Snake Catcher : ಹಾದಿಯೇ ತೋರಿದ ಹಾದಿ ; ‘ಹಾವು ಕಂಡರೆ ಕೊಲ್ಲಬೇಡಿ ನಮಗೆ ಫೋನ್ ಮಾಡಿ‘ ಸ್ನೇಕ್ ಮಹಾಂತೇಶ್

Snake Mahantesh : ‘ಅಪ್ಪ ಜೀತದ ಮನೆಯಿಂದ ತಂದ ಜೋಳವೇ ಊಟಕ್ಕೆ ದಾರಿ. ಎಷ್ಟೋ ಬಾರಿ ರಸ್ತೆ ಬದಿಯಲ್ಲೇ ಮಲಗಿದ್ದಿದೆ. ದೈಹಿಕ ಸಾಮರ್ಥ್ಯ ಇದ್ದರೂ ಪರೀಕ್ಷೆಯ ಫೀಸ್ ಕಟ್ಟಲು ಹಣವಿರಲಿಲ್ಲ, ಸಂಬಂಧಿಕರು ಹಣವಿದ್ದರೂ ಸಹಾಯ ಮಾಡಲಿಲ್ಲ ಹಾಗಾಗಿ ಸೈನ್ಯ ಸೇರುವ ಕನಸು ಮುರುಟಿ ಅವಮಾನವೆನಿಸಿತು, ಊರುಬಿಟ್ಟೆ. ಬಹುಶಃ ನಮ್ಮ ಸಾಧನೆಗೆ ಸಮಸ್ಯೆಗಳೇ ಸ್ಫೂರ್ತಿ’ ಸ್ನೇಕ್ ಮಹಾಂತೇಶ್

Snake Catcher : ಹಾದಿಯೇ ತೋರಿದ ಹಾದಿ ; ‘ಹಾವು ಕಂಡರೆ ಕೊಲ್ಲಬೇಡಿ ನಮಗೆ ಫೋನ್ ಮಾಡಿ‘ ಸ್ನೇಕ್ ಮಹಾಂತೇಶ್
‘ನಾನೂ ಅಪ್ಪನಂತೆ ಹಾವುಗಳನ್ನು ರಕ್ಷಿಸುವೆ!’ ಸ್ನೇಕ್ ಮಹಾಂತೇಶ್ ಮಗ ಸಮರ್ಥ
Follow us
ಶ್ರೀದೇವಿ ಕಳಸದ
|

Updated on:Jan 20, 2022 | 1:17 PM

ಹಾದಿಯೇ ತೋರಿದ ಹಾದಿ | Haadiye Torida Haadi : ಹಾವು ಕಚ್ಚಿದೆ ಅಂದ ತಕ್ಷಣ ಅರ್ಧ ಜನ ಆ ಭಯಕ್ಕೆ ಸಾವನ್ನಪ್ಪುತ್ತಾರೆ. ಇದಕ್ಕೆ ಕಾರಣ, ಮಾಹಿತಿ ಮತ್ತು ತಿಳಿವಳಿಕೆಯ ಕೊರತೆ. ನಾಗರಹಾವು ಅಥವಾ ಯಾವುದೇ ವಿಷಪೂರಿತ ಹಾವುಗಳು ಕಚ್ಚಿದಾಗ ಎರಡೇ ಹಲ್ಲುಗಳು ಮೂಡುತ್ತವೆ. ವಿಷ ಇಲ್ಲದ ಹಾವುಗಳು ಕಚ್ಚಿದಾಗ ಎಂಟರಿಂದ ಹತ್ತು ಹಲ್ಲುಗಳು ಮೂಡುತ್ತವೆ. ಹಾವು ಕಚ್ಚಿದ ತಕ್ಷಣ ಆ ಜಾಗವನ್ನು ಕೊಯ್ಯಬಾರದು. ಡೆಟಾಲಿನಿಂದ ತೊಳೆದು, ಹಾವು ಕಚ್ಚಿದ ಸ್ವಲ್ಪ ದೂರದಲ್ಲಿ ವಿಷ ಹರಡದಂತೆ ಬಟ್ಟೆಯನ್ನು ತೀರ ಬಿಗಿಯಲ್ಲದೆ ಒಂದು ಕಡ್ಡಿ ಹೋಗುವಷ್ಟು ಸಡಿಲವಾಗಿ ಕಟ್ಟಬೇಕು. ಬಿಸಿನೀರಿಗೆ ಅರಿಶಿಣದ ಪುಡಿ ಹಾಕಿ ಆ ನೀರನ್ನು ಹಾವು ಕಚ್ಚಿಸಿಕೊಂಡ ವ್ಯಕ್ತಿಗೆ ಕುಡಿಸಿ, ಹತ್ತಿರವಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಸಾಧ್ಯವಾದರೆ ಕಚ್ಚಿರುವ ಹಾವಿನ ಒಂದು ಫೋಟೋ ತೆಗೆದು ವೈದ್ಯರಿಗೆ ತೋರಿಸಬೇಕು, ಚಿಕಿತ್ಸೆ ಮಾಡಲು ಸಹಕಾರಿಯಾಗುತ್ತದೆ ಎನ್ನುತ್ತಾರೆ ಕುಣಿಗಲ್​ನಲ್ಲಿರುವ ಉರಗ ರಕ್ಷಕ ಸ್ನೇಕ್ ಮಹಾಂತೇಶ್ (Snake Mahantesh).

