Poetry: ಅವಿತಕವಿತೆ; ‘ಕಂಗಳಿದ್ಯಾತಕೋ ಕಾವೇರಿ ಅತ್ತ್ಯಾನ ನೋಡದ?’

Writing: ‘ನನಗೆ ಕಥನದ ಕಸುವಿನಲ್ಲಿ ಅತೀವ ನಂಬಿಕೆ ಇದೆ, ನನ್ನಲ್ಲಿ ಹೇಳಲೇಬೇಕಾದ ಕತೆಗಳಿವೆ; ಹೀಗಾಗಿ ಬರೆಯಬೇಕೆನ್ನಿಸುತ್ತದೆ. ನಾನು ಬರೆದ ಬಹುತೇಕ ಪದ್ಯಗಳಲ್ಲೂ ಕಥನವೇ. ಯಾವುದೋ ಕತೆಯನ್ನು ಹೇಳಲೇಬೇಕಾದ ತುಡಿತ ಉಕ್ಕಿದಾಗ ಬಹಳ ಮಾಡಿ ಪದ್ಯವನ್ನು ಆಶ್ರಯಿಸುತ್ತೇನೆ.’ ಸಂಕೇತ ಪಾಟೀಲ

Poetry: ಅವಿತಕವಿತೆ; ‘ಕಂಗಳಿದ್ಯಾತಕೋ ಕಾವೇರಿ ಅತ್ತ್ಯಾನ ನೋಡದ?’
Follow us
ಶ್ರೀದೇವಿ ಕಳಸದ
|

Updated on: Jun 19, 2022 | 6:15 AM

ಅವಿತಕವಿತೆ | AvithaKavithe : ನಾನೇಕೆ ಬರೆಯುತ್ತೇನೆ? ಇದೇ ಮುಜುಗರದ ಸಂಗತಿ. ಇನ್ನು ನಾನು ಬರೆದದ್ದು ತೀರ ಕಡಿಮೆ. ಬರೆದದ್ದಕ್ಕಿಂತ ಬರೆಯುವುದರ ಬಗ್ಗೆ ಯೋಚಿಸಿದ್ದು, ಯೋಜನೆಗಳನ್ನು ಹಾಕಿಕೊಂಡದ್ದು, ಮಾತನಾಡಿದ್ದು, ಇವೇ ಹೆಚ್ಚು. ಬೆರಳೆಣಿಕೆಯಷ್ಟು ಪದ್ಯಗಳನ್ನು ಬರೆದಿದ್ದೇನೆ, ಇಷ್ಟಪಟ್ಟುಕೊಂಡು ಪದ್ಯಗಳನ್ನು ಓದುತ್ತೇನೆ, ಆಗೊಮ್ಮೆ ಈಗೊಮ್ಮೆ (ನಮ್ಮಲ್ಲಿ ಹೇಳುವಂತೆ ಆಸಿಗ್ಗ್ಯೊಮ್ಮೆ ಬ್ಯಾಸಿಗ್ಗ್ಯೊಮ್ಮೆ) ನನಗೆ ಆಪ್ತವೆನ್ನಿಸಿದ ಪದ್ಯಗಳನ್ನು ಅನುವಾದ ಮಾಡುತ್ತೇನೆ. ಆದರೂ ಕವಿತೆಗಿಂತ ಹೆಚ್ಚು ನನ್ನನ್ನು ಸೆಳೆಯುವ ಪ್ರಕಾರ ಕತೆ. ಹೀಗಾಗಿ ಪದ್ಯ ಬರೆಯುವುದರ ಬಗ್ಗೆ ಮಾತಾಡಲೂ ಇನ್ನೂ ಹೆಚ್ಚು ಅಳುಕು. ಹಾಗಿದ್ದೂ ಈ ಪ್ರಶ್ನೆಗೆ ಉತ್ತರಿಸುವುದಾದರೆ: ನನಗೆ ಕಥನದ ಕಸುವಿನಲ್ಲಿ ಅತೀವ ನಂಬಿಕೆ ಇದೆ ಹಾಗೂ ನನ್ನಲ್ಲಿ ನಾನು ಹೇಳಲೇಬೇಕಾದ ಕತೆಗಳಿವೆ; ಹೀಗಾಗಿ ಬರೆಯಬೇಕೆನ್ನಿಸುತ್ತದೆ. ನಾನು ಬರೆದ ಬಹುತೇಕ ಪದ್ಯಗಳಲ್ಲೂ ಕಥನವೇ ಇದೆ. ಯಾವುದೋ ಕತೆಯನ್ನು ಬೇಗನೇ ಹೇಳಲೇಬೇಕಾದ ತುಡಿತ ಉಕ್ಕಿದಾಗ ಬಹಳ ಮಾಡಿ ಪದ್ಯವನ್ನು ಆಶ್ರಯಿಸುತ್ತೇನೆ. ನಾನು ಇಷ್ಟೊಂದು ಮೈಗಳ್ಳನಾಗಿರದಿದ್ದರೆ ಅವನ್ನೂ ಕತೆಯಾಗಿಯೇ ಬರೆಯುತ್ತಿದ್ದೆನೇನೋ! ಸಂಕೇತ ಪಾಟೀಲ (Sanket Patil)

