ಹೊಸ ಕೃಷಿ ಕಾನೂನುಗಳು ಸಂಪೂರ್ಣ ರೈತಪರ: ಸುಪ್ರೀಂಕೋರ್ಟ್ ನೇಮಿಸಿದ ಸಮಿತಿ ಸದಸ್ಯ
ತಜ್ಞರ ಸಮಿತಿ ಸಲ್ಲಿಸಿರುವ ವರದಿಯನ್ನು ತಕ್ಷಣಕ್ಕೆ ಬಹಿರಂಗಪಡಿಸಿದರೆ ಕಾನೂನು ಸುವ್ಯವಸ್ಥೆ ಸಮಸ್ಯೆ ಆಗಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದೆಹಲಿ: ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಕಳೆದ ವರ್ಷ ಜಾರಿಗೊಳಿಸಿರುವ ಕಾನೂನುಗಳ ಪರಾಮರ್ಶೆ ನಡೆಸಿ, ಸಂಬಂಧಿಸಿದವರೊಂದಿಗೆ ಚರ್ಚಿಸಿ ವರದಿ ನೀಡಲು ಸುಪ್ರೀಂಕೋರ್ಟ್ ನೇಮಿಸಿರುವ ಸಮಿತಿಯ ಸದಸ್ಯರೊಬ್ಬರು ಕೃಷಿ ಕಾನೂನುಗಳ ಬಗ್ಗೆ ಸಮಾಧಾನದ ಮಾತು ಆಡಿದ್ದಾರೆ. ಸುಪ್ರೀಂಕೋರ್ಟ್ಗೆ ಸಲ್ಲಿಸಿರುವ ವರದಿಯು ನೂರಕ್ಕೆ ನೂರು ರೈತಪರವಾಗಿದೆ ಎಂದು ಅವರು ಹೇಳಿದ್ದಾರೆ. ರಾಷ್ಟ್ರ ರಾಜಧಾನಿ ದೆಹಲಿ ಬಾಗಿಲಿನಲ್ಲಿ ಹಲವು ತಿಂಗಳುಗಳಿಂದ ನಡೆಯುತ್ತಿರುವ ರೈತರ ಹೋರಾಟ ಶೀಘ್ರ ಪರಿಹಾರ ಕಾಣಬಹುದು ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.
ತಜ್ಞರ ಸಮಿತಿ ಸಲ್ಲಿಸಿರುವ ವರದಿಯನ್ನು ತಕ್ಷಣಕ್ಕೆ ಬಹಿರಂಗಪಡಿಸಿದರೆ ಕಾನೂನು ಸುವ್ಯವಸ್ಥೆ ಸಮಸ್ಯೆ ಆಗಬಹುದು. ಯಾವಾಗ ವರದಿಯನ್ನು ಬಹಿರಂಗಪಡಿಸಬಹುದು ಎಂಬುದನ್ನು ಸರ್ಕಾರ ಮತ್ತು ಸುಪ್ರೀಂಕೋರ್ಟ್ ನಿರ್ಧರಿಸುತ್ತದೆ. ಹಾಗೆಂದು ಈ ವರದಿಯನ್ನು ಕಸದಬುಟ್ಟಿಗೆ ಎಸೆಯಲು ಆಗುವುದಿಲ್ಲ, ಕಸದಬುಟ್ಟಿಗೆ ಹಾಕುವುದೂ ಸರಿಯಲ್ಲ ಎಂದು ಶೇತ್ಕರಿ ಸಂಘಟನೆಯ ಅಧ್ಯಕ್ಷ ಅನಿಲ್ ಜೆ.ಘನವಂತ್ ಹೇಳಿದರು.
ಸೆಪ್ಟೆಂಬರ್ 1ರಂದು ಈ ಕುರಿತು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಪತ್ರ ಬರೆದಿದ್ದ ಅವರು, ವರದಿಯನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡುವಂತೆ ಸಲಹೆ ಮಾಡಿದ್ದರು. ರೈತರು ಆಗ್ರಹಿಸುತ್ತಿರುವಂತೆ ಸಮಿತಿಯು ಈ ಮೂರು ಕಾನೂನುಗಳನ್ನು ರದ್ದುಪಡಿಸುವಂತೆ ಹೇಳಿಲ್ಲ. ಆದರೆ ಕಾನೂನುಗಳಲ್ಲಿರುವ ಕೆಲ ಸಮಸ್ಯೆಗಳನ್ನು ಗುರುತಿಸಿ ಸರಿಪಡಿಸುವಂತೆ ನಾನು ಮತ್ತು ನನ್ನ ಸಂಘಟನೆ ಸಲಹೆ ಮಾಡಿದೆ ಎಂದು ಹೇಳಿದ್ದಾರೆ.