ಜ್ಯೋತಿ ಎಸ್, ಸಿಟಿಝೆನ್ ಜರ್ನಲಿಸ್ಟ್,ಬೆಂಗಳೂರು

*

(ಹಾದಿ – 2)

ಬಾದಾಮಿ ತಾಲ್ಲೂಕು ಮನ್ನೇರಿ ಗ್ರಾಮದವರಾದ ಇವರು ಸ್ನೇಕ್ ಮಹಾಂತೇಶ್ ಎಂದೇ ಖ್ಯಾತರಾದವರು. ಈವರೆಗೆ 3050ಕ್ಕೂ ಹೆಚ್ಚು ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಅರಣ್ಯಗಳಿಗೆ ಬಿಟ್ಟಿದ್ದಾರೆ. ಹಾವುಗಳೊಂದಿಗಿನ ಅವರ ಈ ಪಯಣ ಶುರುವಾಗಿದ್ದು 2012, ಮೇ 26ರಂದು, ಅದೂ ಆಕಸ್ಮಿಕವಾಗಿ. ಸುಮಾರು 20 ವರ್ಷಗಳಿಂದ ಕುಣಿಗಲ್​ನಲ್ಲಿ ವಾಸವಾಗಿರುವ ಇವರು ಮಹಾಂತಯ್ಯನಿಂದ ಸ್ನೇಕ್ ಮಹಾಂತೇಶ್ ಆದದ್ದು ಹೇಗೆ? ಓದಿ.

ಕುಣಿಗಲ್ಲಿನ ಇಗೋ ರೆಡ್ಜಿಲ್ ಇಂಡಿಯಾ ಪ್ರೈ.ಲಿ. ಕಂಪನಿಯಲ್ಲಿ ಮೊದಲ ಹತ್ತು ವರ್ಷಗಳು ಅಲ್ಲಿನ ಸಿಬ್ಬಂದಿಗಳಿಗೆ ಟೀ ಕೊಡುವ ಕೆಲಸ ಮಾಡುತ್ತಿದ್ದೆ, ನಮ್ಮ ಕಂಪನಿಯ ಸುತ್ತಮುತ್ತ ಹಾವುಗಳು ಹೆಚ್ಚು ಬರುತ್ತಿದ್ದವು. ಆಗ ಕುಣಿಗಲ್​ನಿಂದ ಮೂರು ಕಿ.ಮೀ. ದೂರದಲ್ಲಿರುವ ಗವಿಮಠದಲ್ಲಿ ಹಾವು ಹಿಡಿಯುವ ಒಬ್ಬ ತಾತ ಇದ್ದರು. ಅವರನ್ನು ಕರೆದುಕೊಂಡು ಬಂದು ಹಾವು ಹಿಡಿಸುತ್ತಿದ್ದೆವು. ನಂತರ ನಮ್ಮ ಫ್ಯಾಕ್ಟರಿಯ  ಆಡಳಿತ ವರ್ಗದವರು ನಮ್ಮಲ್ಲೇ ಯಾರಿಗಾದರೂ ಹಾವು ಹಿಡಿಯಲು ತರಬೇತಿ ಕೊಡಿಸೋಣ ಎಂದು ತೀರ್ಮಾನಿಸಿದರು. ನಮ್ಮ HR ರವಿ ಕುಲಾಲ್ ಅವರು ಮೈಸೂರಿನ ಸ್ನೇಕ್ ಶ್ಯಾಮ್ ಅವರ ಬಳಿ ಮಾತಾಡಿ ಏಳೆಂಟು ಜನರನ್ನು ತರಬೇತಿಗೆ ಕಳಿಸೋಣ ಎಂದರು. ಒಂದು ಸೀಟ್ ಕಡಿಮೆ ಇದೆ ಎನ್ನುವ ಕಾರಣಕ್ಕಾಗಿ ನನ್ನನ್ನು ಅಚಾನಕ್ಕಾಗಿ ಕಳುಹಿಸಿದರು.

