾಗಿ ಶಾಲೆಗಳು, ಅಬಲಾಶ್ರಮಗಳನ್ನು ಸ್ಥಾಪಿಸಿ ಅವರಿಗೆ ಆಶ್ರಯವನ್ನು ನೀಡಿದರು.
ಬ್ರಿಟಿಷ್ ಸರ್ಕಾರದಿಂದ ಇಂಡಿಯನ್ ಫಸ್ಟ್ ಲೇಡಿ ಟೀಚರ್ ಎಂದು ಪುರಸ್ಕಾರ ಪಡೆದುಕೊಂಡಿರುವ ಸಾವಿತ್ರಿಬಾಯಿ ಫುಲೆ(Savitribai Phule)ಯವರ ಹುಟ್ಟಿದ ದಿನ(ಜನವರಿ 3) ಇಂದು. ಪುರುಷ ಪ್ರಧಾನ ಸಮಾಜದಲ್ಲಿ ಮೂರು ಗೋಡೆಯೊಳಗೆ ಬಂಧಿಯಾಗಿದ್ದ ಮಹಿಳೆಗೂ ಶಿಕ್ಷಣ ಪಡೆಯುವ ಹಕ್ಕಿದೆ ಎಂದು ತೋರಿಸಿಕೊಟ್ಟವರು ಇವರು. ಸಾವಿತ್ರಿಬಾಯಿ ಫುಲೆಯವರು 1831 ರ ಜನವರಿ 3 ರಂದು ಮಹಾರಾಷ್ಟ್ರ ರಾಜ್ಯದ ಸತಾರಾ ಜಿಲ್ಲೆಯ ನೈಗಾಂವ್‌ನಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದರು. ಸಮಾಜದಲ್ಲಿ ಮಹಿಳೆಗೂ ತನ್ನ ಗುರಿಯನ್ನು ಸಾಧಿಸಲು ಅವಕಾಶಕ್ಕಾಗಿ ಹೋರಾಡಿದ ದಿಟ್ಟ ಮಹಿಳೆ ಈಕೆ. ಮಹಿಳೆಯರ ಸ್ಥಿತಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು ಮತ್ತು ಭಾರತದಲ್ಲಿ ಮಹಿಳಾ ಶಿಕ್ಷಣದ ನಾಯಕಿಯಾದರು.
ಸಾವಿತ್ರಿಬಾಯಿ ಫುಲೆ ಭಾರತದ ಮೊದಲ ಆಧುನಿಕ ಸ್ತ್ರೀವಾದಿಗಳಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. 1840 ರಲ್ಲಿ, ಒಂಬತ್ತನೆಯ ವಯಸ್ಸಿನಲ್ಲಿ, 13 ವರ್ಷದ ಜ್ಯೋತಿರಾವ್ ಫುಲೆ ಅವರನ್ನು ವಿವಾಹವಾದರು. ಬಾಲ್ಯವಿವಾಹ, ಸತಿಯಂತಹ ಅನಿಷ್ಟಗಳ ವಿರುದ್ಧ ಧ್ವನಿ ಎತ್ತಿದರು. ದೇಶದ ಮೊದಲ ಮಹಿಳಾ ಶಿಕ್ಷಕಿ ಎಂಬ ಬಿರುದು ಇವರಿಗಿದೆ.