ರೈತರಲ್ಲಿರುವ ಗೊಂದಲಗಳನ್ನು ಸರಿಪಡಿಸಲು ಈ ವರದಿಯನ್ನು ಸುಪ್ರೀಂಕೋರ್ಟ್ ಶೀಘ್ರ ಬಹಿರಂಗಪಡಿಸುವುದು ಅಗತ್ಯ ಎಂದು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಘನವಂತ್ ಸಲಹೆ ಮಾಡಿದ್ದಾರೆ. ವರದಿಯನ್ನು ಸಾಧ್ಯವಾದಷ್ಟೂ ಬೇಗ ಬಹಿರಂಗಪಡಿಸಬೇಕು. ನಾಳೆಯೇ ಬಹಿರಂಗಪಡಿಸಿದರೂ ಒಳ್ಳೆಯದೇ. ಜನರಿಗೆ ವರದಿಯಲ್ಲಿ ಅಡಕವಾಗಿರುವ ಅಂಶಗಳು ತಿಳಿಯುತ್ತವೆ. ಹೊಸ ಕೃಷಿ ಕಾನೂನುಗಳು ರೈತರ ಪರ ಇವೆಯೇ ಇಲ್ಲವೇ ಎಂಬುದನ್ನು ರೈತರೇ ನಿರ್ಧರಿಸುತ್ತಾರೆ ಎಂದು ತಿಳಿಸಿದ್ದಾರೆ.
ನಾವು ನ್ಯಾಯಾಲಯಕ್ಕೆ ವರದಿ ಸಲ್ಲಿಸಿ ಐದು ತಿಂಗಳಾಗಿವೆ. ನ್ಯಾಯಾಲಯ ಏಕೆ ವರದಿಯ ಮೇಲೆ ಕ್ರಮ ಕೈಗೊಂಡಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನ್ಯಾಯಾಲಯವು ವರದಿಯನ್ನು ಶೀಘ್ರ ಬಹಿರಂಗಪಡಿಸಬೇಕು ಎಂದು ವಿನಂತಿಸಿದರು. ‘ಸಮಿತಿಯ ವರದಿಯು ರೈತರು ಪ್ರಸ್ತಾಪಿಸಿರುವ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದೆ. ರೈತರು ನಡೆಸುತ್ತಿರುವ ಹೋರಾಟಕ್ಕೆ ಈ ವರದಿಯಲ್ಲಿ ಉತ್ತರಗಳಿವೆ ಎಂಬ ಬಗ್ಗೆ ಸಮಿತಿಗೆ ಆತ್ಮವಿಶ್ವಾಸವಿದೆ’ ಎಂದು ಅವರು ತಿಳಿಸಿದರು.
ಕೇಂದ್ರ ಸರ್ಕಾರವು ಜಾರಿ ಮಾಡಿದ್ದ ಕೃಷಿ ಕಾನೂನುಗಳನ್ನು ಜಾರಿಗೊಳಿಸಬಾರದು ಎಂದು ಸೂಚಿಸಿದ್ದ ಸುಪ್ರೀಂಕೋರ್ಟ್ ಜನವರಿ 12, 2001ರಂದು ಪರಾಮರ್ಶೆಗಾಗಿ ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯಲ್ಲಿ ರೈತರ ಪ್ರತಿನಿಧಿಯಾಗಿ ಘನವಂತ್ ಅವರನ್ನು ನೇಮಿಸಲಾಗಿತ್ತು. ಕೃಷಿ ಬೆಲೆ ಆಯೋಗದ ಸದಸ್ಯರಾಗಿದ್ದ ಅಶೋಕ್ ಗುಲೇಟಿ ಮತ್ತು ಅಂತರರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆ ಸದಸ್ಯರಾಗಿದ್ದ ಪ್ರಮೋದ್ ಕುಮಾರ್ ಜೋಶಿ ಅವರೂ ಈ ಸಮಿತಿಯಲ್ಲಿದ್ದರು.