ಅಲ್ಲಿ ಸ್ನೇಕ್ ಶ್ಯಾಮ್ ಅವರು ಒಂದು ದಿನದ ತರಬೇತಿ ಶಿಬಿರದಲ್ಲಿ ಥಿಯರಿ, ಪ್ರ್ಯಾಕ್ಟಿಕಲ್ ಹೇಳಿಕೊಟ್ಟರು. ನಂತರ ಅವರ ಮನೆಯ ಹತ್ತಿರ ಮತ್ತು ಬೇರೆಬೇರೆ ಕಡೆ ಹಾವು ಬಂದಾಗ ಅಲ್ಲಿಗೆ ನಮ್ಮನ್ನು ಕರೆದುಕೊಂಡು ಹೋಗಿ ತರಬೇತಿ ನೀಡುತ್ತಿದ್ದರು. ತರಬೇತಿಯಲ್ಲಿ ಹಾವುಗಳ ಜಾತಿ, ಪ್ರಭೇದ ಮತ್ತು ಅವುಗಳ ಚಲನೆ, ಜೀವನಶೈಲಿ ಇತ್ಯಾದಿ  ಮಾಹಿತಿ ವಿವರಿಸುತ್ತಿದ್ದರು. ಅವರು ಹೇಳಿದ್ದನ್ನು ನಾವೆಲ್ಲರೂ ಪುಸ್ತಕದಲ್ಲಿ ಬರೆದುಕೊಳ್ಳುತ್ತಿದ್ದೆವು. ನಾನು ಮೊಬೈಲಿನಲ್ಲಿ ವಿಡಿಯೋ ಮಾಡಿಕೊಳ್ಳುತ್ತಿದ್ದೆ. ಒಮ್ಮೆ ಮೈಸೂರಿನ ಸಮೀಪ ಟಿಂಬರ್ ಫ್ಯಾಕ್ಟರಿ ಪಕ್ಕ ಹೊಸದಾಗಿ ಮನೆ ಕಟ್ಟುತ್ತಿದ್ದರು, ಪ್ಲೈವುಡ್​ಗಳ ಮಧ್ಯದಲ್ಲಿ ಕೇರೆ ಹಾವೊಂದು ಸೇರಿಕೊಂಡಿತ್ತು. ಅಲ್ಲಿ ಪ್ರ್ಯಾಕ್ಟಿಕಲ್ ಆಗಿ ಹಾವು ಹಿಡಿಯುವುದು ಹೇಗೆ ಎನ್ನುವುದನ್ನು ತೋರಿಸಿದರು. ನಂತರ ತಮ್ಮ ಮನೆಗೆ ಕರೆದುಕೊಂಡು ಹೋಗಿ, ಒಬ್ಬೊಬ್ಬರಿಗೂ ನಾಗರಹಾವು ಹಿಡಿದು ಡಬ್ಬಕ್ಕೆ ಹಾಕುವುದು ಹೇಗೆ ಎಂದೂ ತಿಳಿಸಿದರು.