ಇದನ್ನೂ ಓದಿ: ಇಲ್ಲಿದೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕವಿ ಪುಟ್ಟಪ್ಪನವರ ಬಗ್ಗೆ ನಿಮಗೆ ಗೊತ್ತಿಲ್ಲದ ಮಾಹಿತಿ
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯೊಬ್ಬಳು ಶಿಕ್ಷಕಿಯಾಗುವುದು ಧರ್ಮಕ್ಕೂ, ಸಮಾಜಕ್ಕೂ ದ್ರೋಹ ಬಗೆದಂತೆ ಎಂಬ ಭಾವನೆ ಹೊಂದಿದ್ದ ಸಮಾಜದಲ್ಲಿ ದಿಟ್ಟತನದಿಂದ ಶಿಕ್ಷಕ ತರಬೇತಿ ಪಡೆದ ಸಾವಿತ್ರಿಬಾಯಿ ಫುಲೆ ಎಲ್ಲರ ವಿರೋಧದ ನಡುವೆ ತಾವು ಅಂದುಕೊಂಡಿದ್ದನ್ನು ಸಾಧಿಸಿದ ಗಟ್ಟಿಗಿತ್ತಿ. ಇವರ ಈ ಸಾಧನೆಯ ಹಂತದಲ್ಲಿ ಸಾಕಷ್ಟು ನೋವುಗಳನ್ನು ಮೆಟ್ಟಿ ನಿಂತ ವೀರ ಮಹಿಳೆ. ಅವಾಚ್ಯ ಶಬ್ದಗಳಿಂದ ನಿಂದಿಸುವುದು, ಕಲ್ಲು ತೂರುವುದು, ಸಗಣಿ ಎರಚುವುದು, ಮೈಮೇಲೆ ಕೆಸರು ಸುರಿಯುವುದು ಇಂತಹ ಹತ್ತು ಹಲವು ನೋವು ಕಿರುಕುಳವನ್ನು ಎದುರಿಸಿ ಮಹಿಳೆಗೂ ಸಮಾಜದಲ್ಲಿ ಶಿಕ್ಷಣವನ್ನು ಪಡೆಯುವ ಹಕ್ಕಿದೆ ಎಂದು ತೋರಿಸಿ ಕೊಟ್ಟವರು.
ಸಾವಿತ್ರಿಬಾಯಿ ಫುಲೆಯವರ ಕೃತಿಗಳು:
ಕಾವ್ಯಪುಲೆ(ಕಾವ್ಯ ಅರಳಿದೆ) 1854 2 ಭವನ ಕಾಶಿ ಶುಭೋದ ರತ್ನಾಕರ 1891 3 ತಮ್ಮ ಭಾಷಣಗಳ ಸಂಪಾದಿತ ಕೃತಿ 1892 4 ಕರ್ಜೆ(ಸಾಲ) ಪ್ರಬಂಧ.
ಪತಿ ಜ್ಯೋತಿರಾವ್ ಜೊತೆಗೂಡಿ 1848ರಿಂದ 1852ರ ಅವಧಿಯಲ್ಲಿ 14 ಶಾಲೆಗಳನ್ನು ತೆರೆದರು. ಇವರ ಈ ಸಾಧನೆಯಲ್ಲಿ ಅವರ ಪತಿಯೂ ಸಂಪೂರ್ಣ ಸಹಕಾರವನ್ನು ನೀಡಿದ್ದರು. ಇವರ ಈ ಸಾಧನೆಗೆ ಬ್ರಿಟಿಷ್ ಸರ್ಕಾರ ಭಾರತದ ಮೊದಲ ಶಿಕ್ಷಕಿ ಪ್ರಶಸ್ತಿಯನ್ನು ನೀಡಿತ್ತು.
ಇವರ ಮುಖ್ಯ ಗುರಿ ಹೆಣ್ಣಿಗೂ ಸಹ ಸಮಾಜದಲ್ಲಿ ಸಮಾನವಾಗಿ ಬದುಕುವ ಹಕ್ಕು ನೀಡುವುದು. ಕೇವಲ ಶಿಕ್ಷಣ ಕೇತ್ರದಲ್ಲಿ ಮಾತ್ರವಲ್ಲದೇ ಕುಟುಂಬದಿಂದ ಶೋಷಣೆಗೆ ಒಳಗಾದ ಮಹಿಳೆಯರಿಗಾಗಿ ಶಾಲೆಗಳು, ಅಬಲಾಶ್ರಮಗಳನ್ನು ಸ್ಥಾಪಿಸಿ ಅವರಿಗೆ ಆಶ್ರಯವನ್ನು ನೀಡಿದರು. ಜೊತೆಗೆ ಸಮಾಜದ ಕೆಲವೊಂದು ಕಟ್ಟು ಪಡುಗಳು ಅಂದರೆ ಬಾಲ್ಯವಿವಾಹ, ಸತಿ ಸಹಗಮನ, ವಿಧವೆಯರಿಗೆ ಕೇಶಮುಂಡನ ಮುಂತಾದ ಸಾಮಾಜಿಕ ಅನಿಷ್ಟಗಳ ವಿರುದ್ಧ ಧ್ವನಿ ಎತ್ತಿದ್ದ ದಿಟ್ಟ ಮಹಿಳೆ ಇವರು. ಸಾವಿತ್ರಿಬಾಯಿ ಫುಲೆ ಮಾರ್ಚ್ 10 , 1897ರಲ್ಲಿ ನಿಧನ ಹೊಂದಿದರು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 10:57 am, Tue, 3 January 23