‘ಪರಾಮರ್ಶನ ಸಮಿತಿಯಲ್ಲಿ ಕೃಷಿಕ ಸಮುದಾಯವನ್ನು ಪ್ರತಿನಿಧಿಸಿದ್ದ ನನಗೆ ರೈತರು ಪ್ರಸ್ತಾಪಿಸುತ್ತಿರುವ ಪ್ರಶ್ನೆಗಳಿಗೆ ಉತ್ತರ ಸಿಗದೆ, ಅವರ ಪ್ರತಿಭಟನೆ ಮುಂದುವರಿದಿರುವುದು ನೋವಿನ ವಿಚಾರ. ಸುಪ್ರೀಂಕೋರ್ಟ್ ನಮ್ಮ ವರದಿಯ ಬಗ್ಗೆ ನೀಡಬೇಕಾದಷ್ಟು ಗಮನ ನೀಡಿಲ್ಲ ಎನಿಸುತ್ತದೆ’ ಎಂದು ಘನವಂತ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
ಸಮಿತಿಯ ವರದಿಯನ್ನು ಸುಪ್ರೀಂಕೋರ್ಟ್ ಶೀಘ್ರ ಬಿಡುಗಡೆ ಮಾಡಬೇಕು. ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಗೊಳಿಸಿ ರೈತರ ಸಮಸ್ಯೆಗಳಿಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ನೆರವಾಗಬೇಕು ಎಂದು ಎಂದು ಕೋರಿದ್ದಾರೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ತಾವು ಬರೆದಿರುವ ಪತ್ರಕ್ಕೆ ಸಮಿತಿಯ ಇತರ ಸದಸ್ಯರ ಬೆಂಬಲವಿತ್ತೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಇತರ ಸದಸ್ಯರು ಈ ವಿಚಾರದಲ್ಲಿ ಸಹಮತ ಹೊಂದಿದ್ದಾರೆ. ಅದರೆ ಹಾಗೆಂದು ಬರಹದಲ್ಲಿ ತಿಳಿಸಲು ಹಿಂಜರಿಯುತ್ತಿದ್ದರು. ನಾನು ಈ ವಿಚಾರವನ್ನು ಪ್ರಸ್ತಾಪಿಸಿದ್ದು ಅವರಿಗೆ ಸಂತೋಷ ತಂದಿದೆ ಎಂದು ಹೇಳಿದರು.
ಸುಪ್ರೀಂಕೋರ್ಟ್ ನೇಮಿಸಿದ್ದ ಸಮಿತಿಯ ವರದಿಯು ನೂರಕ್ಕೆ ನೂರರಷ್ಟು ರೈತರು ಮತ್ತು ದೇಶದ ಪರವಾಗಿದೆ ಎಂದು ಹೇಳಿದರು. ಕೃಷಿ ಕಾನೂನು ರದ್ದುಪಡಿಸಬೇಕೆನ್ನುವ ರೈತರ ಒತ್ತಾಯವನ್ನು ಸಮಿತಿಯು ಬೆಂಬಲಿಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾವು ಬೆಂಬಲಿಸುವುದಿಲ್ಲ’ ಎಂದು ನುಡಿದರು. ಹೊಸ ಕಾನೂನುಗಳಲ್ಲಿ ಸಾಕಷ್ಟು ಲೋಪಗಳಿವೆ. ನಮ್ಮ ಶೇತ್ಕರಿ ಸಂಘಟನೆಯು ಹೊಸ ಕಾನೂನುಗಳನ್ನು ಬೆಂಬಲಿಸಿದ್ದರೂ, ಕೆಲ ವಿಚಾರಗಳಲ್ಲಿ ತಕರಾರು ಇದೆ. ಚರ್ಚೆಯ ವೇಳೆಯೂ ಕೆಲವರು ಇದೇ ವಿಚಾರವನ್ನು ನನ್ನೊಡನೆ ಹಂಚಿಕೊಂಡರು. ಎಲ್ಲರ ದೃಷ್ಟಿಕೋನವನ್ನು ಪರಿಗಣಿಸಿ ವರದಿಯನ್ನು ಅಂತಿಮಗೊಳಿಸಲಾಗಿದೆ ಎಂದು ಹೇಳಿದರು.
ಹೊಸ ಕೃಷಿ ಕಾನೂನುಗಳು ಜಾರಿಯಾದರೆ ಕನಿಷ್ಠ ಬೆಂಬಲ ಬೆಲೆ ಪದ್ಧತಿಯನ್ನು (Minimum Support Price – MSP) ತೆಗೆದು ಹಾಕಲಾಗುತ್ತದೆ ಎಂಬ ಭೀತಿ ವ್ಯಕ್ತವಾಗುತ್ತಿದೆ. ಇಂಥ ಭೀತಿಗಳಿಗೆ ಯಾವುದೇ ಆಧಾರವಿಲ್ಲ. ಹೊಸ ಕೃಷಿ ಕಾನೂನುಗಳು ಕನಿಷ್ಠ ಬೆಂಬಲ ಬೆಲೆಯ ಬಗ್ಗೆ ಮಾತನಾಡುವುದೇ ಇಲ್ಲ. ಈ ವಿಚಾರದಲ್ಲಿ ವಿನಾ ಕಾರಣ ಭೀತಿ ಬಿತ್ತಲಾಗಿದೆ ಎಂದು ಹೇಳಿದರು.