ಅಲ್ಲಿ ತರಬೇತಿ ಪಡೆದುಕೊಂಡು ಬಂದ ಎರಡನೇ ದಿನಕ್ಕೆ ನನ್ನ ಸ್ನೇಹಿತನ ಮನೆಯಲ್ಲಿ ಪ್ರತೀದಿನ ಕೋಳಿಮೊಟ್ಟೆ ನಾಪತ್ತೆ ಆಗುತ್ತಿದ್ದದ್ದು ಮನೆಯವರಿಗೆಲ್ಲ ಸಂಶಯ ತರಿಸಿತ್ತು. ಯಾರೋ ಕದ್ದೊಯ್ಯುತ್ತಿರಬಹುದು ಎಂದು ಒಂದುದಿನ ಕಾವಲು ಕೂತಾಗ ಹಂಚಿನ ಮೇಲಿಂದ ಹಾವು ಮಧ್ಯಾಹ್ನ ಹನ್ನೆರಡರ ಸುಮಾರಿಗೆ ಮಡಿಕೆಯೊಳಗಿನ ಮೊಟ್ಟೆ ತಿನ್ನಲು ಬಂದಿತು. ಸ್ನೇಹಿತ ನನಗೆ ಫೋನ್ ಮಾಡಿದ. ನಾನಾಗ ಕೆಲಸದಲ್ಲಿದ್ದೆ, ಫ್ಯಾಕ್ಟರಿಯಿಂದ ಅನುಮತಿ ಪಡೆದು ಸ್ಟಿಕ್​ನಂಥದ್ದೇನೋ ನಾನೇ ಸಿದ್ಧ ಮಾಡಿಕೊಂಡು ಆ ಹಾವನ್ನು ಹಿಡಿದೆ. ನಾನು ಮೊದಲು ಹಿಡಿದ ಹಾವು ಗೋಧಿ ನಾಗರಹಾವು, ಸುಮಾರು ಆರು ಅಡಿ ಉದ್ದದ್ದು. ಈ ವಿಷಯ ಪೇಪರ್, ನ್ಯೂಸ್​ನಲ್ಲಿ ಭಾರೀ ಪ್ರಚಾರ ಪಡೆಯಿತು. ಅಲ್ಲಿಂದ ನಾನು ಮಹಾಂತಯ್ಯ ಹೋಗಿ ಸ್ನೇಕ್ ಮಹಾಂತೇಶ್ ಆದೆ.

Haadiye Torida Haadi column Citizen Journalist Jyothi interviewed Snake Catcher Mahantesh

…ಹೀಗೆ ಸ್ನೇಕ್ ಮಹಾಂತೇಶ್ ಆದೆ!

ನನ್ನ ಅಪ್ಪ ಸೋಮಯ್ಯ ಕೊಳ್ಳಿಮಠ, ಅಮ್ಮ ಬಸಮ್ಮ, ತಮ್ಮ ಮಲ್ಲಯ್ಯ, ತಂಗಿ ಶಂಕ್ರಮ್ಮ. ಚಿಕ್ಕಂದಿನಿಂದಲೂ ಸೈನ್ಯ ಸೇರುವ ಹುಚ್ಚು ಹೆಚ್ಚಿದ್ದರಿಂದ ಸ್ನೇಹತರೊಂದಿಗೆ ತುಂಬಾ ಕಠಿಣ ದೈಹಿಕ ಅಭ್ಯಾಸಕ್ಕಿಳಿಯುತ್ತಿದ್ದೆ. ಅಪ್ಪ ಬೇರೆಯವರ ಮನೆಯಲ್ಲಿ ಕಾಳುಕಡಿಗಾಗಿ ಜೀತ ಮಾಡುತ್ತಿದ್ದರು. ಒಂದೊಂದು ದಿನದ ಊಟಕ್ಕೂ ಕಷ್ಟಪಡುತ್ತಿದ್ದ ಕಾಲವದು. ಜೀತ ಮಾಡಿದ್ದಕ್ಕೆ ಕೊಟ್ಟ ಜೋಳವೇ ಊಟಕ್ಕೆ ದಾರಿ. ಎಷ್ಟೋ ಬಾರಿ ಬಡತನ, ನಿರುದ್ಯೋಗ, ಅಸಹಾಯಕತೆ, ರಸ್ತೆ ಬದಿಯಲ್ಲಿ ಮಲಗುವಂತೆ ಮಾಡಿವೆ. ಹೀಗಾಗಿ ಸೈನ್ಯ ಸೇರುವ ನನ್ನ ಆಸೆ ಕನಸಾಗಿಯೇ ಉಳಿಯಿತು. ಸೈನ್ಯಕ್ಕೆ ಸೇರಲು ಎಲ್ಲ ದೈಹಿಕ ಸಾಮರ್ಥ್ಯ ಇದ್ದರೂ ಪರೀಕ್ಷೆಯ ಫೀಸ್ ಕಟ್ಟಲು ಹಣ ಇರಲಿಲ್ಲ, ಸಂಬಂಧಿಕರು ಹಣ ಇದ್ದರೂ ಕೊಡಲಿಲ್ಲ. ಅದು ಅವಮಾನವೆನಿಸಿ, ಊರು ಬಿಟ್ಟರೆ ಮಾತ್ರ ಏನಾದರೂ ಸಾಧಿಸಲು ಸಾಧ್ಯವೆಂದು ಊರನ್ನೇ ಬಿಟ್ಟೆ. ಆಗ ಆದ ಅವಮಾನವೇ ಈಗ ತೊಡಗಿಕೊಂಡಿರುವ ಸೇವೆಗೆ ಕಾರಣ. ಬಹುಶಃ ನಮ್ಮ ಸಾಧನೆಗೆ ನಮ್ಮ ಸಮಸ್ಯೆಗಳೇ ಸ್ಫೂರ್ತಿ.

