ಅಮಾರೈಟ್ : ಆಟದ ವಿರಾಮ ಹೇಳಿ ಈ ಪತ್ರ ನಿಮಗಾಗಿ
Rain : ಮಳೆ ಬರುತ್ತಿದೆ.. ಅದ್ಯಾವಾಗ ನಿಲ್ಲುವುದೋ? ಮತ್ತೆ ಸುರಿಯಬೇಕೆಂದರೆ, ಮೊದಲು ಅವು ಒತ್ತೊತ್ತಾಗಿ ಕೂಡಿ ಕಪ್ಪಿಡಬೇಕು. ಮಳೆಯಾಗುವ ಮೊದಲು ಸಿಡಿಯುವುದು, ಮಿಂಚುವುದು ಅಂದರೆ ಆತ್ಮದರ್ಶನ. ಮಳೆ ಚೆಲ್ಲುವುದು ‘ಒಂದು ಮುಗಿದ ಅಧ್ಯಾಯʼದ ಸಾಂಕೇತಿಕ ಸಂಭ್ರಮ.
ಅಮಾರೈಟ್ | Amaright : ನಾವೆಲ್ಲಾ ಒಂದೇ ಬಾಣಲಿಗೆ ಬಿದ್ದ ಈ ಸಾಸಿವೆಗಳ ಹಾಗೆ! ಒಬ್ಬರ ನಂತರ ಒಬ್ಬರು ಪಟಪಟ ಸಿಡಿಯುವುದು ನಮ್ಮ ಧರ್ಮವೂ ಹೌದು, ಕರ್ಮವೂ ಹೌದು. ಹಂಗಾಗೇ ಎಲ್ಲರಿಗೂ ಸಿಡಿಯುವ ಕ್ರಿಯೆಯ ಕುರಿತು ಅವಸರವಿದೆಯೇ ಹೊರತು, ಸಿಡಿವಾಗಿನ ಒತ್ತಡಗಳನ್ನು ಗುರುತಿಡುವುದು ಅಷ್ಟು ಮುಖ್ಯ ಅನಿಸುವುದಿಲ್ಲ. ಒಳಗಿನವೋ ಹೊರಗಿನವೋ ಇಷ್ಟದವೋ ಕಷ್ಟದವೋ ಆಸೆಯೋ ಬಲವಂತವೋ.. ಏನೋ ‘ಒಳಗುʼ ತಡೆಯಲಾಗದಲೇ ಸಿಡಿದು ಮತ್ತೆಲ್ಲಿಗೋ ಒಗ್ಗರಣೆಯಾಗುವ ಹಣೆಬರಹದವರು. ಮಾಗಿ, ಸ್ಥಾನ ಪಲ್ಲಟಿಸಿ, ಒಳಗಿಂದ ರೂಪಾಂತರಿಸುವವರು ನಾವು! ನಾನು ಅವರನ್ನೇ ಕೂತು ಬರೆಯಬೇಕಿತ್ತು. ಅವರನ್ನೇ ಅಂದರೆ ನನ್ನನ್ನೇ. ಯಾರದ್ದೋ ಕತೆ ಹೇಳಿ ಹೇಳುವ ಸಂಗತಿಗಳೆಲ್ಲಾ ಉಪದೇಶವೋ, ಉಪನ್ಯಾಸವೋ ಆದಾಗ ಎದುರುಗಣ್ಣುಗಳು ತೇಲಿಕೊಂಡು ತೂಕಡಿಸುತ್ತವೆ, ನಾನು ನನ್ನದೇ ಕತೆ ಹೇಳಿದರೆ ಅವಕ್ಕೆ ಹೂಂಗುಟ್ಟಲು ಹೊಸತೇನೋ ಸಿಗುತ್ತದೆ. ಅಂತಲೇ ಅಮಾರೈಟ್ ಅಲ್ಲಿ ನಾನೆಸೆದ ಬಿಲ್ಲೆಗಳ ಮೇಲೆಲ್ಲಾ ನನ್ನದೆ ತರಚು