ಈ ಮೂರೂ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಮತ್ತು ಕನಿಷ್ಠ ಬೆಂಬಲ ಬೆಲೆಯ ಖಾತ್ರಿ ನೀಡಬೇಕು ಎಂದು ಆಗ್ರಹಿಸಿ ಕಳೆದ 9 ತಿಂಗಳಿನಿಂದ ದೆಹಲಿಯ ಗಡಿಗಳಲ್ಲಿ ರೈತರು ಪ್ರತಿಭಟಿಸುತ್ತಿದ್ದರು. ಕೃಷಿ ಕಾನೂನುಗಳನ್ನು ಹಂತಹಂತವಾಗಿ ಜಾರಿಗೊಳಿಸಲು ಸಾಧ್ಯವಿದೆಯೇ ಎಂಬ ಪ್ರಶ್ನೆಗೆ ‘ಹೌದು’ ಎಂದು ಘನವಂತ್ ಉತ್ತರಿಸಿದರು. ಈ ವಿಚಾರವು ಸಮಿತಿಯ ಶಿಫಾರಸಿನಲ್ಲಿ ಸೇರಿದೆಯೇ ಎಂಬ ಪ್ರಶ್ನೆಗೆ, ಅದನ್ನು ಬಹಿರಂಗಪಡಿಸಲು ಆಗದು ಎಂದು ಸ್ಪಷ್ಟಪಡಿಸಿದರು.
ಇಂಥದ್ದೇ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅಥವಾ ಸಂಬಂಧಿಸಿದ ಸಚಿವರ ಗಮನಕ್ಕೆ ತರುವ ಉದ್ದೇಶವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾವು ನ್ಯಾಯಾಲಯಕ್ಕೆ ಮಾತ್ರ ವಿಷಯ ತಿಳಿಸಿದ್ದೇವೆ. ಸರ್ಕಾರಕ್ಕೂ ಈ ವಿಷಯಕ್ಕೂ ಯಾವುದೇ ಸಂಬಂಧವಿಲ್ಲ. ನಮ್ಮ ಸಮಿತಿಯನ್ನು ಸರ್ಕಾರ ನೇಮಿಸಿಲ್ಲ, ನಾವು ಸರ್ಕಾರಕ್ಕೆ ಉತ್ತರದಾಯಿಗಳೂ ಅಲ್ಲ ಎಂದು ಹೇಳಿದರು. ಹರ್ಯಾಣದ ಕರ್ನಾಲ್ನಲ್ಲಿ ರೈತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದನ್ನು ಖಂಡಿಸಿದ ಅವರು, ‘ಇಂಥ ಘಟನೆ ನಡೆಯಬಾರದಿತ್ತು. ಅವರ ಬೇಡಿಕೆ ಸರಿಯಿಲ್ಲದಿರಬಹುದು. ಆದರೆ ಅವರಿಗೆ ತಮ್ಮ ಅಭಿಪ್ರಾಯ ಹಂಚಿಕೊಳ್ಳುವ ಹಾಗೂ ಪ್ರತಿಭಟನೆ ನಡೆಸುವ ಹಕ್ಕು ಇದೆ’ ಎಂದು ಅಭಿಪ್ರಾಯಪಟ್ಟರು.
(Farm Laws Report is In Favour Of Farmers says Supreme Court Panel Member)
ಇದನ್ನೂ ಓದಿ: ಕೃಷಿ ಕಾನೂನುಗಳ ವರದಿಯನ್ನು ಬಹಿರಂಗಗೊಳಿಸಿ: ಮುಖ್ಯ ನ್ಯಾಯಮೂರ್ತಿಗೆ ಸಮಿತಿ ಸದಸ್ಯರ ಪತ್ರ
ಇದನ್ನೂ ಓದಿ: ಮುಜಾಫರ್ ನಗರದಲ್ಲಿ ಕಿಸಾನ್ ಮಹಾಪಂಚಾಯತ್; ಕೃಷಿ ಕಾನೂನು ವಿರುದ್ಧ ಪ್ರತಿಭಟನೆ ಮುಂದುವರಿಸಲು ರೈತರ ನಿರ್ಧಾರ