ಯಾವ ಯಾವ ಜಾತಿಯ ಹಾವು ಹೇಗೆ ಇರುತ್ತದೆ ಎಂದು ಸ್ವಲ್ಪ ಓದಿ ತಿಳಿದುಕೊಂಡಿದ್ದೇನೆ. ನಾಗರಹಾವು, ಕಟ್ಟಾವು, ಕೊಳಕುಮಂಡಲ, ಉರುಮಂಡಲ ಇವು ವಿಷಪೂರಿತ ಹಾವುಗಳು, ಈ ಹಾವುಗಳನ್ನು ಹಿಡಿಯಲು ಸ್ಟಿಕ್ ಬಳಕೆ ಮಾಡುತ್ತೇನೆ. ಉಳಿದಂತೆ ಕೇರೇಹಾವು, ರಾಮಬಾಣದಹಾವು, ಹಸಿರುಹಾವು, ಆಭರಣದಹಾವು, ತೋಳದಹಾವು ಇವು ವಿಷವಿಲ್ಲದ ಹಾವುಗಳು. ಇವು ಮನುಷ್ಯರಿಗೆ ಕಚ್ಚಿದರೂ ಏನೂ ಆಗುವುದಿಲ್ಲ. ಈ ಹಾವುಗಳನ್ನು ಸ್ಟಿಕ್ ಬಳಸದೆ ಬರಿ ಕೈನಿಂದಲೇ ಹಿಡಿಯುತ್ತೇನೆ. ಆರಂಭದಲ್ಲಿ ಹಾವು ಯಾವುದು, ಅದರ ಬಗ್ಗೆ ಮಾಹಿತಿ ಗೊತ್ತಾಗದಿದ್ದರೆ  ಫೋಟೋ ತೆಗೆದು ನಮ್ಮ ಗುರು ಸ್ನೇಕ್ ಶ್ಯಾಮ್ ಅವರಿಗೆ ಕಳುಹಿಸುತ್ತಿದ್ದೆ. ಅವರು ಅದು ವಿಷಪೂರಿತ ಹಾವೇ ವಿಷರಹಿತ ಹಾವೇ ಎಂಬುದನ್ನು ಖಚಿತಪಡಿಸುತ್ತಿದ್ದರು. ಹೀಗೆ ಸುಮಾರು 3050ಕ್ಕೂ ಹೆಚ್ಚು ಹಾವುಗಳನ್ನು ಹಿಡಿದಿದ್ದೇನೆ.