ಗೆರೆಗಳು. ಕುಂಟೆಬಿಲ್ಲೆ ಮನೆಯ ಹತ್ತನೇ ಅಂಕದಲ್ಲಿ ಅಮಾರೈಟ್‌ಗೆ ಸಣ್ಣ ವಿರಾಮ ಹೇಳುವುದಕ್ಕೆ ಮುನ್ನ ಇನ್ನೊಂಚೂರು ಮಾತಾಡುವ ಅಂತೇಳಿ ಈ ಪತ್ರ. ಭವ್ಯಾ ನವೀನ್, ಕವಿ ಲೇಖಕಿ (Bhavya Naveen)
(ಕೊನೆಯ ಬಿಲ್ಲೆ)
“ಹೈರಾಣಾಗುವಷ್ಟು ಸುತ್ತೆಲ್ಲ ಧಗೆಯಿರುವಾಗಲೂ ತಂಪಾಗಿಡುವುದಕ್ಕೆ ಅಮ್ಮನಿಗೆ ಮಾತ್ರ ಸಾಧ್ಯ.” ಅಂತ ನಾನೇ ಒಮ್ಮೆ ಎಲ್ಲೋ ಬರೆದಿದ್ದೆ. ಆಗ ನಾನಿನ್ನು ಅಮ್ಮನಾಗಿರಲಿಲ್ಲ. ಈಗ ಅಮ್ಮನಾದ ಮೇಲೆ; ಅದನ್ನು ಬರೆಯುವ ಹೊತ್ತಲ್ಲಿ, ಅಮ್ಮನನ್ನು ಕೂರಿಸಿ ಫ್ಯಾನಿನ ಸ್ವಿಚ್ಚಾದರೂ ಹಾಕಿದ ಸಾಧ್ಯತೆ ಅತ್ಯಂತ ಕಡಿಮೆಯೇ ಇತ್ತಲ್ಲ.. ಅಂದ ಮೇಲೆ ಇಂಥ ಸಾಲೆಲ್ಲಾ ಬರೆದು ಏನಾದರೂ ಸಾಧಿಸಿದೆ ಅಂದುಕೊಳ್ಳುತ್ತೇನೆ. ಬರೆ-ಬರೆದು ಕಳಕೊಂಡ ಪ್ರೀತಿಯ ಪರ್ವ ಪದ್ಯಗಳ ಪುಸ್ತಕದಿಂದ ಈಚೆಗೆ ಒಂದಿಷ್ಟೂ ಸುಧಾರಿಸಿಕೊಳ್ಳದ ಮೊಂಡು ಮೂಗಿನ ಮೊಂಡಾಟ ನೆನಪಿಸಿಕೊಂಡಾಗ ಬರೆದದ್ದೆಲ್ಲಾ ಪುಸ್ತಕದ ಬದನೆಕಾಯಿ ಅಂತ ನಕ್ಕಿದ್ದೇನೆ. ದೇಶ-ಭಾಷೆಗಳ ಕುರಿತು ಬರೆದಾಗ, ಬರೆದವರನ್ನು ಓದಿದಾಗ ಅಂತಃಕರಣ ಮೀಟುವ ಸತ್ಯಶೋಧನೆಯಲ್ಲಿ ಮಿಣುಕಾಡಿದ್ದೇನೆ. ಅಷ್ಟೆಲ್ಲದರ ನಡುವೆಯೂ ಒಂದು ಹಂತದಲ್ಲಿ ಮೇಲೆ ಹೇಳಿದಂತೆ ಮಾಗಿದ ಕಾಲದ ಒಂದು ವ್ಯಸ್ತ ಸಂಜೆಯಲ್ಲಿ ಆತ್ಮಾವಲೋಕನ ಮಾಡಿಕೊಳ್ಳುವಾಗ ಬರೆಯದೆಯೂ ಹುಟ್ಟಿಕೊಳ್ಳುವುದನ್ನೇ ನಾನು ಕವಿತೆ ಅಂತ ನಂಬಿ ಬಹಳಷ್ಟು ಕಾಲದವರೆಗೆ ಅಕ್ಷರಗಳೊಂದಿಗೆ ಮಾತು ನಿಲ್ಲಿಸಿದ್ದಿದೆ.