ಓಕುಳಿ

ಹಂಚಿನ ಪಡಸಾಲೆಯ ಮೇಲ್ಮುದ್ದಿಯ
ಒಳಕೋಣೆಗಳ ನಮ್ಮ ಮನೆಯಲ್ಲಿ
ಮಜಲುಗಳಿರಲಿಲ್ಲ. ಗವಿಯಂಥ ಹಿಂದಿನ
ಕೋಣೆಗಳಲ್ಲಿ ಕವದಿ ಮುಗ್ಗುಸಿನ ಅಂಟಗಳಲ್ಲೇ
ನಮ್ಮ ಆಟ ಮೇಲಾಟಗಳಿಗೆ ಓನಾಮ.
ಅದು ಎಳವೆಯಲ್ಲಿ. ಅದೇನೋ ಈಗ
ನಡುವಯಸ್ಸಿನಲ್ಲಿ ಯಾವುದೋ ಹಳ್ಳಿಯ
ಯಾವುದೋ ಮನೆಯಲ್ಲಿ ಅಂಟ ಕಂಡರೂ
ವಿಲಕ್ಷಣ ಥ್ರಿಲ್ಲು. ಏನೋ ಕಳಕೊಂಡ
ಅಥವಾ ಮಾಡಬೇಕಾಗಿದ್ದುದೇನೋ
ಮಾಡಲು ಮರೆತ ಹಾಗೆ ಹಳಹಳಿ.
ಆಗ ಓಣಿಯ ಕೊನೆಗೆ ಓಡುತ್ತ ಹೋಗಿ
ಇತ್ತಿಂದ ಅತ್ತ ಜಿಗಿದರೆ ಕಾವೇರತ್ತೆಯ
ಮನೆ. ಅಲ್ಲಿ ಮಜಲುಗಳಿದ್ದವು.
ಕಾವೇರತ್ತೆ ಗೊತ್ತಿಲ್ಲವೆ!? ‘ಕಂಗಳಿದ್ಯಾತಕೋ
ಕಾವೇರಿ ಅತ್ತ್ಯಾನ ನೋಡದ?’ ಎಂದು
ದಾಸರೇ ಹಾಡಿ ಮಾಡಿರುವರಲ್ಲ
ಸಲ್ಲದ ವಿಷಯಾಂತರ.
ಅಸಾಧ್ಯ ಸಿಟ್ಟಿನ ತೆಳುದೇಹದ
ಬಡ ವಿಧವೆಯ ಪುಟ್ಟ ಮನೆಗೆ
ಎರಡು ಮಜಲು ಹತ್ತಿ ಹೋದಾಗೆಲ್ಲ
ಬಟ್ಟಲಷ್ಟೇ ಅವಲಕ್ಕಿ.
ಹೀಗೊಮ್ಮೆ ಮೆಟ್ಟಿಲ ಮೇಲೆ ಮೆಲ್ಲುತ್ತ ಕೂತಾಗ
ಧೋ ಎಂದು ಅಡ್ಡಮಳೆ.
ಹೋ ಎಂದು ಮಾಳಿಗೆಗೆ ಓಡಿ
ಉದ್ದು ಅಕ್ಕಿ ಅವಲಕ್ಕಿ ಸಂಡಿಗ್ಗುಂಬಳದ
ಸಂಡಿಗೆ ಇರುವೆ ಹತ್ತಿದ ಕರಿಬೆಲ್ಲ
ಮಡಿಗೋಲಿಗೆ ಒಣ್ಹಾಕಿದ್ದ ಎರಡು
ಮಾಸಲು ಸೀರೆ ಎಳೆದು ಎದೆಗೆ ಕವುಚಿ
ತೇಕುತ್ತ ಸುಧಾರಿಸಿಕೊಳ್ಳುವಷ್ಟರಲ್ಲಿ
ಬಟನ್ನು ಬಡಿದಂತೆ ನಿಂತ ಮಳೆಯಲ್ಲಿ
ಸುರಿದ ಬೆಳವಲದ ಬಿಸಿಲು. ಆಗ
ದೂರ ಮುಗಿಲಿನ ಕಾಮನಬಿಲ್ಲು
ಗಂಟು ಹುಬ್ಬುಗಳ ಅರಳಿದ ಹೊರಳೆಗಳ
ತಲೆಯಿಂದ ಜಾರಿದ ಸೆರಗಿನ ಜೊತೆಗೆ
ಕಂಡೂ ಕಾಣದ ಮುಗುಳು ನಗೆ.
ಅಲ್ಲಿ ಹಣಮಂದೇವರ ಓಕುಳಿ ನೋಡಲು