ಇನ್ನು, ಹಾವು ಕಚ್ಚಿದೆ ಅಂದ ತಕ್ಷಣ ಅರ್ಧ ಜನ ಆ ಭಯಕ್ಕೆ ಸಾವನ್ನಪ್ಪುತ್ತಾರೆ. ಇದಕ್ಕೆ ಕಾರಣ, ಮಾಹಿತಿ ಮತ್ತು ತಿಳಿವಳಿಕೆಯ ಕೊರತೆ. ನಾಗರಹಾವು ಅಥವಾ ಯಾವುದೇ ವಿಷಪೂರಿತ ಹಾವುಗಳು ಕಚ್ಚಿದಾಗ ಎರಡೇ ಹಲ್ಲುಗಳು ಮೂಡುತ್ತವೆ. ವಿಷ ಇಲ್ಲದ ಹಾವುಗಳು ಕಚ್ಚಿದಾಗ ಎಂಟರಿಂದ ಹತ್ತು ಹಲ್ಲುಗಳು ಮೂಡುತ್ತವೆ. ಹಾವು ಕಚ್ಚಿದ ತಕ್ಷಣ ಆ ಜಾಗವನ್ನು ಕೊಯ್ಯಬಾರದು. ಡೆಟಾಲಿನಿಂದ ತೊಳೆದು, ಹಾವು ಕಚ್ಚಿದ ಸ್ವಲ್ಪ ದೂರದಲ್ಲಿ ವಿಷ ಹರಡದಂತೆ ಬಟ್ಟೆಯನ್ನು ತೀರ ಬಿಗಿಯಲ್ಲದೆ ಒಂದು ಕಡ್ಡಿ ಹೋಗುವಷ್ಟು ಸಡಿಲವಾಗಿ ಕಟ್ಟಬೇಕು. ಬಿಸಿನೀರಿಗೆ ಅರಿಶಿಣದ ಪುಡಿ ಹಾಕಿ ಆ ನೀರನ್ನು ಹಾವು ಕಚ್ಚಿಸಿಕೊಂಡ ವ್ಯಕ್ತಿಗೆ ಕುಡಿಸಿ, ಹತ್ತಿರವಿರುವ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು. ಸಾಧ್ಯವಾದರೆ ಕಚ್ಚಿರುವ ಹಾವಿನ ಒಂದು ಫೋಟೋವನ್ನು ತೆಗೆದುಕೊಂಡು ವೈದ್ಯರಿಗೆ ತೋರಿಸಬೇಕು. ಚಿಕಿತ್ಸೆ ಮಾಡಲು ಸಹಕಾರಿಯಾಗುತ್ತದೆ.

Haadiye Torida Haadi column Citizen Journalist Jyothi interviewed Snake Catcher Mahantesh

ಕುಣಿಗಲ್ಲಿನ ಜ್ಞಾನಭಾರತಿ ಹೈಸ್ಕೂಲಿನಲ್ಲಿ ಹಾವು-ಅರಿವು ಕಾರ್ಯಕ್ರಮ

ಹಾವುಗಳನ್ನು ಹಿಡಿದ ಮೇಲೆ ಹತ್ತಿರದಲ್ಲಿರುವ ಪಶುವೈದ್ಯರ ಹತ್ತಿರ ಪರಿಶೀಲನೆ ಮಾಡಿಸಿ ಹಾವು ಆರೋಗ್ಯವಾಗಿದೆ ಎನ್ನುವುದನ್ನು ಖಚಿತಪಡಿಸಿಕೊಂಡು ನಂತರ ಅರಣ್ಯ ಇಲಾಖೆಯವರ ಮುಖೇನ ರಂಗಸ್ವಾಮಿಬೆಟ್ಟ, ಯೋಗವನಬೆಟ್ಟಕ್ಕೆ ಹೊಂದಿಕೊಂಡಿರುವ ಕುಣಿಗಲ್ ನಿಂದ 18 ಕಿ. ಮೀ. ದೂರದಲ್ಲಿರುವ ಹುಲಿಯೂರು ದುರ್ಗದ ಬಳಿ ಇರುವ ಅರಣ್ಯಕ್ಕೆ ಹಾವುಗಳನ್ನು ಬಿಡುತ್ತೇನೆ. ನನ್ನ ಈ ಕಾರ್ಯಕ್ಕೆ ಸ್ಥಳೀಯರ, ಪೊಲೀಸರ ಸಂಪೂರ್ಣ ಬೆಂಬಲವಿದೆ. ಆರಂಭದಲ್ಲಿ ಮನೆಯವರು, ಮಡದಿ ಸುಧಾ, ತುಂಬಾ ಭಯ ಪಡುತ್ತಿದ್ದರು. ಈಗ ಸಹಕರಿಸುತ್ತಿದ್ದಾರೆ. ಈಗ ಹಾವು ಹಿಡಿಯುವವರ ಸಂಖ್ಯೆ ತುಂಬಾ ಕಡಿಮೆ ಇರುವುದರಿಂದ ನನ್ನ ಮಗ ಸಮರ್ಥನಿಗೂ ಇದರ ಕಲೆ, ತಂತ್ರ ಗೊತ್ತಿರಲಿ ಎಂದು ಹಾವು ಹಿಡಿಯುವ ತರಬೇತಿ ಕೊಡುತ್ತಿದ್ದೇನೆ.

