AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

AI ಯುಗದಲ್ಲಿ ಭಾರತದ ಯುವಕರಿಗೆ ಉದ್ಯೋಗಾವಕಾಶ: ಹೊಸ ಕೌಶಲ್ಯಗಳೇ ರಕ್ಷಕ

Santosh Nair's article in 'Your India' series: ಯುವ ಪದವೀಧರರಿಗೆ ಐಟಿ ಸೇರಿದಂತೆ ಆರಂಭಿಕ ಹಂತದ ಉದ್ಯೋಗಗಳು AI ನಿಂದಾಗಿ ಕಡಿತಗೊಳ್ಳುತ್ತಿವೆ. ಕೋಡಿಂಗ್, ಡೇಟಾ ಎಂಟ್ರಿ, ಗ್ರಾಹಕರ ಉತ್ತರಗಳಂತಹ ರೂಢಿಗತ ಕಾರ್ಯಗಳು ಈಗ ಸೆಕೆಂಡುಗಳಲ್ಲಿ ಮುಗಿಯುತ್ತಿವೆ. ಇದು ಭಾರತದ ಯುವ ಉದ್ಯೋಗ ಭವಿಷ್ಯಕ್ಕೆ ಗೊಂದಲ ಸೃಷ್ಟಿಸಿದೆ. ಯಂತ್ರಗಳು ಮಾಡಲು ಸಾಧ್ಯವಾಗದ ನಿರ್ಧಾರ ಕೈಗೊಳ್ಳುವಿಕೆ, ಸಂವಹನ, ವಿಮರ್ಶಾತ್ಮಕ ಚಿಂತನೆ ಹಾಗೂ ಮಾನವೀಯ ಸಮಸ್ಯೆಗಳನ್ನು ನಿಭಾಯಿಸುವ ಕೌಶಲ್ಯಗಳನ್ನು ಬೆಳೆಸಿಕೊಳ್ಳುವುದು ಈಗ ಅತಿ ಮುಖ್ಯ.

AI ಯುಗದಲ್ಲಿ ಭಾರತದ ಯುವಕರಿಗೆ ಉದ್ಯೋಗಾವಕಾಶ: ಹೊಸ ಕೌಶಲ್ಯಗಳೇ ರಕ್ಷಕ
ಕೃತಕ ಬುದ್ಧಿಮತ್ತೆImage Credit source: Getty Images
Santosh Nair
| Edited By: |

Updated on: Oct 16, 2026 | 5:50 PM

Share

ಯುವ ಪದವೀಧರರೊಬ್ಬರು ಐಟಿ ಕಂಪನಿಯೊಂದರಲ್ಲಿ ಆರಂಭಿಕ ಹಂತದ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಕೆಲವು ವರ್ಷಗಳ ಹಿಂದೆ ಇಂತಹ ಹುದ್ದೆಗಳಿಗೆ ಪ್ರತಿ ಸೀಸನ್‌ನಲ್ಲಿ ಸಾವಿರಾರು ಹೊಸ ಉದ್ಯೋಗಿಗಳು ಸೇರಿಕೊಳ್ಳುತ್ತಿದ್ದರು. ಆದರೆ ಈ ವರ್ಷ ಅಂತಹ ಅವಕಾಶಗಳು ಬಹಳ ಕಡಿಮೆ ಇವೆ. ಬೇಸಿಕ್ ಕೋಡಿಂಗ್ ಚೆಕ್, ಸಾಧಾರಣ ಡೇಟಾ ಎಂಟ್ರಿ, ಗ್ರಾಹಕರ ಉತ್ತರಗಳ ಮೊದಲ ಡ್ರಾಫ್ಟ್ ಇತ್ಯಾದಿ ಹಿಂದೆ ಕಿರಿಯ ಉದ್ಯೋಗಿಗಳು ಮಾಡುತ್ತಿದ್ದ ಕೆಲಸಗಳು ಈಗ ಎಐ ಟೂಲ್ ಮೂಲಕ ಸೆಕೆಂಡುಗಳಲ್ಲಿ ಮುಗಿದುಹೋಗುತ್ತಿವೆ.

ಭಾರತದಲ್ಲಿ ವೃತ್ತಿಜೀವನವನ್ನು ಆರಂಭಿಸಲು ಇದು ನಿಜಕ್ಕೂ ಗೊಂದಲದ ಸಮಯವಾಗಿದೆ. ಈ ಗೊಂದಲಕ್ಕೆ ಪರಸ್ಪರ ವಿರೋಧಾಭಾಸದಂತೆ ಕಾಣುವ ಎರಡು ನಿಜವಾದ ಸಂಗತಿಗಳೇ ಕಾರಣ.