ಕೊಂಡದ ಬಳಿ ಹೋದರೆ ನೂಕುನುಗ್ಗುಲು
ವಿಧಿಯಿಲ್ಲದೆ ರಾಮಾಚಾರರ ಮನೆಗೆ ನುಸುಳಿ
ಜಿಗಿಯುತ್ತ ಮೇಲಿನ ಮಜಲಿಗೆ ಹೋಗುವ ಮುನ್ನ
‘ರಂಡೇಗಂಡ, ಸಾಲೀ ಅಭ್ಯಾಸ ಬಿಡು
ಕುಳ್ಳು ಕಟಿಗೀ ತುಡುಗು ಬಣ್ಣ ಓಕಳೀ
ಇದೇ ಮಾಡು’ ಎಂದು ಬೈದೇ ಬಿಟ್ಟರು ಸರಿ.
(ಆದರೂ ಹಬ್ಬ ಹರಿದಿನಗಳಂದು ಪೂಜೆಗೆ
ಕುಲಪುರೋಹಿತರ ಕೈಹಿಡಿದೆಳೆದು
ಕರಕೊಂಡು ಹೋಗುವ ಸಲಿಗೆ ನನಗೇ.)
ನೀರೆರಚುವ ಬೀದಿ ಕಾಮಂಣರುಗಳಿಗೆ
ಬರಲಿನಿಂದ ಸೆಳೆಯುವ ಕಚ್ಚೆ ಕಟ್ಟಿದ
ದೊಂಬ ಹೆಂಗಸರ, ಕೊಚ್ಚೆಯಲಿ ಕುಣಿದು
ಕುಪ್ಪಳಿಸುವ ಹುಂಬ ಹೋರಿಗಳ ಮಾಳಿಗೆ
ಯಿಂದ ನೋಡುತ್ತ, ಮತ್ತೊಮ್ಮೆ ಓನಾಮ.
ತುಟಿ ಕಚ್ಚಿ ಹಸಿ ಪತ್ತಲದ ಗಂಟು ಕಟ್ಟುವ
ಬಿಗಿದೆದೆಯ ಹೆಣ್ಣೊಬ್ಬಳ ಕಣ್ಣಂಚಲಿ
ತುಳುಕದೇ ನಿಂತ ಹನಿಯೊಂದು
ಆ ಸಂಜೆಯ ಚೆದುರಿಸಿತ್ತು. ನೇರಳೆ
ಊದಾ ನೀಲಿ ಹಸಿರು ಹಳದಿ ಕಿತ್ತಳೆ
ಕೆಂಪು ಮತ್ತಿನ್ನು ನೆಲದ ಧೂಳು ಮೇಲಿನ
ಆಗಸ ಪಾಚಿಗಟ್ಟಿದ ನೀರು ಸುಟ್ಟ ಬೆಂಕಿ ಬೂದಿ
ಬೀಸಿದ ಗಾಳಿ
ಎಲ್ಲಾ ಒಂದಾಗಿ
ರಂಗುರಂಗಿನ ಓಕುಳಿ ಚೆಲ್ಲಿತ್ತು.
ಇವೆಲ್ಲ ಇಷ್ಟೆಲ್ಲ ಬುರುಬುರು ನೊರೆ ನೊರೆಯಾಗಿ
ಉಕ್ಕುತ್ತ ತುಳುಕುತ್ತ ಚೆಲ್ಲುವರಿಯುತ್ತ ಬರುವುದು
ಎಮ್ ಜೀ ರೋಡಿನ ಯಾವುದೋ ಪಬ್ಬಿನಲ್ಲಿ
ಕೂತಾಗಲೇ. ಅಲ್ಲಷ್ಟೇ ನೆನಪುಗಳು ಹಾಳಾದ್ದು.
ಸ್ವಲ್ಪ ರುಚಿ ಕೊಂಚ ಕಹಿ ಒಂದಷ್ಟು ತನ್ಮಯತೆ.
ಮತ್ತೆಂತದೋ ಪೋಸು.
ಪಡೆದುದೇನು? ಕಳಕೊಂಡುದೇನು?
ಹಳೆಯ ಹಳಹಳಿ
ಕಾಣದ ಮುಗುಳುನಗೆ
ರಂಗುರಂಗಿನ ಓಕುಳಿ
ಸೇರಿದ ಹೊಸದೊಂದು ರುಚಿ.

