ಮಹಿಳಾ ಮೀಸಲಾತಿ ಮಸೂದೆಗೆ ಸೋಲು; ಇಂದು ರಾತ್ರಿ 8.30ಕ್ಕೆ ದೇಶವನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ಲೋಕಸಭೆಯಲ್ಲಿ ಪ್ರತಿಪಕ್ಷಗಳಿಂದ ಮಹಿಳಾ ಮೀಸಲಾತಿ ಮಸೂದೆಗೆ ಬಹುಮತ ಸಿಗದ ಕಾರಣ ಈ ಮಸೂದೆಗೆ ಸೋಲು ಉಂಟಾಗಿದೆ. ಇದರ ಬೆನ್ನಲ್ಲೇ ಇಂದು ರಾತ್ರಿ 8.30ಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪ್ರತಿಪಕ್ಷಗಳ ಒಗ್ಗಟ್ಟಿನ ಪ್ರದರ್ಶನದ ನಂತರ ಮಹಿಳಾ ಮೀಸಲಾತಿ ಮಸೂದೆಯು ಲೋಕಸಭೆ ಪರೀಕ್ಷೆಯಲ್ಲಿ ಪಾಸ್ ಆಗಲು ವಿಫಲವಾದ ಒಂದು ದಿನದ ನಂತರ ಪ್ರಧಾನಿ ಮೋದಿ ಇಂದು ಮಾತನಾಡಲಿದ್ದಾರೆ. ಇದಕ್ಕೂ ಮೊದಲು ಇಂದು ಪ್ರಧಾನಮಂತ್ರಿ ಮೋದಿ ಸಂಪುಟ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಇದರಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿದ್ದಕ್ಕಾಗಿ ವಿರೋಧ ಪಕ್ಷವನ್ನು ಟೀಕಿಸಿದ್ದರು.

ನವದೆಹಲಿ, ಏಪ್ರಿಲ್ 18: ದೇಶದಲ್ಲಿ ಮಹಿಳಾ ಮೀಸಲಾತಿ (Women’s Quota Bill) ಜಾರಿಗೆ ತರುವ ಮಸೂದೆ ಲೋಕಸಭೆಯಲ್ಲಿ ಸೋತ ಹಿನ್ನೆಲೆಯಲ್ಲಿ ಇಂದು ರಾತ್ರಿ 8.30ಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಮಹಿಳಾ ಮೀಸಲಾತಿ ಅನುಷ್ಠಾನದ ವಿಷಯ ಮತ್ತು ವಿರೋಧ ಪಕ್ಷಗಳು ಶುಕ್ರವಾರ ಸಂವಿಧಾನ (131ನೇ ತಿದ್ದುಪಡಿ) ಮಸೂದೆಯ ವಿರುದ್ಧ ಮತ ಚಲಾಯಿಸಿದ ಹಿನ್ನೆಲೆಯಲ್ಲಿ ಸಂಸತ್ತಿನಲ್ಲಿ ನಡೆದ ಬೆಳವಣಿಗೆಗಳ ಬಗ್ಗೆ ಪ್ರಧಾನಿ ಮೋದಿ ಇಂದು ರಾತ್ರಿ ಚರ್ಚಿಸುವ ನಿರೀಕ್ಷೆಯಿದೆ.
2011ರ ಜನಗಣತಿಯ ಆಧಾರದ ಮೇಲೆ ನಡೆದ ಸೀಮಾ ನಿರ್ಣಯದ ನಂತರ 2029ರ ಸಂಸತ್ ಚುನಾವಣೆಗೆ ಮುಂಚಿತವಾಗಿ ಮಹಿಳಾ ಮೀಸಲಾತಿ ಕಾನೂನನ್ನು ಕಾರ್ಯಗತಗೊಳಿಸಲು ಈ ಮಸೂದೆಯಡಿಯಲ್ಲಿ ಲೋಕಸಭಾ ಸ್ಥಾನಗಳನ್ನು ಪ್ರಸ್ತುತ 543ರಿಂದ 816ಕ್ಕೆ ಹೆಚ್ಚಿಸಬೇಕಾಗಿತ್ತು. ಮಹಿಳೆಯರಿಗೆ ಶೇ. 33ರಷ್ಟು ಮೀಸಲಾತಿ ಕಲ್ಪಿಸಲು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ವಿಧಾನಸಭಾ ಸ್ಥಾನಗಳನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಸರ್ಕಾರ ಹೇಳಿತ್ತು.
ಇದನ್ನೂ ಓದಿ: ಮಹಿಳಾ ಮೀಸಲಾತಿಗೆ ವಿರೋಧಿಸಿದ್ದಕ್ಕೆ ವಿಪಕ್ಷ ಬೆಲೆ ತೆರಬೇಕಾಗುತ್ತದೆ; ಪಿಎಂ ಮೋದಿ ವಾಗ್ದಾಳಿ
ಈ ನಿರ್ಣಾಯಕ ಮಸೂದೆಯನ್ನು ಅಂಗೀಕರಿಸಲು ಮೂರನೇ ಎರಡರಷ್ಟು ಬಹುಮತದ ಅಗತ್ಯವಿತ್ತು. ಆದರೆ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್ಡಿಎ ಬಹುಮತದ ಸಂಖ್ಯೆಗಳನ್ನು ಸಂಗ್ರಹಿಸಲು ಸಾಧ್ಯವಾಗಲಿಲ್ಲ. ಶುಕ್ರವಾರ ರಾತ್ರಿ ಲೋಕಸಭೆಯಲ್ಲಿ ಮಸೂದೆಯ ಮೇಲಿನ ಮತದಾನದ ಸಮಯದಲ್ಲಿ 298 ಸದಸ್ಯರು ಈ ಮಸೂದೆಯ ಪರವಾಗಿ ಮತ ಚಲಾಯಿಸಿದರೆ, 230 ಸಂಸದರು ಅದರ ವಿರುದ್ಧ ಮತ ಚಲಾಯಿಸಿದರು. ಮತ ಚಲಾಯಿಸಿದ 528 ಸದಸ್ಯರಲ್ಲಿ ಮಸೂದೆಗೆ ಮೂರನೇ ಎರಡರಷ್ಟು ಬಹುಮತಕ್ಕೆ 352 ಮತಗಳು ಬೇಕಾಗಿದ್ದವು. ಹೀಗಾಗಿ, ಈ ಮಸೂದೆ ಅಂಗೀಕಾರವಾಗಲಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