ವಿಶ್ವ ಬ್ಯಾಂಕ್‌ನ ‘ವರ್ಲ್ಡ್ ಡೆವಲಪ್ಮೆಂಟ್ ರಿಪೋರ್ಟ್ 2026’ ಪ್ರಕಾರ, ಭಾರತದಂತಹ ದೇಶಗಳಲ್ಲಿ ಕೇವಲ ಶೇ. 4.5ರಷ್ಟು ಉದ್ಯೋಗಗಳು ಮಾತ್ರ ಜೆನೆರೇಟಿವ್ ಎಐ (GenAI) ನಿಂದ ನೈಜ ಯಾಂತ್ರೀಕರಣದ ಅಪಾಯವನ್ನು ಎದುರಿಸುತ್ತಿವೆ. ಶ್ರೀಮಂತ ದೇಶಗಳಲ್ಲಿ ಶೇ. 14.2ರಷ್ಟು ಉದ್ಯೋಗಿಗಳು ಅಪಾಯದಲ್ಲಿವೆ. ಅದಕ್ಕೆ ಹೋಲಿಸಿದರೆ ಭಾರತದಲ್ಲಿ ಅಪಾಯದಲ್ಲಿರುವ ಉದ್ಯೋಗಿಗಳ ಪ್ರಮಾಣ ಬಹಳ ಕಡಿಮೆ. ಆ ಪ್ರಕಾರ, ಭಾರತವು ತುಸು ಸುರಕ್ಷಿತವಾಗಿದೆ ಎಂದೆನಿಸಬಹುದು. ಆದರೆ ಅದೇ ವರದಿಯಲ್ಲಿ ತಿಳಿಸಿರುವಂತೆ, ಭಾರತವು ಹೆಚ್ಚು ಅವಲಂಬಿತವಾಗಿರುವ ಐಟಿ ಸೇವೆಗಳು, ಹಣಕಾಸು ಮತ್ತು ಬಿಪಿಒ ಕ್ಷೇತ್ರಗಳಲ್ಲಿ ಆರಂಭಿಕ ಹಂತದ ವೈಟ್‌ಕಾಲರ್ ಹುದ್ದೆಗಳು ಈಗಾಗಲೇ ಉದ್ಯೋಗ ನಷ್ಟವನ್ನು ಎದುರಿಸುತ್ತಿವೆ.

ಇದನ್ನೂ ಓದಿ: ಜವಾನರ ಹುದ್ದೆಗೆ ಪಿಎಚ್​ಡಿ ಪದವೀಧರರು ಪೈಪೋಟಿ ನಡೆಸುವ ಸ್ಥಿತಿ; ಶಿಕ್ಷಣ ಮತ್ತು ಉದ್ಯೋಗದ ಹೊಸ ಸವಾಲುಗಳು

ಈ ಎರಡೂ ಸಂಗತಿಗಳು ಸತ್ಯವೇ ಆದರೂ ಬೇರೆ ಬೇರೆ ವಿಷಯಗಳನ್ನು ಅಳೆಯುತ್ತಿವೆ. ಎಐ ಸ್ಪರ್ಶಿಸಲು ಸಾಧ್ಯವಿಲ್ಲದ ಕೃಷಿ, ನಿರ್ಮಾಣ, ವೈಯಕ್ತಿಕ ಆರೈಕೆ ಮತ್ತು ನುರಿತ ವೃತ್ತಿಗಳಂತಹ ಲಕ್ಷಾಂತರ ಉದ್ಯೋಗಗಳು ರಾಷ್ಟ್ರೀಯ ಸರಾಸರಿಯಲ್ಲಿ ಬರುತ್ತದೆ. ಆದರೆ ಕಿರಿಯ ಉದ್ಯೋಗಿಗಳು ಕಲಿಕೆಯ ಹಂತದಲ್ಲಿ ಮಾಡುವ ರೂಢಿಗತ ಹಾಗೂ ನಿಯಮ ಆಧಾರಿತ ‘ದೈನಂದಿನ ಜ್ಞಾನದ ಕೆಲಸಗಳು’ (routine cognitive work) ನೇರವಾಗಿ ಎಐ ಪ್ರಭಾವಕ್ಕೆ ಒಳಗಾಗುವ ಎರಡನೇ ವರ್ಗಕ್ಕೆ ಸೇರುತ್ತವೆ.