AvithaKavithe Kannada poetry Column by Sanket Patil Tina Shashikant

ಸಂಕೇತ ಪಾಟೀಲ ಕೈಬರಹ

ಕವಿತೆ ಅವರದು ನೋಟ ನಿಮ್ಮದು

ಸಂಕೇತ ಪಾಟೀಲರು ನನಗೆ ಪರಿಚಯವಾದದ್ದು ಸುಮಾರು ಹದಿನೈದು ವರ್ಷಗಳ ಹಿಂದೆ ಕವಿತೆಗಳ ಅನುವಾದದ ಬಗೆಗಿನ ಅವರ ಬ್ಲಾಗ್ ಪೋಸ್ಟುಗಳ ಮೂಲಕ. ಆಗ ಅವರು ವಿದೇಶದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿದ್ದರು. ಅವರ ಬ್ಲಾಗು ಅನೇಕ ವಿಶಿಷ್ಟ ಕವಿತೆಗಳ ಅನುವಾದಗಳನ್ನು ತೋರುತ್ತಿದ್ದುದು ಮಾತ್ರವಲ್ಲ, ಬಹಳ ಸಂವಾದಿಯಾಗಿಯೂ ಇತ್ತು. ಹಲವಾರು ಹೊಸ ಅನುವಾದಕರು, ಕವಿಗಳ ರಚನೆಗಳು, ಮತ್ತವುಗಳ ಸೂಕ್ಷ್ಮ ವಿಶ್ಲೇಷಣೆಗಳೂ ಅಲ್ಲಿ ಲಭ್ಯವಿದ್ದವು. ಕವಿ ಸಂಕೇತ ಬಹಳ ಸಂಕೋಚದ ವ್ಯಕ್ತಿಯೂ ಹೌದು. ಹಾಗಾಗಿ ಅವರು ಬರೆದಿರುವ ಹೆಚ್ಚಿನ ಕವಿತೆಗಳು ಬೆಳಕು ಕಂಡಿರುವುದೂ ಅನುಮಾನವೇ. ಅಪರೂಪಕ್ಕೆ ಅಲ್ಲೊಮ್ಮೆ ಇಲ್ಲೊಮ್ಮೆ ಕಾಣಿಸಿಕೊಳ್ಳುವ ಅವರ ರಚನೆಗಳು ಮಿಂಚಿನಬಳ್ಳಿಯ ಹಾಗೆ ಹೊಳೆದು ಮಾಯವಾಗುವುದುಂಟು. ಇಷ್ಟಾದರೂ ನಾವೊಂದಿಷ್ಟು ಜನ ಸ್ನೇಹಿತರು ಅವರ ಕವಿತೆಗಳ ಸಂಕಲನ ಹೊರಬರಬಹುದೆಂಬ ಆಶೆಯನ್ನು ಮಾತ್ರ ಭದ್ರವಾಗಿ ಕಾಯ್ದುಕೊಂಡಿದ್ದೇವೆ.