ಪ್ರಸ್ತುತ ಇಗೋ ರೆಡ್ಜಿಲ್ ಇಂಡಿಯಾ ಪ್ರೈ. ಲಿ. ಕಂಪನಿಯಲ್ಲಿ ಮೇಲ್ವಿಚಾರಕನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. 2019ರ ಅಕ್ಟೋಬರ್ 1ರಂದು ನಮ್ಮ ಕಂಪನಿಯಲ್ಲಿ ನಾಗರಹಾವು ಹಿಡಿಯಲು ಹೋಗಿ ಮೊದಲ ಬಾರಿಗೆ ಕಚ್ಚಿಸಿಕೊಂಡಿದ್ದೆ. ಪ್ರಥಮ ಚಿಕಿತ್ಸೆಗೊಳಪಟ್ಟು ಆದಿಚುಂಚನಗಿರಿಯಲ್ಲಿ ಮೂರು ದಿನ ಚಿಕಿತ್ಸೆ ಪಡೆದುಕೊಂಡೆ. ಅಪ್ಪ ಫೋನ್ ಮಾಡಿ ಬೈದರು. ಎಲ್ಲರೂ ಊರಿನಿಂದ ಬಂದು, ಈ ಕೆಲವನ್ನು ಬಿಟ್ಟುಬಿಡು ಎಂದರು. ಆದರೆ, ಎಚ್ಚರಿಕೆಯಿಂದ ಹಾವುಗಳನ್ನು ಹಿಡಿದು ಸಂರಕ್ಷಣೆ ಮಾಡುವ ಹುಚ್ಚಿಗೆ ಹೆಚ್ಚೆಚ್ಚು ಬೀಳುತ್ತ ಹೋದೆ. ಹಾವುಗಳನ್ನು ಕೊಲ್ಲದೆ ಅವುಗಳನ್ನು ಸಂರಕ್ಷಿಸಬೇಕು. ಜೀವವೈವಿಧ್ಯತೆಯಲ್ಲಿ ಅವುಗಳ ಪಾತ್ರ ಬಹಳ ಮುಖ್ಯ ಎಂಬುದನ್ನು ಜನರಿಗೆ ತಿಳಿಸಿಕೊಡಬೇಕು ಎನ್ನುವುದರತ್ತ ಹೆಚ್ಚು ಗಮನ ಕೊಡಲಾರಂಭಿಸಿದೆ.