ಇದರ ಪ್ರಭಾವ ಹೇಗಿರುತ್ತದೆ ಎಂಬುದಕ್ಕೆ ದಕ್ಷಿಣ ಕೊರಿಯಾ ಒಂದು ಮುನ್ನೆಚ್ಚರಿಕೆ ನೀಡುತ್ತದೆ. 2022 ಮತ್ತು 2026ರ ನಡುವೆ ಅಲ್ಲಿ ಯುವ ಉದ್ಯೋಗಗಳು 2,85,000ರಷ್ಟು ಕುಸಿದಿವೆ. ಇದರಲ್ಲಿ ಶೇ. 94ರಷ್ಟು ಇಳಿಕೆಯು ಎಐ ಪ್ರಭಾವಕ್ಕೆ ಒಳಗಾದ ಕ್ಷೇತ್ರಗಳಲ್ಲೇ ಸಂಭವಿಸಿದೆ. ಆದರೆ ಅದೇ ಉದ್ಯಮಗಳಲ್ಲಿ ಹೆಚ್ಚು ಅನುಭವ ಆಧಾರಿತ ಕೆಲಸ ಮಾಡುವ ಐವತ್ತರ ಹರೆಯದ ಕಾರ್ಮಿಕರ ಉದ್ಯೋಗಗಳು ಮಾತ್ರ ಹೆಚ್ಚಾಗಿವೆ.

ಇದು ನಿರ್ದಿಷ್ಟವಾಗಿ ಭಾರತಕ್ಕೆ ಸ್ವಲ್ಪ ಆತಂಕಕಾರಿ ಸಂಗತಿಯಾಗಿದೆ. ಯುವಕರು ಪುನರಾವರ್ತನೆಯ ಮೂಲಕ ಕೆಲಸ ಕಲಿಯುತ್ತಿದ್ದ ವೃತ್ತಿಜೀವನದ ಮೆಟ್ಟಿಲು (entry-level job), ಈಗ ಎಐ ಅತ್ಯಂತ ಸುಲಭವಾಗಿ ಬದಲಿಸಬಲ್ಲ ಮೆಟ್ಟಿಲು ಆಗಿ ಮಾರ್ಪಟ್ಟಿದೆ. ಈ ಆರಂಭಿಕ ಹಂತವೇ ದುರ್ಬಲಗೊಂಡರೆ, ಕಿರಿಯರು ಮೊದಲು ಸರಳ ಕೆಲಸಗಳನ್ನು ಅಭ್ಯಾಸ ಮಾಡದೆ ಮುಂದಿನ ದಿನಗಳಲ್ಲಿ ಹೆಚ್ಚು ಸಂಕೀರ್ಣವಾದ ಕೆಲಸಗಳನ್ನು ಹೇಗೆ ಕಲಿಯುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಹಾಗಾದರೆ ಈ ಬದಲಾವಣೆಯಲ್ಲಿ ಯಾವ ಕೌಶಲ್ಯಗಳು ತಮ್ಮ ಮೌಲ್ಯವನ್ನು ಉಳಿಸಿಕೊಳ್ಳುತ್ತವೆ? ಈ ಕುರಿತ ಸಂಶೋಧನೆಗಳು ಸ್ಪಷ್ಟವಾದ ಉತ್ತರ ನೀಡುತ್ತವೆ. ಎಐ ಟೂಲ್‌ಗಳು ಮೊದಲ ಡ್ರಾಫ್ಟ್, ಮೊದಲ ಉತ್ತರ ಅಥವಾ ಮೊದಲ ಲೆಕ್ಕಾಚಾರವನ್ನು ಮಾಡಿಕೊಡುವುದರಲ್ಲಿ ಅತ್ಯಂತ ಮುಂದಿವೆ. ಆದರೆ ನಿರ್ಧಾರ ಕೈಗೊಳ್ಳುವಿಕೆ, ನಿರ್ದಿಷ್ಟ ಪರಿಸ್ಥಿತಿಗೆ ತಕ್ಕಂತೆ ಯಾವುದು ಸರಿ ಎಂದು ತಿಳಿಯುವುದು, ಅತೃಪ್ತ ಗ್ರಾಹಕರನ್ನು ನಿಭಾಯಿಸುವುದು ಮತ್ತು ಸ್ಪಷ್ಟ ಉತ್ತರವಿಲ್ಲದ ಸಂದರ್ಭಗಳಲ್ಲಿ ನಿರ್ಧಾರ ತೆಗೆದುಕೊಳ್ಳುವಿಕೆಯಲ್ಲಿ ಎಐ ಇನ್ನೂ ಬಹಳ ಹಿಂದೆ ಇದೆ. ಸಂವಹನ, ವಿಮರ್ಶಾತ್ಮಕ ನಿರ್ಧಾರ ಮತ್ತು ಕೇವಲ ಡೇಟಾ ಅಲ್ಲದೆ ನೇರವಾಗಿ ಜನರ ಸಮಸ್ಯೆಗಳೊಂದಿಗೆ ಕೆಲಸ ಮಾಡುವ ಕೌಶಲ್ಯಗಳು ಎಐ ಜೊತೆ ಸ್ಪರ್ಧಿಸದೆ, ಅದಕ್ಕೆ ಪೂರಕವಾಗಿರುತ್ತವೆ.