ಇದನ್ನೂ ಓದಿ
Image
Poetry: ಅವಿತಕವಿತೆ; ಮನುಷ್ಯ ಮಾತ್ರ ತನ್ನ ಸಹಜೀವಿಯನ್ನು ಮಾತಿನ ಮೂಲಕವೇ ಬಲಿ ಹಾಕಬಲ್ಲ
Image
Poetry : ಅವಿತಕವಿತೆ ; ತೀರಾ ಖಾಸಾ ಗೆಳೆಯ, ಗೆಳತಿಗೂ ಹೇಳಲು ಬಾರದವು…
Image
Poetry : ಅವಿತಕವಿತೆ ; ಗೀರು ಕಾಣದಂತೆ ಅವನು ಒಡಕು ಕಾಣದಂತೆ ಅವಳು
Image
Poetry : ಅವಿತಕವಿತೆ ; ಒದ್ದವನ ಕಾಲ ನಮಿಸುವೆ ಬಿದ್ದವನ ಎತ್ತಿ ನಿಲಿಸುವೆ

ಇದನ್ನೂ ಓದಿ : Poetry: ಅವಿತಕವಿತೆ; ಮನುಷ್ಯ ತನ್ನ ತಲವಾರಿನಲ್ಲೇ ತನ್ನ ಕ್ರೌರ್ಯವ ವಧಿಸುವ ಹಾಗೆ