ಆದರೂ.. ಕವಿತೆಯ ಮೂಲಕ ಸೊಗಸಾಗಿ, ರೂಪಕ-ಅಲಂಕಾರಗಳಿಂದ ಬರೆದ ಮಾತ್ರಕ್ಕೆ ಯಾವ ನೋವೂ ಹಗೂರಾಗುವುದಿಲ್ಲ, ಖುಷಿಯೂ ತೂಕ ಪಡೆಯುವುದಿಲ್ಲ, ಹಿಂಸೆ-ಪಶ್ಚಾತ್ತಾಪ-ಪ್ರಾಯಶ್ಚಿತ್ತ-ಸಹಾನುಭೂತಿ-ದಯೆ-ಕರುಣೆ ಸೋ.. ಅಂಡ್ ಸೋ..ಗಳೆಲ್ಲಾ ಹೆಚ್ಚೂ ಕಡಿಮೆ ಅಲುಗಾಡುವುದೂ ಅನುಮಾನ ಅಂತ ಗೊತ್ತಿದ್ದೂ ಬರೆದಿಡುವುದು ಯಾಕೆಂದರೆ – ಆ ದಾಖಲೆಗಳು ದಾಖಲಿಸದ ಪಾಠಗಳಾಗುತ್ತವೆ ಅಂತ. ನಮಗೆ ತುಂಬಾ ಓಡಲಿಕ್ಕಿದೆಯಲ್ಲಾ.. ತುಂಬಾ ದುಡಿಯಲಿಕ್ಕಿದೆ, ತುಂಬಾ ತುಂಬಾ ಸಾಧಿಸಲಿಕ್ಕೆ, ತುಂಬಾ ತುಂಬಾ ತುಂಬಾ ಹೆಸರಾಗುವುದಕ್ಕಿದೆ, ಆದರೆ ಈ ಎಲ್ಲಾ ತುಂಬಾ.. ತುಂಬಾಗಳ ಬೆನ್ನ ಹಿಂದೆ ನಾವು ಇಷ್ಟಿಷ್ಟೇ ಮಿಕ್ಕಿರುವ ನಮ್ಮನ್ನು ಗಾಜಿನ ಬಾಟಲಿಯಲ್ಲಿಟ್ಟುಕೊಂಡು ಓಡುತ್ತಿದ್ದೇವೇನೋ ಅಂತ ಅನ್ನಿಸುವ ಪ್ರತೀ ಬಾರಿಯೂ ತಿರುಗಿ ಏನೂ ಮಾಡದೆ ಓಡುವುದು ರೂಢಿಗತವಾಗಿ ಹೋಗಿರುವಾಗಲೇ “ಮೊನ್ನೆ ಮೊನ್ನೆ ಹೊಸ ವರ್ಷ ಕಂಡಿದ್ದಲ್ವಾ?, ಇದೇನ್ ಒಳ್ಳೇ ಆಟ ಸಾಮಾನ್ ಲೈಫಪ್ಪಾ?” ಅಂತ ಮಾತಾಡಿಕೊಳ್ಳುವಾಗಲೂ ಸಕ್ಸಸ್‌ಫುಲ್ ಆಚೆಗೆ ಬರೋಬ್ಬರಿ, ಬರೀ.. ಖುಷಿಯಾಗಿರುವುದರ ಕುರಿತು ಏನೂ ಮಾಡಿಲ್ಲ ಯಾಕೆ ಅನ್ನುವುದು ಮುಖ್ಯ ಪ್ರಶ್ನೆಯಾಗುತ್ತದೆ.
ಇದನ್ನೂ ಓದಿ : ಅಮಾರೈಟ್ : ‘ಇದು ಗೆಳೆತನದ ಗಣಿತ ಸಾಹೇಬ್, ಇಲ್ಲಿ ಎರಡರಲ್ಲಿ ಒಂದು ಕಳೆದರೆ ಏನೂ ಉಳಿಯುವುದಿಲ್ಲ’
“ನಮ್ಮದೂ ನಿಮ್ಮ ಅಮ್ಮಂದಿರ ವರಸೆ… ಧಿಕ್ಕರಿಸುತ್ತೇವೆ ನಿಮ್ಮನ್ನು” ಅಂತದ್ದೊಂದು ಪದ್ಯ ಬರೆದು ನಿರ್ಭಯಾ ಅತ್ಯಾಚಾರಿಗಳ ವಿರುದ್ಧ ಕಿಡಿಕಾರುವಾಗಿದ್ದ ಧೈರ್ಯವಾಗಲೀ, ಸಹಜತೆಯಾಗಲೀ ನಾನು ಅಮಾರೈಟ್‌ನ ಬಹುಶಃ ಮೊದಲ ಬಿಲ್ಲೆಯಲ್ಲಿ ಬರೆದ ಒಬ್ಬಂಟಿ ಸಂಜೆಯ ಒಂಟಿ ಚಪ್ಪಲಿ ಹುಡುಗಿಯಾಗಿ ತೋರಲು ಸಾಧ್ಯವಾಗಿರಲಿಲ್ಲ ಅನ್ನುವುದನ್ನು ಹೇಳಿಕೊಂಡ ಮೇಲೆ “ಹೌದಾ?” ಅಂದವರ ಹಲವಾರು ಭಿನ್ನ ಭಿನ್ನ ಟೋನ್‌ಗಳು ನನಗೆ ಗಟ್ಟಿತನ ಕಲಿಸಿವೆ, ನನ್ನೊಂದಿಬ್ಬರು ಗೆಳತಿಯರೂ “ಹಂಗೇನಾದರೂ ಆದರೆ, ಹಿಂಗಿಂಗೇ ಮಾಡ್ಬೇಕು” ಅಂತಂದುಕೊಂಡಿದ್ದು ಕೇಳಿ ಖುಷಿಯೂ ಆಯಿತೆನ್ನಿ.