ಇದನ್ನೂ ಓದಿ: ಅಪ್ರೆಂಟಿಸ್​ಶಿಪ್ ಬದಲು ಗಿಗ್ ಕೆಲಸಕ್ಕೆ ಆದ್ಯತೆ ಕೊಡುವ ಯುವಜನರು; ನೈಜ ಉದ್ಯೋಗ ಪರಿಸ್ಥಿತಿ ಬಗ್ಗೆ ಚಿಂತಿಸಬೇಕಾದ ಸಂಗತಿ

ಇದರರ್ಥ ತಾಂತ್ರಿಕ ಕೌಶಲ್ಯಗಳು ಮುಖ್ಯವಲ್ಲ ಎಂದಲ್ಲ. ತಾಂತ್ರಿಕ ಕೌಶಲ್ಯವನ್ನು ಕೇವಲ ಅಷ್ಟಕ್ಕೇ ಸೀಮಿತಗೊಳಿಸದೆ, ಎಐ ಸುಲಭವಾಗಿ ಅನುಕರಿಸಲು ಸಾಧ್ಯವಿಲ್ಲದ ಮಾನವ ಕೌಶಲ್ಯಗಳೊಂದಿಗೆ ಜೋಡಿಸುವುದು ಅನಿವಾರ್ಯವಾಗಿದೆ.

ಮುಂದೆ ಏನು ಕಲಿಯಬೇಕು ಎಂದು ಯೋಚಿಸುವ ಯುವ ಭಾರತೀಯರಿಗೆ ಇಲ್ಲಿರುವ ಪ್ರಮುಖ ಪಾಠವೆಂದರೆ, ತಂತ್ರಜ್ಞಾನವನ್ನು ದೂರವಿಡುವುದಲ್ಲ. ಬದಲಿಗೆ, ಯಂತ್ರಗಳು ಸುಲಭವಾಗಿ ಮಾಡುವ ಪುನರಾವರ್ತಿತ ಕೆಲಸಗಳ ಹಿಂದೆ ಬರುವ ಬದಲು, ನೈಜ ನಿರ್ಧಾರ, ಸಂವಹನ ಮತ್ತು ಜವಾಬ್ದಾರಿ ಇSುವ ಕೆಲಸದ ಭಾಗಗಳನ್ನು ಸಕ್ರಿಯವಾಗಿ ಕಲಿಯುವುದಾಗಿದೆ.

ಮುಂದಿನ ಐದು ವರ್ಷಗಳಲ್ಲಿ ಯೋಚನಾಶೀಲ ಮತ್ತು ಹೊಂದಿಕೊಳ್ಳಬಲ್ಲ ಮಾನವನಂತೆ ಒಂದು ಯಂತ್ರವು ಮಾಡಲು ಸಾಧ್ಯವಿಲ್ಲದ ಕೆಲಸ ಯಾವುದು ಎಂದು ಪ್ರಶ್ನಿಸಿಕೊಳ್ಳುವುದೇ ಉತ್ತಮ.

(ಆಧಾರಗಳು: ವಿಶ್ವ ಬ್ಯಾಂಕ್, ವಿಶ್ವ ಅಭಿವೃದ್ಧಿ ವರದಿ 2026 (World Development Report 2026), ಜೆನೆರೇಟಿವ್ ಎಐ ಮತ್ತು ಕಾರ್ಮಿಕ ಮಾರುಕಟ್ಟೆ ಕುರಿತು; ನಾಸ್ಕಾಮ್ (NASSCOM) ವರದಿಗಳು, ಭಾರತದ ಎಐ ಪ್ರತಿಭೆ ಮತ್ತು ಕಾರ್ಯಪಡೆಯ ಪರಿವರ್ತನೆ; ದಕ್ಷಿಣ ಕೊರಿಯಾದ ಯುವ ಉದ್ಯೋಗ ಮತ್ತು ಎಐ-ಪ್ರಭಾವಿತ ಕ್ಷೇತ್ರಗಳ ದತ್ತಾಂಶ, 2022–2026.)

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Follow Us
Santosh Nair
Santosh Nair

Santosh Nair is Editor (Network Coordination), TV9 Network. With over two decades in media, he has played pivotal roles in some of the best newsrooms in the country. He is an avid reader who pens his thoughts after deep-diving into the subject matter.

Read More