ಇಪ್ಪತ್ತು ವರ್ಷಗಳಿಂದ ಕುಣಿಗಲ್​ನಲ್ಲಿ ಕುಟುಂಬದ ಜೊತೆಗೆ ವಾಸವಿದ್ದೇನೆ. ಇರುವುದರಲ್ಲೇ ಖುಷಿಪಟ್ಟುಕೊಂಡು ಹಾವಿನ ಮೂಲಕ ಜೀವವೈವಿಧ್ಯ ಮತ್ತು ಪರಿಸರ ಜಾಗೃತಿ ಮೂಡಿಸುವ ಕಾರ್ಯದಲ್ಲಿಯೂ ತೊಡಗಿಕೊಂಡಿದ್ದೇನೆ.  ಕನ್ನಡ ಸಾಹಿತ್ಯ ಪರಿಷತ್ತಿನ ಹಾಲಿ ಅಧ್ಯಕ್ಷರಾದ ದಿನೇಶ್ ಕುಮಾರ್ ಅವರ ಸಹಕಾರದೊಂದಿಗೆ ಹಾವಿನ ಸಂರಕ್ಷಣೆಯ ಬಗ್ಗೆ ಹಾವು-ಅರಿವು ಎನ್ನುವ ಕಾರ್ಯಕ್ರಮವನ್ನು ಜ್ಞಾನಭಾರತಿ, ವ್ಯಾಲಿ ಶಾಲೆ, ಮಹಾತ್ಮಾಗಾಂಧಿ ಶಾಲೆ, ಅರವಿಂದ್ ಇಂಟರ್​ನ್ಯಾಷನಲ್ ಶಾಲೆಗಳಲ್ಲಿ ಜಾಗೃತಿ ಮತ್ತು ಮಾಹಿತಿ ನೀಡಿದ್ದೇನೆ. ಹಾಗೆಯೇ ವಿಷವಿಲ್ಲದ ಹಾವುಗಳನ್ನು ಮಕ್ಕಳಿಗೆ ಮುಟ್ಟಿಸಿ ಭಯ ಹೋಗಲಾಡಿಸುತ್ತ, ಅವುಗಳ ಬಗ್ಗೆ ಮಾಹಿತಿಯನ್ನು ಯಾವುದೇ ಶುಲ್ಕವಿಲ್ಲದೆ ಕೊಡುತ್ತಾ ಬಂದಿದ್ದೇನೆ. ಹೀಗೆ ಆದಷ್ಟು ಬೇಗ ರಾಜ್ಯದ ಎಲ್ಲಾ ಶಾಲೆ ಕಾಲೇಜುಗಳಿಗೂ ಭೇಟಿ ಮಾಡಿ ಹಾವು-ಅರಿವು ಕಾರ್ಯಕ್ರಮ ಮಾಡುವ ನಿರೀಕ್ಷೆ ಇಟ್ಟುಕೊಂಡಿದ್ದೇನೆ.

Haadiye Torida Haadi column Citizen Journalist Jyothi interviewed Snake Catcher Mahantesh

‘ಬಾಣಂತನಕ್ಕೆ ಜಾಗ ಹುಡುಕಿಕೊಂಡು ಹೋಗಿದ್ದೆ’ ನೀರುಹಾವು

ಜನವರಿ 15ರಂದು ನ್ಯೂ ಇಂಡಿಯಾ ಡ್ರೈವಿಂಗ್ ಸ್ಕೂಲಿನ ಮುಜಾಯಿದ್ ಖಾನ್ ಅವರ ಮನೆಯ ಕಾಂಪೌಂಡ್ ನಲ್ಲಿ ಹಾವಿದೆ ಎಂದು ಕರೆ ಬಂದಿತ್ತು. ಹೋಗಿ ನೋಡಿದರೆ ನೀರಾವು. ಹಾವನ್ನು ಹಿಡಿದು ಸುರಕ್ಷಿತವಾಗಿ ತಂದ ನಂತರ ಗೊತ್ತಾಯಿತು, ಅದು ಮೊಟ್ಟೆ ಇಡುವ ಸಮಯಕ್ಕೆ ಅಲ್ಲಿಗೆ ಬಂದಿದೆ ಎಂದು. ಅದೀಗ  ಸುಮಾರು 23 ಮೊಟ್ಟೆಗಳನ್ನು ಇಟ್ಟಿದೆ!

ಎಲ್ಲಿಯಾದರೂ ಹಾವುಗಳನ್ನು ಕಂಡರೆ ಸಾಯಿಸಬೇಡಿ ಇವರಿಗೆ ಕರೆ ಮಾಡಿ, ಸ್ನೇಕ್ ಮಹಾಂತೇಶ್ : 7353237328

ಹಿಂದಿನ ಹಾದಿ : Citizen Journalism : ಹಾದಿಯೇ ತೋರಿದ ಹಾದಿ : ‘ಇಲ್ಲೊಂದು ಶವ ಸಿಕ್ಕಿದೆ ಬನ್ನಿ’ ಯಾವ ಹೊತ್ತಿನಲ್ಲಿಯೂ ಸಿದ್ಧ ಈ ಆಶಾ ವಿ. ಸ್ವಾಮಿ

Published On - 1:14 pm, Thu, 20 January 22

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