ಧಾವಂತದಲ್ಲಿ ಓಡುವ ಅಮ್ಮನ ಸೆರಗು ತಾಕಿಸಿಕೊಂಡ ಮಗುವಿನ ಅವಿವರಣಾತ್ಮಕ ಎಕ್ಸ್‌ಪ್ರೆಷನ್ ಬಗ್ಗೆ ಕೆಲಸಕ್ಕೆ ಹೋಗುವವರೊಬ್ಬರು ಮಾತಾಡಿದಾಗ ನನ್ನದು ಅಂದುಕೊಂಡಿದ್ದ ಭಾರ ಹಗುರಾಗಿದೆ. ಕಾಣುವ ಸಂಗತಿಗಳು, ತೋರುವ ಸಂಗತಿಗಳು, ಗಮನಕ್ಕೆ ಬಂದ ಸಂಗತಿಗಳು ಇವೆಲ್ಲದರ ಬಗ್ಗೆ ಮಾತಾಡುತ್ತಲೇ ಬರುವ ನಾವು.. ಮುಖ್ಯವಾಗಿ ನಾನು ನನ್ನೊಳಗಿನ ಒಬ್ಬಳ ಕೂತು ಮಾತಾಡುವ ಅವಶ್ಯಕತೆ ಎಷ್ಟಿದೆ ಅಂತ ಎಲ್ಲರಿಗೂ ಒಮ್ಮೆಯಾದರೂ ಅನ್ನಿಸದಿದ್ದರೆ ಹೇಗೆ ಅಂತ ಬಲವಾಗಿ ಅನ್ನಿಸಲು ಶುರುವಾಗಿದೆ.
ಹೊಟ್ಟೆ ತುಂಬಾ ತಿನ್ನದ ಕರುಳುಗಳು ಯಾವಾಗಲೂ ಬಡತನದಲ್ಲೇ ಇರುತ್ತವೆ ಅಂದುಕೊಳ್ಳುವಂತಿಲ್ಲ, ಬಡತನ ಮೀರಿದ ಖಾಲೀತನದ ಸಂತ್ರಸ್ತರಿರುತ್ತಾರಲ್ಲ, ಐ ಮೀನ್ ಸಂತ್ರಸ್ತರಾಗಿರುತ್ತೇವಲ್ಲ.. ಅವೆಲ್ಲದರ ಬಗ್ಗೆಯೂ ಯೋಚನೆ ಮಾಡುವುದು ಎಷ್ಟು ಅವಶ್ಯಕತೆ ಇದೆ ಅಂತ ನೀವೂ ಅಂದುಕೊಳ್ಳಲಿ ಅಂತ ಹೇಳಿದೆ, ಹೇಳುತ್ತಿದ್ದೇನೆ. ಕವಿತೆಗಿಲ್ಲದ ಸುಖವಿದು. ಕವಿತೆಗಳು ಪಾತ್ರಗಳಾಗಿ ಮಾತಾಡಿಸುತ್ತವೆ. ಗದ್ಯಗಳು ಮಾತ್ರ ಪಾತ್ರ ವೇಷಗಳ ಮುಲಾಜಿಲ್ಲದೆ ಹಗೂರಾಗಿರುತ್ತದೆ. ಥ್ಯಾಂಕ್ಸ್ ‘ಅಮಾರೈಟ್ʼ. “ಈಗ ಧೈರ್ಯ ಬಂದಿದೆ” ಅನ್ನುವ ಸ್ಟೇಟ್‌ಮೆಂಟ್ ಸಾರ್ವತ್ರಿಕವಲ್ಲದಿದ್ದರೂ ಸಾರ್ವಜನಿಕವಾಗಿ ಹೀಗೆ ಹೇಳುವುದು ಮೊದಲು ಸಾಧ್ಯವೇ ಇರಲಿಲ್ಲ. ಇದೊಂದು ಕುಂಟೆಬಿಲ್ಲೆ ಆಟ ಹಿತವಾಗಿತ್ತು. ಆಡಿ ನೋಡಿ.. ಯೂ ಕ್ಯಾನ್ ಆಲ್ಸೋ ಬಿ ರೈಟ್.. ಆಡಿದಾರೆ ತಾನೇ ತಿಳಿಯೋದು.
(ಈ ಅಂಕಣ ಮುಕ್ತಾಯವಾಯಿತು)
ಅಂಕಣದ ಎಲ್ಲಾ ಭಾಗಗಳನ್ನು ಇಲ್ಲಿ ಓದಿ : https://tv9kannada.com/tag/bhavya-naveen
ಪ್ರತಿಕ್ರಿಯೆಗಾಗಿ : tv9kannadadigital@gmail.com