ಖ್ಯಾತ ಲೇಖಕ ಮಿಲನ್ ಕುಂದೇರಾನ ಪ್ರಕಾರ ಗ್ರೀಕ್ ಭಾಷೆಯಲ್ಲಿ ‘ಹಿಂದಿರುಗುವುದು’ ಅಥವಾ ‘ಮರಳಿ ಹೋಗುವದು’ ಎಂಬುದಕ್ಕೆ ಸಮಾನಾರ್ಥಕ ಪದ ‘ನೋಸ್ಟೋಸ್’. ಆದೇ ಭಾಷೆಯಲ್ಲಿ ‘ಅಲ್ಗೋಸ್’ ಎಂದರೆ ‘ಸಂಕಟ’ ಎಂದಾಗುತ್ತದೆ. ಆದ್ದರಿಂದ ‘ನಾಸ್ಟಾಲ್ಜಿಯಾ’ ಎಂದರೆ ಹಿಂತಿರುಗುವ ಅತೃಪ್ತ ಹಂಬಲದಿಂದ ಉಂಟಾಗುವ ಸಂಕಟ. ನಮ್ಮಲ್ಲಿಯ ಲೇಖಕರು, ಕವಿಗಳ ಪೈಕಿ ನಾಸ್ಟಾಲ್ಜಿಕ್ ಆಗಿ ಬರೆಯದೆ ಇರುವವರು ವಿರಳ. ಸಂಕೇತ ಪಾಟೀಲರ ‘ಓಕುಳಿ’ಯಲ್ಲಿನ ನಾಸ್ಟಾಲ್ಜಿಯಾ ಚೂರು ಬೇರೆಯೇ ರೀತಿಯದು. ಇಲ್ಲಿನ ನರೆಟಿವ್ ನಾಯಕನ ಹಳ್ಳಿಯ ಚಿತ್ರವಾದರೂ ಅದು ಆತನಿಗೆ ನೆನಪಾಗುವುದು ಪಬ್ಬಿನಲ್ಲಿ ಕುಡಿಯುತ್ತ ಕುಳಿತಾಗ ಮಾತ್ರ. ಆತ ಈಗಾಗಲೇ ನಗರಜೀವನಕ್ಕೆ ಒಗ್ಗಿಹೋಗಿದ್ದಾನೆ. ಹಾಗೆಂದೆ ಅವನ ನೆನಪಿನ ಚಿತ್ರಮಾಲೆಯಲ್ಲಿ ಹಳಹಳಿ ಕಾಣಬರದು. ಅದು ಆತನ ತಲೆಯೊಳಗೆ ನೆನಪಷ್ಟೇ ಆಗಿ ಉಳಿದಿದೆ. ಹಣಮಂದೇವರ ಓಕುಳಿಗೂ ಮುಂಚೆ ಆತ ನೆನಪಿಸಿಕೊಳ್ಳುವ ಮಜಲುಗಳಿರುವ ಮನೆಗಳ ಬಗೆಗಿನ ಆಕರ್ಷಣೆ ಬಹಳ ಮುಖ್ಯವಾಗುತ್ತದೆ. ಮಹಡಿಮನೆಗಳು ಪುಟ್ಟ ಬಾಲಕನ ಫ್ಯಾಂಟಸಿಯಾದರೆ ಅಂಥದೊಂದು ಮನೆಯ ಮೇಲ್ಮಹಡಿಯಲ್ಲಿ ವಾಸವಾಗಿರುವ ‘ಅಸಾಧ್ಯ ಸಿಟ್ಟಿನ ತೆಳುದೇಹದ ಬಡವಿಧವೆ’ ಕಾವೇರಿಯ ಮನೆಯಲ್ಲಿ ಆತನಿಗೆ ಸಿಗುವ ಒಂದೇ ಬಟ್ಟಲು ಅವಲಕ್ಕಿ ಆಕೆಯ ಪರಿಸ್ಥಿತಿಯನ್ನು ಜಾಹೀರು ಮಾಡುತ್ತದೆ. ಆದೇ ಓಕುಳಿಯ ಸಮಯದಲ್ಲಿ ಹೆಣ್ಣುಮಕ್ಕಳ ಮೇಲೆ ನೀರೆರಚಿ ಮಜಾ ನೋಡುವ ಬೀದಿಕಾಮಂಣರಿಗೆ ಪರಕೆಯಿಂದ ಬಾರಿಸುವ ಹೆಣ್ಣುಮಕ್ಕಳ ಜತೆಗೇ ಒದ್ದೆಯಾಗಿ ನೊಂದು ಕಣ್ಣಲ್ಲಿ ನೀರು ತುಳುಕುವಾಕೆಯೂ ಇದ್ದಾಳೆ. ಸಂತಸದಿಂದ ಓಕುಳಿ ನೋಡಲು ಓಡುವ ಬಾಲಕನ ಕಣ್ಣುಗಳು ಇವನ್ನೂ ಗಮನಿಸಿಕೊಂಡು ಹೋಗುತ್ತವೆ. ಎಲ್ಲ ರೀತಿಯ ಬಣ್ಣಗಳನ್ನೂ ಒಳಗೊಂಡ ಓಕುಳಿಯ ಹವೆಯ ಚಿತ್ರಣ ಮಾತ್ರ ಘನವಾಗಿ ಉಳಿದುಕೊಳ್ಳುತ್ತದೆ.

ನನ್ನ ಪ್ರಕಾರ ‘ಓಕುಳಿ’ ಊರುಬಿಟ್ಟು ಬೇರೆಡೆ ಬದುಕು ಕಟ್ಟಿಕೊಂಡ ನಮ್ಮಂಥ ಅನೇಕರ ಸ್ಮೃತಿಗಳ ಚಿತ್ರಣವೂ ಹೌದು.

ಟೀನಾ ಶಶಿಕಾಂತ, ಕವಿ, ಪತ್ರಕರ್ತೆ

*

ಈ ಅಂಕಣದ ಎಲ್ಲಾ ಭಾಗಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರತಿಕ್ರಿಯೆಗಾಗಿ : tv9kannadadigital@gmail.com

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